ನಮಗೆ ವಿಟಮಿನ್ ಡಿ (Vitamin D deficiency) ಯಾಕೆ ಬೇಕು ಎಂದರೆ ನಾವು ಮೊದಲು ಕೊಡುವ ಉತ್ತರ ಎಲುಬಿನ ಆರೋಗ್ಯಕ್ಕೆ. ಸಂಧಿವಾತ, ಎಲುಬಿನಲ್ಲಿ ಸವೆತ, ಎಲುಬಿನಲ್ಲಿ ಸಾಂದ್ರತೆ ಕಡಿಮೆಯಾಗುವುದು ಇತ್ಯಾದಿ ಸಮಸ್ಯೆಗಳು ಕಾಡದೆ ಇರಬೇಕೆಂದರೆ ನಮ್ಮ ದೇಹಕ್ಕೆ ಸರಿಯಾಗಿ ವಿಟಮಿನ್ ಡಿ ಪೂರೈಕೆಯಾಗುತ್ತಲೂ ಇರಬೇಕು. ಕೇವಲ ಎಲುಬಿನ ಆರೋಗ್ಯವೊಂದೇ ವಿಟಮಿನ್ ಡಿಯ ಮೇಲೆ ನಿಂತಿಲ್ಲ. ದೇಹ ಎಲ್ಲ ರೀತಿಯಲ್ಲೂ ಸೌಖ್ಯವಾಗಬೇಕಾಗಿದ್ದರೆ ವಿಟಮಿನ್ ಡಿ ಅವಶ್ಯಕವಾಗಿ ಬೇಕು. ನಮ್ಮ ನಿತ್ಯದ ಸಂತೋಷದ ಹಿಂದೆಯೂ ವಿಟಮಿನ್ ಡಿಯ ಕೈಚಳಕವಿದೆ. ವಿಟಮಿನ್ ಡಿ ಕೊರತೆಯಿಂದ ಖಿನ್ನತೆಯೂ ಬರುವ ಸಾಧ್ಯತೆಗಳಿವೆ ಎಂದು ಇತ್ತೀಚೆಗಿನ ಸಂಶೋಧನೆಗಳು ಬಹಿರಂಗಪಡಿಸಿವೆ. ವಿಟಮಿನ್ ಡಿ ಕೊರತೆಯಾದರೆ (Vitamin D deficiency) ಈ ಕೆಲವು ಲಕ್ಷಣಗಳು ಸಾಮಾನ್ಯ. ಆಗಾಗ ಇನ್‌ಫೆಕ್ಷನ್‌ಗಳಾಗುವುದು, ರೋಗ ನಿರೋಧಕತೆ ಕಡಿಮೆಯಾಗುವುದು, ಆಗಾಗ ನೆಗಡಿ, ಶೀತ ಬರುವುದು ಇತ್ಯಾದಿಗಳೂ ವಿಟಮಿನ್ ಡಿಯ ಕೊರತೆಯ ಲಕ್ಷಣಗಳು. ಮೂಳೆಯಲ್ಲಿ ಶಕ್ತಿ ಇಲ್ಲದಂತಾಗುವುದು ಕೂಡಾ ಇದರ ಪ್ರಮುಖ ಲಕ್ಷಣ. ಖಿನ್ನತೆಯೂ ಕೂಡಾ ವಿಟಮಿನ್ ಡಿಯ ಕೊರತೆಯಿಂದ ಬರುವ ಸಂಭವವಿದೆ. ವಿಟಮಿನ್ ಡಿ (Vitamin D) ನಮ್ಮ ಆಹಾರದಲ್ಲಿರುವ ಕ್ಯಾಲ್ಶಿಯಂ ಅನ್ನು ದೇಹಕ್ಕೆ ಸರಿಯಾಗಿ ಒದಗಿಸುವ ಕೆಲಸವನ್ನು ಮಾಡುವುದರಿಂದ ಕ್ಯಾಲ್ಶಿಯಂ ದೇಹಕ್ಕೆ ಸೇರುವ ಪ್ರಕ್ರಿಯೆ ನಿಂತುಹೋಗುತ್ತದೆ. ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಕ್ಯಾಲ್ಶಿಯಂ ಸಿಗದೇ, ಮೂಳೆಗಳು ದುರ್ಬಲವಾಗುತ್ತದೆ.
ಸೂರ್ಯನ ಬೆಳಕು ಅತ್ಯಂತ ಮುಖ್ಯ
ವಿಟಮಿನ್ ಡಿ ಪಡೆಯಲು ಸೂರ್ಯನ ಬೆಳಕು ಅತ್ಯಂತ ಮುಖ್ಯವಾದ ಮೂಲ. ಇದಲ್ಲದೆ, ಅನೇಕ ಆಹಾರಗಳ ಮೂಲಕವೂ ವಿಟಮಿನ್ ಡಿ ಲಭ್ಯವಾದರೂ ಇದು ಅತ್ಯಂತ ಕಡಿಮೆ ಪ್ರಮಾಣದ್ದು. ಸೂರ್ಯನ ಬಿಸಿಲಿನಲ್ಲಿ 15ರಿಂದ 0 ನಿಮಿಷಗಳು ಇರುವುದರಿಂದಲೂ ದಿನಕ್ಕೆ ಅಗತ್ಯವಾದ ವಿಟಮಿನ್ ಡಿ ಲಭ್ಯವಾಗುತ್ತದೆ. ಹೀಗಾಗಿ. ಸೂರ್ಯನ ಬಿಸಿಲಿಗೆ ಮೈಯೊಡ್ಡುವುದು ಅತ್ಯಂತ ಮುಖ್ಯವಾಗುತ್ತದೆ. ಇವೆಲ್ಲಕ್ಕಿಂತಲೂ, ಸೂರ್ಯನ ಬಿಸಿಲಿಗೆ ಬೆಳಗ್ಗೆಯೇ ದೇಹವನ್ನು ಒಡ್ಡುವುದರಿಂದ ಮೈಮನಸ್ಸು ಚುರುಕಾಗಿ ಸಂತಸ ಇಮ್ಮಡಿಸುತ್ತದೆ. ಕೆಲಸಕ್ಕೆ ಚುರುಕುತನ ಬರುತ್ತದೆ. ಸಂತೋಷದ ಹಾರ್ಮೋನು ಸೆರಟೋನಿನ್ ಬಿಡುಗಡೆಯಾಗಿ ಖನ್ನತೆಯ ಲಕ್ಷಣಗಳನ್ನು ದೂರ ಸರಿಸುತ್ತದೆ. ಮಾನಸಿಕವಾಗಿ ಉಲ್ಲಾಸವನ್ನೂ ತರುತ್ತದೆ. ಮನೆಯ ಒಳಗೇ ಸೂರ್ಯನ ಬೆಳಕಿನಿಂದ ದೂರ ಇರುವ ಮಂದಿಗೆ ಉದಾಸೀನತೆ, ಬೇಸರ ಇತ್ಯಾದಿಗಳೂ ಆವರಿಸಿಕೊಳ್ಳುತ್ತದೆ. ಸೂರ್ಯನ ಬೆಳಕು ಚುರುಕುತನದೊಂದಿಗೆ ಮಾನಸಿಕ ಪ್ರಫುಲ್ಲತೆಯನು ನೀಡಿ, ಉದ್ವೇಗದಂತಹ ಸಮಸ್ಯೆಯನ್ನೂ ದೂರವಿಟ್ಟು ಶಾಂತಿ ಸಮಾಧಾನ ನೆಮ್ಮದಿಯನ್ನು ತರುತ್ತದೆ.
ಹಾಗಾಗಿ ವಿಟಮಿನ್ ಡಿ ಕೇವಲ ಮೂಳೆ ಸಂಬಂಧೀ ಮಾತ್ರವಲ್ಲ, ನಮ್ಮ ಇಡಿಯ ಆರೋಗ್ಯದ ಕೀಲಿಕೈ. ಮಿದುಳನು ಚುರುಕಾಗಿಡುವ ಪೋಷಕಾಂಶವೂ ಹೌದು. ವಿಟಮಿನ್ ಡಿ ಕೊರತೆಯಿದ್ದರೆ, ಈ ಪೋಷಕಾಂಶವನ್ನು ವೈದ್ಯರ ಮಾರ್ಗದರ್ಶನದ ಮೇರೆಗೆ ತೆಗೆದುಕೊಳ್ಳುವುದು ಒಳ್ಳೆಯದು. ಖಿನ್ನತೆಯ ಸಮಸ್ಯೆ ಇರುವ ಮಂದಿಯೂ ವಿಟಮಿನ್ ಡಿ ಸಪ್ಲಿಮೆಂಟ್ ಸೇವನೆಯಿಂದ ಈ ಸಮಸ್ಯೆಯಲ್ಲಿ ಸಾಕಷ್ಟು ಸುಧಾರಣೆ ಕಂಡಿದ್ದಾರೆ.
ಇದನ್ನೂ ಓದಿ: Ways to Prevent Gray Hair: 30 ದಾಟುವ ಮೊದಲೇ ಕೂದಲು ಬೆಳ್ಳಗಾಗುತ್ತಿದೆಯೇ? ಇದಕ್ಕಿದೆ ಸರಳ ಪರಿಹಾರ
ಆರೋಗ್ಯಕರ ಜೀವನಶೈಲಿ
ಖಿನ್ನತೆ ಎಂಬುದು ಇತ್ತೀಚೆಗಿನ ಧಾವಂತದ ಜೀವನಕ್ರಮದಲ್ಲಿ ಸಾಮಾನ್ಯ. ಆರೋಗ್ಯಕರ ಜೀವನಶೈಲಿ ಅತ್ಯಂತ ಮುಖ್ಯವಾದುದು. ನಮ್ಮ ಕೆಲಸಗಳು ನಮ್ಮನ್ನು ಹೊರಜಗತ್ತಿನಿಂದ, ಚಟುವಟಿಕೆಗಳಿಂದ ದೂರ ಮಾಡುತ್ತಿರುವುದರಿಂದ ಮಾನಸಿಕವಾಗಿ ದುರ್ಬಲರಾಗುತ್ತಿದ್ದೇವೆ. ಒತ್ತಡಗಳು ಮನಸ್ಸನ್ನು ಹೈರಾಣಾಗಿಸುತ್ತವೆ. ನಿತ್ಯವೂ ನಡಿಗೆ, ವ್ಯಾಯಾಮ, ಯೋಗ, ಧ್ಯಾನದಂತಹ ಚಟುವಟಿಕೆಗಳನ್ನೂ ರೂಢಿಸಿಕೊಳ್ಳುವುದರಿಂದ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವನ್ನೂ ಸರಿಯಾಗಿಟ್ಟುಕೊಳ್ಳಬಹುದು. ಆರೋಗ್ಯ ಚೆನ್ನಾಗಿದ್ದರೆ ಸಂತೋಷ ಇಮ್ಮಡಿಸುತ್ತದೆ.