Site icon Vistara News

Vitamin D: ಸೂರ್ಯನ ಕಿರಣಗಳಿಗೆ ಮೈಯೊಡ್ಡಿದರೆ ಮೂಳೆಗಳೂ ಗಟ್ಟಿ, ಹೃದಯಕ್ಕೂ ಶಕ್ತಿ!

Vitamin D

ವಿಟಮಿನ್‌ ಡಿ ನಮಗೆ ಬೇಕು (Vitamin D) ಎನ್ನುವುದು ನಮಗೆಲ್ಲ ಗೊತ್ತು. ಸೂರ್ಯನ ಬಿಸಿಲಿನಲ್ಲಿ ಸಾಕಷ್ಟು ಪ್ರಮಾಣದ ವಿಟಮಿನ್‌ ಡಿ ದೊರೆಯುತ್ತದೆ, ನಿಜ. ಆದರೆ ಬಿಸಿಲಿಗೆ ಹೋಗುವಾಗ ಮಾತ್ರ ಅನುಮಾನ ಮಾಡುತ್ತೇವೆ. ಇಡೀ ದಿನ ಒಳಾಂಗಣದಲ್ಲೇ ವ್ಯವಹರಿಸಿ, ಮನೆಯಿಂದ ಹೊರಬಿದ್ದ ಕೂಡಲೆ ಬಸ್ಸು, ಕಾರು, ಆಟೋ ಹತ್ತಿಬಿಟ್ಟರೆ ಸೂರ್ಯನ ಬಿಸಿಲು ಮೈಗೆ ತಾಗುವುದಾದರೂ ಹೇಗೆ? ದೇಹಕ್ಕೆ ಕ್ಯಾಲ್ಸಿಯಂ ಮತ್ತು ಫಾಸ್ಫರಸ್‌ ಹೀರಲು ಸಾಧ್ಯವಾಗುವುದು ಸೂಕ್ತ ಪ್ರಮಾಣದಲ್ಲಿ ವಿಟಮಿನ್‌ ಡಿ ದಾಸ್ತಾನು ಇದ್ದರೆ ಮಾತ್ರ. ಹಾಗಾಗಿಯೇ ಮೂಳೆಗಳು ಶಕ್ತಿಯುತವಾಗಿರಲು, ಸೋಂಕುಗಳು ಹಾಗೂ ಉರಿಯೂತ ಬಾಧಿಸದಿರಲು ಡಿ ಜೀವಸತ್ವ ಪ್ರಮುಖವಾಗಿ ಬೇಕು. ಇದಲ್ಲದೆ, ಇನ್ನೂ ಯಾವೆಲ್ಲ ಪ್ರಯೋಜನಗಳಿವೆ ಡಿ ಜೀವಸತ್ವದಿಂದ ನಮಗೆ?

ಮೂಳೆಗಳು ಗಟ್ಟಿ

ಕ್ಯಾಲ್ಶಿಯಂ ಮಾತ್ರವಲ್ಲ, ಫಾಸ್ಫರಸ್‌ ಮತ್ತಿತರ ಅಗತ್ಯ ಖನಿಜಗಳನ್ನು ಹೀರಿಕೊಳ್ಳಲು ವಿಟಮಿನ್‌ ಡಿ ಬೇಕು. ಈ ಖನಿಜಗಳೆಲ್ಲ ಇದ್ದರಷ್ಟೇ ಮೂಳೆಗಳು ಗಟ್ಟಿಯಾಗಿರುವುದಕ್ಕೆ ಸಾಧ್ಯ. ಹಾಗಿಲ್ಲದಿದ್ದರೆ ಆಸ್ಟಿಯೊಪೊರೋಸಿಸ್‌, ಮೂಳೆ ಮುರಿತದಂಥ ತೊಂದರೆಗಳು ಕಾಡುತ್ತವೆ.

ರೋಗ ನಿರೋಧಕತೆ ಹೆಚ್ಚಳ

ರೋಗಾಣುಗಳ ವಿರುದ್ಧ ಹೋರಾಡುವ ಮೈಕ್ರೋಫೇಜ್‌ಗಳು ಮತ್ತು ಟಿ ಸೆಲ್‌ಗಳನ್ನು ಪ್ರಚೋದಿಸಿ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೇಳಿ ಬರುತ್ತಿರುವ ಆಟೋಇಮ್ಯೂನ್‌ ರೋಗಗಳನ್ನು ಹತ್ತಿಕ್ಕುವುದರಿಂದ ಹಿಡಿದು, ದೇಹದ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ.

ಸ್ನಾಯುಗಳ ಬಲವರ್ಧನೆ

ಮಾಂಸಪೇಶಿಗಳ ವಿಷಯ ಬರುತ್ತಿದ್ದಂತೆ ಪ್ರೊಟೀನ್‌ ಜಪವೊಂದೇ ಮುಖ್ಯವಾಗಿ ಬಿಡುತ್ತದೆ. ಆದರೆ ಹಾಗಲ್ಲ, ಸ್ನಾಯುಗಳ ರಕ್ಷಣೆಗೆ ಪ್ರೊಟೀನ್‌ ಎಷ್ಟು ಅಗತ್ಯವೋ ವಿಟಮಿನ್‌ ಡಿ ಸಹ ಅಷ್ಟೇ ಅಗತ್ಯ. ಕಾರಣ, ತಿನ್ನುವ ಪ್ರೊಟೀನ್‌ಗಳು ಸರಿಯಾಗಿ ಹೀರಲ್ಪಡಬೇಕೆಂದರೆ ಅದಕ್ಕೆ ಡಿ ಜೀವಸತ್ವ ಬೇಕು. ಆಗ ಮಾತ್ರವೇ ಗಾಯಗಳ ಭೀತಿ ದೂರವಾಗುತ್ತದೆ.

ಮಾನಸಿಕ ಆರೋಗ್ಯ

ಹ್ಯಾಪಿ ಹಾರ್ಮೋನುಗಳೆಂದೇ ಕರೆಯಲಾಗುವ ಸೆರೋಟೋನಿನ್‌ ಚೋದಕಗಳ ಉತ್ಪಾದನೆಗೆ ವಿಟಮಿನ್‌ ಡಿ ಪ್ರೋತ್ಸಾಹ ನೀಡುತ್ತದೆ. ಇದರಿಂದ ಖಿನ್ನತೆ, ಒತ್ತಡ, ಆತಂಕದಂಥ ಮಾನಸಿಕ ಸಮಸ್ಯೆಗಳ ನಿವಾರಣೆಗೆ ಸಹಕಾರಿ. ಜೊತೆಗೆ ಮೂಡ್‌ ಸಹ ಸುಧಾರಿಸಿ, ಕೆಲಸದ ಉತ್ಪಾದಕತೆಯನ್ನು ವೃದ್ಧಿಸುತ್ತದೆ. ಜೀವನದಲ್ಲಿ ಸಂತೋಷವೂ ಹೆಚ್ಚುತ್ತದೆ.

ಹೃದಯವೂ ಕ್ಷೇಮ

ರಕ್ತದೊತ್ತಡ ಸುಧಾರಣೆಗೆ ಮತ್ತು ರಕ್ತನಾಳಗಳ ಆರೋಗ್ಯ ರಕ್ಷಣೆಗೆ ಡಿ ಜೀವಸತ್ವ ಬೇಕು. ಇದರ ಜೊತೆಗೆ, ದೇಹದಲ್ಲಿನ ಉರಿಯೂತ ಶಮನಕ್ಕೆ ಇದು ಬಹುವಾಗಿ ನೆರವಾಗುತ್ತದೆ. ಇದರಿಂದ ಹೃದಯಾಘಾತ, ಪಾರ್ಶ್ವವಾಯುವಿನಂಥ ಹಲವಾರು ಮಾರಕ ರೋಗಗಳ ಭೀತಿ ದೂರಾಗುತ್ತದೆ. ದೇಹ ಆರೋಗ್ಯಪೂರ್ಣವಾಗಿ ಇರುತ್ತದೆ.

ತೂಕ ಇಳಿಕೆಗೆ ಪೂರಕ

ಇನ್‌ಸುಲಿನ್‌ ಪ್ರತಿರೋಧಕತೆಯನ್ನು ಮಟ್ಟಹಾಕಲು ವಿಟಮಿನ್‌ ಡಿ ಸಹಾಯ ಮಾಡುತ್ತದೆ. ಜೊತೆಗೆ ದೇಹದಲ್ಲಿರುವ ಕೊಬ್ಬನ್ನು ವಿಘಟಿಸಿ, ಬೊಜ್ಜು ಕರಗಿಸುವಲ್ಲಿ ಡಿ ಜೀವಸತ್ವ ಉಪಯುಕ್ತ. ಈ ನಿಟ್ಟಿನಲ್ಲಿ, ತೂಕ ಇಳಿಸುವುದಕ್ಕಷ್ಟೇ ಅಲ್ಲ, ಚಯಾಪಚಯ ದೋಷಗಳನ್ನು ನಿಯಂತ್ರಣದಲ್ಲಿ ಇರಿಸಿ, ಮಧುಮೇಹದಂಥ ವಿಕಾರಗಳು ತಲೆ ಎತ್ತದಂತೆ ಮಾಡುತ್ತದೆ.

ಶ್ವಾಸಕೋಶಗಳು ಸಬಲ

ಪುಪ್ಪುಸಗಳಿಗೆ ಪದೇಪದೆ ಸೋಂಕು ತಗುಲುತ್ತಿದ್ದರೆ ವಿಟಮಿನ್‌ ಡಿ ಕೊರತೆಯೂ ಕಾರಣವಾಗಿರಬಹುದು. ಶ್ವಾಸಕೋಶಗಳ ಕ್ಷಮತೆ ಹೆಚ್ಚಿಸುವುದಕ್ಕೆ ಇದು ನೆರವಾಗುತ್ತದೆ. ಸಿಒಪಿಡಿ, ಅಸ್ತಮಾದಂಥ ಪುಪ್ಪುಸಗಳ ತೀವ್ರತರ ತೊಂದರೆಯನ್ನು ಹತ್ತಿಕ್ಕುವಲ್ಲಿ, ದೇಹದಲ್ಲಿ ಸರಿಯಾದ ಪ್ರಮಾಣದಲ್ಲಿ ವಿಟಮಿನ್‌ ಡಿ ಇರಬೇಕು.

ಆಹಾರಗಳು

ವಿಟಮಿನ್‌ ಡಿ ನೀಡುವ ಆಹಾರಗಳು ಬೇಕಷ್ಟಿವೆ. ಮೀನು ಹಾಗೂ ಮೀನೆಣ್ಣೆಯ ವಸ್ತುಗಳಲ್ಲಿ ಡಿ ಜೀವಸತ್ವ ಸಮೃದ್ಧವಾಗಿದೆ. ಉತ್ತಮ ಕೊಬ್ಬಿನಾಂಶವಿರುವ ಟ್ರೌಟ್‌, ಸಾಲ್ಮನ್‌, ಟ್ಯೂನ ಮತ್ತು ಮ್ಯಾಕರೆಲ್‌ನಂಥ ಮೀನುಗಳಲ್ಲಿ ವಿಟಮಿನ್‌ ಡಿ ಹೆಚ್ಚಿನ ಪ್ರಮಾಣದಲ್ಲಿ ದೊರೆಯುತ್ತದೆ. ಇದಲ್ಲದೆ, ಮೀನೆಣ್ಣೆಯ ಮೂಲಕವೂ ನೈಸರ್ಗಿಕವಾಗಿ ವಿಟಮಿನ್‌ ಡಿ ಪಡೆಯಲು ಸಾಧ್ಯವಿದೆ.

ಅಣಬೆ ಮತ್ತು ಮೊಟ್ಟೆ

ಸೂರ್ಯನ ಬೆಳಕಿಗೆ ಒಡ್ಡಿದಾಗ ವಿಟಮಿನ್‌ ಡಿ ಸಂಶ್ಲೇಷಿಸಿಕೊಳ್ಳುವ ಸಾಮರ್ಥ್ಯವನ್ನು ಅಣಬೆಗಳು ಸಹ ಹೊಂದಿವೆ. ನೈಸರ್ಗಿಕವಾಗಿ ಕಾಡುಗಳಲ್ಲಿ ಬೆಳೆದಿರುವ ಅಣಬೆಗಳಲ್ಲಿ ಡಿ ಜೀವಸತ್ವ ಹೆಚ್ಚು ಸಾಂದ್ರವಾಗಿರುತ್ತದೆ. ಆದರೆ ನೈಸರ್ಗಿಕವಾಗಿ ಬೆಳೆಯುವ ಅಣಬೆಗಳು ದುರ್ಲಭವಾಗಿರುವುದರಿಂದ, ಕೃಷಿಯ ಮೂಲಕ ಬೆಳೆಸಿರುವ ಅಣಬೆಗಳ ಮೂಲಕವೂ ಡಿ ಜೀವಸತ್ವವನ್ನು ಪಡೆಯಬಹುದು. ಇನ್ನು, ಮೊಟ್ಟೆಯ ಬಿಳಿ ಭಾಗದಲ್ಲಿ ಪ್ರೊಟೀನ್‌ ಸಾಂದ್ರವಾಗಿ ಇರುವಂತೆ, ಹಳದಿ ಭಾಗದಲ್ಲಿ ಕೊಬ್ಬು, ಖನಿಜಗಳು ಮತ್ತು ಡಿ, ಎ ಮತ್ತು ಬಿ ವಿಟಮಿನ್‌ಗಳು ದೊರೆಯುತ್ತವೆ.

ಡೈರಿ ಉತ್ಪನ್ನಗಳು

ಹಸುವಿನ ಹಾಲು ಸಹ ಡಿ ಜೀವಸತ್ವದ ಸ್ವಾಭಾವಿಕ ಮೂಲ. ಹಾಲು, ಮೊಸರು, ಬೆಣ್ಣೆ, ಚೀಸ್‌ಗಳ ಮೂಲಕ ವಿಟಮಿನ್‌ ಡಿ ಪಡೆಯಬಹುದು. ಮಾತ್ರವಲ್ಲ, ಹಾಲಿಗೆ ಪರ್ಯಾಯವಾಗಿ ಬಳಸುವ ಸೋಯಾ ಹಾಲು, ಅಕ್ಕಿ ಹಾಲು, ತೆಂಗಿನ ಹಾಲು, ಬಾದಾಮಿ ಹಾಲುಗಳಲ್ಲೂ ವಿಟಮಿನ್‌ ಡಿ ಸಾಕಷ್ಟು ಅಡಗಿದೆ.

Exit mobile version