Site icon Vistara News

Vitamin D In Winter: ಚಳಿಗಾಲದಲ್ಲಿ ಕೊರತೆಯಾಗದಿರಲಿ ವಿಟಮಿನ್‌ ಡಿ

Vitamin D In Winter

ಚಳಿಗಾಲದಲ್ಲಿ ದೇಹದೆಲ್ಲೆಡೆ ನೋವು ಹೆಚ್ಚಾದರೆ ಅದನ್ನು ʻಎಲ್ಲಾ ನಾರ್ಮಲ್ಲುʼ ಎಂದು ಬದಿಗಿರಿಸುತ್ತೇವೆ. ಪದೇಪದೆ ಶೀತ-ಕೆಮ್ಮು ಕಾಡುತ್ತಿದ್ದರೆ, ʻಚಳಿಗಾಲಾಂದ್ರೆ ಇಷ್ಟೆʼ ಎಂದು ತಳ್ಳಿ ಹಾಕುತ್ತೇವೆ. ಸ್ನಾಯುಸೆಳೆತ ಹಿಂಡುತ್ತಿದ್ದರೆ ಹಣೆಬರಹವನ್ನು ಹಳಿಯುತ್ತೇವೆ. ನಮಗೆ ವಿಟಮಿನ್‌ ಡಿ ಕೊರತೆಯಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳುವುದೇ ಇಲ್ಲ. ಚಳಿಗಾಲದಲ್ಲಿ ಹಾಯೆನ್ನಿಸುಂತೆ ಬಿಸಿಲು ಕಾಯಿಸುತ್ತಿದ್ದ ನಮ್ಮ ಅಜ್ಜ-ಅಜ್ಜಿಯರ ಮೂಳೆಗಳು ನಮ್ಮದಕ್ಕಿಂತ ಎಷ್ಟೋ ಗಟ್ಟಿ ಇತ್ತಲ್ಲ ಎಂದು ಒಮ್ಮೆಯಾದರೂ ಅನಿಸಿರಬಹುದಲ್ಲವೇ?

ವಿಟಮಿನ್‌ ಡಿ ಕೊರತೆ ಎಲ್ಲಾ ವಯೋಮಾನದವರನ್ನೂ ಬಾಧಿಸಬಹುದು. ಕಾರಣ, ಡಿ ಜೀವಸತ್ವ ದೊರೆಯುವ ಮೂಲಗಳ ಬಗ್ಗೆ ಇರುವ ಅರಿವಿನ ಕೊರತೆ. ಸೂರ್ಯನ ಬಿಸಿಲಿನಲ್ಲಿ ಸಾಕಷ್ಟು ಪ್ರಮಾಣದ ವಿಟಮಿನ್‌ ಡಿ ದೊರೆಯುತ್ತದೆ, ನಿಜ. ಆದರೆ ದಿನದಲ್ಲಿ ಒಂದಿಷ್ಟು ಹೊತ್ತು ನಮ್ಮನ್ನು ನಾವು ಬಿಸಿಗೆ ಒಡ್ಡಿಕೊಳ್ಳಬೇಕಾಗುತ್ತದೆ. ಇಡೀ ದಿನ ಒಳಾಂಗಣದಲ್ಲೇ ವ್ಯವಹರಿಸಿ, ಸನ್‌ಬ್ಲಾಕ್‌ ಬಳಿದುಕೊಂಡು ಮನೆಯಿಂದ ಹೊರಬಿದ್ದ ಕೂಡಲೆ ಬಸ್ಸು, ಕಾರು, ಆಟೋ ಹತ್ತಿಬಿಟ್ಟರೆ ಸೂರ್ಯನ ಬಿಸಿಲು ಮೈಗೆ ತಾಗುವುದಾದರೂ ಹೇಗೆ?

ದೇಹಕ್ಕೆ ಬೇಕಾಗಿರುವುದು ಹೇಗೆ ದೊರೆಯುತ್ತದೆ ಮತ್ತು ದೊರೆಯದಿದ್ದರೆ ಏನಾಗುತ್ತದೆ ಎಂಬುದೀಗ ಪ್ರಶ್ನೆ. ನಮ್ಮ ದೇಹಕ್ಕೆ ಬೇಕಾದ ಅಗತ್ಯ ಜೀವಸತ್ವಗಳಲ್ಲಿ ಒಂದು ವಿಟಮಿನ್‌ ಡಿ. ದೇಹಕ್ಕೆ ಕ್ಯಾಲ್ಸಿಯಂ ಮತ್ತು ಫಾಸ್ಫರಸ್‌ ಹೀರಲು ಸಾಧ್ಯವಾಗುವುದು ಸೂಕ್ತ ಪ್ರಮಾಣದಲ್ಲಿ ವಿಟಮಿನ್‌ ಡಿ ದಾಸ್ತಾನು ಇದ್ದರೆ ಮಾತ್ರ. ಹಾಗಾಗಿಯೇ ಮೂಳೆಗಳು ಶಕ್ತಿಯುತವಾಗಿರಲು, ಸೋಂಕುಗಳು ಹಾಗೂ ಉರಿಯೂತ ಬಾಧಿಸದಿರಲು ಡಿ ಜೀವಸತ್ವ ಪ್ರಮುಖವಾಗಿ ಬೇಕು.

ಆಹಾರಗಳು

ವಿಟಮಿನ್‌ ಡಿ ನೀಡುವ ಆಹಾರಗಳೂ ಬೇಕಷ್ಟಿವೆ. ಮೀನು ಹಾಗೂ ಮೀನೆಣ್ಣೆಯ ವಸ್ತುಗಳಲ್ಲಿ ಡಿ ಜೀವಸತ್ವ ಸಮೃದ್ಧವಾಗಿದೆ. ಉತ್ತಮ ಕೊಬ್ಬಿನಾಂಶವಿರುವ ಟ್ರೌಟ್‌, ಸಾಲ್ಮನ್‌, ಟ್ಯೂನ ಮತ್ತು ಮ್ಯಾಕರೆಲ್‌ನಂಥ ಮೀನುಗಳಲ್ಲಿ ವಿಟಮಿನ್‌ ಡಿ ಹೆಚ್ಚಿನ ಪ್ರಮಾಣದಲ್ಲಿ ದೊರೆಯುತ್ತದೆ. ಇದಲ್ಲದೆ, ಮೀನೆಣ್ಣೆಯ ಮೂಲಕವೂ ನೈಸರ್ಗಿಕವಾಗಿ ವಿಟಮಿನ್‌ ಡಿ ಪಡೆಯಲು ಸಾಧ್ಯವಿದೆ.

ಅಣಬೆ ಮತ್ತು ಮೊಟ್ಟೆ

ಸೂರ್ಯನ ಬೆಳಕಿಗೆ ಒಡ್ಡಿದಾಗ ವಿಟಮಿನ್‌ ಡಿ ಸಂಶ್ಲೇಷಿಸಿಕೊಳ್ಳುವ ಸಾಮರ್ಥ್ಯವನ್ನು ಅಣಬೆಗಳು ಸಹ ಹೊಂದಿವೆ. ನೈಸರ್ಗಿಕವಾಗಿ ಕಾಡುಗಳಲ್ಲಿ ಬೆಳೆದಿರುವ ಅಣಬೆಗಳಲ್ಲಿ ಡಿ ಜೀವಸತ್ವ ಹೆಚ್ಚು ಸಾಂದ್ರವಾಗಿರುತ್ತದೆ. ಆದರೆ ನೈಸರ್ಗಿಕವಾಗಿ ಬೆಳೆಯುವ ಅಣಬೆಗಳು ದುರ್ಲಭವಾಗಿರುವುದರಿಂದ, ಕೃಷಿಯ ಮೂಲಕ ಬೆಳೆಸಿರುವ ಅಣಬೆಗಳ ಮೂಲಕವೂ ಡಿ ಜೀವಸತ್ವವನ್ನು ಪಡೆಯಬಹುದು. ಇನ್ನು, ಮೊಟ್ಟೆಯ ಬಿಳಿ ಭಾಗದಲ್ಲಿ ಪ್ರೊಟೀನ್‌ ಸಾಂದ್ರವಾಗಿ ಇರುವಂತೆ, ಹಳದಿ ಭಾಗದಲ್ಲಿ ಕೊಬ್ಬು, ಖನಿಜಗಳು ಮತ್ತು ಡಿ, ಎ ಮತ್ತು ಬಿ ವಿಟಮಿನ್‌ಗಳು ದೊರೆಯುತ್ತವೆ.

ಡೈರಿ ಉತ್ಪನ್ನಗಳು

ಹಸುವಿನ ಹಾಲು ಸಹ ಡಿ ಜೀವಸತ್ವದ ಸ್ವಾಭಾವಿಕ ಮೂಲ. ಹಾಲು, ಮೊಸರು, ಬೆಣ್ಣೆ, ಚೀಸ್‌ಗಳ ಮೂಲಕ ವಿಟಮಿನ್‌ ಡಿ ಪಡೆಯಬಹುದು. ಮಾತ್ರವಲ್ಲ, ಹಾಲಿಗೆ ಪರ್ಯಾಯವಾಗಿ ಬಳಸುವ ಸೋಯಾ ಹಾಲು, ಅಕ್ಕಿ ಹಾಲು, ತೆಂಗಿನ ಹಾಲು, ಬಾದಾಮಿ ಹಾಲುಗಳಲ್ಲೂ ವಿಟಮಿನ್‌ ಡಿ ಸಾಕಷ್ಟು ಅಡಗಿದೆ.

ಕೊರತೆಯಾದರೆ?

ವಿಟಮಿನ್‌ ಡಿ ಕೊರತೆ ಇದೆ ಎಂಬುದು ಹೇಗೆ ತಿಳಿಯುತ್ತದೆ? ಕೆಲವು ನೋವುಗಳು ಮತ್ತೆ ಮತ್ತೆ ಕಾಡಬಹುದು. ನಿಮ್ಮದೇ ಔಷಧಿಯಲ್ಲಿ ಉಪಶಮನಗೊಂಡರೂ ತಿರುಗಿ ಬರಬಹುದು. ಅಂದರೆ, ಸ್ನಾಯು ನೋವು ಅಥವಾ ಸ್ನಾಯು ಸೆಳೆತಗಳು ಕೆಲಕಾಲ ಬಾಧಿಸಿ ಕಡಿಮೆಯಾದಂತೆನಿಸಿ, ಮತ್ತೆಮತ್ತೆ ಬರಬಹುದು. ಆರ್ಥರೈಟಿಸ್‌ನಂತೆ ಮೂಳೆಗಳಲ್ಲಿ ನೋವು ಕಾಣಬಹುದು. ಮೂಳೆ ಮುರಿತವೂ ಸಂಭವಿಸಬಹುದು. ಪದೇಪದೆ ಸೋಂಕುಗಳು ಬಾಧಿಸುತ್ತಿದ್ದರೆ ವಿಟಮಿನ್‌ ಡಿ ಕೊರತೆಯೂ ಕಾರಣವಿರಬಹುದು. ಊಟ ಮಾಡಿದ್ದರೂ, ನಿದ್ದೆ ಸಾಕಷ್ಟು ಮಾಡಿದ್ದರೂ ಸದಾ ಆಯಾಸ ಕಾಡುತ್ತಲೇ ಎಂದಾದರೆ ಡಿ ಜೀವಸತ್ವ ಕಡಿಮೆಯಿರಬಹುದು. ಮೂಡ್‌ ಏರುಪೇರಾಗುವುದು ಸಹ ವಿಟಮಿನ್‌ ಡಿ ಕೊರತೆಯ ಲಕ್ಷಣಗಳಲ್ಲಿ ಒಂದು.

ಇದನ್ನೂ ಓದಿ: Bone Health: ಮೂಳೆಗಳನ್ನು ದುರ್ಬಲಗೊಳಿಸುವ ಈ ಅಭ್ಯಾಸ ಬಿಡಿ!

Exit mobile version