ಯಾವುದೇ ವಯೋಮಾನದವರನ್ನೂ ಬಿಡದೆ ಕಾಡುವ ಮಾರಕ ಖಾಯಿಲೆಗಳಲ್ಲಿ ಕ್ಯಾನ್ಸರ್ ಮುಂಚೂಣಿಯಲ್ಲಿದೆ. ಮಕ್ಕಳಲ್ಲಿ ಮತ್ತು ಹದಿವಯಸ್ಸಿನವರಲ್ಲಿಯೂ ಕಾಣಬಹುದಾದ ಈ ರೋಗದ ಕುರಿತಾಗಿ ಜಾಗೃತಿ ಮೂಡಿಸಿ, ಹೆತ್ತವರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಇಂದಿನ ದಿನವನ್ನು ಅಂತಾರಾಷ್ಟ್ರೀಯ ಬಾಲ್ಯದ ಕ್ಯಾನ್ಸರ್ ಜಾಗೃತಿ ದಿನ ಎಂದು (International Childhood Cancer Day) ಗುರುತಿಸಲಾಗಿದೆ.
ಅರಳುವ ಮುನ್ನವೇ ಹೂವೊಂದು ಮುದುಡುವುದು ಆ ಗಿಡಕ್ಕೆ ಮಾತ್ರವೇ ಅಲ್ಲ, ಇಡೀ ತೋಟಕ್ಕೇ ನೋವಿನ ವಿಷಯ. ಮಕ್ಕಳ ಸಂದರ್ಭದಲ್ಲೂ ಹಾಗೆಯೇ. ಎಳೆಯರು ಇಂಥ ಮಾರಣಾಂತಿಕ ರೋಗಗಳಿಗೆ ತುತ್ತಾಗುವುದು ಹೆತ್ತವರಿಗಷ್ಟೇ ಅಲ್ಲ, ಇಡೀ ಸಮಾಜಕ್ಕೆ ನಷ್ಟ. ಇಂಥ ಪ್ರಕರಣಗಳಲ್ಲಿ ಬೇಗನೇ ಎಚ್ಚೆತ್ತುಕೊಂಡು ಚಿಕಿತ್ಸೆ ನೀಡಿದಲ್ಲಿ, ಆ ಮಕ್ಕಳು ಉಳಿದು ಬೆಳೆಯುವ ಸಂಭವ ಹೆಚ್ಚಿರುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ-ಅಂಶಗಳ ಪ್ರಕಾರ, 18 ವರ್ಷದೊಳಗಿನ ಸುಮಾರು 4 ಲಕ್ಷ ಮಕ್ಕಳು ಪ್ರತಿವರ್ಷ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ.
ಮಕ್ಕಳನ್ನೇಕೆ ಕ್ಯಾನ್ಸರ್ ಕಾಡುತ್ತದೆ ಎಂಬ ಪ್ರಶ್ನೆ ಎದುರಾಗಬಹುದು. ಹೆಚ್ಚಿನ ಬಾರಿ ಸೋಂಕುಗಳು, ಕೆಲವೊಮ್ಮೆ ಆನುವಂಶೀಯತೆ ಕಾರಣವಾಗಬಹುದು. ಕಾರಣಗಳೇನೇ ಇದ್ದರೂ, ಆರಂಭಿಕ ಲಕ್ಷಣಗಳ ಬಗ್ಗೆ ಅರಿವು ಹೊಂದಿರುವುದು ಅಗತ್ಯ. ಆದಷ್ಟೂ ಪ್ರಾಥಮಿಕ ಹಂತಗಳಲ್ಲಿ ರೋಗ ಪತ್ತೆಯಾದರೆ ಗುಣವಾಗುವ ಸಾಧ್ಯತೆಯನ್ನು ಹೆಚ್ಚಿಸುವುದಕ್ಕೆ ಸಾಧ್ಯವಿದೆ. ಏನು ಲಕ್ಷಣಗಳ ಬಗ್ಗೆ ಪಾಲಕರ ಗಮನ ಅಗತ್ಯ?
ತೂಕ ಇಳಿಯುವುದು
ಹಾಗೆಂದಾಕ್ಷಣ ಹೌಹಾರಬೇಕಿಲ್ಲ. ಮಕ್ಕಳಲ್ಲಿ ಸೋಂಕುಗಳು ಸಾಮಾನ್ಯ. ಅದರಿಂದ ತೂಕ ಇಳಿಯುವುದೂ ಅಷ್ಟೇ ಸಾಮಾನ್ಯ. ಆದರೆ ಯಾವುದೇ ಕಾರಣ ಇಲ್ಲದಿರುವಾಗಲೂ ತೂಕ ಇಳಿಯುತ್ತಿದ್ದರೆ ಎಚ್ಚರ ವಹಿಸಿ. ಹೀಗೆ ಅಕಾರಣವಾಗಿ ತೂಕ ಇಳಿಯುವುದು ಕ್ಯಾನ್ಸರ್‌ನ ಲಕ್ಷಣಗಳಲ್ಲಿ ಒಂದು. ಮೊದಲು ಮಕ್ಕಳ ತಜ್ಞರಲ್ಲಿ ಕರೆದೊಯ್ಯಿರಿ.
ತಲೆನೋವು
ವೈರಲ್ ಸೋಂಕುಗಳಿದ್ದರೆ ಕೆಲವೊಮ್ಮೆ ತಲೆನೋವು, ಮೈಕೈ ನೋವು ಬರಬಹುದು. ಆದರೆ ದೊಡ್ಡವರಿಗೆ ಬಂದಂತೆ ಮಕ್ಕಳಲ್ಲಿ ಕಾರಣ ತಿಳಿಯದೆಯೆ ತಲೆನೋವು ಕಾಣುವುದಿಲ್ಲ. ಮಗು ಆಗಾಗ ತಲೆನೋವೆಂದು ದೂರುತ್ತಿದ್ದರೆ, ಬೆಳಗಿನ ಹೊತ್ತು ಈ ತಲೆನೋವು ಕಾಡುತ್ತಿದ್ದರೆ, ತಲೆನೋವಿನೊಂದಿಗೆ ವಾಂತಿಯೂ ಆಗುತ್ತಿದ್ದರೆ ವೈದ್ಯರಲ್ಲಿ ಸಮಾಲೋಚನೆಯ ಅಗತ್ಯವಿದೆ ಎಂದು ಭಾವಿಸಬೇಕು.
ಕೀಲುಗಳಲ್ಲಿ ನೋವು, ಬಾವು
ಆಡುವಾಗ ಬೀಳುವುದು ಏಳುವುದು ಸಾಮಾನ್ಯ. ಹಾಗೆ ಬಿದ್ದಾಗಿನ ತೀವ್ರತೆ ಹೆಚ್ಚಿದ್ದರೆ ಮಕ್ಕಳ ಎಳೆಯ ಮೂಳೆಗಳು ಮುರಿಯಬಾರದೆಂದಿಲ್ಲ. ಆದರೆ ಅಂಥ ಯಾವುದೇ ಕಾರಣಗಳಿಲ್ಲದೆಯೇ ಕೀಲುಗಳಲ್ಲಿ ತೀವ್ರ ನೋವಿದ್ದರೆ, ಊತವಿದ್ದರೆ ಅದನ್ನು ವೈದ್ಯರಲ್ಲಿ ತೋರಿಸಲೇಬೇಕು. ಕೈ-ಕಾಲು ಮುಂತಾದ ಯಾವುದೇ ಕೀಲುಗಳಲ್ಲಿ ಅಥವಾ ಯಾವುದೇ ಮೂಳೆಗಳಲ್ಲಿ ಅಕಾರಣವಾಗಿ ನೋವು-ಊತ ಬಂದರೆ ಎಚ್ಚರಿಕೆ ವಹಿಸಿ. ವೈದ್ಯರಿಂದ ಕಾರಣ ತಿಳಿದುಕೊಳ್ಳಿ.
ಸುಸ್ತು, ತರಚುವುದು
ಸದಾ ಕಾಲ ಸುಸ್ತು, ಆಯಾಸದ ಭಾವಗಳನ್ನು ಮಗು ತೋರಬಹುದು. ತೀರಾ ತಿನ್ನುವುದೇ ಇಲ್ಲ ಎನ್ನುವ ಮಕ್ಕಳಲ್ಲಿ ಅಶಕ್ತತೆ ಸಾಮಾನ್ಯ. ಆದರೂ ಸುಸ್ತಾಯಿತೆಂದು ಮಕ್ಕಳು ಕೂರುವುದು ಅಪರೂಪ. ಆಟ-ಪಾಠಗಳಲ್ಲಿ ಆಸಕ್ತಿ ತೊರದೆ ಯಾವಾಗಲೂ ಆಯಾಸದ ಚಿಹ್ನೆಗಳಿದ್ದರೆ ಜಾಗ್ರತೆ ಮಾಡಲೇಬೇಕು. ಸ್ವಲ್ಪ ತುರಿಕೆಗೂ ಸುಲಭವಾಗಿ ತರಚು ಗಾಯಗಳಾಗುತ್ತಿದ್ದರೆ, ಮೂಗು ಒಸಡುಗಳಲ್ಲಿ ರಕ್ತಸ್ರಾವ ಆಗುತ್ತಿದ್ದರೆ ಒಮ್ಮೆ ವೈದ್ಯರಲ್ಲಿ ಮಾತಾಡಿ.
ದೃಷ್ಟಿಯ ತೊಂದರೆ
ಇಂದಿನ ದಿನಗಳಲ್ಲಿ ಮಕ್ಕಳಲ್ಲಿ ದೃಷ್ಟಿದೋಷಗಳು ಸಾಮಾನ್ಯ ಎಂಬಂತಾಗಿದೆ. ಸ್ಕ್ರೀನ್ ಟೈಮ್ ಅತಿಯಾಗುವುದು, ಸರಿಯಾದ ಪೋಷಕಾಂಶಗಳು ಹೊಟ್ಟೆ ಸೇರದಿರುವುದು, ಜಂಕ್ ತಿನ್ನುವುದು ಮುಂತಾದವು ಕಣ್ನಿಗೂ ಹಾನಿ ಮಾಡುತ್ತವೆ. ಹಾಗೆಂದು ಅದನ್ನೂ ನಿರ್ಲಕ್ಷಿಸುವಂತಿಲ್ಲ. ಇದಕ್ಕಿದ್ದಂತೆ ಕಣ್ಣಿನ ತೊಂದರೆ ಶುರುವಾದರೆ, ತೀಕ್ಷ್ಣ ಬೆಳಕನ್ನು ನೋಡಿದಾಗೆಲ್ಲ ಕಣ್ಣಿನ ಸಮಸ್ಯೆ ಎಂದು ದೂರಿದರೆ… ಯಾವುದಕ್ಕೂ ಒಮ್ಮೆ ವೈದ್ಯರು ನೋಡಲಿ.
ತಣಿಯದ ಜ್ವರ
ಮಕ್ಕಳಲ್ಲಿ ಎರಡೆರಡು ತಿಂಗಳಿಗೂ ಜ್ವರ ಬರುವುದು ಸಾಮಾನ್ಯ. ಬಂದಷ್ಟೇ ಬೇಗ ಕಡಿಮೆಯೂ ಆಗುತ್ತದೆ ಅವರಲ್ಲಿ. ಫ್ಲೂನಂಥ ಕೆಲವೊಂದು ವೈರಸ್‌ಗಳು ಮಾತ್ರ ನಾಲ್ಕಾರು ದಿನಗಳ ಕಾಲ ಮಕ್ಕಳನ್ನು ಮಲಗಿಸಿಬಿಡುತ್ತವೆ. ಒಂದೆರಡು ವಾರಗಳಾದರೂ ಜ್ವರ ಬಿಡುತ್ತಿಲ್ಲ ಎಂದರೆ ಎಲ್ಲವೂ ಸರಿಯಿಲ್ಲ ಎಂದೇ ಭಾವಿಸತಕ್ಕದ್ದು. ತುರ್ತಾಗಿ ವೈದ್ಯರಲ್ಲಿ ಕರೆದೊಯ್ಯಿರಿ.
ಇದನ್ನೂ ಓದಿ: Migraine Headache: ಮೈಗ್ರೇನ್ ತಲೆನೋವೇ?: ಹಾಗಿದ್ದರೆ ಈ ಆಹಾರಗಳಿಂದ ದೂರವಿರಿ!