ಮುಖದ ಸೌಂದರ್ಯದ ಬಗ್ಗೆ ಯಾರಿಗೆ ತಾನೇ ಆಸಕ್ತಿ ಇರುವುದಿಲ್ಲ ಹೇಳಿ. ತಾನು ಮುದ್ದಾಗಿ, ಲಕ್ಷಣವಾಗಿ, ಚಂದ ಕಾಣಬೇಕು ಎಂಬ ಬಯಕೆ ಎಲ್ಲರಲ್ಲೂ ಖಂಡಿತವಾಗಿಯೂ ಇರುತ್ತದೆ. ಮುಖ್ಯವಾಗಿ ಮಹಿಳೆಯರಿಗೆ ತಮ್ಮ ಚರ್ಮದ ಮೇಲೆ ವಿಶೇಷ ಆಸ್ಥೆಯಿರುವುದು ಸಾಮಾನ್ಯ. ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿತ್ಯವೂ ನೂರೆಂಟು ಪ್ರಯೋಗಗಳನ್ನು ಮಾಡುವುದು, ಹತ್ತಾರು ಫೇಶ್‌ಪ್ಯಾಕ್, ಕ್ರೀಮು, ಸೀರಂ ಎಂದು ಸಮಯ, ದುಡ್ಡು ವ್ಯಯಿಸುವುದು ಎಲ್ಲರಿಗೂ ಗೊತ್ತಿರುವುದೇ. ಆದರೆ ಸೌಂದರ್ಯ ಒಳಗಿನಿಂದ ಹೊರಹೊಮ್ಮಬೇಕು ಎಂಬುದು ಅಪ್ಪಟ ಸತ್ಯ. ಚರ್ಮ ಹೊರಗಿನಿಂದ ಕಾಂತಿಯಿಂದ ಕಂಗೊಳಿಸಬೇಕಾದರೆ, ಚರ್ಮಕ್ಕೆ ಬೇಕಾದ ಪೋಷಕಾಂಶಗಳು ಒಳಗೆ ಸಿಗಬೇಕು. ಹೀಗೆ ಚರ್ಮಕ್ಕೆ ಸಿಗಲೇಬೇಕಾದ ಆಹಾರಗಳ ಪೈಕಿ ಮುಖ್ಯವೆನಿಸುವುದು ವಾಲ್ನಟ್ (walnut benefits) ಎಂದರೆ ನೀವು ನಂಬಲೇಬೇಕು.
ಹೌದು. ವರದಿಗಳ ಪ್ರಕಾರ ವಾಲ್ನಟ್ ಒಮೆಗಾ ೩ ಹಾಗೂ ಒಮೆಗಾ ೬ ಅನ್‌ಸ್ಯಾಚುರೇಟೆಡ್ ಫ್ಯಾಟಿ ಆಸಿಡ್‌ಗಳಿರುವ ಬೀಜಗಳಲ್ಲಿ ಒಂದು. ಈ ಎರಡೂ ಫ್ಯಾಟಿ ಆಸಿಡ್‌ಗಳನ್ನು ದೇಹ ಸರಿಯಾದ ಪ್ರಮಾಣದಲ್ಲಿ ಪಡೆದರೆ ಮಾತ್ರ ಚರ್ಮದ ತೊಂದರೆಗಳು ಹಾಗೂ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳೆಲ್ಲ ದೂರಾಗುತ್ತವೆ. ೯೫ರಿಂದ ೯೯ಪ್ರತಿಶತ ಮಂದಿ ನಮಗೆ ನಿತ್ಯ ಬೇಕಾಗುವ ಈ ಎರಡು ಫ್ಯಾಟಿ ಆಸಿಡ್‌ಗಳನ್ನು ಬಹಳ ಕಡಿಮೆಯೇ ಸೇವಿಸುತ್ತಾರೆ. ಹಾಗಾಗಿ ಪ್ರತಿದಿನವೂ ಪ್ರತಿಯೊಬ್ಬರೂ ಎರಡರಿಂದ ಮೂರು ವಾಲ್ನಟ್‌ಗಳನ್ನು ಸೇವಿಸಬೇಕು. ಇದರಿಂದ ಚರ್ಮದ ಆರೋಗ್ಯ ಖಂಡಿತವಾಗಿಯೂ ವೃದ್ಧಿಸುತ್ತದಂತೆ. ಹಾಗಾದರೆ, ವಾಲ್ನಟ್ ದಿನವೂ ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಎಂಬುದನ್ನು ನೋಡೋಣ.
೧. ರಕ್ತಶುದ್ಧಿ ಮಾಡುತ್ತದೆ: ವಾಲ್ನಟ್ ಆಂಟಿ ಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವುದರಿಂದ ಇದು ದೇಹದಲ್ಲಿರುವ ಕಶ್ಮಲಗಳನ್ನೆಲ್ಲ ದೇಹದಿಂದ ಹೊರಕ್ಕೆ ಕಳಿಸುತ್ತದೆ. ಇದರಿಂದ ರಕ್ತಶುದ್ಧಿಯಾಗುವುದಲ್ಲದೆ, ಇದರ ಪರಿಣಾಮವಾಗಿ ಚರ್ಮವೂ ಕಾಂತಿಯಿಂದ ಕಂಗೊಳಿಸುತ್ತದೆ. ಮೊಡವೆ, ಕಪ್ಪುಚುಕ್ಕೆಗಳೆಲ್ಲ ಮಾಯವಾಗುತ್ತದೆ. ಚರ್ಮಕ್ಕೆ ನೈಸರ್ಗಿಕ ಕಾಂತಿ ಬರುತ್ತದೆ.
೨. ಇದು ನೈಸರ್ಗಿಕ ಮಾಯ್‌ಶ್ಚರೈಸರ್: ಚರ್ಮಕ್ಕೆ ಅಗತ್ಯವಾಗಿ ಬೇಕಾಗಿರುವ ಮಾಯ್‌ಶ್ಚರೈಸಿಂಗ್ ಗುಣಗಳಿಂದ ಸಮೃದ್ಧವಾರಿರುವ ವಾಲ್ನಟ್ ವಿಟಮಿನ್ ಬಿ೫ ಹಾಗೂ ಇಯನ್ನು ತನ್ನಲ್ಲಿ ಹೊಂದಿದೆ. ಇದು ಚರ್ಮದ ಆರೋಗ್ಯಕ್ಕೆ ಬೇಕಾಗುವ ಪೋಷಕಾಂಶಗಳಾಗಿದ್ದು, ಇದು ಚರ್ಮವನ್ನು ಸದಾ ಒಣಗದಂತೆ, ಕುಳಿಗಳಾಗದಂತೆ ಕಾಫಾಡುತ್ತದೆ.
ಇದನ್ನೂ ಓದಿ: Skin Care: ಕೊಲಾಜೆನ್‌ಯುಕ್ತ ಆಹಾರ ಸೇವಿಸಿ: ಸಹಜ ಸೌಂದರ್ಯದಿಂದ ಕಂಗೊಳಿಸಿ!
೩. ಕಪ್ಪು ವರ್ತುಲಗಳಿಗೆ ಮದ್ದು: ಬಹಳಷ್ಟು ಮಂದಿಯನ್ನು ಕಾಡುವ ಸಮಸ್ಯೆ ಎಂದರೆ ಕಣ್ಣಿನ ಸುತ್ತಲ ಕಪ್ಪು ವರ್ತುಲಗಳು. ಅತಿಯಾದ ಕೆಲಸದ ಒತ್ತಡ, ಗಂಟೆಗಟ್ಟಲೆ ಲ್ಯಾಪ್‌ಟಾಪ್ ಮುಂದೆ ಕೂತಿರುವುದು, ನಿದ್ದೆಯಿಲ್ಲದೆ ಕೆಲಸ ಮಾಡುವುದು ಇತ್ಯಾದಿಗಳ ಪರಿಣಾಮ ಕಣ್ಣಿನ ಮೇಲೆ ಕಾಣಿಸುತ್ತದೆ. ಕಣ್ಣು ಆಳಕ್ಕಿಳಿದು ನಿಸ್ತೇಜವಾಗಿ ಕಣ್ಣಿನ ಸುತ್ತ ಕಪ್ಪು ವರ್ತುಲಗಳಾಗಿ ಕಾಣತೊಡಗುತ್ತದೆ. ಇಂತಹ ಸಮಸ್ಯೆ ಅನುಭವಿಸುವ ಮಂದಿಗೆ ವಾಲ್ನಟ್ ಅತ್ಯಂತ ಒಳ್ಳೆಯ ಮನೆಮದ್ದು. ದಿನವೂ ವಾಲ್ನಟ್ ಸೇವಿಸುತ್ತಾ ಬಂದರೆ ಇಂತಹ ಚರ್ಮದ ಸಮಸ್ಯೆಗಳು ಕಾಡುವುದಿಲ್ಲ.
೪. ಮುಪ್ಪನ್ನು ತಡೆಯುತ್ತದೆ: ವಾಲ್ನಟ್ ಆಂಟಿ ಆಕ್ಸಿಡೆಂಟ್‌ಗಳ ಹಾಗೂ ವಿಟಮಿನ್‌ಗಳಿಂದ ಶ್ರೀಮಂತವಾಗಿರುವುದರಿಂದ ಚರ್ಮಕ್ಕೆ ಸಂಬಂಧಿಸಿದ ಎಲ್ಲ ಸಮಸ್ಯೆಗಳಿಗೂ ಇದು ಅತ್ಯಂತ ಪರಿಣಾಮಕಾರಿ. ಮಾಲಿನ್ಯ, ಉಷ್ಣತೆ ಇತ್ಯಾದಿಗಳಿಂದ ಚರ್ಮದ ಮೇಲಾಗುವ ದುಷ್ಪರಿಣಾಮಗಳಿಂದಾಗಿ ಚರ್ಮ ಬಹುಬೇಗನೆ ಸುಕ್ಕಾಗುವುದು, ಇತ್ಯಾದಿ ತೊಂದರೆಗಳಿಗೆ ಒಳಗಾಗುವುದು ಇಂದು ಸಾಮಾನ್ಯ. ಆದರೆ, ವಾಲ್ನಟ್‌ನ ಸೇವೆಯಿಂದ ಇಂತಹ ಸಮಸ್ಯೆಗಳು ಕಾಡುವುದಿಲ್ಲ. ಚರ್ಮದ ಸುಕ್ಕು, ನಿರಿಗೆ ಮತ್ತಿತರ ಸಮಸ್ಯೆಗಳಿಂದ ದೂರವಿರಿಸಿ ಬಹುಬೇಗನೆ ಮುಪ್ಪಾದವರಂತೆ ಕಾಣುವುದರಿಂದ ತಪ್ಪಿಸುತ್ತದೆ.
೫. ಹೊಳೆವ ಚರ್ಮ: ಹೊಳೆವ ಚರ್ಮ ಬೇಕೆಂದು ಯಾರಿಗೆ ತಾನೇ ಆಸೆಯಿರುವುದಿಲ್ಲ ಹೇಳಿ. ವಾಲ್ನಟ್ ದಿನವೂ ತಿಂದರೆ ಖಂಡಿತವಾಗಿ ಈ ಕನಸು ಕನಸಾಗಿಯೇ ಉಳಿಯುವುದಿಲ್ಲ. ಇದರ ನಿರಂತರ ಸೇವನೆಯಿಂದ ಚರ್ಮದ ಕಾಂತಿಯಲ್ಲಿ ಗಮನೀಯ ಬದಲಾವಣೆ ಕಂಡುಬರುತ್ತದೆ. ಚರ್ಮ ಒಳಗಿನಿಂದ ಆರೋಗ್ಯಯುತವಾಗಿ ಕಂಗೊಳಿಸುತ್ತದೆ.
ಇದನ್ನೂ ಓದಿ: Health Tips: ಬೆಳಗ್ಗೆದ್ದ ಕೂಡಲೇ ಚಹಾ ಬಿಸ್ಕತ್ ತಿನ್ನಬಾರದು ಯಾಕೆ ಗೊತ್ತೇ?