Site icon Vistara News

Coconut oil massage: ಮುಖದ ಕಾಂತಿ ಹೆಚ್ಚಿಸಿಕೊಳ್ಳಬೇಕೆ? ತೆಂಗಿನೆಣ್ಣೆ ಹಚ್ಚಿಕೊಂಡರೆ ಸಾಕು!

Coconut oil massage

ತ್ವಚೆಯ ಪೋಷಣೆಯ ಭರಾಟೆ ಇತ್ತೀಚಿನ ವರ್ಷಗಳಲ್ಲಿ ಜೋರು. ಬಿಗಿಯಾದ, ಕುಂದಿಲ್ಲದ, ಕಾಂತಿಯುಕ್ತ, ತಾರುಣ್ಯಭರಿತ ತ್ವಚೆಯ ಮೋಹಕ್ಕೆ ಬಿದ್ದವರಲ್ಲಿ ಇತ್ತಪ್ಪರಿಂದ ಎಪ್ಪತ್ತರವರೆಗೂ ಇದ್ದಾರೆ. ಇದಕ್ಕಾಗಿ ದುಬಾರಿ ಬೆಲೆಯ ನೈಟ್‌ ಕ್ರೀಮುಗಳನ್ನು ತಂದು ಪ್ರಯೋಗಿಸಿ ಸುಸ್ತಾದವರ ಸಂಖ್ಯೆ ಕಡಿಮೆಯೇನಲ್ಲ. ಇಂಥ ಆಧುನಿಕ ಪರಿಹಾರಗಳೆಲ್ಲ ಇಲ್ಲದ ಕಾಲದಲ್ಲೂ ಕೆಲವು ಅಜ್ಜ-ಅಜ್ಜಿಯರ ಚರ್ಮ ಮಿಂಚುತ್ತಿತ್ತಲ್ಲ, ಅವರೇನು ಮಾಡುತ್ತಿದ್ದರು? ಅವರು ಜೀವನಶೈಲಿ, ಆಹಾರ ಎಲ್ಲವೂ ಈಗಿನಗಿಂತ ಭಿನ್ನವಾಗಿತ್ತು ಎಂಬದು ನಿಜವಾಗಿದ್ದರೂ, ಅವರ ಕೆಲವು ಸರಳ ಕ್ರಮಗಳು ದೀರ್ಘಕಾಲದವರೆಗೆ ಬೇಕಾದ ಕಾಳಜಿಯನ್ನು ನಿರ್ವಹಿಸುತ್ತಿದ್ದವು. ಉದಾ, ಚರ್ಮಕ್ಕೆ ಶುದ್ಧ ಕೊಬ್ಬರಿ ಎಣ್ಣೆಯನ್ನು ಹಚ್ಚುವುದು. ಇದು ಕೇವಲ ಮುಖಕ್ಕೆ ಮಾತ್ರವಲ್ಲ, ಇಡೀ ದೇಹಕ್ಕೆ ಲೇಪಿಸುತ್ತಿದ್ದರಿಂದ, ಕೈಕಾಲಿನ ಚರ್ಮವೂ ದೀರ್ಘಕಾಲದವರೆಗೆ ಸುಕ್ಕಾಗದೆ ಉಳಿಯುತ್ತಿತ್ತು. ಈ ಹಳೆಯ ಮಂತ್ರ ಇಂದಿಗೂ ಮಾವಿನಕಾಯಿ ಉದುರಿಸುತ್ತದೆ, ಆದರೆ ಪ್ರಯೋಗ (coconut oil massage) ಮಾಡಬೇಕಷ್ಟೆ.

ಹೌದು, ರಾತ್ರಿ ಮಲಗುವಾಗ ಸಾದ್ಯಂತವಾಗಿ ತ್ವಚೆಯನ್ನು ಕೊಬ್ಬರಿ ಎಣ್ಣೆಯಲ್ಲಿ ಮಸಾಜ್‌ ಮಾಡುವುದು ಅತ್ತ್ಯುತ್ತಮ ಪರಿಣಾಮಗಳನ್ನು ತರಬಲ್ಲದು. ಕುಂದಿಲ್ಲದ, ಮೃದುವಾದ, ಬಿಗಿಯಾದ, ಕಾಂತಿಯುಕ್ತ ತ್ವಚೆಯನ್ನು ನೀಡಬಲ್ಲದು. ಜೊತೆಗೆ ಮಲಗುವ ಮುನ್ನ ಮುಖಕ್ಕೆ ಮಾಡುವಂಥ ಒಳ್ಳೆಯ ಮಸಾಜ್‌ನಿಂದ ಮನಸ್ಸಿನ ಒತ್ತಡವೂ ಕಡಿಮೆಯಾಗಿ ಕಣ್ತುಂಬಾ ನಿದ್ದೆಯನ್ನು ಸಹ ತರಬಲ್ಲದು. ಇದರಿಂದ ರಕ್ತ ಸಂಚಾರವೂ ವೃದ್ಧಿಯಾಗಿ, ಕೊಲಾಜಿನ್‌ ಉತ್ಪಾದನೆ ಹೆಚ್ಚಾಗಿ, ಚರ್ಮದ ಆರೋಗ್ಯ ಸುಧಾರಿಸುತ್ತದೆ.

ಯಾವ ತೈಲ?

ರಾತ್ರಿ ಮಲಗುವ ಮುನ್ನಿನ ಮಸಾಜ್‌ಗೆ ಕೊಬ್ಬರಿ ಎಣ್ಣೆಯೇ ಆಗಬೇಕೆಂದಿಲ್ಲ. ಅವರವರ ಚರ್ಮಕ್ಕೆ ಹೊಂದುವಂಥ ಎಣ್ಣೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ ಕೊಬ್ಬರಿ ಎಣ್ಣೆ ಅಥವಾ ಬಾದಾಮಿ ಎಣ್ಣೆ ಈ ಕೆಲಸಕ್ಕೆ ಹೆಚ್ಚು ಹೊಂದುವಂಥದ್ದು. ಇವುಗಳಲ್ಲಿ ಚರ್ಮಕ್ಕೆ ಪೋಷಣೆ ನೀಡಿ ಪುನರುಜ್ಜೀವನಗೊಳಿಸುವ ಗುಣಗಳು ಹೆಚ್ಚಾಗಿವೆ. ಮಾತ್ರವಲ್ಲ, ಉತ್ಕರ್ಷಣ ನಿರೋಧಕಗಳು ಹೆಚ್ಚಿದ್ದಷ್ಟೂ ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಸುಲಭವಾಗುತ್ತದೆ.

ಈ ಕ್ರಮ ಹೇಗೆ?

ಮಲಗುವ ಮುನ್ನ ಅನುಸರಿಸಬೇಕಾದ ಕ್ರಮವಿದು. ಮೊದಲಿಗೆ ಮುಖದಲ್ಲಿ ಹುದುಗಿರುವ ಕೊಳೆಯನ್ನು ತೆಗೆಯಬೇಕು. ಇದಕ್ಕಾಗಿ ಯಾವುದಾದರೂ ಮೃದುವಾದ ಕ್ಲೆನ್ಸರ್‌ ಬಳಸಿ. ಕಟುವಾದ ರಾಸಾಯನಿಕಗಳನ್ನು ಹೊಂದಿದ ಉತ್ಪನ್ನಗಳು ಚರ್ಮಕ್ಕೆ ಹಾನಿ ಮಾಡುತ್ತವೆ. ಕೇವಲ ಕಡಲೆಹಿಟ್ಟು ಬಳಸಿದರೂ ಸಾಕು ಮುಖ ತೊಳೆಯುವುದಕ್ಕೆ.

ಕೊಬ್ಬರಿ ಎಣ್ಣೆಯನ್ನು ಕೊಂಚ ಬೆಚ್ಚಗೆ ಮಾಡಿ. ಈ ತೈಲಗಳನ್ನು ನೇರವಾಗಿ ಬಿಸಿ ಮಾಡುವುದು ಸಲ್ಲದು. ಪಾತ್ರೆಯೊಂದರಲ್ಲಿ ನೀರನ್ನು ಚೆನ್ನಾಗಿ ಬಿಸಿ ಮಾಡಿ. ಅದರೊಳಗೆ ಎಣ್ಣೆಯ ಪಾತ್ರೆಯನ್ನಿಟ್ಟು ತುಸು ಬೆಚ್ಚಗೆ ಮಾಡಿದರೆ ಸಾಕು. ಇದರಿಂದ ಚರ್ಮಕ್ಕೆ ಹೀರಿಕೊಳ್ಳಲು ಸುಲಭವಾಗುತ್ತದೆ.

ಮೇಲ್ಮುಖವಾಗಿ ಮತ್ತು ವೃತ್ತಾಕಾರವಾಗಿ ಮುಖದ ಮಸಾಜ್‌ ಮಾಡಿ. ಸಡಿಲವಾಗಿ ಕೆಳಗೆ ಜಾರಿರುವ ಚರ್ಮವನ್ನು ಬಿಗಿ ಮಾಡುವ ಉದ್ದೇಶ ನಮ್ಮದು. ಕೆನ್ನೆಯ ಕೆಳಭಾಗ, ಕಣ್ಣಿನ ಕೆಳಗೆ… ಹೀಗೆ ಸಡಿಲವಾಗಿರುವ ಭಾಗವನ್ನು ನಯವಾಗಿ ಮಸಾಜ್‌ ಹೆಚ್ಚಿಸಿ. ಇದನ್ನು ಗಡಿಬಿಡಿಯಲ್ಲಿ ಮಾಡಲಾಗದು. ಇದಿಷ್ಟು ಮಸಾಜ್‌ ಪ್ರಕ್ರಿಯೆಗೆ ಹತ್ತು ನಿಮಿಷಗಳಾದರೂ ತೆಗೆದಿರಿಸಬೇಕು. ಇದನ್ನು ವಾರಕ್ಕೊಮ್ಮೆ, ಎರಡು ಬಾರಿ, ನೆನಪಾದಾಗ, ಸಮಯ ಇದ್ದಾಗ ಎಂದೆಲ್ಲಾ ಮಾಡಿ, ಪ್ರತಿಫಲವನ್ನು ನಿರೀಕ್ಷಿಸುವಂತಿಲ್ಲ. ದಿನವೂ ಮಾಡುವುದು ಅಗತ್ಯ. ಇನ್ನೀಗ ನೆಮ್ಮದಿಯ ನಿದ್ದೆ ಕಣ್ಣಿಗಾದರೆ, ಅರಳಿ ನಗುವ ಸರದಿ ತ್ವಚೆಯದ್ದು.

ಇದರ ಲಾಭಗಳೇನು?

ಇದು ತ್ವಚೆಯ ತೇವ ಹೆಚ್ಚಿಸುತ್ತದೆ. ಚರ್ಮದ ಮೇಲ್ಮೈ ಒಣಗದಂತೆ ಕಾಪಾಡಿ, ಚರ್ಮ ಸುಕ್ಕಾಗದಂತೆ ಮಾಡುತ್ತದೆ. ಚರ್ಮದ ಮೇಲಿನ ದದ್ದು, ತುರಿಕೆ, ಕೆಂಪಾಗುವುದು ಮುಂತಾದ ಕಿರಿಕಿರಿಗಳನ್ನು ಶಮನ ಮಾಡುತ್ತದೆ. ಇದರ ಲೌರಿಕ್‌ ಆಮ್ಲವು ಚರ್ಮದಲ್ಲಿ ಕೊಲಾಜಿನ್‌ ಉತ್ಪತ್ತಿಯಾಗಲು ನೆರವಾಗುತ್ತದೆ. ಇದರಿಂದ ಚರ್ಮದಮೇಲಿನ ಸೂಕ್ಷ್ಮ ನೆರಿಗೆಗಳು ಕಡಿಮೆಯಾಗಿ, ತ್ವಚೆ ಬಿಗಿಯಾಗುತ್ತದೆ. ಕಪ್ಪು ಕಲೆಗಳು ದೂರಾಗಿ, ಮುಖ ಕಾಂತಿಯುಕ್ತವಾಗುತ್ತದೆ. ತ್ವಚೆ ನಳನಳಿಸುತ್ತದೆ.

ಇದನ್ನೂ ಓದಿ: Havana syndrome: ಏನಿದು ಹವಾನಾ ಸಿಂಡ್ರೋಮ್‌? ನಿಮಗೆ ಎಂದಾದರೂ ಈ ವಿಚಿತ್ರ ಅನುಭವ ಆಗಿದೆಯಾ?

Exit mobile version