Site icon Vistara News

Healthy Weight Gain: ತೂಕ ಹೆಚ್ಚಿಸಿಕೊಳ್ಳಬೇಕೆ? ಇಲ್ಲಿದೆ ಆರೋಗ್ಯಕರ ಆಯ್ಕೆ!

Weight Gain

ತೂಕ ಹೆಚ್ಚಿಸಿಕೊಳ್ಳುವ ಉದ್ದೇಶವಿದೆಯೇ (Healthy Weight Gain)? ಹಾಗೆಂದು ಸಿಕ್ಕಿದ್ದನ್ನೆಲ್ಲ ತಿಂದರೆ ಆರೋಗ್ಯ ಹಾಳಾದೀತು. ಬೇಡದ ರೋಗಗಳು ಗಂಟುಬೀಳಬಹುದು. ಹಾಗಾಗಿ ತೂಕ ಹೆಚ್ಚಿಸಿಕೊಳ್ಳುವ ಕೆಲಸವನ್ನೂ ಸೂಕ್ತವಾಗಿ ಕ್ರಮಬದ್ಧವಾಗಿಯೇ ಮಾಡಿದರೆ, ಉತ್ತಮ ತೂಕದೊಂದಿಗೆ ಉತ್ತಮ ಆರೋಗ್ಯವೂ ದೊರೆಯುವುದಕ್ಕೆ ಸಾಧ್ಯ. ತೂಕ ಹೆಚ್ಚುವುದೆಂದರೆ ದೇಹದಲ್ಲಿ ಕೊಬ್ಬು ಹೆಚ್ಚುವುದಲ್ಲ, ಸ್ನಾಯುಗಳನ್ನು ಹೆಚ್ಚಿಸಿಕೊಳ್ಳುವುದು. ಹಾಗಾದರೆ ಇದಕ್ಕೆ ಯಾವ ರೀತಿಯ ಆಹಾರಗಳು ಸೂಕ್ತ? ತೂಕ ಹೆಚ್ಚುವುದಕ್ಕೆ ಸೂಕ್ತವಾದಂಥ ಹಣ್ಣುಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಇದರಿಂದ ನಾರು, ವಿಟಮಿನ್‌ ಮತ್ತು ಖನಿಜಗಳು ಹೇರಳವಾಗಿ ದೊರೆಯುತ್ತವೆ. ಹಣ್ಣು ತಿನ್ನುವುದಕ್ಕೆ ವಿಶೇಷ ತಯಾರಿಯ ಅಗತ್ಯವೂ ಇಲ್ಲ. ಅಂಗಡಿಯಿಂದ ತಂದಿಟ್ಟುಕೊಂಡಿದ್ದರೆ, ಬೇಕಾದಾಗ ತಿಂದರಾಯಿತು. ಹಣ್ನು ತಿಂದು ತೂಕ ಇಳಿಸಿಕೊಳ್ಳುವ ಬಗ್ಗೆ ಚರ್ಚೆ ಆಗುತ್ತಿರುವಾಗ, ಅವುಗಳನ್ನೇ ತಿಂದು ತೂಕ ಹೆಚ್ಚಿಸಿಕೊಳ್ಳಲು ಸಾಧ್ಯವೇ ಎನಿಸಿದರೆ- ಪ್ರಶ್ನೆ ಸಹಜ. ಯಾವೆಲ್ಲ ಹಣ್ಣುಗಳು (Fruits That Help in Healthy Weight Gain) ತೂಕ ಏರಿಕೆಗೆ ನೆರವಾಗುತ್ತವೆ ಮತ್ತು ಹೇಗೆ ಎಂಬುದನ್ನು ತಿಳಿಯೋಣ.

ಬಾಳೆಹಣ್ಣು

ಇದರಲ್ಲಿರುವ ಪಿಷ್ಟ ಮತ್ತು ಸಕ್ಕರೆಯಂಶಗಳಿಂದಾಗಿ ಈ ಹಣ್ಣು ಹೆಚ್ಚಿನ ಕ್ಯಾಲರಿ ಹೊಂದಿರುತ್ತದೆ. ವರ್ಷವಿಡೀ ದೊರೆಯುವ ಮತ್ತು ದುಬಾರಿಯೂ ಅಲ್ಲದ ಸುಲಭ ಆಯ್ಕೆಯಿದು. ಇದರಲ್ಲಿರುವ ಪೊಟಾಶಿಯಂ ಅಂಶವು ರಕ್ತದ ಪರಿಚಲನೆಯನ್ನು ವೃದ್ಧಿಸುತ್ತದೆ. ಆರೋಗ್ಯಕರ ರೀತಿಯಲ್ಲಿ ತೂಕ ಹೆಚ್ಚುವುದಕ್ಕೆ ಇದು ಪೂರಕ.

ಬೆಣ್ಣೆಹಣ್ಣು

ಇದರಲ್ಲಿ ಅಪಾರ ಪ್ರಮಾಣದ ಕೊಬಿನಂಶವಿದೆ. ಆದರೆ ಈ ಕೊಬ್ಬು ಸಂಪೂರ್ಣ ಆರೋಗ್ಯಕರವಾಗಿದ್ದು, ಹೃದಯಕ್ಕೆ ಪೂರಕವಾದಂಥದ್ದು. ಇದರಲ್ಲಿರುವ ನಾರಿನಂಶವು ಬೇಡದ್ದನ್ನು ತಿನ್ನುವ ಬಯಕೆಯನ್ನು ಹತ್ತಿಕ್ಕಲು ನೆರವು ನೀಡುತ್ತದೆ. ಈ ಹಣ್ಣಿನಲ್ಲಿ ಅಪಾರ ಕ್ಯಾಲರಿಯಿದ್ದರೂ, ಅವೆಲ್ಲ ಸತ್ವಭರಿತವಾದದ್ದು. ತೂಕ ಹೆಚ್ಚುವಾಗಲೂ ಅಗತ್ಯ ಪೋಷಕಾಂಶಗಳನ್ನೇ ದೇಹಕ್ಕೆ ನೀಡುತ್ತಿದ್ದರೆ, ಅನಿಯಂತ್ರಿತವಾಗಿ ತೂಕ ಹೆಚ್ಚುವುದನ್ನು ತಪ್ಪಿಸಬಹುದು. ಮಧುಮೇಹ, ಬಿಪಿ, ಕೊಲೆಸ್ಟ್ರಾಲ್‌ನಂಥ ಸಮಸ್ಯೆಗಳು ಬಾರದಂತೆ ತಡೆಯಬಹುದು.

ಮಾವಿನ ಹಣ್ಣು

ಇನ್ನೇನು ಮಾವಿನ ಋತು ಆರಂಭವಾಗಲಿದೆ. ಅಧರ-ಉದರಗಳೆರಡಕ್ಕೂ ಮಧುರವಾದ ಹಣ್ಣಿದು. ಇದರಲ್ಲಿರುವ ಪಿಷ್ಟ ಮತ್ತು ಸಕ್ಕರೆಯಂಶವೇ ತೂಕ ಹೆಚ್ಚಿಸಬಹುದು. ಇದರಲ್ಲಿ ನಾರು ಮತ್ತು ಉತ್ಕರ್ಷಣ ನಿರೋಧಕಗಳು ತೂಕ ಹೆಚ್ಚಳ ಮಿತಿಮೀರದಂತೆ ಕಾಪಾಡುತ್ತವೆ. ವಿಟಮಿನ್‌ ಸಿ, ವಿಟಮಿನ್‌ ಎ ಮತ್ತು ಖನಿಜಗಳು ದೇಹಕ್ಕೆ ಅಗತ್ಯ ಪೋಷಣೆಯನ್ನು ಒದಗಿಸುತ್ತವೆ.

ತೆಂಗಿನಕಾಯಿ

ಇದರಲ್ಲಿರುವ ಆರೋಗ್ಯಕರ ಕೊಬ್ಬು ತೂಕ ಹೆಚ್ಚುವುದಕ್ಕೆ ಮುಖ್ಯ ಕಾರಣ. ಪಿಷ್ಟವೂ ಅಲ್ಪ ಪ್ರಮಾಣದಲ್ಲಿ ದೇಹಕ್ಕೆ ದೊರೆಯುತ್ತದೆ. ಇದಲ್ಲದೆ, ಫಾಸ್ಫರಸ್‌, ತಾಮ್ರದಂಥ ಖನಿಜಗಳು ಮತ್ತು ಸೂಕ್ಷ್ಮ ಸತ್ವಗಳು ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ನೀಡುತ್ತವೆ. ತೆಂಗಿನಕಾಯನ್ನು ಹಲವು ರೀತಿಯಲ್ಲಿ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಜನಪ್ರಿಯ ಚಟ್ನಿಗಳಿಂದ ಹಿಡಿದು, ಪಾಯಸ, ಲಾಡುಗಳಂಥ ಸಿಹಿ ತಿಂಡಿಗಳವರೆಗೆ ಬಹಳಷ್ಟು ವಿಧಗಳಿಂದ ಇದನ್ನು ತಿನ್ನಬಹುದು.

ಪೇರಲೆ

ಸೀಬೆ, ಚೇಪೆಕಾಯಿ ಎಂದೆಲ್ಲ ಕರೆಸಿಕೊಳ್ಳುವ ಈ ಹಣ್ಣಲ್ಲಿ ನಿಸರ್ಗದತ್ತ ಸಕ್ಕರೆಯಂಶ ಹೇರಳವಾಗಿದೆ. ಇದರಲ್ಲಿ ನಾರಿನಂಶ ಸಹ ವಿಫುಲವಾಗಿದೆ. ಇದರಿಂದ ಜೀರ್ಣಕ್ರಿಯೆಯನ್ನು ಸುಧಾರಿಸಿ, ಮಲಬದ್ಧತೆ ದೂರ ಮಾಡಲು ನೆರವಾಗುತ್ತದೆ. ಆಹಾರದಲ್ಲಿರುವ ಸತ್ವಗಳನ್ನು ದೇಹ ಹೀರಿಕೊಳ್ಳಲು ಇದರಿಂದ ಸುಲಭವಾಗುತ್ತದೆ. ವಿಟಮಿನ್‌ ಸಿ ಅಂಶ ಭರಪೂರವಿದ್ದು, ಹಲವು ರೀತಿಯಲ್ಲಿ ದೇಹವನ್ನಿದು ಕಾಪಾಡುತ್ತದೆ. ಈ ಯಾವುದೇ ಹಣ್ಣುಗಳನ್ನು ಇಡಿಯಾಗಿ ಅಥವಾ ಮಿಲ್ಕ್‌ಶೇಕ್‌, ಸ್ಮೂದಿ ಮುಂತಾದವುಗಳ ಜೊತೆಗೆ ಸೇವಿಸಬಹುದು.

ಒಣಹಣ್ಣುಗಳು

ಅಂಜೂರ, ದ್ರಾಕ್ಷಿ, ಖರ್ಜೂರ, ಎಪ್ರಿಕಾಟ್‌ ಮುಂತಾದ ಒಣಹಣ್ಣುಗಳು ಪೋಷಕಾಂಶಗಳನ್ನು ಸಾಂದ್ರವಾಗಿ ಹೊಂದಿರುತ್ತವೆ. ಇವುಗಳ ನೀರಿನಂಶವೂ ಹೋಗಿರುವುದರಿಂದ ತಿಂದಾಗ ಸಿಕ್ಕಿದಷ್ಟೂ ಸತ್ವಗಳೇ. ತರಹೇವಾಗಿ ಖನಿಜಗಳು, ನಾರು ಮತ್ತು ವಿಟಮಿನ್‌ಗಳನ್ನು ಹೊಂದಿರುವ ಇವುಗಳು ಆರೋಗ್ಯಕರ ರೀತಿಯಲ್ಲಿ ತೂಕ ಹೆಚ್ಚಿಸಿಕೊಳ್ಳುವುದಕ್ಕೆ ಸೂಕ್ತವಾದ ಆಯ್ಕೆ. ದೇಹದಲ್ಲಿ ಕೆಟ್ಟ ಕೊಬ್ಬುಗಳು ತುಂಬಿ, ಆರೋಗ್ಯ ಕಸದಬುಟ್ಟಿಗೆ ಹೋಗದಂತೆ ಕಾಪಾಡಿಕೊಳ್ಳಬೇಕೆಂದರೆ, ಗುಜರಿ ತಿಂಡಿಗಳ ಬದಲಿಗೆ ಹೀಗೆ ಆರೋಗ್ಯಕರ ರೀತಿಯಲ್ಲಿ ತೂಕ ಹೆಚ್ಚಿಸಿಕೊಳ್ಳಬಹುದು.

ಇದನ್ನೂ ಓದಿ: Vegetarian Protein: ಸಸ್ಯಾಹಾರದಿಂದ ದೇಹದಾರ್ಢ್ಯತೆಗೆ ತೊಡಕಾಗುವುದೆ? ಇಲ್ಲಿದೆ ಉತ್ತರ

Exit mobile version