Site icon Vistara News

Benefits Of Eggplant: ಬದನೆಕಾಯಿಯ ಲಾಭಗಳನ್ನು ತಿಳಿಯಬೇಕೆ? ತಿಂದು ನೋಡಿ!

Benefits Of Eggplant

ಯಾವುದಾದರೂ ವಿಷಯಕ್ಕೆ ಅಸಡ್ಡೆ ಇದೆಯೆಂದರೆ, ʻಬದ್ನೇಕಾಯಿʼ ಎಂಬ ಶಬ್ದವನ್ನು ಬಳಸುವ ಕ್ರಮವಿದೆ. ʻಅಲ್ಲೇನಿದೆ ಬದ್ನೇಕಾಯಿ, ಅವರಿಗೇನು ಗೊತ್ತು ಬದ್ನೇಕಾಯಿʼ ಇಂಥ ಮಾತುಗಳನ್ನು ಎಷ್ಟೋ ಬಾರಿ ಹೇಳಿ-ಕೇಳಿ ಮಾಡಿರಬಹುದು. ಆದರೆ ಬದನೇಕಾಯಿ ಎಂದರೆ ಅಷ್ಟು ಕನಿಷ್ಟ ಮಾಡುವಂಥ ವಸ್ತುವೇ? ಅದಕ್ಕೇನೂ ಬೆಲೆಯಿಲ್ಲವೇ? ʻನಂಗೆ ಬದ್ನೇಕಾಯಿ ಸೇರಲ್ಲ, ನಾನದನ್ನ ತಿನ್ನಲ್ಲʼ ಎಂದು ಹೇಳುವವರು ಎಷ್ಟೋ ಮಂದಿ ಇದ್ದಾರೆ. ರುಚಿ, ಸತ್ವ ಎಲ್ಲವೂ ಇರುವಂಥ ತರಕಾರಿಯನ್ನು (Benefits of Eggplant) ಹೀಗೆ ಅಲಕ್ಷ್ಯ ಮಾಡುವುದೇಕೆ?
ಭಾರತೀಯ ಅಡುಗೆಮನೆಗಳಲ್ಲಿ ಮಾತ್ರವಲ್ಲ, ಖಂಡಾಂತರವಾಗಿಯೂ ಬದನೆಕಾಯಿ ಬಳಕೆಯಲ್ಲಿದೆ. ಐರೋಪ್ಯ ದೇಶಗಳ ಹಲವು ಅಡುಗೆಗಳಿಗೆ ಬದನೇಕಾಯಿ ಬೇಕು. ದಕ್ಷಿಣ ಭಾರತೀಯ ಸಾಂಬಾರು, ಪಲ್ಯ, ಗೊಜ್ಜು, ಎಣ್ಣೆಗಾಯಿ, ವಾಂಗೀಭಾತ್‌ಗಳಿಂದ ಹಿಡಿದು ಉತ್ತರ ಭಾರತೀಯ ದಾಲ್‌, ಭರ್ತಾಗಳವರೆಗೆ ಹಲವು ರೀತಿಯ ಅಡುಗೆಗಳನ್ನು ಇದರಿಂದ ತಯಾರಿಸಲಾಗುತ್ತದೆ. ತನ್ನದೇ ಲಘುವಾದ ಘಮ ಹೊಂದಿದ ಈ ತರಕಾರಿ ಹಲವಾರು ರೀತಿಯ ಮಸಾಲೆಗಳಿಗೆ ಹೊಂದಿಕೊಳ್ಳಬಲ್ಲದು. ಆದರೂ ʻಬದ್ನೇಕಾಯಿʼ ಎನ್ನುವ ಹೀಗಳಿಕೆಗೆ ತುತ್ತಾಗಿರುವ ಈ ತರಕಾರಿಯ ಸದ್ಗುಣಗಳೇನು (Benefits of Eggplant) ಎನ್ನುವುದನ್ನು ನೋಡೋಣ.

ಜೀರ್ಣಾಂಗಗಳಿಗೆ ಉಪಕಾರಿ

ಇದರಲ್ಲಿರುವ ನಾರಿನಂಶವು ಜೀರ್ಣಾಂಗಗಳ ಆರೋಗ್ಯ ಸುಧಾರಿಸಬಲ್ಲದು. ಕರಗಬಲ್ಲ ನಾರು ತೂಕ ಇಳಿಕೆ ಮತ್ತು ಕೊಬ್ಬು ಕತ್ತರಿಸುವುದಕ್ಕೆ ನೆರವಾದರೆ, ಕರಗದಿರುವ ನಾರು ಮಲಬದ್ಧತೆ ನಿವಾರಿಸಬಲ್ಲದು. ಇದರ ಜೊತೆಗೆ, ಕರುಳಿನಲ್ಲಿರುವ ಬ್ಯಾಕ್ಟೀರಿಯಗಳ ಸಮತೋಲನಕ್ಕೆ ನಾರಿನಂಶ ಅಗತ್ಯವಾಗಿ ಬೇಕು. ಹಾಗಾಗಿ ಬದನೇಕಾಯಿಯಲ್ಲಿರುವ ನಾರು ಜೀರ್ಣಾಂಗಗಳ ಆರೋಗ್ಯ ಹೆಚ್ಚಿಸಬಲ್ಲದು.

ಸಕ್ಕರೆ ಮಟ್ಟ ನಿಯಂತ್ರಣ

ಮಧುಮೇಹಿಗಳು ರಕ್ತದಲ್ಲಿ ಸಕ್ಕರೆಯ ಮಟ್ಟ ನಿಯಂತ್ರಣಕ್ಕೆ ಮಾಡುವ ಪ್ರಯತ್ನಗಳು ಒಂದೆರಡೇ ಅಲ್ಲ. ಈ ನಿಟ್ಟಿನಲ್ಲಿ ಬದನೇಕಾಯಿ ಕೂಡ ಸಹಾಯಕವಾಗಬಲ್ಲದು. ಇದರಲ್ಲಿರುವ ನಾರಿನಂಶವು ಗ್ಲುಕೋಸ್‌ ರಕ್ತಕ್ಕೆ ಸೇರುವುದನ್ನು ನಿಧಾನವಾಗುವಂತೆ ಮಾಡಬಲ್ಲದು. ಇದರಿಂದ ಆಹಾರ ಸೇವನೆಯ ನಂತರ ಸಕ್ಕರೆಯಂಶದ ಏರಿಳಿತ ನಿಯಂತ್ರಿಸಲು ಸಾಧ್ಯವಾಗುತ್ತದೆ.

ತೂಕ ಇಳಿಕೆಗೆ ನೆರವು

ಬದನೇಕಾಯಿಯಲ್ಲಿ ಹಲವು ಬಗೆಯ ಖನಿಜಗಳು ಮತ್ತು ವಿಟಮಿನ್‌ಗಳು ನಿಕ್ಷೇಪಗೊಂಡಿವೆ. ಇದರಲ್ಲಿ ಕ್ಯಾಲರಿ ಕಡಿಮೆಯಿದ್ದು, ಸತ್ವಗಳು ಹೆಚ್ಚಿವೆ. ಜೊತೆಗೆ ಹೆಚ್ಚಿನ ನಾರು ಇರುವುದರಿಂದ ಬೇಗನೆ ಹಸಿವಾಗದಂತೆ ತಡೆಯುತ್ತದೆ. ಇದಲ್ಲದೆ, ತಿಂದ ಆಹಾರವೂ ಚೆನ್ನಾಗಿ ಜೀರ್ಣವಾಗುವಂತೆ ಮಾಡುವ ಸಾಮರ್ಥ್ಯವೂ ನಾರಿನ ಸತ್ವಕ್ಕೆ ಇರುವುದರಿಂದ, ಕಡಿಮೆ ತಿಂದರೂ ಹೊಟ್ಟೆ ತುಂಬಿಬ ಅನುಭದ ದೊರೆಯುತ್ತದೆ. ಈ ಎಲ್ಲ ಕಾರಣಗಳಿಂದ ತೂಕ ಇಳಿಸುವ ಉತ್ಸಾಹಿಗಳು ʻಅದ್ರಲ್ಲೇನಿದೆ ಬದ್ನೇಕಾಯಿ!ʼ ಎನ್ನುವಂತಿಲ್ಲ.

ಉತ್ಕರ್ಷಣ ನಿರೋಧಕಗಳು

ಹಲವು ರೀತಿಯ ಉರಿಯೂತ ನಿವಾರಕಗಳು ಬದನೇಕಾಯಿಯಲ್ಲಿವೆ. ಅದರಲ್ಲೂ ಉಳಿದೆಲ್ಲಾ ತರಕಾರಿಗಳಿಗೆ ಹೋಲಿಸಿದಲ್ಲಿ ಈ ತರಕಾರಿಯಲ್ಲಿ ಆಂಥೋಸಯನಿನ್‌ಗಳು ಅಧಿಕ. ಈ ಉತ್ಕರ್ಷಣ ನಿರೋಧಕಗಳ ಆಧಾರದ ಮೇಲೆಯೇ ಬದನೆಕಾಯಿಯ ಬಣ್ಣ ನಿರ್ಧಾರವಾಗುತ್ತದೆ. ಇದರಲ್ಲಿರುವ ನಾಸುನಿನ್‌ ಎಂಬ ಆಂಥೋಸಯನಿನ್‌ ದೇಹಕ್ಕೆ ಹಲವಾರು ರೀತಿಯಲ್ಲಿ ಪ್ರಯೋಜನಕಾರಿ ಎನ್ನುತ್ತವೆ ಅಧ್ಯಯನಗಳು. ಶರೀರದಲ್ಲಿ ಓಡಾಡುವ ಮುಕ್ತಕಣಗಳನ್ನು ನಿರ್ಬಂಧಿಸುವಲ್ಲಿ ಇದು ಹೆಚ್ಚು ಪರಿಣಾಮಕಾರಿ ಎಂಬುದು ತಿಳಿದುಬಂದಿದೆ. ಅದರಲ್ಲೂ ಇದರ solasodine rhamnosyl glycosides (SRGs) ಅಂಶಗಳು ಕ್ಯಾನ್ಸರ್‌ ಕೋಶಗಳ ವಿರುದ್ಧ ಹೋರಾಡುತ್ತವೆ ಎನ್ನುವುದು ಪ್ರಯೋಗಗಳಲ್ಲಿ ಸಾಬೀತಾಗಿದೆ.

ಹೃದಯಕ್ಕೆ ಪೂರಕ

ಬದನೆಕಾಯಲ್ಲಿರುವ ವಿಟಮಿನ್‌ ಸಿ, ನಾರು, ಪೊಟಾಶಿಯಂ ಮತ್ತು ಹಲವು ರೀತಿಯ ಬಿ ವಿಟಮಿನ್‌ಗಳು ಹೃದಯವನ್ನು ಹಲವು ಬಗೆಯಿಂದ ಕಾಪಾಡುತ್ತವೆ. ನಾರಿನಿಂದ ಕೊಲೆಸ್ಟ್ರಾಲ್‌ ಕಡಿಮೆಯಾದರೆ, ಪೊಟಾಶಿಯಂ ರಕ್ತದೊತ್ತಡ ನಿಯಂತ್ರಿಸಲು ನೆರವಾಗುತ್ತದೆ. ಉತ್ಮರ್ಷಣ ನಿರೋಧಕಗಳು ಹೃದಯ ರೋಗಗಳನ್ನು ದೂರ ಇರಿಸುತ್ತವೆ. ಹೃದಯದ ಕ್ಷಮತೆಯನ್ನು ಈ ತರಕಾರಿ ಹೆಚ್ಚಿಸುತ್ತದೆ ಎಂಬುದನ್ನು ಹಲವು ಅಧ್ಯಯನಗಳು ಸಾಬೀತು ಮಾಡಿವೆ.

ಇದನ್ನೂ ಓದಿ: Winter transitions to summer: ಚಳಿಯಿಂದ ಬೇಸಿಗೆಯತ್ತ: ಆಹಾರ ಹೇಗಿರಬೇಕು?

Exit mobile version