ತೂಕ ಇಳಿಕೆಯ ಹಾದಿಯಲ್ಲಿ ಇರುವಷ್ಟು ಸವಾಲುಗಳು ಸಮುದ್ರಕ್ಕೆ ಸೇತುವೆ ಕಟ್ಟುವಾಗಲೂ ಇರಲಿಕ್ಕಿಲ್ಲ! ವ್ಯಾಯಾಮ ಹೆಚ್ಚು ಮಾಡಬೇಕೊ, ಊಟ ಕಡಿಮೆ ಮಾಡಬೇಕೊ, ಯಾವುದನ್ನು ತಿಂದರೆ ಸರಿ, ಯಾವುದು ತಪ್ಪು, ಈ ಸರ್ಕಸ್ಸುಗಳನ್ನು ಇನ್ನೆಷ್ಟು ದಿನ ಮಾಡಬೇಕು, ತೂಕ ಇಳಿದೇ ಬಿಟ್ಟರೆ ಅದನ್ನು (Fat first) ಕಾಯ್ದುಕೊಳ್ಳುವುದು ಹೇಗೆ… ಸವಾಲುಗಳು ಒಂದೇ ಎರಡೇ!
ತೂಕ ಇಳಿಸುವುದೆಂದರೆ ದೇಹದಲ್ಲಿ ಸ್ನಾಯುಗಳನ್ನು ಕಳೆದುಕೊಳ್ಳುವುದಲ್ಲ, ಕೊಬ್ಬು ಇಳಿಸುವುದು. ಇದೇ ದೊಡ್ಡ ಸವಾಲು. ಮಾಂಸಪೇಶಿಗಳನ್ನು ದೃಢ ಮಾಡಿದಷ್ಟೂ ದೇಹದ ಸುತ್ತಳತೆಯನ್ನು ಕಡಿಮೆ ಮಾಡಬಹುದು. ಕೊಬ್ಬು ಇಳಿಸಿದಷ್ಟೂ ತೂಕ ಇಳಿಸಬಹುದು. ಈ ನಿಟ್ಟಿನಲ್ಲಿ ಇತ್ತೀಚಿನ ಕೆಲವು ಅಧ್ಯಯನಗಳು ʻಫ್ಯಾಟ್ ಫಸ್ಟ್ʼ ಎಂಬ ಬಗ್ಗೆ ಕ್ಷಕಿರಣ ಬೀರುತ್ತಿವೆ. ಏನಿದು? ಹೇಗೆ ಕೆಲಸ ಮಾಡುತ್ತದೆ?
ಫ್ಯಾಟ್ ಫಸ್ಟ್
ಹಾಗೆಂದರೆ ಬೆಳಗಿನ ಖಾಲಿ ಹೊಟ್ಟೆಯಲ್ಲಿ ಸ್ವಲ್ಪ ಪ್ರಮಾಣದ ಆರೋಗ್ಯಕರ ಕೊಬ್ಬನ್ನು ಹೊಟ್ಟೆಗೆ ನೀಡುವುದು. ಇದು ಇಡೀ ದಿನದ ಚಯಾಪಚಯದ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತವೆ ಅಧ್ಯಯನಗಳು. ಬೆಳಗ್ಗೆ ಎದ್ದ ನಂತರ ಮೊದಲು ದೇಹಕ್ಕೆ ನೀಡುವುದು ಸಾಮಾನ್ಯವಾಗಿ ಪಿಷ್ಟಗಳನ್ನು. ಆದರೆ ಅದಕ್ಕೆ ವ್ಯತಿರಿಕ್ತವಾಗಿ ದೇಹಕ್ಕೆ ಬೇಕಾಗುವಂಥ ಆರೋಗ್ಯಕರ ಕೊಬ್ಬನ್ನು ನೀಡುವುದರಿಂದ, ಇನ್ನಷ್ಟು ಕೊಬ್ಬನ್ನು ಕತ್ತರಿಸಬಹುದು ಎನ್ನುತ್ತವೆ ಅಧ್ಯಯನಗಳು. ವಜ್ರದಿಂದ ವಜ್ರವನ್ನು ಕತ್ತರಿಸುವ ಹಾಗೆಯೆ.
ಹೇಗೆ?
ಇದರಲ್ಲಿ ಯಾವುದೇ ಜಾದೂ ಇಲ್ಲ. ನಮ್ಮ ದೇಹ ಕೆಲಸ ಮಾಡುವ ರೀತಿಯೆ ಹೀಗೆ. ಮೊದಲಿಗೆ ಉತ್ತಮ ಕೊಬ್ಬನ್ನೇ ಹೊಟ್ಟೆಗೆ ನೀಡುವುದರಿಂದ ಬಹಳಷ್ಟು ಪೂರಕ ಫಲಿತಾಂಶಗಳು ಲಭ್ಯವಾಗುತ್ತವೆ. ದೀರ್ಘಕಾಲದವರೆಗೆ ಹಸಿವಾಗದಂತೆ ಈ ಕೊಬ್ಬು ನಮಗೆ ನೆರವಾಗುತ್ತದೆ. ದೇಹದ ಚಯಾಪಚಯವನ್ನು ಚುರುಕು ಮಾಡಿ, ಜಮೆಯಾಗಿರುವ ಕೊಬ್ಬು ಕತ್ತರಿಸಲು ಪ್ರೇರೇಪಿಸುತ್ತದೆ. ಪಿಷ್ಟ ಕಡಿಮೆಯಿರುವ ಕಾರಣ ರಕ್ತದಲ್ಲಿ ಸಕ್ಕರೆಯ ಮಟ್ಟ ದಿಢೀರ್ ಏರದಂತೆ ತಡೆಯುತ್ತದೆ. ಇಷ್ಟಾಗಿ ದಿನವಿಡೀ ಆಯಾಸವಾಗದಂತೆ ಶಕ್ತಿಯನ್ನು ನೀಡುತ್ತಲೇ ಇರುತ್ತದೆ. ಹಾಗಾಗಿ ತೂಕ ಇಳಿಸುವವರಿಗೆ ಇದೊಂದು ಉಪಯುಕ್ತ ಮಾರ್ಗ. ಈ ನಿಟ್ಟಿನಲ್ಲಿ ಕೆಲವು ಆಹಾರಗಳು ಬೆಳಗಿನ ಹೊತ್ತು ಸೂಕ್ತ ಎನಿಸುತ್ತವೆ.
ಮೊಟ್ಟೆ
ಇದು ಬೆಳಗಿನ ತಿಂಡಿಗೆ ಸೂಕ್ತವಾದ ಆಹಾರ. ಕೊಬ್ಬು ಮತ್ತು ಪ್ರೊಟೀನ್ ಎರಡೂ ಹೇರಳವಾಗಿರುವ ಮೊಟ್ಟೆಯನ್ನು ಬೆಳಗಿನ ತಿಂಡಿಗೆ ಸೇವಿಸುವುದರಿಂದ ದಿನವಿಡೀ ಚೈತನ್ಯದಿಂದ ಇದ್ದು, ಅತಿಯಾಗಿ ತಿನ್ನುವುದನ್ನು ತಪ್ಪಿಸಬಹುದು. ಜೊತೆಗೆ, ಬೆಳಗಿನ ಹೊತ್ತು ಪ್ರೊಟೀನ್ ಮತ್ತು ಆರೋಗ್ಯಕರ ಕೊಬ್ಬಿನ ಸೇವನೆಯಿಂದ ಮೆದುಳಿಗೆ ಬೇಕಾದ ಗ್ರಾಸವೂ ದೊರೆತಂತಾಗುತ್ತದೆ. ಇದಕ್ಕಿಂತ ಆಸಕ್ತಿಕರ ವಿಷಯವೆಂದರೆ, ಬೆಳಗಿನ ಉಪಾಹಾರದಲ್ಲಿ ಪ್ರೊಟೀನ್ ಮತ್ತು ಕೊಬ್ಬು ಹೆಚ್ಚಿರುವ ಆಹಾರ ಸೇವಿಸಿದಾಗ, ಇನ್ನೂ ತಿನ್ನಬೇಕು ಎಂಬ ಸಂದೇಶ ಮೆದುಳಿನಲ್ಲಿ ಓಡಾಡುವುದು ಕಡಿಮೆಯಾಗುತ್ತದೆ ಎಂಬುದನ್ನು ಅಧ್ಯಯನಗಳು ಸೂಚಿಸುತ್ತವೆ.
ಅವಕಾಡೊ
ಅಥವಾ ಬೆಣ್ಣೆ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ಒಮೆಗಾ ೩ ಕೊಬ್ಬಿನಾಮ್ಲ ಲಭ್ಯವಿದೆ. ಬೆಳಗಿನ ತಿಂಡಿಗೆ ಇದನ್ನು ಸೇವಿಸಿದಲ್ಲಿ, ದೇಹಕ್ಕೆ ಬೇಕಾದ ಉತ್ಕರ್ಷಣ ನಿರೋಧಕಗಳ ಜೊತೆಗೆ ಒಳ್ಳೆಯ ಕೊಬ್ಬು ಸಹ ಲಭ್ಯವಾಗುತ್ತದೆ. ಬೆಣ್ಣೆ ಹಣ್ಣು ಮಾತ್ರವಲ್ಲ, ಬಾದಾಮಿ, ಕುಂಬಳಕಾಯಿ ಬೀಜ, ಸೂರ್ಯಕಾಂತಿ ಬೀಜ ಮುಂತಾದವುಗಳನ್ನು ರಾತ್ರಿ ನೀರಿಗೆ ಹಾಕಿ ಬೆಳಗಿನ ಖಾಲಿ ಹೊಟ್ಟೆಯಲ್ಲಿ ತಿನ್ನುವುದು ಅತ್ಯಂತ ಒಳ್ಳೆಯ ಅಭ್ಯಾಸ. ಇದರಿಂದ ಕೊಬ್ಬಿನ ಜೊತೆಗೆ ಸೂಕ್ಷ್ಮ ಪೋಷಕಾಂಶಗಳು ಸಹ ದೊರೆಯುತ್ತವೆ.
ಇದನ್ನೂ ಓದಿ: Tea And Coffee With Meals: ಊಟ ತಿಂಡಿ ಜೊತೆಜೊತೆಗೆ ಚಹಾ ಕಾಫಿ ಹೀರುವ ಅಭ್ಯಾಸ ಒಳ್ಳೆಯದೇ, ಕೆಟ್ಟದ್ದೇ?
ಚಿಯಾ ಬೀಜ
ನೋಡಲು ಪುಟ್ಟ ಬೀಜಗಳಿವು. ಆದರೆ ಪೋಷಕಾಂಶದಲ್ಲಿ ವಿರಾಟ್ ಸ್ವರೂಪದವು. ಕೊಬ್ಬು, ಪ್ರೊಟೀನ್ ಮತ್ತು ನಾರು ಸೇರಿರುವ ಈ ಬೀಜಗಳಲ್ಲಿ ಬಹಳಷ್ಟು ಸೂಕ್ಷ್ಮ ಸತ್ವಗಳೂ ಇವೆ. ರಾತ್ರಿ ನೀರಿಗೆ ಹಾಕಿ, ಬೆಳಗಿನ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುವುದು ಉತ್ತಮ. ಇದರಿಂದ, ದೇಹಕ್ಕೆ ಬೇಕಾದ ಕೊಬ್ಬು ಮತ್ತು ಪ್ರೊಟೀನ್ ಲಭ್ಯವಾಗಿ, ರಕ್ತದಲ್ಲಿ ಸಕ್ಕರೆಯಂಶ ಸ್ಥಿರವಾಗಿ ಚಯಾಪಚಯವನ್ನೂ ಹೆಚ್ಚಿಸುತ್ತದೆ. ಇನ್ನೊಂದು ಅಂಥದ್ದೇ ಆಯ್ಕೆಯೆಂದರೆ ಹಾಲು ಅಥವಾ ಮೊಸರು. ಇವುಗಳು ಸಹ ಕೊಬ್ಬು ಮತ್ತು ಪ್ರೊಟೀನ್‌ನಿಂದ ಸಾಂದ್ರವಾಗಿದ್ದು, ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತವೆ.