Site icon Vistara News

Tips To Prevent Acne: ಮೊಡವೆ ಬರದಂತೆ ತಡೆಯಬೇಕೆ? ಇಲ್ಲಿದೆ ಪರಿಹಾರ!

Tips To Prevent Acne

ಮೊಡವೆಯನ್ನು ಮುಖದ ಒಡವೆ (tips to prevent acne) ಎಂದು ಕರೆದವರಿದ್ದಾರೆ. ಆದರೆ ಉಳಿದೆಲ್ಲ ಒಡವೆಗಳಂತೆ ಬೀಗುತ್ತಾ ಧರಿಸುವ ಹಾಗಿಲ್ಲ ಮೊಡವೆಯನ್ನು. ಮುಖದ ಚಂದಕ್ಕೆ ಇದೊಂದು ದೃಷ್ಟಿಬೊಟ್ಟು ಎಂಬುದು ಜನಾಭಿಪ್ರಾಯ. ಇದಕ್ಕಾಗಿ ಮಾರುಕಟ್ಟೆಯಿಂದ ಏನೇನೋ ಕ್ರೀಮುಗಳನ್ನು ತಂದು ಪ್ರಯೋಗಿಸುತ್ತೇವೆ. ಕ್ರೀಮು ಉಪಯೋಗವಾದರೆ ನಮ್ಮ ಅದೃಷ್ಟ ಚೆನ್ನಾಗಿದೆಯೆಂದು ಲೆಕ್ಕ. ಆಗದಿದ್ದರೆ ಹೊಸ ಪಾಠ! ಇಂಥವು ಎಷ್ಟೇ ಪಾಠಗಳಾದರೂ ನಾವು ಕಲಿಯುವುದಿಲ್ಲ ಎನ್ನುವುದೇ ಸಮಸ್ಯೆ. ಮೊಡವೆಗೆ ಮೇಲಿಂದ ಲೇಪಿಸುವುದು ತಕ್ಷಣದ ಪರಿಣಾಮವನ್ನು ಬೀರಬಹುದಾದರೂ, ಸರಿಯಾದ ಪರಿಹಾರವಲ್ಲ. ಇದಕ್ಕಾಗಿ ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬಹುದೇ? ಮುಗಿಯದ ವಾಯುಮಾಲಿನ್ಯ, ಬಿರುಬಿಸಿಲು, ಅಸಂಬದ್ಧ ಆಹಾರ ಪದ್ಧತಿಗಳು- ಇವೆಲ್ಲವೂ ತ್ವಚೆಯ ಆರೋಗ್ಯವನ್ನು ಹಾಳು ಮಾಡುವಂಥವು. ಹಾಗಾಗಿ ಆಹಾರದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ಮೊಡವೆಯನ್ನು ಸಂಪೂರ್ಣವಾಗಿ ತೊಡೆಯಬಹುದು ಎಂದಲ್ಲ. ಆದರೆ ಚರ್ಮದ ಆರೋಗ್ಯವನ್ನಂತೂ ಖಂಡಿತವಾಗಿ ವೃದ್ಧಿಸಿಕೊಳ್ಳಬಹುದು. ಇದರಿಂದ ಚರ್ಮದ ಉರಿಯೂತಗಳು ಕಡಿಮೆಯಾಗಿ ಮೊಡವೆಯ ಸಂಭಾವ್ಯತೆಯೂ ಕ್ಷೀಣಿಸಬಹುದು. ಆಹಾರ ಹೇಗಿದ್ದರೆ ಚರ್ಮಕ್ಕೆ ಹಿತ?

ಚೆನ್ನಾಗಿ ನೀರು ಕುಡಿಯಿರಿ

ದೇಹಕ್ಕೆ ಹೆಚ್ಚು ನೀರು ದೊರೆತಷ್ಟೂ ಶರೀರದಿಂದ ಟಾಕ್ಸಿನ್‌ಗಳು ಹೊರಹೋಗುತ್ತವೆ. ಇದರಿಂದ ಚರ್ಮವೂ ನಳನಳಿಸುತ್ತದೆ

ಉತ್ಕರ್ಷಣ ನಿರೋಧಕಗಳಿರಲಿ

ಆಹಾರದಲ್ಲಿ ಉತ್ಕರ್ಷಣ ನಿರೋಧಕಗಳು ಧಾರಾಳವಾಗಿರಲಿ. ಋತುಮಾನದ ಹಣ್ಣು-ತರಕಾರಿಗಳನ್ನು ತಿನ್ನುವುದಕ್ಕೆ ದಾಕ್ಷಿಣ್ಯ ಮಾಡಿಕೊಳ್ಳಲೇಬೇಡಿ

ಕೊಬ್ಬಿನ ಆಹಾರ

ಒಮೇಗಾ 3 ಕೊಬ್ಬಿನಾಮ್ಲ ಇರುವ ಆಹಾರಗಳು ಆರೋಗ್ಯಕ್ಕೆ ಮಹದುಪಕಾರ ಮಾಡುತ್ತವೆ. ಕಾಯಿಗಳು-ಬೀಜಗಳು, ಕೊಬ್ಬಿನ ಮೀನುಗಳು, ಅವಕಾಡೊಗಳೆಲ್ಲ ಬೇಕು

ಸಕ್ಕರೆ ದೂರ ಇರಲಿ

ಸಕ್ಕರೆ ಮತ್ತು ಸರಳ ಪಿಷ್ಟಗಳನ್ನು ದೂರ ಇಟ್ಟಷ್ಟೂ ಒಳ್ಳೆಯದು. ಯಾವುದೇ ಸಂಸ್ಕರಿತ ಆಹಾರಗಳು ನಿಮಗಲ್ಲ ಎಂದೇ ಭಾವಿಸಿ. ಇದರಿಂದ ಉರಿಯೂತ ಕಡಿಮೆಯಾಗುವುದು ಹೌದು.

ಪ್ರೊಬಯಾಟಿಕ್‌

ಜೀರ್ಣಾಂಗದ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಚರ್ಮದ ಆರೋಗ್ಯವೂ ಅಷ್ಟಕ್ಕಷ್ಟೆ. ಹಾಗಾಗಿ ಹುದುಗು ಬಂದಂಥ ಪ್ರೊಬಯಾಟಿಕ್‌ ಆಹಾರಗಳನ್ನು ಧಾರಾಳವಾಗಿ ತಿನ್ನಿ.

ಅಲರ್ಜಿ ಗಮನಿಸಿ

ಯಾವುದಾದರೂ ಅಲರ್ಜಿಗಳು ನಿಮಗಿವೆಯೇ ಗಮನಿಸಿ. ಉದಾ, ಡೇರಿ ವಸ್ತುಗಳು ನಿಮಗೆ ಅಲರ್ಜಿ ಇದ್ದರೆ, ಅವುಗಳನ್ನು ತಿಂದಾಕ್ಷಣ ಮೊಡವೆ ಏಳಬಹುದು. ಈ ಬಗ್ಗೆ ಚರ್ಮ ವೈದ್ಯರು ನೆರವಾದಾರು.

ಜಿಂಕ್

ಉರಿಯೂತ ಕಡಿಮೆ ಮಾಡುವಲ್ಲಿ ಸತು ಕೂಡಾ ಸಹಾಯಕ. ಬೀಜಗಳು, ಇಡೀ ಧಾನ್ಯಗಳು, ಕಾಳುಗಳೆಲ್ಲ ನಿಮ್ಮ ಆಹಾರದಲ್ಲಿರಲಿ.

ವಿಟಮಿನ್‌ ಎ

ಚರ್ಮದ ಆರೋಗ್ಯಕ್ಕೆ ಅಗತ್ಯವಾದ ಜೀವಸತ್ವವಿದು. ಕ್ಯಾರೆಟ್‌, ಗೆಣಸು, ಹಸಿರು ಸೊಪ್ಪುಗಳೆಲ್ಲ ವಿಟಮಿನ್‌ ಎದಿಂದ ಸಮೃದ್ಧವಾಗಿವೆ.

ಗ್ರೀನ್‌ ಟೀ

ಉರಿಯೂತ ಕಡಿಮೆ ಮಾಡುವಂಥ ಉತ್ಕರ್ಷಣ ನಿರೋಧಕಗಳಿಂದ ಗ್ರೀನ್‌ ಟೀ ಸಮೃದ್ಧವಾಗಿದೆ. ಇದು ಚರ್ಮದ ಆರೋಗ್ಯ ಕಾಪಾಡಲೂ ನೆರವಾದೀತು.

ತ್ವಚೆಗಿದು ಸೂಕ್ತವೇ ಗಮನಿಸಿ

ಒಬ್ಬರ ತ್ವಚೆಗೆ ಹೊಂದಿಕೆಯಾಗಿದ್ದು ಇನ್ನೊಬ್ಬರಿಗೆ ಆಗುತ್ತದೆ ಎಂದು ಹೇಳಲಾಗದು. ಹಾಗಾಗಿ ಯಾವುದೇ ಬದಲಾವಣೆಗಳನ್ನು ಮಾಡುವಾಗಲೂ ನಿಮ್ಮ ತ್ವಚೆಗಿದು ಸೂಕ್ತವೇ ಎಂಬುದನ್ನು ನೀವೇ ಗಮನಿಸಬೇಕು.

Exit mobile version