Site icon Vistara News

Winter Hair Care Tips: ಚಳಿಗಾಲದಲ್ಲಿ ನಿಮ್ಮ ಕೂದಲು ಚೆನ್ನಾಗಿರಬೇಕೆ? “ಎಣ್ಣೆʼಯನ್ನು ಮರೆಯಬೇಡಿ!

Young Woman Takes Care of Her Hair Using Natural Oils and Conditioners for Hair Care

ಕೂದಲ ಸಮಸ್ಯೆ ಹೆಚ್ಚು ಕಾಡುವುದು ಚಳಿಗಾಲದಲ್ಲೇ. ಕಾರಣ ಗೊತ್ತೇ ಇದೆ. ಚಳಿಗಾಲದಲ್ಲಿ, ಶುಷ್ಕ ಹವೆಯಿಂದಾಗಿ ನಮ್ಮ ಕೂದಲೂ ಒಣಕಲಾಗಿ, ಉದುರುವುದು, ತುಂಡಾಗುವುದು ಮತ್ತಿತರ ಸಮಸ್ಯೆಗಳಿಗೆ ಒಳಗಾಗುತ್ತದೆ. ಕೂದಲು ಕಳಾಹೀನವಾಗಿ, ಬಾಚಲೂ ಕಷ್ಟವಾಗುವ ಪರಿಸ್ಥಿತಿ ನಿರ್ಮಾಣವಾಗುವುದು ಚಳಿಗಾಲದಲ್ಲೇ. ಹಾಗಾದರೆ, ನಾವು ಇಂತಹ ಕಾಲದಲ್ಲಿ ಹೇಗೆ ಪೋಷಣೆ ಮಾಡಬಹುದು (winter hair care tips) ಎಂಬ ವಿಚಾರಕ್ಕೆ ಬಂದರೆ, ತಲೆತಲಾಂತರಗಳಿಂದ ಕೂದಲ ಪೋಷಣೆಯಲ್ಲಿ ಮುಖ್ಯ ಸ್ಥಾನದಲ್ಲಿರುವುದು ಎಣ್ಣೆ ಹಚ್ಚುವುದು.

ಕೂದಲ ಎಣ್ಣೆಯ ವಿಚಾರಕ್ಕೆ ಬಂದರೆ ಬಗೆಬಗೆಯ ಎಣ್ಣೆಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಅದರಲ್ಲೂ, ಈಗೀಗ ಹೊಸ ಬಗೆಯ ಎಣ್ಣೆಗಳು ಕೂದಲ ಪೋಷಣೆಯ ವಿಚಾರದಲ್ಲಿ ಹೆಚ್ಚು ಸದ್ದು ಮಾಡುತ್ತಿವೆ. ಬಗೆಬಗೆಯ ಬ್ರ್ಯಾಂಡ್‌ಗಳು, ಬಗೆಬಗೆಯ ಮೂಲಗಳ ಎಣ್ಣೆಗಳು ನಮ್ಮನ್ನು ಕೆಲವೊಮ್ಮೆ ಹಾದಿ ತಪ್ಪಿಸುತ್ತವೆ. ಇಂಥ ಸಂದರ್ಭ ನಮ್ಮನ್ನು ಕೈಬೀಸಿ ಕರೆಯುವುದು ಅವೇ ನಮ್ಮ ಪರಂಪರಾಗತ ಎಣ್ಣೆಗಳು. ನಮ್ಮ ಹಿರಿಯರು, ಸೌಂದರ್ಯ ಸಾಧನಗಳಿಲ್ಲದೆಯೇ, ಹಿಂದಿನ ಕಾಲದಲ್ಲಿ, ತಮ್ಮ ಉದ್ದ, ಬಲಿಷ್ಟ ಕೇಶರಾಶಿಯ ಪೋಷಣೆಗೆ ಬಳಸುತ್ತಿದ್ದ ಎಣ್ಣೆಗಳು ನಮ್ಮನ್ನು ಎಂದಿಗೂ ಕೈಬಿಡವು. ಹಾಗಾದರೆ ಬನ್ನಿ, ಕೂದಲ ಪೋಷಣೆಗೆ ಸಹಾಯ ಮಾಡುವ, ಚಳಿಗಾಲದಲ್ಲಿ ನಮ್ಮ ಕೂದಲನ್ನು ಆರೋಗ್ಯಕರವನ್ನಾಗಿ ಮಾಡುವ ಎಣ್ಣೆಗಳು ಯಾವುವು ಎಂದು ನೋಡೋಣ.

ತೆಂಗಿನೆಣ್ಣೆ

ಚಳಿಗಾಲದಲ್ಲಿ ನಮ್ಮ ಕೈಗೆ ಸಿಗುವ ಎಣ್ಣೆಗಳ ಪೈಕಿ ಮೊದಲ ಸ್ಥಾನ ಪಾರಂಪರಿಕವಾಘಿ ಬಂದ ಈ ತೆಂಗಿನ ಎಣ್ಣೆಗೇ ಸಿಗಬೇಕು. ಇದು ಚರ್ಮದ ವಿವಿಧ ಪದರಗಳ ಮೂಲಕ ಹಾದು ಚರ್ಮಕ್ಕೆ ಚಳಿಗಾಲದಲ್ಲಿ ತೇವಾಂಶವನ್ನು ಒದಗಿಸಿ ಪೋಷಣೆ ಮಾಡುತ್ತದೆ. ಚಳಿಗಾಲದಲ್ಲಿ ಮುಖ್ಯವಾಗಿ ಕಾಡುವ ತಲೆಹೊಟ್ಟು, ಒಣಕಲಾಗುವುದು ಇತ್ಯಾದಿ ಸಮಸ್ಯೆಗಳಿಗೆ ತೆಂಗಿನೆಣ್ಣೆ ಅತ್ಯುತ್ತಮ ಪರಿಹಾರ ಒದಗಿಸುತ್ತದೆ. ಬುಡದಿಂದ ತುದಿಯವರೆಗೆ ಕೂದಲ ಪೋಷಣೆಯನ್ನು ಮಾಡಿ ಕೂದಲನ್ನು ನಯವಾಗಿ ಹೊಳಪಾಗಿಸುತ್ತದೆ.

ನೆಲ್ಲಿಕಾಯಿ ಎಣ್ಣೆ

ವಿಟಮಿನ್‌ ಸಿ ಹಾಗೂ ಇಯಿಂದ ಸಮೃದ್ಧವಾಗಿರುವ ನೆಲ್ಲಿಕಾಯಿ ಎಣ್ಣೆ ಕೂದಲ ಬುಡದಲ್ಲಿ ರಕ್ತಸಂಚಾರವನ್ನು ಹೆಚ್ಚಿಸಿ, ಕೂದಲನ್ನು ಶಕ್ತಿಯುತವನ್ನಾಗಿಸುತ್ತದೆ. ಕೂದಲು ಉದ್ದವಾಗಿ ಸೊಂಪಾಗಿ ಬೆಳೆಯಲು ನೆಲ್ಲಿಕಾಯಿ ಎಣ್ಣೆ ಅತ್ಯುತ್ತಮ ಔಷಧಿ ಕೂಡಾ. ಅಷ್ಟೇ ಅಲ್ಲ, ಕೂದಲು ಬಹಳ ಬೇಗ ಬೆಳ್ಳಗಾಗುವ ಸಮಸ್ಯೆಗೂ ಇದು ರಾಮಬಾಣ. ಚಳಿಗಾಲದಲ್ಲಿ ಬಳಸಬೇಕಾದ ಎಣ್ಣೆಗಳ ಪೈಕಿ ನೆಲ್ಲಿಕಾಯಿ ಎಣ್ಣೆಗೆ ಮೊದಲ ಆದ್ಯತೆ.

ಬ್ರಾಹ್ಮಿ ಎಣ್ಣೆ

ಬ್ರಾಹ್ಮಿ ಅಥವಾ ಒಂದೆಲಗದ ಎಣ್ಣೆಯೇ ಎಂದು ನೀವು ಆಶ್ಚರ್ಯಪಡಬೇಡಿ. ತಲೆಹೊಟ್ಟು, ತಲೆಯಲ್ಲಿ ತುರಿಕೆ, ಕಜ್ಜಿ, ಕೂದಲ ಬುಡ ಒಣಗಿದಂತಾಗಿ ಪದರು ಪದರಾಗಿ ಚರ್ಮ ಏಳುವುದೂ ಸೇರಿದಂತೆ ಕೂದಲ ಚಳಿಗಾಲದ ಸಮಸ್ಯೆಗಳಿಗೆ ಬ್ರಾಹ್ಮಿ ಎಣ್ಣೆ ಒಳ್ಳೆಯ ಮದ್ದು.

ಭೃಂಗರಾಜ ಎಣ್ಣೆ

ಮನೆಯ ಹಿರಿಯರು ಮರೆಯದೆ ಹೇಳುವ ಎಣ್ಣೆ ಅಂದರೆ ಇದು. ಭೃಂಗರಾಜ ಎಣ್ಣೆ ಕೂದಲ ಬುಡದಲ್ಲಿ ರಕ್ತಸಂಚಾರವನ್ನು ಹೆಚ್ಚಿಸಿ, ಕೂದಲ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಕೂದಲಿಗೆ ಉತ್ತಮ ಪೋಷಣೆಯನ್ನು ನೀಡಿ, ಕೂದಲಿಗೆ ಹೊಳಪನ್ನು ನೀಡುತ್ತದೆ.

ಕಹಿಬೇವಿನೆಣ್ಣೆ

ಚಳಿಗಾಲದಲ್ಲಿ ಕೂದಲಿಗೆ ಅಗತ್ಯವಾಗಿರುವ ಎಣ್ಣೆಗಳ ಪೈಕಿ ಕಹಿಬೇವಿನ ಎಣ್ಣೆಯೂ ಒಂದು. ಇದು ಕೂದಲಿಗೆ ಬೇಕಾದ ತೇವಾಂಶವನ್ನು ನೀಡಿ, ಕೂದಲನ್ನು ದಟ್ಟವಾಗಿ, ತುರಿಕೆ ಹಾಗೂ ತಲೆಹೊಟ್ಟು ರಹಿತವನ್ನಾಗಿಸಿ, ಕಜ್ಜಿಗಳಂತಹ ಸಮಸ್ಯೆಗಳಿಂದ ದೂರವಿರಿಸಿ ಆರೋಗ್ಯವಾಗಿಸುತ್ತದೆ.

ಎಳ್ಳೆಣ್ಣೆ

ಎಳ್ಳೆಣ್ಣೆಯಲ್ಲಿ ಒಮೆಗಾ- 3 ಹಾಗೂ 6 ಫ್ಯಾಟಿ ಆಸಿಡ್‌ಗಳು ಹೇರಳವಾಗಿದ್ದು, ಇದನ್ನು ಆಗಾಗ ತಲೆಗೆ ಹಚ್ಚಿ ಮಸಾಜ್‌ ಮಾಡುವುದರಿಂದ ಕೂದಲ ಆರೋಗ್ಯ ಉತ್ತಮವಾಗುತ್ತದೆ. ಇದು ದಪ್ಪನೆಯ ಎಣ್ಣೆಯಾಗಿರುವುದರಿಂದ ಅಂಟಂಟಾಗಿರುವ ಗುಣ ಹೆಚ್ಚಿರುವುದರಿಂದ ಇದನ್ನು ತಲೆಗೆ ಸ್ನಾನ ಮಾಡುವ ಮುಂಚೆ ಹಚ್ಚಿ ಮಸಾಜ್‌ ಮಾಡಿ ಸ್ನಾನ ಮಾಡಬಹುದು.

ಮಲ್ಲಿಗೆ ಎಣ್ಣೆ

ಉತ್ತಮ ಘಮದ ಮಲ್ಲಿಗೆ ಎಣ್ಣೆ ತಲೆಕೂದಲಿಗೆ ಒಳ್ಳೆಯದನ್ನೇ ಮಾಡುತ್ತದೆ. ಕೂದಲಲ್ಲಿ ತೇವಾಂಶವನ್ನು ಹಿಡಿದಿಟ್ಟುಕೊಂಡು ಪೋಷಣೆಯನ್ನೂ ಮಾಡುತ್ತದೆ.

ಹರಳೆಣ್ಣೆ

ಹರಳೆಣ್ಣೆ ದಪ್ಪ ಅಂಟಂಟಾದ ಎಣ್ಣೆಯಾದರೂ, ಕೂದಲ ಆರೋಗ್ಯಕ್ಕೆ ಅತ್ಯುತ್ತಮ ಎಣ್ಣೆ. ಇದರಲ್ಲಿ ವಿಟಮಿನ್‌ ಇ, ಒಮೆಗಾ ಹಾಗೂ 9 ಫ್ಯಾಟಿ ಆಸಿಡ್‌ಗಳಿದ್ದು, ಕೂದಲಿಗೆ ಅತ್ಯುತ್ತಮವಾಗಿ ತೇವಾಂಶವನ್ನು ನೀಡಿ, ಹೊಳಪನ್ನೂ ನೀಡುತ್ತದೆ. ಕೂದಲ ಬುಡದಲ್ಲಿ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ. ಇದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ. ಒಣಕಲಾಗಿದ್ದ ಕೂದಲು ಕಳೆಕಳೆಯಾಗಿ ಕಂಗೊಳಿಸುತ್ತದೆ.

ಇದನ್ನೂ ಓದಿ: Ramphal Health Benefits: ರಾಮಫಲವೆಂಬ ಆರೋಗ್ಯಸೂತ್ರ

Exit mobile version