ದಂತ, ಒಸಡುಗಳ ಸಮಸ್ಯೆಗಳು ಗಂಟುಬಿದ್ದರೆ ಕೆಲವೊಮ್ಮೆ ದೀರ್ಘ ಕಾಲ ಕಾಡಬಹುದು. ಆಗ ಹೆಚ್ಚಿನ ಸಾರಿ ಮನೆಮದ್ದುಗಳು ಅಥವಾ ಔಷಧಿ ಅಂಗಡಿಗಳಲ್ಲಿ ವೈದ್ಯರ ಚೀಟಿ ಇಲ್ಲದೆಯೇ ದೊರೆಯುವ ಯಾವುದೋ ಔಷಧಿಯನ್ನು ತಂದು ನಿಭಾಯಿಸಲು ಯತ್ನಿಸುತ್ತೇವೆ. ಅದಷ್ಟರಲ್ಲೇ ಸಮಸ್ಯೆ ಗುಣವಾದರೆ ನಮ್ಮ ಅದೃಷ್ಟ. ಹಾಗಾಗದಿದ್ದರೆ…? ವೈದ್ಯರಲ್ಲಿಗೆ ಹೋಗಲೇಬೇಕಲ್ಲವೇ? ಕೆಲವೊಮ್ಮೆ ಏನೋ ಸಣ್ಣ ಗಾಯ ಎಂದುಕೊಂಡಿದ್ದು ದೊಡ್ಡ ವ್ರಣವಾಗಿಬಿಡಬಹುದು. ಹಾಗಾಗಿ ದೀರ್ಘ ಕಾಲದಿಂದ ಗುಣವಾಗದ ಬಾಯಿಯ ಸಮಸ್ಯೆಗಳಿದ್ದರೆ, ಆ ಸಮಸ್ಯೆಗಳು ಮರುಕಳಿಸುತ್ತಿದ್ದರೆ, ಅದು ಬಾಯಿಯ ಕ್ಯಾನ್ಸರ್ ಅಲ್ಲ ಎಂಬುದನ್ನು ವೈದ್ಯರಿಂದ ಖಾತ್ರಿ ಪಡಿಸಿಕೊಳ್ಳುವುದು ಅಗತ್ಯ. ಎಂಥಾ ಸೂಚನೆಗಳು ಕಂಡು ಬಂದರೆ ವೈದ್ಯರಲ್ಲಿ ಶೀಘ್ರ ಧಾವಿಸುವುದು ಅಗತ್ಯ? ಬಾಯಿಯ ಕ್ಯಾನ್ಸರ್‌ನ (Warning signs of Oral Cancer) ಲಕ್ಷಣಗಳೇನು?
ಸತತ ಬಾಯಿ ಹುಣ್ಣುಗಳು
ತಿನ್ನುವಾಗ ಆಕಸ್ಮಿಕವಾಗಿ ನಾಲಿಗೆ, ಒಸಡುಗಳನ್ನು ಕಚ್ಚಿಕೊಂಡರೆ ಅಲ್ಲಿ ಹುಣ್ಣಾಗುವುದು ಸಾಮಾನ್ಯ. ಅದಲ್ಲದೆಯೂ ಕೆಲವು ಕಾರಣಗಳಿಗೆ ಬಾಯಲ್ಲಿ ಹುಣ್ಣಾಗಬಹುದು. ಆದರೆ ನಾಲ್ಕಾರು ದಿನಗಳಲ್ಲಿ ಅದು ತನ್ನಷ್ಟಕ್ಕೆ ಗುಣವಾಗುತ್ತದೆ. ಹುಣ್ಣಾಗಿ ಎರಡು ವಾರಗಳಾದರೂ ಗುಣವಾಗುವ ಸೂಚನೆ ಕಾಣದಿದ್ದಾಗ, ಮತ್ತೆ ಮತ್ತೆ ಹುಣ್ಣುಗಳು ಆಗುತ್ತಿದ್ದರೆ ವೈದ್ಯರಲ್ಲಿ ತೋರಿಸುವುದು ಅಗತ್ಯ. ಈ ಹುಣ್ಣುಗಳಿಂದ ರಕ್ತ ಸೋರುವುದು ಅಥವಾ ಅಸಾಮಾನ್ಯ ನೋವಿನ ಅನುಭವ ಆಗುತ್ತಿದ್ದರೂ ಜಾಗ್ರತೆ ಮಾಡಿ.
ಗುಳ್ಳೆಗಳು
ಗಂಟಲೂ ಸೇರಿದಂತೆ ಬಾಯಿಯ ಯಾವುದೇ ಭಾಗದಲ್ಲಿ ಗುಳ್ಳೆಗಳು, ಸಣ್ಣ ಗಡ್ಡೆಗಳು ಅಥವಾ ಕೋಶಗಳು ದಪ್ಪಗಾಗಿ ಜಡ್ಡಾದಂತೆ ಕಂಡರೆ ಎಚ್ಚರಿಕೆ ವಹಿಸಿ. ಒಂದೊಮ್ಮೆ ಅವು ನಾಲ್ಕಾರು ದಿನಗಳಲ್ಲಿ ತಮ್ಮಷ್ಟೇ ಗುಣವಾದರೆ ಸರಿ, ಹಾಗಿಲ್ಲದಿದ್ದರೆ ವೈದ್ಯರಲ್ಲಿ ಹೋಗಿ. ಹೀಗೆ ಕಂಡಿದ್ದೆಲ್ಲಾ ಕ್ಯಾನ್ಸರ್ ಆಗಿರುತ್ತದೆಂದಲ್ಲ. ಅವೆಲ್ಲ ಅಪಾಯ ರಹಿತವಾದದ್ದೇ ಇರಬಹುದು. ಆದರೆ ಇವುಗಳನ್ನು ತಪಾಸಣೆ ಮಾಡಿಸುವುದು ಮುಖ್ಯ.
ರಕ್ತಸ್ರಾವ
ಮೇಲ್ನೋಟಕ್ಕೆ ಯಾವುದೇ ಕಾರಣವಿಲ್ಲದೆ ಬಾಯಿಯ ಯಾವುದಾದರೂ ಭಾಗದಲ್ಲಿ ರಕ್ತಸ್ರಾವ ಆಗುತ್ತಿದ್ದರೆ ಅದನ್ನೂ ಗಮನಿಸಬೇಕು. ಒಸಡಿನ ಸೋಂಕು, ಹಲ್ಲುಗಳ ತೊಂದರೆ, ಎಲ್ಲಾದರೂ ಪೆಟ್ಟಾಗಿದ್ದರೆ- ಹೀಗೆ ಹಲವು ಕಾರಣಗಳಿಗೆ ದಂತ-ಒಡಸುಗಳಲ್ಲಿ ರಕ್ತ ಸೋರಬಹುದು. ಆದರೆ ಇಂಥ ಯಾವುದೇ ಕಾರಣವಿಲ್ಲದೆ ಬಾಯಲ್ಲಿ ಆಗಾಗ ರಕ್ತ ಬರುತ್ತಿದೆ ಎಂದಾದರೆ ಅದನ್ನು ಕಡೆಗಣಿಸುವಂತಿಲ್ಲ. ವೈದ್ಯರಲ್ಲಿ ಒಮ್ಮೆ ಹೋಗಿ.
ಗಂಟಲು ನೋವು
ಇದಕ್ಕೆ ಹತ್ತಾರು ಕಾರಣಗಳಿರಬಹುದು. ಆದರೆ ವಾರಗಟ್ಟಲೆ ಕಾಡಿಸುವ ಗಂಟಲು ನೋವು, ನುಂಗಲು ಕಷ್ಟವಾಗುವುದು, ಮತ್ತೆ ಮತ್ತೆ ಬರುವ ಗಂಟಲು ನೋವು, ಗಂಟಲಲ್ಲಿ ಹಿಡಿದಂಥ ಒತ್ತಿದಂಥ ಅನುಭವ ಇತ್ಯಾದಿಗಳು ಹೆಚ್ಚಿನ ಗಮನವನ್ನು ಬೇಡುತ್ತವೆ. ಗಂಟಲು ಮತ್ತು ಅನ್ನನಾಳವನ್ನು ತಪಾಸಣೆ ಮಾಡಿಸುವುದು ಇಂಥ ಸೂಚನೆಗಳಿದ್ದರೆ ಆವಶ್ಯಕ.
ಇದನ್ನೂ ಓದಿ: Face Serum: ಚರ್ಮಕ್ಕೆ ಹೊಂದುವಂಥ ʻಫೇಸ್ ಸೀರಂʼ ಆಯ್ಕೆ ಮಾಡುವುದು ಹೇಗೆ?
ಧ್ವನಿ ಬದಲಾದರೆ?
ಕೊಂಚ ನೆಗಡಿಯಾದರೂ ಧ್ವನಿ ಬದಲಾದ ಅನುಭವ ಬರುತ್ತದೆ. ನೆಗಡಿಯೆಲ್ಲ ಕಳೆದು, ಕೆಮ್ಮೂ ಕಡಿಮೆಯಾಗಿ, ಕಫವೂ ಹೋದ ಮೇಲೆ ಧ್ವನಿ ಮಾಮೂಲಿಯಾಗುವುದು ಕ್ರಮ. ಆದರೆ ಇಂಥ ಯಾವುದೇ ಕಾರಣವಿಲ್ಲದೆ ಧ್ವನಿಯಲ್ಲಿ ಬದಲಾವಣೆ ಕಂಡರೆ, ನಾಲ್ಕಾರು ದಿನಗಳಲ್ಲಿ ಧ್ವನಿ ಮಾಮೂಲಿ ಸ್ಥಿತಿಗೆ ಮರಳದಿದ್ದರೆ, ಉದಾಸೀನ ಮಾಡುವುದಲ್ಲ. ಧ್ವನಿ ಬದಲಾವಣೆಯ ಜೊತೆಗೆ ಕೆಮ್ಮು, ಗಂಟಲು ಬಿಗಿದ ಅನುಭವವೂ ಇದ್ದರೆ ನೇರ ವೈದ್ಯರಲ್ಲಿಗೇ ಹೋಗಿ.
ಈ ಎಲ್ಲವುಗಳ ಹಿನ್ನೆಲೆಯಲ್ಲಿ, ಕಾಲಕಾಲಕ್ಕೆ ದಂತ ವೈದ್ಯರಲ್ಲಿ ಹೋಗಿ ಹಲ್ಲುಗಳನ್ನು ಸ್ವಚ್ಛ ಮಾಡಿಸಿಕೊಳ್ಳುವುದು, ಹುಳುಕು ಹಲ್ಲುಗಳಿದ್ದರೆ ಚಿಕಿತ್ಸೆ ಪಡೆಯುವುದು, ಒಸಡಿನ ತೊಂದರೆಗಳಿದ್ದರೆ ನಿವಾರಿಸಿಕೊಳ್ಳುವುದು ಮುಖ್ಯವಾಗುತ್ತದೆ. ಆರಂಭಿಕ ಸೂಚನೆಗಳನ್ನು ಗುರುತಿಸಲು ಇಂಥ ಮಾಹಿತಿಗಳನ್ನು ತಿಳಿದುಕೊಳ್ಳುವುದು ಅಗತ್ಯ. ಕ್ಯಾನ್ಸರ್‌ನಂಥ ಗಂಭೀರ ತೊಂದರೆಗಳನ್ನು ಆರಂಭದಲ್ಲೇ ಪತ್ತೆ ಮಾಡಿದರೆ, ಚಿಕಿತ್ಸೆ ಫಲಪ್ರದವಾಗುವ ಸಾಧ್ಯತೆಗಳು ಅಧಿಕ. ಹಾಗಿಲ್ಲದಿದ್ದರೆ ಜೀವಕ್ಕೂ ಎರವಾಗಬಹುದು.