ಬೇಸಿಗೆಯ ಧಗೆಗೆ ನಾವು ಸಹಜವಾಗಿಯೇ ಕಲ್ಲಂಗಡಿ ಹಣ್ಣಿನ ಮೊರೆ ಹೋಗುವುದು ಸಹಜ. ಬಿಸಿಲಿನ ಝಳಕ್ಕೆ ಕಲ್ಲಂಗಡಿಗಿಂತ ದೊಡ್ಡ ಅಮೃತ ಈ ಕಾಲದಲ್ಲಿ ಬೇರೆ ಇರಲಿಕ್ಕಿಲ್ಲ ಎಂದು ಅನಿಸುವುದೂ ಸಹಜ. ಇದು ಕೇವಲ ರುಚಿಯಷ್ಟೇ ಅಲ್ಲ, ಹೊಟ್ಟೆ ತುಂಬುವುದೂ ನಿಜ, ಆರೋಗ್ಯಕರ ಎಂಬುದೂ ಅಷ್ಟೇ ಸತ್ಯ. ತೂಕ ಇಳಿಸುವಿಕೆಗೆ ಪೂರಕವಾದ ಲೈಕೋಪೀನ್ ಪ್ರಮಾಣ ಇದರಲ್ಲಿ ಹೆಚ್ಚಿರುವುದರಿಂದ ಜೊತೆಗೆ ಆರೋಗ್ಯಕರವಾದ ಎಲ್ಲ ಲಾಭಗಳನ್ನೂ ಹೊತ್ತು ತಂದಿರುವುದರಿಂದ ಬಹಳಷ್ಟು ಮಂದಿ ಬೇಸಿಗೆಯಲ್ಲಿ ಇದನ್ನು ಊಟದ ಮಧ್ಯದ ಹಸಿವಿನ ಸಮಯಕ್ಕೆ ಅಂದರೆ ಸ್ನ್ಯಾಕ್ ಟೈಮ್ ಆಹಾರವಾಗಿ ಬಳಸುವುದೇ ಹೆಚ್ಚು. ಆ ಹೊತ್ತಿಗೆ ಇದು ಪರ್ಫೆಕ್ಟ್ ಆಹಾರ ಕೂಡಾ. ರಕ್ತದೊತ್ತಡದ ಏರುಪೇರು, ಹೃದಯದ ತೊಂದರೆ ಇರುವ ಮಂದಿಗೆ, ಕಿಡ್ನಿಯ ಆರೋಗ್ಯಕ್ಕೆ ಹಾಗೂ ಸಿಹಿ ತಿಂಡಿ ಬೇಕೆನಿಸುವ ಮಂದಿಗೆಈ ಹಣ್ಣು ಅತ್ಯುತ್ತಮ ಪರಿಹಾರ ಕೂಡಾ. ಹಾಗಾಗಿ ಒಳ್ಳೆಯ ಹಣ್ಣು ಎಂದು ಧಾರಾಳವಾಗಿ ತಿನ್ನಬಹುದು.
ಆದರೆ ಬಹಳಷ್ಟು ಮಂದಿ ಮಾಡುವ ತಪ್ಪು ಎಂದರೆ, ಇದು ತೂಕ ಇಳಿಸಲು ಪರ್ಫೆಕ್ಟ್ ಹಣ್ಣು ಎಂದುಕೊಂಡು ಮೂರೂ ಹೊತ್ತು ಕಲ್ಲಂಗಡಿಯನ್ನೇ ತಿನ್ನುವುದು. ಅಥವಾ ರಾತ್ರಿಯೂಟದ ಬದಲು ಕಲ್ಲಂಗಡಿ ತಿನ್ನುವುದು. ಕಲ್ಲಂಗಡಿಯಲ್ಲಿ ಕಡಿಮೆ ಕ್ಯಾಲರಿ ಇದೆಯಾದ್ದರಿಂದ ರಾತ್ರಿಗೆ ಒಳ್ಳೆಯದಿರಬಹುದು ಎಂದು ತಾವೇ ಊಹನೆ ಮಾಡಿಕೊಂಡು ತಿನ್ನುವುದು. ಹೀಗೆ ಇರುವ ತಪ್ಪು ಕಲ್ಪನೆಗಳಿಂದಾಗಿಯೇ, ಹಲವಾರು ಆರೋಗ್ಯದ ಸಮಸ್ಯೆಗಳಿಗೆ ತುತ್ತಾಗಬೇಕಾಗುತ್ತದೆ ಎಂಬುದನ್ನು ನೆನಪಿಡಿ.
ಕಲ್ಲಂಗಡಿಯಲ್ಲಿ ಕ್ಯಾಲರಿ ಕಡಿಮೆ ಇದೆ ನಿಜ. ಆದರೆ, ಇದು ಕತ್ತಲು ಕವಿದ ಮೇಲೆ ತಿನ್ನಬಹುದಾದ ಹಣ್ಣಲ್ಲ. ಯಾಕೆಂದರೆ, ಈ ನೀರುನೀರಾದ ಹಣ್ಣು ಬೇಗ ದೇಹದಲ್ಲಿ ಕರಗಿಬಿಡುತ್ತದೆ ಎಂದು ನೀವು ಲೆಕ್ಕಾಚಾರ ಹಾಕಿದರೆ ನಿಮ್ಮ ಊಹೆ ಸುಳ್ಳಾಗಿ ಬಿಡಬಹುದು. ದೇಹದಲ್ಲಿ ಬೇಗನೆ ಕರಗಬಲ್ಲ ಹಣ್ಣು ಇದಲ್ಲ. ಇದರಿಂದ ಮಾರನೇ ದಿನ ಹೊಟ್ಟೆ ಕೆಡುವ ಸಾಧ್ಯತೆಗಳು ಹೆಚ್ಚು. ಆದ್ದರಿಂದ ಕತ್ತಲಾದ ಮೇಲೆ ಈ ಹಣ್ಣು ದೇಹದ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರಬಲ್ಲುದು. ಹಾಗಾಗಿ ಕಲ್ಲಂಗಡಿ ಹಣ್ಣನ್ನು ತಿನ್ನಲು ಸೂಕ್ತವಾದ ಸಮಯವೆಂದರೆ ಮಧ್ಯಾಹ್ನ 12ರಿಂದ 1 ಗಂಟೆಯಂತೆ. ಆಫೀಸಿನ ಕೆಲಸದ ಮಧ್ಯೆ, ದೇಹ ಮನಸ್ಸು ತಂಪಾಗಿಸಿಕೊಳ್ಳಲು, ಕೆಲಸ ಚುರುಕಾಗಿಸಿಕೊಳ್ಳಲು ನಮಗೆ ನಾವು ಕೊಡಬಹುದಾದ ಅತ್ಯುತ್ತಮ ಮಿಡ್‌ಟೈಮ್ ಸ್ನ್ಯಾಕ್ ಇದು, ಅಷ್ಟೇ.
ಕಲ್ಲಂಗಡಿ ಹಣ್ಣನ್ನು ರಾತ್ರಿಯಾದ ಮೇಲೆ ತಿನ್ನುವುದು ಒಳ್ಳೆಯದಲ್ಲ ಎನ್ನಲು ಇನ್ನೂ ಅನೇಕ ಕಾರಣಗಳಿವೆ. ಕಲ್ಲಂಗಡಿ ಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆ ಹೇರಳವಾಗಿ ಇರುವುದರಿಂದ ಆಗಾಗ ಮೂತ್ರ ವಿಸರ್ಜನೆಗೆ ಹೋಗಬೇಕಾಗಬಹುದು. ಇದರಿಂದ ರಾತ್ರಿ ತಿಂದರೆ, ನಿದ್ದೆಗೂ ತೊಂದರೆಯಾಗಬಹುದು. ನೆಗಡಿ, ಶೀತದ ತೊಂದರೆಯಿರುವ ಮಂದಿಗೂ ಕಲ್ಲಂಗಡಿ ರಾತ್ರಿಯ ಹೊತ್ತು ಇಂತಹ ತೊಂದರೆಯನ್ನು ಹೆಚ್ಚು ಮಾಡುವ ಸಾಧ್ಯತೆಯೂ ಇದೆ.
ಇದನ್ನೂ ಓದಿ: Watermelon Selection: ಸಿಹಿಯಾದ ಪರ್ಫೆಕ್ಟ್ ಕಲ್ಲಂಗಡಿ ಹಣ್ಣು ಆಯ್ಕೆ ಹೇಗೆ? ಇಲ್ಲಿವೆ ಟಿಪ್ಸ್!
ಕಲ್ಲಂಗಡಿ ಹಣ್ಣಿನಲ್ಲಿ ಮಾಡಬಹುದಾದ ಕೆಲವು ಅತ್ಯುತ್ತಮ ಪೇಯಗಳ ವಿವರ ಇಲ್ಲಿದೆ.
ಕಲ್ಲಂಗಡಿ ನಿಂಬೆ ಟಾನಿಕ್: ಕಲ್ಲಂಗಡಿ ಹಣ್ಣಿನ ಜೊತೆ ನಿಂಬೆಹಣ್ಣನ್ನೂ ಸೇರಿಸಿ ಜ್ಯೂಸ್ ಮಾಡಿ ಮಧ್ಯಾಹ್ನದ ಹೊತ್ತಿನಲ್ಲಿ ಹೀರಿ. ಬೇಕಿದ್ದರೆ ತಣ್ಣಗಿರಲು ಒಂದೆರಡು ಐಸ್‌ಕ್ಯೂಬನ್ನೂ ಸೇರಿಸಿ. ದಣಿದ ದೇಹಕ್ಕೆ ಒಳ್ಳೆಯ ಟಾನಿಕ್ ಇದು. ಇದು ಬಾಯಾರಿಕೆಯನ್ನಷ್ಟೇ ಓಡಿಸುವುದಿಲ್ಲ. ದೇಹವನ್ನೂ ತಂಪಾಗಿಸುತ್ತದೆ.
೨. ಕಲ್ಲಂಗಡಿ ಸೌತೆಕಾಯಿ ಜ್ಯೂಸ್: ಬೇಸಿಗೆಗೆ ಹೇಳಿ ಮಾಡಿಸಿದಂತಹ ಸೌತೆಕಾಯಿಯ ಜೊತೆಗೆ ಕಲ್ಲಂಗಡಿ ಹಣ್ಣನ್ನೂ ಸೇರಿಸಿ ಐಸ್ ಕ್ಯೂಬ್ ಹಾಕಿ ಜ್ಯೂಸ್ ಮಾಡಿ. ಆಯಾಸಗೊಂಡ ದೇಹ ಹಾಗೂ ಮನಸ್ಸಿಗೆ ಇದಕ್ಕಿಂತ ತಣ್ಣಗಿನ ಡ್ರಿಂಕ್ ಇನ್ನೊಂದು ಸಿಗಲಿಕ್ಕಿಲ್ಲ.
೩. ಕಲ್ಲಂಗಡಿ ಸ್ಮೂದಿ: ಹೊಟ್ಟೆ ತುಂಬುವಂಥ ಡ್ರಿಂಕ್ ಏನಾದರೂ ಕುಡಿಯಬೇಕು ಅನಿಸಿದರೆ, ಕಲ್ಲಂಗಡಿ ಸ್ಮೂದಿ ಬೆಸ್ಟ್. ಸ್ವಲ್ಪ ಸ್ಟ್ರಾಬೆರಿ ಹಣ್ಣುಗಳನ್ನು ಕಲ್ಲಂಗಡಿ ಹಣ್ಣಿನ ಜೊತೆಗೆ ಸೇರಿಸಿ ದಪ್ಪದ ಸ್ಮೂದಿ ಮಾಡಿ. ಸ್ವಲ್ಪ ಮೊಸರು ಸೇರಿಸಿಕೊಳ್ಳಿ. ಹೊಟ್ಟೆ ತಣ್ಣಗಾಗುವ ಜೊತೆಗೆ ಹಸಿವೂ ಇಂಗುತ್ತದೆ.
ಇದನ್ನೂ ಓದಿ: Watermelon: ಕಲ್ಲಂಗಡಿ ಹಣ್ಣನ್ನು ಅತಿಯಾಗಿ ಯಾಕೆ ತಿನ್ನಬಾರದು ಗೊತ್ತೇ?