ಇಂದು ಡಿಜಿಟಲ್ ಉಪಕರಣಗಳನ್ನು (Digital detox), ಅಂದರೆ ಮೊಬೈಲ್, ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್, ಕಂಪ್ಯೂಟರ್ ಹಾಗೂ ಸಾಮಾಜಿಕ ಜಾಲತಾಣಗಳ ಬಳಕೆ ನಮ್ಮನ್ನು ಎತ್ತ ಕೊಂಡೊಯ್ಯುತ್ತಿದೆ ಎಂಬ ಸತ್ಯ ಎಲ್ಲರಿಗೂ ಅರಿವಿದ್ದೇ ಇದೆ. ಆದರೂ, ನಮ್ಮ ನಿತ್ಯದ ಬದುಕನ್ನು ಇವುಗಳ ಹೊರತಾಗಿ ಯೋಚಿಸಲು ಸಾಧ್ಯವಾಗದು. ಆದರೆ, ಇವುಗಳ ಬಳಕೆ ಮಿತಿಮೀರಿದಾಗ ಬಹಳಷ್ಟು ಸಂದರ್ಭಗಳಲ್ಲಿ ನಾವು ಪರಿಸ್ಥಿತಿ ನಮ್ಮ ಕೈಮೀರಿ ಹೋಗುತ್ತಿದೆ ಎಂದು ತಿಳಿದಾಗ ಡಿಜಿಟಲ್ ಡಿಟಾಕ್ಸ್ ಮಾಡಿಕೊಳ್ಳುವುದು ಕೂಡಾ ಅನಿವಾರ್ಯವೇ. ಅಂದರೆ, ಡಿಜಿಟಲ್ ಉಪಕರಣಗಳನ್ನು ಸ್ವಲ್ಪ ದೂರವೇ ಇಡುವ ಅಭ್ಯಾಸವನ್ನು ರೂಢಿಸಿಕೊಳ್ಳುವುದು. ಇದು ನಮ್ಮ ಕೈಯಿಂದ ಸ್ವತಃ ಸಾಧ್ಯವಾಗದಂತಾದಾಗ ನಾವು ಈ ಬಗೆಗೆ ತಜ್ಞರ ನೆರವನ್ನೂ ಪಡೆಯಬೇಕಾಗುತ್ತದೆ. ಬನ್ನಿ, ಡಿಜಿಟಲ್ ಜಗತ್ತು ನಮ್ಮನ್ನು ಎಷ್ಟರಮಟ್ಟಿಗೆ ಬಾಧಿಸುತ್ತದೆ ಹಾಗೂ ಡಿಜಿಟಲ್ ಡಿಟಾಕ್ಸ್‌ನಿಂದ ಏನೇನು ಲಾಭಗಳಿವೆ ಎಂಬುದನ್ನು ನೋಡೋಣ.
ಅತಿಯಾದಂತೆ ಒತ್ತಡ
ಡಿಜಿಟಲ್ ಉಪಕರಣಗಳ ಚಟ ಅತಿಯಾದಂತೆ ಒತ್ತಡವೂ ಹೆಚ್ಚಾಗುತ್ತದೆ. ಸಾಮಾಜಿಕ ಜಾಲತಾಣಗಳನ್ನು ಅತಿಯಾಗಿ ಬಳಸುವುದು, ಕೆಲಸಕ್ಕಾಗಿ ಯಾವಾಗಲೂ ಫೋನ್‌ನಲ್ಲಿ ಇರಬೇಕಾಗುವದು, ಅತಿಯಾಗಿ ಕಾಲ್‌ನಲ್ಲಿ ಮಾತುಕತೆ, ಬಹಳ ಹೊತ್ತು ಈಯರ್ ಬಡ್ ಧರಿಸಿಕೊಂಡೇ ಮಾತನಾಡಬೇಕಾಗುವುದು ಇತ್ಯಾದಿಗಳಿಂದಾಗಿ ಒತ್ತಡವೂ ಹೆಚ್ಚಾಗುತ್ತದೆ. ದೈಹಿಕವಾಗಿ ಯಾವ ಕೆಲಸ ಮಾಡದಿದ್ದರೂ, ಕೂತೇ ಇಷ್ಟೆಲ್ಲ ಮಾಡಿದರೂ ಒತ್ತಡದಿಂದಾಗಿ ಸುಸ್ತಾಗುತ್ತದೆ. ಹಾಗಾಗಿ, ಸಮಯ ಮಾಡಿಕೊಂಡು ಮೊಬೈಲ್ ಹಾಗೂ ಇತರ ಡಿಜಿಟಲ್ ಉಪಕರಣಗಳನ್ನು ದೂರವಿಟ್ಟು ಬೇರೆಡೆ ಗಮನ ಹರಿಸುವ ಮೂಲಕ ಒತ್ತಡವನ್ನು, ಉದ್ವೇಗವನ್ನು ಕಡಿಮೆ ಮಾಡಿಕೊಳ್ಳಬಹುದು.
ಮಿದುಳಿನ ಮೇಲೆ ಪರಿಣಾಮ
ಮೊಬೈಲ್ ಸೇರಿದಂತೆ ಡಿಜಿಟಲ್ ಉಪಕರಣಗಳಲ್ಲಿರುವ ನೀಲಿ ಬಣ್ಣದ ಲೈಟು ನಮ್ಮ ಮಿದುಳಿನ ಮೇಲೆ ಪರಿಣಾಮ ಬೀರುವುದರಿಂದ ಸದಾ ಜಾಗೃತಾವಸ್ಥೆಯಲ್ಲಿರುವಂತೆ ಮಾಡುತ್ತದೆ. ಇದರಂದ ನಿದ್ದೆ ಹಾಳಾಗುತ್ತದೆ, ಅಥವಾ ಬೇಗನೆ ನಿದ್ದೆ ಬಾರದು. ನಿದ್ರಾಹೀನತೆಯೇ ನಮ್ಮ ಎಲ್ಲ ಆರೋಗ್ಯವನ್ನೂ ತಿಂದುಹಾಕುತ್ತದೆ. ಹೀಗಾಗಿ. ಆದಷ್ಟೂ ಮಲಗುವ ಒಂದೆರಡು ಗಂಟೆಗಳಿಗೂ ಮೊದಲೇ ಮೊಬೈಲ್ ಉಪಕರಣಗಳನ್ನು ದೂರವಿಡುವ ಮೂಲಕ ನಿಮ್ಮ ನಿದ್ದೆ ಕೆಡದಂತೆ ನೋಡಿಕೊಳ್ಳಿ.
ಏಕಾಗ್ರತೆಗೆ ಧಕ್ಕೆ
ಮೊಬೈಲ್‌ನಲ್ಲಿ ಹೆಚ್ಚು ನೋಟಿಫಿಕೇಶನ್‌ನಿಂದ ಆಗಾಗ ಮಾಡುವ ಕೆಲಸದಲ್ಲಿ ಏಕಾಗ್ರತೆ ಸಾಧ್ಯವಾಗದೆ ಇರುವುದು ಕೂಡಾ ಮೊಬೈಲ್ ದಾಸರಾಗಿರುವುದರ ಲಕ್ಷಣ. ನೋಟಿಫಿಕೇಶನ್ ಆಫ್ ಮಾಡಿ ಇಡುವುದರಿಂದ ಆಗಾಗ ಮೊಬೈಲ್‌ನತ್ತ ಸೆಳೆತ ಕಡಿಮೆಯಾಗಬಹುದು.
ಆತ್ಮವಿಶ್ವಾಸದ ಕೊರತೆ
ಹೆಚ್ಚು ಡಿಜಿಟಲ್ ಮೀಡಿಯಾ ಸೆಳೆತದಿಂದ ನಿಮಗೇ ಅರಿವಿಲ್ಲದೆ, ಮಾನಸಿಕವಾಗಿ ಕುಗ್ಗುವುದು, ಏಕಾಂಗಿತನ, ಆತ್ಮವಿಶ್ವಾಸದ ಕೊರತೆಯಂತಹ ಸಮಸ್ಯೆ ಬರಬಹುದು. ಡಿಜಿಟಲ್ ಡಿಟಾಕ್ಸ್ ಮೂಲಕ ಇವೆಲ್ಲವುಗಳಿಂದ ಹೊರಬರುವ ಮೂಲಕ ಜೀವನದಲ್ಲಿ ಯಾವ ವಿಷಯಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕು ಎಂಬ ಸತ್ಯಗಳು ಅರಿವಾಗುತ್ತದೆ.
ಬೊಜ್ಜು, ಹೃದಯ ಸಂಬಂಧೀ ಸಮಸ್ಯೆ
ಡಿಜಿಟಲ್ ಮಾಧ್ಯಮದಲ್ಲಿ ಹೆಚ್ಚು ಹೊತ್ತು ಸಮಯ ಕಳೆಯುವುದರಿಂದ ನಿಶ್ಚಲ ಬದುಕಿನ ಶೈಲಿ ಹೆಚ್ಚಾಗುತ್ತದೆ. ಒಂದೇ ಜಾಗದಲ್ಲಿ ಕೂತಿರುವುದರಿಂದ ಬೊಜ್ಜು, ಹೃದಯ ಸಂಬಂಧೀ ಸಮಸ್ಯೆಗಳು ಹೆಚ್ಚಾಗುತ್ತದೆ. ಡಿಜಿಟಲ್ ಡಿಟಾಕ್ಸ್ ಮೂಲಕ ದೈಹಿಕ ಚುರುಕುತನ ಹೆಚ್ಚಿಸಿ ಏಕತಾನತೆಯನ್ನು ಕಡಿಮೆ ಮಾಡಬಹುದು.
ಸಂಬಂಧಗಳ ಮೇಲೂ ಪರಿಣಾಮ
ದಿನವಿಡೀ ಸ್ಕ್ರೀನ್ ಮುಂದೆಯೇ ಇರುವುದು ಕೂಡಾ ಆರೋಗ್ಯದ ಮೇಲಷ್ಟೇ ಅಲ್ಲ, ಸಂಬಂಧಗಳ ಮೇಲೆ ಕೂಡಾ ಕೆಟ್ಟ ಪರಿಣಾಮ ಬೀರುತ್ತದೆ. ಡಿಜಿಟಲ್ ಡಿಟಾಕ್ಸ್‌ನಿಂದ ಮತ್ತೆ ತಮ್ಮನ್ನು ಪ್ರೀತಿಸುವವರ ಜೊತೆಗೆ ಸಮಯ ಕಳೆಯುವುದರ ಮಹತ್ವ ಅರಿವಾಗುತ್ತದೆ.
ಹವ್ಯಾಸಗಳಿಗೆ ಧಕ್ಕೆ
ಹೆಚ್ಚು ಕಾಲ ಸ್ಕ್ರೀನ್‌ನಲ್ಲೇ ಇರುವುದರಿಂದ ನಮ್ಮ ಆಸಕ್ತಿ ಹಾಗೂ ಹವ್ಯಾಸಗಳಿಗೆ ಎಳ್ಳುನೀರು ಬಿಟ್ಟವರೇ ಹೆಚ್ಚು. ಡಿಜಿಟಲ್ ಡಿಟಾಕ್ಸ್‌ನಿಂದ ಆಸಕ್ತಿಗಳಿಗೆ ಮತ್ತೆ ನೀರೆರೆದು ನಮ್ಮ ಖುಷಿಯನ್ನು ಹುಡುಕಿಕೊಳ್ಳಬಹುದು.
ಮಾನಸಿಕ ಒತ್ತಡ
ಡಿಜಿಟಲ್ ಮಾಧ್ಯಮಗಳಿಗೆ ದಾಸರಾಗಿರುವ ಪರಿಣಾಮ ನಿತ್ಯವೂ ಮಾಹಿತಿಗಳ ಮಹಾಪೂರವೇ ಹರಿಯುತ್ತದೆ. ಇದರಿಂದ ಅಗತ್ಯಕ್ಕಿಂತಲೂ ಹೆಚ್ಚು ಮಾಹಿತಿಗಳನ್ನು ಪಡೆಯುವ ಮೂಲಕ ಮಾನಸಿಕವಾಗಿ ಹೆಚ್ಚು ಒತ್ತಡ, ಆತಂಕವೂ ಸೃಷ್ಠಿಯಾಗುತ್ತದೆ.
ಉತ್ತಮ ಬದುಕಿಗೆ ಕೀಲಿಕೈ
ಡಿಜಿಟಲ್ ಡಿಟಾಕ್ಸ್ ಮಾಡಿಕೊಳ್ಳುವುದರಿಂದ ಸಾಮಾಜಿಕವಾಗಿ, ಮಾನಸಿಕವಾಗಿ, ದೈಹಿಕವಾಗಿ ಹೆಚ್ಚು ಆರೋಗ್ಯ ನಮ್ಮದಾಗುತ್ತದೆ. ಡಿಜಿಟಲ್ ಉಪಕರಣಗಳನ್ನು ಹೇಗೆ, ಯಾವಾಗ, ಎಷ್ಟು ಸಮರ್ಪಕವಾಗಿ ಬಳಸಬಹುದು ಎಂಬ ಅರಿವು ಜಾಗೃತವಾಗುತ್ತದೆ. ಉತ್ತಮ ಬದುಕಿಗೆ ಕೀಲಿಕೈಯಾಗುತ್ತದೆ.
ಇದನ್ನೂ ಓದಿ: Health Tips for Winter: ಚಳಿಗಾಲದಲ್ಲಿ ನ್ಯುಮೋನಿಯಾ, ಶ್ವಾಸಕೋಶದ ಸಮಸ್ಯೆಗಳಿಂದ ದೂರ ಇರಲು ಹೀಗೆ ಮಾಡಿ…