ಮಹಿಳೆಯರಿಗಿಂತ ಪುರುಷರು ಸುಲಭವಾಗಿ ತೂಕ ಇಳಿಸಬಲ್ಲರೇ? ಹಾಗೆನ್ನುತ್ತವೆ ಕೆಲವು ಅಧ್ಯಯನಗಳು. ಅದಕ್ಕೆ ಕಾರಣಗಳೂ ಇಲ್ಲದಿಲ್ಲ. ಪುರುಷರಿಗಿಂತ ಮಹಿಳೆಯರ ಚಯಾಪಚಯ ಕ್ರಿಯೆ ಕಡಿಮೆ. ಸರಳವಾಗಿ ಹೇಳುವುದಾದರೆ, ಮಹಿಳೆಯರ ದೇಹದ ಚಟುವಟಿಕೆಗೆ ಖರ್ಚಾಗುವ ಕ್ಯಾಲರಿಗಳು ಪುರುಷರ ದೇಹಕ್ಕಿಂತ ಕಡಿಮೆ. ಹಾಗಾದರೆ ಖರ್ಚಾಗದೆ ಉಳಿದ ಕ್ಯಾಲರಿಗಳು ಏನಾಗುತ್ತವೆ? ಅವೆಲ್ಲವೂ ಕೊಬ್ಬಿಗೆ ರೂಪಾಂತರಗೊಂಡು ದೇಹದಲ್ಲಿ ಶೇಖರಣೆಗೊಳ್ಳುತ್ತವೆ. ಅದೂ ಅಲ್ಲದೆ, ದೇಹ ಪ್ರಕೃತಿಯ ಅನ್ವಯ ಮಹಿಳೆಯರ ದೇಹದ ಸಂಯೋಜನೆಯ ಹೆಚ್ಚಿನ ಭಾಗ ಕೊಬ್ಬಿನಿಂದ ಆಗಿದ್ದರೆ, ಪುರುಷರ ದೇಹದ ಸಂಯೋಜನೆ ಮಾಂಸಖಂಡಗಳಿಂದ ಆಗಿದೆ.
ಇದೇ ಕಾರಣಕ್ಕಾಗಿ ಕೊಬ್ಬಿನಿಂದ ಕೂಡಿದ ದೇಹದ ಬಿಎಂಐ ಹೆಚ್ಚಿದ್ದರೆ, ಮಾಂಸಖಂಡಗಳಿಂದ ಕೂಡಿದ ದೇಹದ ಬಿಎಂಐ ಸಹಜವಾಗಿ ಕಡಿಮೆ ಇರುತ್ತದೆ. ಇಂಥ ಕಾರಣಗಳಿಂದ ಪುರುಷರು ಮಹಿಳೆಯರಿಗಿಂತ ಸುಲಭವಾಗಿ ತೂಕ ಇಳಿಸಬಲ್ಲರು. ಇದಲ್ಲದೆ ಇನ್ನೂ ಕೆಲವು ಕಾರಣಗಳಿಂದಾಗಿ ತೂಕ ಇಳಿಸುವುದಕ್ಕೆ ಮಹಿಳೆಯರು ಪುರುಷರಿಗಿಂತ ಹೆಚ್ಚಿನ ಬೆವರು ಹರಿಸಬೇಕಾಗುತ್ತದೆ.
ಚಯಾಪಚಯದ ವ್ಯತ್ಯಾಸ
ಮಹಿಳೆಯರ ದೇಹಕ್ಕಿಂತ ಪುರುಷರ ದೇಹದ ಚಯಾಪಚಯ ಕ್ರಿಯೆಯ ವೇಗ ಶೇ. ೧೦ರಷ್ಟು ಹೆಚ್ಚು. ಜೊತೆಗೆ ಮಾಂಸಖಂಡಗಳನ್ನು ಬೆಳೆಸಿಕೊಳ್ಳಲು ಅಥವಾ ಇರುವುದನ್ನು ರೂಢಿಸಿಕೊಳ್ಳಲು ಹೆಚ್ಚಿನ ಶಕ್ತಿಗಳು ವ್ಯಯವಾಗುತ್ತವೆ. ಇದಿಷ್ಟು ಸಾಲದೆಂಬಂತೆ ಮಹಿಳೆಯರ ದೇಹದ ಸಂಯೋಜನೆಯೇ ಕೊಬ್ಬಿನಿಂದ ಕೂಡಿದ್ದು. ಅದನ್ನು ಇಳಿಸುವುದಕ್ಕೆ ನಿಜಕ್ಕೂ ಒದ್ದಾಡಬೇಕಾಗುತ್ತದೆ.
ಋತುಬಂಧ
ಈ ದಿನಗಳಲ್ಲಿ ಮಾಂಸಖಂಡ ಮತ್ತು ಮೂಳೆಗಳ ಸಾಂದ್ರತೆ ಇನ್ನಷ್ಟು ಕಡಿಮೆಯಾಗಿ, ತೂಕದ ಆ ಭಾಗವನ್ನೂ ಕೊಬ್ಬೇ ತುಂಬಿಕೊಳ್ಳುತ್ತದೆ. ಇದೇ ಕಾರಣದಿಂದಾಗಿ, ಹೊಟ್ಟೆ, ಸೊಂಟದ ಸುತ್ತಳತೆಗಳು ಹೆಚ್ಚಿ, ಕೊಬ್ಬು ಧಾರಾಳವಾಗಿ ಶೇಖರವಾಗುತ್ತದೆ. ಈ ದಿನಗಳಲ್ಲಿ ಕಟ್ಟುನಿಟ್ಟಾಗಿ ವ್ಯಾಯಾಮ ಮಾಡಿದರೂ ತೂಕ ಇಳಿಸುವುದು ಕಷ್ಟವಾಗುತ್ತದೆ. ಪುರುಷರ ಹಾರ್ಮೋನ್ ಟೆಸ್ಟೋಸ್ಟಿರಾನ್ ಅಲ್ಪಪ್ರಮಾಣದಲ್ಲಿ ಮಹಿಳೆಯರ ದೇಹದಲ್ಲೂ ಇರುತ್ತದೆ. ಋತುಬಂಧದ ನಂತರ ಸ್ತ್ರೀಯರ ಹಾರ್ಮೋನುಗಳ ಮಟ್ಟ ಕುಸಿಯುವುದರಿಂದ ಪುರುಷ ಚೋದಕಗಳೇ ಮೈಲುಗೈ ಸಾಧಿಸಿ, ಸಿಂಹಕಟಿಯರಾಗಿದ್ದ ಮಹಿಳೆಯರ ದೇಹ ಸೇಬು ಹಣ್ಣಿನ ಆಕಾರ ಪಡೆಯುತ್ತದೆ.
ತಪ್ಪಾದ ವ್ಯಾಯಾಮ
ಮಾಡುತ್ತಿರುವ ವ್ಯಾಯಾಮ ಆಯಾ ದೇಹಕ್ಕೆ ಸರಿಹೊಂದುವಂತಿರಬೇಕು. ಹಾಗಿಲ್ಲದಿದ್ದರೆ ಸರಿಯಾದ ಫಲಿತಾಂಶ ದೊರೆಯುವುದಿಲ್ಲ. ಸಪೂರವಾಗಿದ್ದು, ದೇಹದಲ್ಲಿ ಕೊಬ್ಬಿನಂಶ ಕಡಿಮೆ ಇರುವವರು ಮಾಡುವ ವ್ಯಾಯಾಮಗಳು ಕೊಬ್ಬು ಹೆಚ್ಚಿರುವ ದೇಹಗಳಿಗೆ ಸೂಕ್ತವಲ್ಲ. ಹಾಗಾಗಿ ನಂನಮ್ಮ ದೇಹದ ಅಗತ್ಯಕ್ಕೆ ತಕ್ಕಂತಹ ವ್ಯಾಯಾಮಗಳು ಮಾತ್ರವೇ ಪ್ರಯೋಜನ ನೀಡಬಲ್ಲವು
ಆಹಾರ
ಇದು ಇನ್ನೊಂದು ಮುಖ್ಯವಾದ ಅಂಶ. ಮಾನಸಿಕ ಒತ್ತಡದಲ್ಲಿದ್ದಾಗ ತಿನ್ನುವುದು ಹೆಚ್ಚು. ಈ ರೀತಿಯ ಎಮೋಶನಲ್ ಈಟಿಂಗ್‌ನ ಸಮಸ್ಯೆಯೆಂದರೆ, ಹೆಚ್ಚಾಗಿ ಸಿಹಿ ತಿಂಡಿಯೇ ಬೇಕೆನ್ನಿಸುವುದು. ಈ ಪ್ರಕ್ರಿಯೆ ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು. ಹಾಗಾಗಿ ಮಾನಸಿಕ ಒತ್ತಡ ಹೆಚ್ಚಿದಂತೆ ಅವರ ತೂಕವೂ ಏರುತ್ತದೆ.
ಇದನ್ನೂ ಓದಿ: Health guide: ಇದ್ದಕ್ಕಿದ್ದಂತೆ ಸ್ತನದ ಗಾತ್ರ ಹೆಚ್ಚಾಗಲು ಇವೂ ಕಾರಣವಿರಬಹುದು!