Site icon Vistara News

Weight Loss: ತೂಕ ಇಳಿಕೆಯ ಪ್ರಯಾಣದಲ್ಲಿ ಮಾಡಬಾರದ ಮೂರು ತಪ್ಪುಗಳು!

ಸ್ಪಂದನಾ ವಿಜಯ ರಾಘವೇಂದ್ರ (Spandana Vijay Raghavendra) ಅವರ ಮರಣದ ಬಳಿಕ, ದಿಡೀರ್‌ ದೇಹ ತೂಕ ಇಳಿಸುವುದರ ಬಗ್ಗೆ ಆತಂಕ ಉಂಟಾಗಿದೆ. ಜಿಮ್ ಹಾಗೂ ಆಹಾರ ಪಥ್ಯವನ್ನು ಸ್ಪಂದನ ಅನುಸರಿಸಿ 15 ಕೆ.ಜಿ ತೂಕ ಇಳಿಸಿಕೊಂಡಿದ್ದರು ಎಂಬ ವದಂತಿ ಇದೆ. ಆದರೆ ಇದು ನಿಜವಲ್ಲ ಎಂದೂ ಹೇಳಲಾಗ್ತಿದೆ. ಸ್ಪಂದನಾ ಅವರು ತೂಕ ಇಳಿಸಿಕೊಂಡಿದ್ದರೋ ಇಲ್ಲವೋ, ನಮ್ಮ ನಡುವೆ ಇರುವ ಸಾವಿರಾರು ಜನ ಮಾತ್ರ ತಮ್ಮ ಮೈ ತೂಕದ ಬಗ್ಗೆ ಆತಂಕಪಡುತ್ತಾ ಅದನ್ನು ದಿಡೀರ್‌ ಇಳಿಸಲು ಪ್ರಯತ್ನಿಸುತ್ತಾ ಇರುತ್ತಾರೆ.

ಇತ್ತೀಚಿನ ದಿನಗಳಲ್ಲಿ ನಮ್ಮ ಸುತ್ತಮುತ್ತಲ ಅನೇಕ ಮಂದಿ ತೂಕ ಹೆಚ್ಚಾಗಿದ್ದರ ಬಗ್ಗೆ ಗೊಣಗುತ್ತಾ ಇರುವುದನ್ನು ಕಾಣುತ್ತೇವೆ. ಬೇರೆಯವರ ಮಾತೇಕೆ? ನಾವೇ ತೂಕ ಹೆಚ್ಚಾಗುವ ಬಗ್ಗೆ ತಲೆ ಬಿಸಿ ಮಾಡಿಕೊಳ್ಳುತ್ತೇವೆ. ನಮ್ಮ ಹಾಗೆಯೇ ಹಲವರು, ಆದಷ್ಟೂ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಲು ಕಷ್ಟಪಡುವುದನ್ನು ಕಾಣುತ್ತೇವೆ. ಹೀಗೆ ಫಿಟ್‌ನೆಸ್‌ ಹಿಂದೆ ಬಿದ್ದ ಎಲ್ಲರೂ ಖಂಡಿತವಾಗಿಯೂ ನಮ್ಮ ನಿತ್ಯ ಸೇವಿಸುವ ಆಹಾರದ ಬಗ್ಗೆ ಗಮನ ಕೊಡಲೇಬೇಕಾಗುತ್ತದೆ. ಇದಕ್ಕೆ ಗಟ್ಟಿ ಮನಸ್ಸು, ಆತ್ಮಬಲ ಹಾಗೂ ಸಮಚಿತ್ತತೆ ಬಹಳ ಮುಖ್ಯವಾಗುತ್ತದೆ. ಯಾರು ಏನೇ ಹೇಳಲಿ, ನಿಯಮಿತವಾಗಿ ಒಂದು ಬಗೆಯ ಶಿಸ್ತುಬದ್ಧ ಜೀವನಕ್ಕೆ ಕಟ್ಟು ಬಿದ್ದು ಸಾಧಿಸುವ ಮನೋಭಾವ ಇದಕ್ಕೆ ಬೇಕೇ ಬೇಕು.

ಆದರೂ ತೂಕ ಇಳಿಸುವ ಬಗೆಗೆ ಎಷ್ಟೇ ಓದಿಕೊಂಡರೂ, ತಿಳಿದುಕೊಂಡು ಮಾಡುತ್ತಿದ್ದರೂ ಆಹಾರದ ವಿಷಯದಲ್ಲಿ, ವ್ಯಾಯಾಮದ ವಿಷಯದಲ್ಲಿ ಒಂದಲ್ಲ ಒಂದು ತಪ್ಪು ನಡೆಯುತ್ತಲೇ ಇರುತ್ತದೆ. ಬಹಳಷ್ಟು ತಪ್ಪು ತಿಳುವಳಿಕೆಗಳು ನಮ್ಮನ್ನು ಹಾದಿ ತಪ್ಪಿಸುತ್ತವೆ. ಹಾಗೆ ನೋಡಿದರೆ, ಇತ್ತೀಚೆಗಿನ ಸಂಶೋಧನೆಗಳ ಪ್ರಕಾರ, ಯಾರು ಡಯಟ್‌ ಮಾಡುತ್ತಾರೋ ಅವರು ಡಯಟ್‌ ಮಾಡದೆ ತಮ್ಮ ಎಂದಿನ ಶೈಲಿಯಲ್ಲಿ ಉಣ್ಣುವ ಮಂದಿಗಿಂತ ಹೆಚ್ಚು ತೂಕ ಹೆಚ್ಚಿಸಿಕೊಳ್ಳುತ್ತಾರೆ, ಹಾಗೂ ತೂಕದ ಏರುಪೇರು ಅನುಭವಿಸುತ್ತಾರಂತೆ. ಅದು ಯಾಕೆಂದರೆ, ಆಹಾರಕ್ರಮದ ಬದಲಾವಣೆಯನ್ನು ಅವೈಜ್ಞಾನಿಕವಾಗಿ ಮಾಡುವುದು. ಅದಕ್ಕಾಗಿಯೇ, ಸಾಧಾರಣವಾಗಿ ತೂಕ ಇಳಿಸುವ ಮಂದಿ ತಮ್ಮ ಫಿಟ್‌ನೆಸ್‌ ಪ್ರಯಾಣದಲ್ಲಿ ಮಾಡಬಾರದ ಮೂರು ತಪ್ಪುಗಳು (Weight Loss tips) ಇಲ್ಲಿವೆ.

೧. ಕಾರ್ಬೋಹೈಡ್ರೇಟ್‌ ಭಯ: ಬಹಳಷ್ಟು ಜನರು ಎಡವುವುದು ಇಲ್ಲಿಯೇ. ಕಾರ್ಬೋಹೈಡ್ರೇಟ್‌ ಪ್ರಮಾಣದ ಬಗ್ಗೆ. ನಮ್ಮ ಭಾರತೀಯ ಆಹಾರಕ್ರಮದ ಪ್ರಕಾರ ಚಪಾತಿ, ಪಲ್ಯಗಳು, ಅನ್ನ, ಉಪ್ಪಿಟ್ಟು, ಇಡ್ಲಿ, ದೋಸೆ ಇತ್ಯಾದಿಗಳನ್ನು ತಿನ್ನಲು ತೂಕ ಇಳಿಸುವ ಮಂದಿ ಭಯಪಡುತ್ತಾರೆ. ತೂಕ ಇಳಿಸುವವರು ಇಂತಹ ಆಹಾರವನ್ನೆಲ್ಲ ಬಿಟ್ಟುಬಿಡಬೇಕು, ಇದೆಲ್ಲ ಅನಗತ್ಯ ಕಾರ್ಬೋಹೈಡ್ರೇಟ್‌ ಸೇರಿಸುತ್ತದೆ ಎಂಬ ನಂಬಿಕೆಯದು. ಆದರೆ, ಈ ಬಗ್ಗೆ ನಡೆದಿರುವ ಸಂಶೋಧನೆಗಳ ಪ್ರಕಾರ, ಇಂತಹ ಮನಸ್ಥಿತಿಗಳೇ ನಮ್ಮನ್ನು ನಿತ್ಯದ ಕೆಲಸಗಳನ್ನು ಉಲ್ಲಾಸದಿಂದ ಮಾಡದಂತೆ ಮಾಡುತ್ತದೆ. ಮಾನಸಿಕವಾಗಿ ಸಂತೋಷದಿಂದಿರುವುದೂ ಕೂಡಾ ಆರೋಗ್ಯದ ಹಾಗೂ ತೂಕ ಇಳಿಕೆಯ ಮೂಲ. ಹೀಗಾಗಿ, ಮಾನಸಿಕ ಆರೋಗ್ಯಕ್ಕೂ ಹೆಚ್ಚು ಗಮನ ನೀಡಿಯೇ ಆಹಾರಾಭ್ಯಾಸವನ್ನು ತೂಕ ಇಳಿಕೆಗೆ ಅನುಗುಣವಾಗಿ ಕೊಂಚ ಮಟ್ಟಿನ ಬದಲಾವಣೆ ಮಾಡಿಕೊಳ್ಳಬಹುದು. ಪೂರ್ತಿ ಬದಲಾವಣೆಯಿಂದ ನೆಗೆಟಿವ್‌ ಪರಿಣಾಮಗಳೇ ಹೆಚ್ಚು.

ಇದನ್ನೂ ಓದಿ: Weight Loss: ತೂಕ ಇಳಿಸುತ್ತಿದ್ದೀರಾ? ಬಾಯಿ ಚಪಲ ನಿಯಂತ್ರಿಸುವುದು ಕಷ್ಟವಾಗುತ್ತಿದೆಯೇ?

೨. ಬಿಂಜ್‌ ಈಟಿಂಗ್‌ ಡಿಸಾರ್ಡರ್‌: ಬಹಳಷ್ಟು ಮಂದಿ ಒಂದು ಬಗೆಯ ತೂಕ ಇಳಿಸಿಕೊಳ್ಳುವ ಪದ್ಧತಿಗೆ ಮಾರು ಹೋಗಿರುತ್ತಾರೆ. ಅದೇನೆಂದರೆ, ಹೆಚ್ಚು ಹೊತ್ತು ಅಂದರೆ ಕೆಲ ಗಂಟೆಗಳ ಕಾಲ ಏನೂ ತಿನ್ನದೆ ಇರುವುದುದ ಹಾಗೂ, ಆ ಸಮಯ ಮುಗಿದ ಕೂಡಲೇ ಇದ್ದಕ್ಕಿದ್ದಂತೆ ಬೇಕಾಬಿಟ್ಟಿ ತಿನ್ನುವುದು. ಈ ಬಗೆಯ ಕ್ರಮದಿಂದಲೂ ಬಹಳಷ್ಟು ಮಾನಸಿಕ ಸಮಸ್ಯೆಗಳು ಇದಿರಾಗುತ್ತವೆ. ನಮ್ಮನ್ನು ನಾವು ಹೆಚ್ಚು ಹೊತ್ತು ಉಪವಾಸಕ್ಕೆ ಕೆಡವಿ ಅದರಿಂದ ನಮ್ಮ ಮೇಲೆಯೇ ಆಹಾರದ ವಿಚಾರದಲ್ಲಿ ಹೆಚ್ಚು ಒತ್ತಡ ಹಾಕುವುದಕ್ಕೆ ಇದು ಕಾರಣವಾಗುತ್ತದೆ.

೩. ಅವೈಜ್ಞಾನಿಕ ವ್ಯಾಯಾಮ ಕ್ರಮಗಳು: ಇಂದು ಬಹಳಷ್ಟು ಮಂದಿ ವ್ಯಾಯಾಮ ಮಾಡಬೇಕೆಂದುಕೊಂಡು, ನಮ್ಮ ದೇಹಕ್ಕೆ ಸರಿಹೊಂದದ, ಅಧವಾ ಶಿಸ್ತೇ ಇಲ್ಲದ ಪದ್ಧತಿಯ ಮೊರೆ ಹೋಗುತ್ತಾರೆ. ಪ್ರತಿಯೊಬ್ಬರ ದೇಹಕ್ರಮಕ್ಕೆ ಅನುಸಾರವಾಗಿ ವ್ಯಾಯಾಮವನ್ನು ಮಾಡಬೇಕು. ವ್ಯಾಯಾಮ ಎಂದುಕೊಂಡು ಎಲ್ಲ ಬಗೆಯನ್ನೂ ಪ್ರಯೋಗ ಮಾಡುವುದುದ ಒಳ್ಳೆಯದಲ್ಲ. ಇದರಿಂದ ದೇಹಾರೋಗ್ಯದಲ್ಲಿ ಬೆಳವಣಿಗೆ ಸಿಗುವುದಿಲ್ಲ. ಹಾಗಾಗಿ ವ್ಯಾಯಾಮ ಮಾಡುವಾಗಲೂ ಅದಕ್ಕೊಂದು ನಿರ್ಧಿಷ್ಠ ಶಿಸ್ತು, ಸಮಯಪಾಲನೆ, ಸಮಚಿತ್ತತೆ ಇರಬೇಕು.

ಇದನ್ನೂ ಓದಿ: Weight Loss: ನಿಮ್ಮದು ತೂಕ ಏರುತ್ತಿಲ್ಲವೆಂಬ ಸಮಸ್ಯೆಯೇ? ನಿಮಗಾಗಿ ಇಲ್ಲಿದೆ ಮ್ಯಾಜಿಕ್‌ ಡ್ರಿಂಕ್!

Exit mobile version