ತೂಕ ಇಳಿಸಬೇಕು (loosing weight) ಎಂಬುದು ಬಹುತೇಕ ಎಲ್ಲರಿಗೂ ಇರುವ ಅವರವರ ಆರೋಗ್ಯದ ಮೇಲಿನ ಕಾಳಜಿ. ತಪ್ಪೇನಿಲ್ಲ, ನಿಜ. ತೂಕ ಏರಿದಷ್ಟು ಸುಲಭವಾಗಿ ಇಳಿಯಲಾರದೆಂಬ ಸತ್ಯ ಎಲ್ಲರಿಗೂ ಗೊತ್ತಿದೆ. ಆದರೂ, ಅರ್ಜೆಂಟಾಗಿ ತೂಕ ಇಳಿಸುವ ಮೋಹಕ್ಕೆ ಬಿದ್ದು ಬಹಳ ಸಲ ನಮ್ಮಿಂದ ತಪ್ಪುಗಳಾಗಿಬಿಡುತ್ತವೆ. ಹಾಗಾಗಿ, ತೂಕ ಇಳಿಸುವ ಸಂದರ್ಭ (Weight loss guide) ನಾವು ಖಂಡಿತವಾಗಿಯೂ ಜಾಗರೂಕರಾಗಿರಬೇಕು. ಇಲ್ಲೊಂದು ಶಿಸ್ತುಬದ್ಧ ಆರೋಗ್ಯಕರ ಜೀವನಶೈಲಿ (healthy lifestyle) ಅಗತ್ಯವಿದೆಯಷ್ಟೇ ಹೊರತು, ತಿನ್ನುವುದನ್ನೇ ಬಿಟ್ಟು ಕೂರುವ ಅಗತ್ಯವಿಲ್ಲ. ಚೆನ್ನಾಗಿ ತಿಂದುಂಡುಕೊಂಡೂ ತೂಕ ಇಳಿಸಬಹುದು ಎಂಬುದನ್ನು ನೀವು ಒಪ್ಪಬೇಕು ಅಷ್ಟೇ. ನಿಯಮಿತವಾಗಿ ಶಿಸ್ತಿನಿಂದ ಒಂದಿಷ್ಟು ಯೋಗ, ವ್ಯಾಯಾಮದ ಜೊತೆಗೆ, ಸರಿಯಾದ ಆಹಾರಕ್ರಮ (healthy diet) ಪಾಲಿಸುತ್ತಾ ಬಂದಲ್ಲಿ ಖಂಡಿತವಾಗಿಯೂ ಆರೋಗ್ಯಕರ ರೀತಿಯಲ್ಲೇ ಸಣ್ಣಗಾಗುತ್ತೀರಿ. ಆದರೆ, ನಲ್ವತ್ತರ ನಂತರ ತೂಕ ಇಳಿಸಲು ಹೊರಟರೆ (weight loos tips) ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕಾಳಜಿ ಮಾಡಿ.
1. ಬೆಳಗ್ಗಿನ ಉಪಹಾರ ಮಿಸ್ ಮಾಡಬೇಡಿ. ಬೆಳಗ್ಗೆ ಆಹಾರ ತಿನ್ನುವುದು ಬಹಳ ಅಗತ್ಯ. ಇದು ನಿಮ್ಮ ಪಚನಕ್ರಿಯೆಯನ್ನು ಆರೋಗ್ಯಕರವಾಗಿ ಆರಂಭಿಸುವ ಒಂದು ಸರಿಯಾದ ದಾರಿ. ಬೆಳಗ್ಗಿನ ಉಪಹಾರ ತೆಗೆದುಕೊಳ್ಳದೆ, ನೇರವಾಗಿ ಮಧ್ಯಾಹ್ನದೂಟ ಮಾಡುವುದು ಇತ್ಯಾದಿ ಹತ್ತು ಹಲವು ಬಗೆಯ ಡಯಟ್ ಕ್ರಮಗಳನ್ನು ನೇರವಾಗಿ ಆರಂಭಿಸಬೇಡಿ. ನಿಮ್ಮ ಆಹಾರ ಕ್ರಮವನ್ನು ನೀವು ವರ್ಷಗಟ್ಟಲೆ ಸಮಯದಿಂದ ಪಾಲನೆ ಮಾಡಿಕೊಂಡು ಬಂದಿರುವುದರಿಂದ ಇದ್ದಕ್ಕಿದ್ದಂತೆ ಬದಲಾವಣೆ ಮಾಡಿಕೊಂಡರೆ ಅದು ಖಂಡಿತವಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
2. ತಡರಾತ್ರಿಯ ಊಟ ಖಂಡಿತಾ ಈ ವಯಸ್ಸಿಗೆ ಒಳ್ಳೆಯದಲ್ಲ. ಊಟ ಮಾಡಿದ ಮೇಲೆ ಕರಗಲು ಸಮಯ ಬೇಕು. ರಾತ್ರಿಯ ಊಟವನ್ನು ಯಾವಾಗಲೂ ಲಘುವಾಗಿ ಮಾಡಿ. ಊಟ ಮಾಡಿದ ಮೇಲೆ ಕನಿಷ್ಟ ಎರಡರಿಂದ ಮೂರು ಗಂಟೆಯ ಅವಧಿಯ ಗ್ಯಾಪ್ ಇರಲಿ. ಆಗ ಹೊಟ್ಟೆ ಲಘುವಾಗಿರುತ್ತದೆ. ಇಲ್ಲವಾದರೆ ಹೊಟ್ಟೆ ತುಂಬ ಊಟ ಮಾಡಿ ತಕ್ಷಣ ಮಲಗಿದರೆ, ರಾತ್ರಿಯಿಡೀ ನಿಮ್ಮ ಜೀರ್ಣಾಂಗವ್ಯೂಹಕ್ಕೆ ತಿಂದಿದ್ದನ್ನು ಕರಗಿಸುವ ಕೆಲಸವೇ ಆಗುತ್ತದೆ. ಅದೂ, ಸರಿಯಾಗಿ ಆಗದೆ, ಬಹಳಷ್ಟು ಕೊಬ್ಬಿನ ರೂಪದಲ್ಲಿ ದೇಹದಲ್ಲಿ ಸಂಗ್ರಹಣೆಯಾಗುತ್ತದೆ.
3. ನಿಮ್ಮ ಊಟದಲ್ಲಿ ನಿತ್ಯವೂ ಪ್ರೊಟೀನ್ ಇರಲಿ. ಪ್ರೊಟೀನ್ ದೇಹಕ್ಕೆ ಬಹಳ ಅವಶ್ಯಕ. ಆದರೆ, ಪ್ರೊಟೀನ್ ಕರಗಲು ದೇಹ ಹೆಚ್ಚು ಶ್ರಮ ಹಾಕಬೇಕು. ಹಾಗಾಗಿ ನಿಮ್ಮ ಸಾಮರ್ಥ್ಯಕ್ಕನುಗುಣವಾಗಿ ನಿತ್ಯವೂ ವ್ಯಾಯಾಮವೂ ಪ್ರೊಟೀನ್ ಜೊತೆಗೆ ಅಗತ್ಯ. ಆದಷ್ಟೂ ನೈಸರ್ಗಿಕ ಆಹಾರ ಮೂಲಗಳಿಂದಲೇ ಸಿಗುವ ಪ್ರೊಟೀನ್ ಆಯ್ಕೆ ಮಾಡಿಕೊಳ್ಳಿ.
4. ಸಂಸ್ಕರಿಸಿದ ಆಹಾರವನ್ನು, ರೆಡಿ ಟು ಈಟ್‌ನಂತಹುಗಳನ್ನು ದೂರವಿಡಿ. ನೈಸರ್ಗಿಕ ಆಹಾರಗಳನ್ನು ಬಳಸಿ ಅಡುಗೆ ಮಾಡಿ. ತಾಜಾ ಅಡುಗೆಯನ್ನು ನಿತ್ಯವೂ ಮಾಡಿ ಉಣ್ಣಿ. ಸಂಸ್ಕರಿಸಿದ ಆಹಾರದಲ್ಲಿ ಸಾಕಷ್ಟು ಮಟ್ಟದಲ್ಲಿ ಪ್ರಿಸರ್ವೇಟಿವ್‌ಗಳು, ಸಕ್ಕರೆ ಇತ್ಯಾದಿಗಳಿರುತ್ತವೆ. ಹಾಗಾಗಿ ೪೦ ದಾಟಿದ ಮಹಿಳೆಯರು ಆದಷ್ಟೂ ನೈಸರ್ಗಿಕ ಆಹಾರದ ಬಳಕೆ ಹೆಚ್ಚು ಮಾಡಿ.
5. ಒತ್ತಡವು ನಮ್ಮ ದೇಹದ ಮೇಲೆಯೂ ಪರಿಣಾಮ ಬೀರುತ್ತದೆ. ನೀವು ಒತ್ತಡದಲ್ಲಿರುವಾಗ ಖಂಡಿತವಾಗಿಯೂ ತೂಕ ಕಡಿಮೆಯಾಗದು, ಬದಲಾಗಿ ತೂಕ ಏರುತ್ತದೆ. ಹಾಗಾಗಿ ತೂಕ ಇಳಿಸಿ ಆರೋಗ್ಯವಾಗಿರಲು ಖಂಡಿತವಾಗಿಯೂ ಒತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಂಡು ಸಹಜವಾಗಿ ಖುಷಿಯಾಗಿರಿ.
ಇದನ್ನೂ ಓದಿ: Weight Loss Drink: ತೂಕ ಇಳಿಸಬೇಕೆ? ಈ 8 ಪಾನೀಯಗಳು ಸಹಾಯಮಾಡುತ್ತವೆ
6. ವರ್ಕೌಟ್ ನಿಮ್ಮ ಆರೋಗ್ಯದ ಮೇಲೆ ಖಂಡಿತಾ ಪರಿಣಾಮ ಬೀರುತ್ತದೆ. ನಿಮ್ಮ ಸಾಮರ್ಥ್ಯಕ್ಕೆ ಹೊಂದುವ ಯಾವುದೇ ಬಗೆಯ ವ್ಯಾಯಾಮವನ್ನು ಮಾಡಿ. ಆದರೆ, ನಿಯಮಿತವಾಗಿ ಶಿಸ್ತುಬದ್ಧವಾಗಿ ಮಾಡಿ.
7. ಆಲ್ಕೋಹಾಲ್ ತೂಕ ಇಳಿಕೆಯ ಶತ್ರು. ಹಾಗಾಗಿ ಆದಷ್ಟೂ ಆಲ್ಕೋಹಾಲ್ ಇತ್ಯಾದಿ ಅಭ್ಯಾಸಗಳಿದ್ದರೆ ಬಿಡಿ. ಆರೋಗ್ಯದ ಮೇಲೆ ಕಾಳಜಿ ಮಾಡಿ.
ತೂಕ ಇಳಿಕೆಯ ವಿಚಾರದಲ್ಲಿ ಅವಸರ ಒಳ್ಳೆಯದಲ್ಲ. ನಿಧಾನವಾಗಿ ಒಂದೊಂದೇ ಮೆಟ್ಟಿಲೇರಿ, ಮುಖ್ಯವಾಗಿ ಆರೋಗ್ಯ ಎಂಬುದು ಅತೀ ಅಗತ್ಯ. ಹಾಗಾಗಿ ನಿಮ್ಮ ಮೆಟ್ಟಿಲು ಆರೋಗ್ಯಕರ ಶೈಲಿಯೆಡೆಗೇ ಆಗಿರಲಿ!
ಇದನ್ನೂ ಓದಿ: Weight Loss: ತೂಕ ಇಳಿಸುವುದು ಪುರುಷರಿಗಿಂತ ಮಹಿಳೆಯರಿಗೆ ಕಷ್ಟವೇ?