Site icon Vistara News

Weight Loss: ನಿಮ್ಮದು ತೂಕ ಏರುತ್ತಿಲ್ಲವೆಂಬ ಸಮಸ್ಯೆಯೇ? ನಿಮಗಾಗಿ ಇಲ್ಲಿದೆ ಮ್ಯಾಜಿಕ್‌ ಡ್ರಿಂಕ್!

weight loss

ಬಹುತೇಕರಿಗೆ ತೂಕ ಇಳಿಸಿಕೊಳ್ಳುವ (Weight Loss) ಚಿಂತೆಯಾದರೆ ಇನ್ನೂ ಕೆಲವರಿಗೆ ತೂಕ ಹೆಚ್ಚಿಸಿಕೊಳ್ಳುವ ಚಿಂತೆ. ಲೋಕದ ತುಂಬ ತೂಕ ಇಳಿಸಿಕೊಳ್ಳುವವರದೇ ಮಾತಾದರೆ, ತೂಕ ಹೆಚ್ಚಿಸಿಕೊಳ್ಳಬಯಸುವವರ (Weight gain) ಮಾತಿಗೆ ಕಿವಿಯಾಗುವವರಾರು? ಯಾಕೆಂದರೆ, ತೂಕ ಇಳಿಸಿಕೊಳ್ಳುವ ತಲೆಬಿಸಿಯಲ್ಲಿರುವವರಿಗೆ ತೂಕ ಹೆಚ್ಚಿಸಿಕೊಳ್ಳಬಯಸುವವರ ಚಿಂತೆ ಸಮಸ್ಯೆಯೇ ಅಲ್ಲ. ಆದರೆ ಎಲ್ಲರ ಬಾಯಿಯಲ್ಲಿ ನರಪೇತಲ, ಕಡ್ಡಿ ಮನುಷ್ಯ ಎಂದೆಲ್ಲ ತಮಾಷೆಯಾಗಿ ಗೆಳೆಯರ ಬಳಿ ಅನಿಸಿಕೊಂಡು ಕೊಂಚವಾದರೂ ದಪ್ಪಗಾದೇನು ಎಂದು ಎಲ್ಲ ರೀತಿಯ ಪ್ರಯತ್ನ ಮಾಡುವ ಮಂದಿ ಅನೇಕ. ಬಹಳಷ್ಟು ಮಂದಿ, ತೆಳ್ಳಗಿದ್ದ ತಕ್ಷಣ ಸರಿಯಾಗಿ ತಿನ್ನು ಎಂದು ದಬಾಯಿಸಿ, ತಿನ್ನದಿರುವುದೇ ತೆಳ್ಳಗಿರಲು ಕಾರಣ ಎಂದು ಫರ್ಮಾನು ಹೊರಡಿಸಿ ಬಿಡುತ್ತಾರೆ. ಆದರೆ, ಇಲ್ಲಿ ತೆಳ್ಳಗಿರುವುದಕ್ಕೂ, ದಪ್ಪಗಿರುವುದಕ್ಕೂ ನೂರಾರು ಕಾರಣಗಳಿರುತ್ತವೆ ಎಂಬ ಸೂಕ್ಷ್ಮವನ್ನು ಅರ್ಥ ಮಾಡಿಕೊಳ್ಳಲು ಯಾರೂ ತಯಾರಿರುವುದಿಲ್ಲ. ಹಾಗಾಗಿ ಇಲ್ಲಿ ತೆಳ್ಳಗಿರುವವರ ಸಮಸ್ಯೆ ಹಾಗೂ ಕೊಂಚ ಸದೃಢಕಾಯ ಪಡೆಯಲು ಆಸಕ್ತಿಯಿರುವ ತೆಳ್ಳಗಿರುವ ಮಂದಿ ಉತ್ತಮ ಪೋಷಕಾಂಶಯುಕ್ತ ಸುಲಭ ಆಹಾರದ ಮೂಲಕ ಹೇಗೆ ಸಫಲರಾಗಬಹುದು ಎಂಬುದನ್ನು (health tips) ನೋಡೋಣ.

ತೂಕ ಇಳಿಸಿಕೊಳ್ಳುವುದು ಕಷ್ಟ ಎಂಬುದು ಸಾರ್ವತ್ರಿಕ ಅಭಿಪ್ರಾಯ. ಆದರೆ, ತೂಕ ಹೆಚ್ಚಿಸಿಕೊಳ್ಳುವುದೂ ಕಷ್ಟವೇ ಎಂಬುದನ್ನೂ ನಂಬಬೇಕು. ಬಹಳಷ್ಟು ಮಂದಿಗೆ ವಂಶವಾಹಿನಿಯಿಂದಲೇ ಕಡಿಮೆ ತೂಕ ಉಳ್ಳವರಾಗಿರುತ್ತಾರೆ. ಅಥವಾ ಇನ್ನೂ ಕೆಲವರ ಚಯಾಪಚಯ ಕ್ರಿಯೆ ಬಹಳ ವೇಗವಾಗಿರಬಹುದು. ಇಂಥವರಿಗೆ ತೂಕ ಹೆಚ್ಚಿಸಿಕೊಳ್ಳುವುದು ಬಹುತೇಕ ಸವಾಲಿನ ಕೆಲಸ. ಆದರೂ, ಹಲವರು ಮನಸ್ಸು ಮಾಡಿದರೆ, ಕ್ಯಾಲರಿ ಹೆಚ್ಚಿರುವ, ಪೋಷಕಾಂಶಯುಕ್ತ ಆಹಾರ ಸೇವಿಸುವ ಮೂಲಕ ತೂಕವನ್ನು ಹೆಚ್ಚಿಸಿಕೊಳ್ಳಬಹುದು. ಆದರೆ, ಹೆಚ್ಚು ಕ್ಯಾಲರಿಯುಕ್ತ ಜಂಕ್‌ ತಿನ್ನುವ ಮೂಲಕ ತೂಕ ಹೆಚ್ಚಿಸುವ ಅನಾರೋಗ್ಯ ಕ್ರಮವನ್ನು ಹಿಡಿಯಬಾರದು ಎಂಬುದನ್ನು ಮಾತ್ರ ನೆನಪಿನಲ್ಲಿಟ್ಟುಕೊಳ್ಳಬೇಕು.

ಇದನ್ನೂ ಓದಿ: Sleep Affect Weight Loss: ಕಣ್ತುಂಬಾ ನಿದ್ರಿಸುವುದರಿಂದ ತೂಕ ಇಳಿಸಬಹುದು. ಯಾಕೆಂದರೆ-

ನಿತ್ಯದ ಮೂರು ಹೊತ್ತಿನ ಊಟದ ಮಧ್ಯೆ ಪೋಷಕಾಂಶಯುಕ್ತ ಸ್ನ್ಯಾಕ್‌ಗಳನ್ನು, ಹಣ್ಣುಗಳನ್ನು ತೆಗೆದುಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಬಹುದು. ಅಥವಾ ಒಣಹಣ್ಣುಗಳು, ಬೀಜಗಳು ಇತ್ಯಾದಿ ಇನ್ನೂ ಕೆಲವು ಆಹಾರಗಳನ್ನು ನಿತ್ಯಾಹಾರದಲ್ಲಿ   ಸೇರಿಸಿಕೊಳ್ಳುವ ಮೂಲಕ ತೂಕ ಏರಿಕೆಗೆ ಪ್ರಯತ್ನಿಸಬಹುದು. ಹೀಗೆ ಪ್ರಯತ್ನಿಸುವ ಮಂದಿಗೆ ಸುಲಭವಾದ ಸರಳವಾದ ವಿಧಾನವಾದ ಬಾಳೆಹಣ್ಣಿಸನ ಸ್ಮೂದಿ ಮೂಲಕವೂ ತೂಕ ಏರಿಸಬಹುದು. ಅದನ್ನು ಮಾಡುವ ವಿಧಾನ ಇಲ್ಲಿದೆ.

ಬಾಳೆಹಣ್ಣು ಸ್ಮೂದಿ: ಬಾಳೆಹಣ್ಣಿನ ಸ್ಮೂದಿ ಒಂದು ಅತ್ಯುತ್ತಮ ಪೋಷಕಾಂಶಯುಕ್ತ ತೂಕ ಏರಿಸಿಕೊಳ್ಳುವ ಆಯ್ಕೆ. ಮಿಕ್ಸಿ ಜಾರಿನಲ್ಲಿ ಒಂದು ಕಪ್‌ ಓಟ್ಸ್‌, ಎರಡು ಬಾಳೆಹಣ್ಣು, ಅರ್ಧ ಕಪ್‌ ಹಾಲು, ಎರಡು ಚಮಚ ಜೇನುತುಪ್ಪ, ಎರಡು ಚಮಚ ಪೀನಟ್‌ ಬಟರ್‌ ಇಷ್ಟು ಪದಾರ್ಥಗಳನ್ನು ಸೇರಿಸಿ ರುಬ್ಬಿಕೊಂಡು ಈ ಮ್ಯಾಜಿಕ್‌ ಡ್ರಿಂಕ್‌ ತಯಾರಿಸಿಕೊಳ್ಳಬಹುದು. ಫುಲ್‌ ಕ್ರೀಂ ಹಾಲನ್ನು ಇದರಲ್ಲಿ ಬಳಸಿಕೊಳ್ಳುವುದು ಉತ್ತಮ. ಎರಡು ಚಮಚ ಪೀನಟ್‌ ಬಟರ್‌ನಲ್ಲಿ ೧೮೦ ಕ್ಯಾಲರಿಗಳಿದ್ದು ಇದು ದೇಹಕ್ಕೆ ಬೇಕಾದ ಉತ್ತಮ ಕೊಬ್ಬನ್ನೂ ನೀಡುತ್ತದೆ. ಊಟದ ಮಧ್ಯೆ ಹಸಿವೆಯಾದಾಗ ಅಥವಾ ಸಂಜೆಯ ಹೊತ್ತಿನ ಬ್ರೇಕ್‌ನಲ್ಲಿ ಇದನ್ನು ಮಾಡಿ ಕುಡಿಯುವ ಮೂಲಕ ಹೊಟ್ಟೆ ತುಂಬಿದ ಅನುಭವದ ಜೊತೆಗೆ ಉತ್ತಮ ಪೋಷಕಾಂಶಗಳನ್ನೂ ದೇಹಕ್ಕೆ ನೀಡಬಹುದು. ಸರಳ ಸುಲಭ ಆರೋಗ್ಯಕರ ವಿಧಾನದಿಂದ ತೂಕ ಏರಿಸಿಕೊಳ್ಳಬಹುದು.

ಇದನ್ನೂ ಓದಿ: Weight Loss: ತೂಕ ಇಳಿಸುತ್ತಿದ್ದೀರಾ? ಬಾಯಿ ಚಪಲ ನಿಯಂತ್ರಿಸುವುದು ಕಷ್ಟವಾಗುತ್ತಿದೆಯೇ?

Exit mobile version