Site icon Vistara News

Weight Loss Tips: ದೇಹ ತೂಕ ಇಳಿಸಲು ಸಹಕಾರಿ ಈ ಈರುಳ್ಳಿ ಹೂವು!

onion flower

onion flower

ಬೆಂಗಳೂರು: ಋತುಮಾನದ ಹಣ್ಣು-ತರಕಾರಿಗಳ ಸೇವನೆ ಯಾವತ್ತಿಗೂ ಲಾಭದಾಯಕ- ಕಿಸೆಗೆ ಮಾತ್ರವಲ್ಲ, ದೇಹಕ್ಕೂ ಹೌದು. ತೂಕ ಇಳಿಸುವ ಪ್ರಯತ್ನದಲ್ಲಿ ಇರುವವರಿಗೆ ತಟ್ಟೆ ತುಂಬಾ ಹಣ್ಣು-ತರಕಾರಿಗಳನ್ನೇ ಸೇವಿಸಲು ಸೂಚಿಸಲಾಗುತ್ತದೆ. ಹೀಗಿರುವಾಗ ಋತುಮಾನಕ್ಕೆ ತಕ್ಕಂತೆ ಆಹಾರವನ್ನು ರೂಢಿಸಿಕೊಂಡರೆ ನಾಲಿಗೆಯ ಸವಿಯನ್ನೂ ತಣಿಸಿಕೊಳ್ಳಬಹುದು. ಚಳಿಗಾಲದಲ್ಲಿ ದೊರೆಯುವ ತರಕಾರಿಗಳ ಪೈಕಿ ರುಚಿಕಟ್ಟಾಗಿದ್ದು ಈರುಳ್ಳಿ ಹೂವು ಅಥವಾ ಸ್ಪ್ರಿಂಗ್‌ ಆನಿಯನ್.‌ ಖಾದ್ಯಗಳ ಘಮ, ಸ್ವಾದ ಹೆಚ್ಚಿಸಿ, ಸತ್ವಗಳನ್ನೂ ಏರಿಸುವ ಈ ಹಸಿರು ದಂಟಿನಂಥ ಘಾಟು ತರಕಾರಿ, ಹಲವಾರು ವ್ಯಂಜನಗಳಿಗೆ ಒಗ್ಗಿಕೊಳ್ಳುತ್ತದೆ. ತೂಕ ಇಳಿಸುವ ಉತ್ಸಾಹದಲ್ಲಿ ಇರುವವರಿಗೆ ಇದು ಸೂಕ್ತವಾದ ತರಕಾರಿ. ಹೇಗೆ ಎಂಬುದನ್ನು ಗಮನಿಸೋಣ (Weight Loss Tips).

ಕ್ಯಾಲರಿ ಕಡಿಮೆ

ಇದರಲ್ಲಿ ಅನಗತ್ಯ ಕ್ಯಾಲರಿ ಮತ್ತು ಕೊಬ್ಬು ಇಲ್ಲವೇಇಲ್ಲ ಎನ್ನುವಷ್ಟು ಕಡಿಮೆ. ಸುಮಾರು 100 ಗ್ರಾಂನಷ್ಟು ಕತ್ತರಿಸಿದ ಈರುಳ್ಳಿ ಹೂವಿನಲ್ಲಿ ಇರುವುದು 31 ಕ್ಯಾಲರಿಗಳು ಮಾತ್ರ. ಅದರಲ್ಲೂ ೦.1ರಷ್ಟು ಕ್ಷೀಣವಾದ ಕೊಬ್ಬಿನಂಶ. ಹಾಗಾಗಿ ಹಸಿರು ತರಕಾರಿಗಳನ್ನು ಉಪಯೋಗಿಸುವ ಎಲ್ಲಾ ಅಡುಗೆಗಳಲ್ಲಿ ಈರುಳ್ಳಿ ಹೂವನ್ನು ಧಾರಾಳವಾಗಿ ಬಳಸಬಹುದು.

ನಾರು ಭರಪೂರ

ಒಂದು ಕಪ್‌ ಕತ್ತರಿಸಿದ ಈರುಳ್ಳಿ ಹೂವಿನಲ್ಲಿ 1.8 ಗ್ರಾಂನಷ್ಟು ನಾರು ದೊರೆಯುತ್ತದೆ. ಇದೀಗ ದೇಹದ ಚಯಾಪಚಯವನ್ನು ಹೆಚ್ಚಿಸುವುದಕ್ಕೆ ಸಹಕಾರಿ. ದೀರ್ಘ ಕಾಲದವರೆಗೆ ಹಸಿವು ಮುಂದೂಡಲು ನೆರವಾಗುತ್ತದೆ. ಕಳ್ಳ ಹಸಿವನ್ನು ದೂರ ಮಾಡಿ, ಸಿಕ್ಕಿದ್ದನ್ನೆಲ್ಲಾ ತಿನ್ನದಂತೆ ಬಾಯಿ ಕಟ್ಟಲು ಸಹಾಯ ಮಾಡುತ್ತದೆ. ಹಾಗಾಗಿ ತೂಕ ಇಳಿಸುವವರಿಗೆ ಇದು ಉಪಕಾರಿ.

ಚಯಾಪಚಯ ಹೆಚ್ಚಳ

ತೂಕ ಇಳಿಸುವವರಿಗೆ ತೊಂದರೆ ಕೊಡುವ ಹಲವು ವಿಷಯಗಳಲ್ಲಿ ದೇಹದ ಚಯಾಪಚಯ ಕುಸಿಯುವುದೂ ಒಂದು ಹೌದು. ದೇಹ ತನ್ನಲ್ಲಿ ಖರ್ಚಾಗದ ಶಕ್ತಿಯನ್ನು ಜಮೆ ಮಾಡಿಕೊಳ್ಳುವುದು ಕೊಬ್ಬಿನ ರೂಪದಲ್ಲಿ. ಆದರೆ ದೇಹಕ್ಕೆ ಬೇಕಾಗುವ ಶಕ್ತಿಗಿಂತ ಕಡಿಮೆಯೇ ಶಕ್ತಿ ಒದಗಿಸಿದರೆ ಮತ್ತು ದೊರೆಯುವ ಶಕ್ತಿಗಿಂತ ಹೆಚ್ಚಿನ ಕ್ಯಾಲರಿಗಳು ಖರ್ಚಾದರೆ ತೂಕ ಇಳಿಸುವುದು ಕಷ್ಟವಾಗುವುದಿಲ್ಲ. ಈರುಳ್ಳಿ ಹೂವಿನಲ್ಲಿನ ಅಲ್ಲಿಸಿನ್‌ ಅಂಶಕ್ಕೆ ದೇಹದ ಚಯಾಪಚಯವನ್ನು ಹೆಚ್ಚಿಸುವ ಸಾಮರ್ಥ್ಯವಿದೆ.

ಜೀರ್ಣಾಂಗಗಳ ಕ್ಷಮತೆ ಹೆಚ್ಚಳ

ಜಠರ ಮತ್ತು ಕರುಳುಗಳಲ್ಲಿ ಇರಬೇಕಾದ ಒಳ್ಳೆಯ ಬ್ಯಾಕ್ಟೀರಿಯಗಳ ಸಂಖ್ಯೆ ಹೆಚ್ಚಿಸುವುದಕ್ಕೆ ಪ್ರೊಬಯಾಟಿಕ್‌ ಎಷ್ಟು ಮುಖ್ಯವೊ ಪ್ರಿಬಯಾಟಿಕ್‌ ಆಹಾರಗಳೂ ಅಷ್ಟೇ ಮುಖ್ಯ. ಈರುಳ್ಳಿ ಹೂವು ಒಳ್ಳೆಯ ಪ್ರಿಬಯಾಟಿಕ್‌ ಸತ್ವಗಳನ್ನು ಹೊಂದಿದ್ದು, ಜೀರ್ಣಾಂಗಗಳ ಆರೋಗ್ಯ ವೃದ್ಧಿಗೆ ಅನುಕೂಲ ಒದಗಿಸುತ್ತದೆ. ಇದರಿಂದ ಸೇವಿಸಿದ ಆಹಾರಗಳನ್ನು ಹೀರಿಕೊಳ್ಳಲು ದೇಹಕ್ಕೆ ಸುಲಭವಾಗುತ್ತದೆ. ಇದರಿಂದ ಮತ್ತೆ ಮತ್ತೆ ತಿನ್ನುವ ಅಗತ್ಯವಿಲ್ಲದೆ, ತಿಂದಷ್ಟು ತೃಪ್ತಿ ನೀಡುತ್ತದೆ.

ಡೈಯುರೇಟಿಕ್‌

ದೇಹದಲ್ಲಿರುವ ಹೆಚ್ಚುವರಿ ನೀರನ್ನು ಹೊರಹಾಕುವ ಸಾಮರ್ಥ್ಯ ಈರುಳ್ಳಿ ಹೂವಿಗಿದೆ. ದೇಹ ಉಬ್ಬರಿಸಿದಂತೆ ಅನಿಸುವುದು, ಹೊಟ್ಟೆ ಉಬ್ಬರದ ಭಾವ- ಇಂಥವುಗಳು ಕಡಿಮೆಯಾಗಿ ದೇಹಕ್ಕಿರುವ ಅನಗತ್ಯ ತೂಕ ಇಳಿದಂತಾಗುತ್ತದೆ.

ಹೇಗೆಲ್ಲಾ ಉಪಯೋಗಿಸಬಹುದು?

ತೂಕ ಇಳಿಸುವುದಕ್ಕೆ ಈರುಳ್ಳಿ ಹೂವುಗಳು ಅನುಕೂಲಕರ ಎಂಬುದೇನೋ ಸರಿ. ಆದರೆ ಇವುಗಳನ್ನು ಹೆಚ್ಚೆಚ್ಚು ಉಪಯೋಗಿಸಿದರೆ ಮಾತ್ರವೇ ಇದರ ಲಾಭಗಳನ್ನು ಪಡೆಯಲು ಸಾಧ್ಯ. ಹಾಗಾದರೆ ಏನೆಲ್ಲಾ ವ್ಯಂಜನಗಳಿಗೆ ಇದನ್ನು ಉಪಯೋಗಿಸಬಹುದು?

ಇದನ್ನೂ ಓದಿ: Health Tips: ಮೋದಿ ಆರೋಗ್ಯದ ಹಿಂದಿದೆ ‘ನುಗ್ಗೆಕಾಯಿ ಮಹಿಮೆ’; ತೂಕ ಇಳಿಕೆಗೆ ನುಗ್ಗೆ ಹೇಗೆ ನೆರವು?

ಈರುಳ್ಳಿಯಷ್ಟು ಅಲ್ಲದಿದ್ದರೂ, ಕೊಂಚ ಘಾಟು ಘಮವಿರುವ ಹೂವಿದು. ಹಾಗಾಗಿ ಹಸಿಯಾಗಿ ತಿನ್ನಬಹುದಾದ ಕೋಸಂಬರಿ, ಸಲಾಡ್‌ಗಳಿಗೆ ಹೊಂದುತ್ತದೆ. ಸಾರು, ಸೂಪ್‌ಗಳಿಗೆ ಬಳಸಿದರೆ ರುಚಿಗೆ ಮೋಸವಿಲ್ಲ. ಯಾವುದೇ ತರಕಾರಿಗಳ ಪಲ್ಯಗಳ ಜತೆ ಇದನ್ನು ಉಪಯೋಗಿಸಬಹುದು. ಹುಳಿ, ಸಾಂಬಾರ್‌, ಕೂಟುಗಳಿಗೂ ಇದು ಜೋಡಿಯಾಗಬಲ್ಲದು. ದೋಸೆ, ಉತ್ತಪ್ಪಗಳ ಮೇಲೆ ಉದುರಿಸಿದರೆ ಸವಿ ಹೆಚ್ಚಿಸಬಹುದು. ಉತ್ತರ ಭಾರತೀಯ ಗ್ರೇವಿಗಳಿಗೆ ಇದು ಸಂಗಾತಿ. ಬ್ಯಾಚುಲರ್‌ಗಳ ನೆಚ್ಚಿನ ಆಮ್ಲೆಟ್‌ಗೂ ಇದು ಜೋಡಿಯೇ. ಇಷ್ಟಾದ ಮೇಲೆ ಇನ್ನೇನು? ತೂಕ ಇಳಿಸುವ ಪ್ರಯತ್ನಕ್ಕೆ ಜಯವಾಗಲಿ!

Exit mobile version