ಅತ್ಯಂತ ವೇಗವಾಗಿ ತೂಕ ಇಳಿಸುವ ಆಸೆಯಿಂದ ಹಲವರು ಏನಾದರೊಂದು ತಪ್ಪುಗಳನ್ನು, ಅಧ್ವಾನಗಳನ್ನು ಮಾಡಿ, ಆರೋಗ್ಯವನ್ನು ತೊಂದರೆಯಲ್ಲಿ ಸಿಲುಕಿಸುತ್ತಾರೆ. ಮಾರುಕಟ್ಟೆಯ ಜಾಹಿರಾತು ತಂತ್ರಗಳಿಗೆ ಮರುಳಾಗಿ ಏನಾದರೊಂದು ಹೊಸ ಬಗೆಯ ಆಹಾರ ಪದ್ಧತಿ, ಹೊಸ ಹಾಗೂ ಸಂಪೂರ್ಣ ಭಿನ್ನವಾದ ಒಗ್ಗಲಾರದ ಆಹಾರ ಹಾಗೂ, ಊಟ ಬಿಟ್ಟು ತಮ್ಮನ್ನು ತಾವೇ ಸಂಕಷ್ಟಕ್ಕೆ ತಳ್ಳುತ್ತಾರೆ. ಆದರೆ, ಡಯಟ್ ಎಂಬುದನ್ನು ಹುರುಳಿಲ್ಲದಂತೆ, ನಮ್ಮ ದೇಹಕ್ಕೆ ಸರಿಹೊಂದದಂತೆ ಮಾಡಿದರೆ, ಒಳ್ಳೆಯದಾಗುವುದಕ್ಕಿಂತ ತೊಂದರೆಯಲ್ಲಿ ಸಿಲುಕುವುದೇ ಹೆಚ್ಚು. ಹಾಗಾದರೆ, ವೇಗವಾಗಿ ತೂಕ ಇಳಿಸುವುದು ಹೇಗೆ ಎಂಬ ಪ್ರಶ್ನೆ ಬಹುತೇಕರಲ್ಲಿ ಇರುವುದು ಸಾಮಾನ್ಯ. ಬನ್ನಿ, ವೇಗವಾಗಿ ತೂಕ ಹೇಗೆ ಇಳಿಸಿಕೊಳ್ಳಬಹುದು (weight loss tips) ಎಂಬುದನ್ನು ನೋಡೋಣ.
1. ಕ್ಯಾಲರಿ ಪ್ರಮಾಣವನ್ನು ಇದ್ದಕ್ಕಿದ್ದಂತೆ ಕಡಿಮೆ ಮಾಡಬೇಡಿ: ಇದ್ದಕ್ಕಿದ್ದಂತೆ ಕಡಿಮೆ ಕ್ಯಾಲರಿ ಆಹಾರ ಸೇವಿಸುವುದು ಎಂದರೆ, ನಿಮ್ಮನ್ನು ನೀವು ಈವರೆಗೆ ನಿಮ್ಮ ದೇಹಕ್ಕೆ ಒದಗಿಸುತ್ತಿದ್ದ ಪೋಷಕಾಂಶಗಳೆಲ್ಲವುಗಳ ಪೂರೈಕೆ ಕಡಿಮೆ ಮಾಡುವುದೇ ಆಗಿದೆ. ವಿಟಮಿನ್, ಕೊಬ್ಬು, ಪಪ್ರೊಟೀನ್ ಇವೆಲ್ಲವುಗಳನ್ನು ಇದ್ದಕ್ಕಿದ್ದಂತೆ ಕಡಿಮೆ ಮಾಡಿದಾಗ ದೇಹ ಬಳಲುತ್ತದೆ. ಹಾಗಾಗಿ, ದೇಹಕ್ಕೆ ಕಷ್ಟವಾಗದಂತೆ ನಿಧಾನವಾಗಿ ಕ್ಯಾಲರಿ ಪ್ರಮಾಣ ಕಡಿಮೆಗೊಳಿಸುತ್ತಾ ಬನ್ನಿ.
2. ಪ್ರೊಟೀನ್ ಸಾಕಷ್ಟು ಸೇವಿಸಿ: ಆರೋಗ್ಯಕರ ಆಹಾರದಲ್ಲಿ ಪ್ರೊಟೀನ್ ಬೇಕೇ ಬೇಕು. ಕೊಬ್ಬು, ಕಾರ್ಬೋಹೈಡ್ರೇಟ್ ಸೇವನೆ ಕಡಿಮೆ ಮಾಡಿದಾಗ ದೇಃಕ್ಕೆ ಶಕ್ತಿ ನೀಡಲು ಹಾಗೂ ಹೊಟ್ಟೆ ತುಂಬಿದಂತಹ ಅನುಭವ ನೀಡಲು ಪ್ರೊಟೀನ್‌ಗಿಂತ ಒಳ್ಳೆಯ ಆಯ್ಕೆ ಇನ್ನೊಂದಿಲ್ಲ. ಹಾಗಾಗಿ, ಸಾಕಷ್ಟು ಪ್ರೊಟೀನ್ ಸೇವನೆ ಮಾಡಿ.
3. ರಿಫೈನ್ಡ್ ಕಾರ್ಬೋಹೈಡ್ರೇಟ್ ಹಾಗೂ ಸಕ್ಕರೆಯನ್ನು ಕಡಿತಗೊಳಿಸಿ: ರಿಫೈನ್ಡ್ ಕಾರ್ಬೋಹೈಡ್ರೇಟ್ ಸೇವನೆಯಿಂದ ದೇಹದಲ್ಲಿ ಸಕ್ಕರೆಯ ಮಟ್ಟ ಏರುಪೇರಾಗುತ್ತದೆ. ಇದರಿಂದ ಹೊಟ್ಟೆಯುಬ್ಬರ, ಎದೆಯುರಿಯೂ ಉಂಟಾಗಬಹುದು.
4. ಸಂಸ್ಕರಿಸಿದ ಆಹಾರಕ್ಕೆ ಗುಡ್‌ಬೈ ಹೇಳಿ: ಪ್ರಿಸರ್ವೇಟಿವ್‌ಗಳು, ಅಡಿಟಿವ್‌ಗಳು, ಎಂಎಸ್‌ಜಿ, ಕೃತಕ ಕಲರ್‌ಗಳು ಇತ್ಯಾದಿಗಳಿರುವ ಆಹಾರವನ್ನು ಸೇವಿಸಬೇಡಿ.
5. ಕರಿದ ಆಹಾರಗಳನ್ನು ಮರೆತುಬಿಡಿ: ಎಣ್ಣೆಯಲ್ಲಿ ಕರಿದ ಆಹಾರದ ಮೇಲೆ ಯಾವ ಆಸೆಯನ್ನೂ ಇಟ್ಟುಕೊಳ್ಳಬೇಡಿ. ಇವುಗಳಲ್ಲಿ ಟ್ರಾನ್ಸ್ ಫ್ಯಾಟ್ ಇರುವುದರಿಂದ ಅವುಗಳಿಂದ ದೂರವಿರುವುದು ಒಂದೇ ದಾರಿ. ಇದಕ್ಕೆ ಪರ್ಯಾಯ ಮಾರ್ಗಗಳಿಲ್ಲ.
ಇದನ್ನೂ ಓದಿ: Weight Loss: ತೂಕ ಇಳಿಕೆಯ ಪ್ರಯಾಣದಲ್ಲಿ ಮಾಡಬಾರದ ಮೂರು ತಪ್ಪುಗಳು!
6. ವ್ಯಾಯಾಮ ನಿಮ್ಮ ನಿತ್ಯದ ಭಾಗವಾಗಿರಲಿ: ವ್ಯಾಯಾಮವಿಲ್ಲದೆ ಬೇಗನೆ ತೂಕ ಇಳಿಸಿಕೊಳ್ಳುವೆ ಎಂಬ ನಂಬಿಕೆಯಲ್ಲಿ ಕೇವಲ ಆಹಾರವನ್ನು ಬಿಟ್ಟು ಕೂರಬೇಡಿ. ಖಂಡಿತ ಈ ಬಗೆಯ ಡಯಟ್ ದೇಹಕ್ಕೆ ಒಳ್ಳೆಯದಲ್ಲ. ನಿಮ್ಮ ದೇಹಕ್ಕೆ ಒಗ್ಗುವ ಹಾಗೂ ನಿಮಗೆ ಇಷ್ಟವಾಗುವ ಯಾವುದಾದರೊಂದು ಬಗೆಯ ವ್ಯಾಯಾಮಕ್ಕಾಗಿ ದಿನದ ಒಂದು ಗಂಟೆಯನ್ನಾದರೂ ಮೀಸಲಿಡಿ. ಯೋಗ, ಜಿಮ್, ಸೈಕ್ಲಿಂಗ್, ಅಥವಾ ನಡಿಗೆ ಇದಾವುದಾದರೂ ಆದೀತು. ಕಡೇ ಪಕ್ಷ ವಾರದಲ್ಲಿ ನಾಲ್ಕು ಬಾರಿಯಾದರೂ ಮಾಡಿ.
7. ನಿದ್ದೆ ಸರಿಯಾಗಿ ಮಾಡಿ: ನಿದ್ದೆ ಬಿಡುವುದರಿಂದ ದೇಹದ ಮೇಲೆ ವ್ಯತಿರಿಕ್ತ ಪರಿಣಾಮಗಳಾಗುತ್ತದೆ. ನಿದ್ದೆಗೆಟ್ಟರೆ ಸಹಜವಾಗಿ ದೇಹ ಹೆಚ್ಚು ಕಾರ್ಬೋಹೈಡ್ರೇಟ್ ಬೇಡುತ್ತದೆ. ಹಸಿವು ಹಾಗೂ ಹಾರ್ಮೋನಿನ ಮೇಲೆ ನೇರ ಪರಿಣಾಮ ಬೀರುವ ಈ ನಿದ್ದೆಯನ್ನು ನಾವು ಖಂಡಿತವಾಗಿ ಏರುಪೇರು ಮಾಡಬಾರದು. ಸರಿಯಾದ ರಾತ್ರಿಯ ನಿದ್ದೆ ಆರೋಗ್ಯಕರ ದೇಹಕ್ಕೆ ಅತ್ಯಂತ ಅವಶ್ಯಕ.
8. ನೀರು ಸರಿಯಾಗಿ ಕುಡಿಯಿರಿ: ದೇಹಕ್ಕೆ ನೀರು ಅತ್ಯಂತ ಅವಶ್ಯಕ. ಚಳಿಗಾಲದಲ್ಲಿ ದೇಹ ನೀರನ್ನು ಹೆಚ್ಚು ಬೇಡುವುದಿಲ್ಲ. ಆದರೆ, ದೇಹ ಸರಿಯಾಗಿ ಕಾರ್ಯ ನಿರ್ವಹಿಸಲು ದೇಃಕ್ಕೆ ನೀರು ಬೇಕೇಬೇಕು. ತೂಕ ಇಳಿಸಲು ನೀರು ಅತ್ಯಗತ್ಯ.
ಇದನ್ನೂ ಓದಿ: Health Tips: ಮೊಸರಿನ ಜೊತೆಗೆ ಯಾವೆಲ್ಲ ಆಹಾರಗಳನ್ನು ತಿನ್ನಬಾರದಂತೆ ಗೊತ್ತೇ?