ತಾಳಿದವನು ಬಾಳಿಯಾನು ಎನ್ನುವ ಮಾತಿದೆ. ಅಂದರೆ ಗಡಿಬಿಡಿ ಮಾಡುತ್ತಿದ್ದರೆ ಕೆಲಸ ಕೆಡುತ್ತದೆ. ಹಾಗಾಗಿ ಎಲ್ಲಾ ಕೆಲಸಕ್ಕೂ ಅದರದ್ದೇ ಸಮಯ ಅಗತ್ಯವಿದೆ ಎಂಬುದನ್ನು ಹೇಳುವ ಪರಿಯಿದು. ಎಷ್ಟೋ ಬಾರಿ ಜಾಹೀರಾತುಗಳು ಹೇಳುವುದಿದೆ- ಒಂದು ತಿಂಗಳಲ್ಲಿ ಫ್ರೆಂಚ್ ಕಲಿಯುವ, ಒಂದು ವಾರದಲ್ಲಿ ಬೆಳ್ಳಗಾಗುವ, ಒಂದು ವಾರದಲ್ಲಿ ೫ ಕೆ.ಜಿ. ತೂಕ ಕಡಿಮೆ ಮಾಡುವಂಥ ಏನೇನೋ ಆಮಿಷಗಳನ್ನು ಒಡ್ಡಿವುದಿದೆ. ಇಂಥ ಯಾವುದಾದರೂ ಕೆಲಸ ಸರಿಯಾಗುವುದಕ್ಕೆ ಸಾಧ್ಯವೇ ಎಂಬುದನ್ನು ನಾವು ಮೊದಲು ಯೋಚಿಸಬೇಕು. ಒಂದೇ ವಾರದಲ್ಲಿ ನಾಲ್ಕಾರು ಕೆ.ಜಿ. ತೂಕ ಇಳಿಸುವುದೆಂದರೆ… ಮಕ್ಕಳಾಟವೇ? ಅಥವಾ ನಿಜಕ್ಕೂ ಅದನ್ನು ಮಾಡಬಹುದೇ?
ತೂಕ ಏರುವುದಕ್ಕೆ ಬೇಕಾಗುವಷ್ಟು ಸಮಯದಲ್ಲಿ, ಏರಿದ ತೂಕವನ್ನು ಇಳಿಸಲು ಸಾಧ್ಯವೇ ಇಲ್ಲ. ಕೆಲವರಿಗೆ ಹಲವಾರು ವಾರಗಳು ಬೇಕಾದಬಹುದು; ಹಲವರಿಗೆ ಕೆಲವಾರು ತಿಂಗಳುಗಳು ಅಥವಾ ವರ್ಷಗಳೇ ಬೇಕಾಗಬಹುದು- ಕ್ರಮಬದ್ಧವಾಗಿ ತೂಕ ಇಳಿಸಲು. ಹಾಗಿದ್ದೂ ಕಡಿಮೆ ಸಮಯದಲ್ಲಿ ಕೆಜಿಗಟ್ಟಲೆ ತೂಕ ಇಳಿಸುವ ಬಗ್ಗೆ ಮಾತು-ಚರ್ಚೆ ನಡೆಯುತ್ತಲೇ ಇದೆಯಲ್ಲ. ಹಾಗೆಲ್ಲಾ ತೂಕವನ್ನು ಸಿಕ್ಕಾಪಟ್ಟೆ ಏರಿಳಿತ ಮಾಡುವುದು ಸರಿಯೇ? ಇದರಿಂದ ಅಡ್ಡ ಪರಿಣಾಮಗಳು ಏನೂ ಇಲ್ಲವೇ? ಖಂಡಿತ ದುಷ್ಪರಿಣಾಮಗಳಿವೆ. ಸಾಮಾನ್ಯವಾಗಿ ಕ್ರಮಬದ್ಧವಾಗಿ ತೂಕ ಇಳಿಸುವ ಕ್ರಿಯೆಯಲ್ಲೇ ಗಂಭೀರವಾಗಿ ತೊಡಗಿಸಿಕೊಂಡವರು, ವಾರವೊಂದಕ್ಕೆ ಅರ್ಧ ಕೆ.ಜಿ- ಹೆಚ್ಚೆಂದರೆ ಒಂದು ಕೆ.ಜಿ. ತೂಕ ಇಳಿಸುವುದು ಸಾಧ್ಯ. ಇದಕ್ಕಿಂತ ವಿಪರೀತ ಪ್ರಮಾಣದಲ್ಲಿ ತೂಕ ಇಳಿಸುವ ಕೆಲಸ ತೊಂದರೆಗಳನ್ನು ತಂದೀತು, ಜೋಕೆ!
ಚಯಾಪಚಯ ಕ್ರಿಯೆ ಕುಸಿಯುತ್ತದೆ
ತೂಕ ಇಳಿಸುವುದಕ್ಕೆ ಯದ್ವಾತದ್ವಾ ಪ್ರಯತ್ನಿಸಿದರೆ ದೇಹದ ಚಯಾಪಚಯ ಕ್ರಿಯೆಯಲ್ಲಿ ತೊಂದರೆ ಉಂಟಾಗುತ್ತದೆ. ಒಮ್ಮೆ ಈ ಪ್ರಕ್ರಿಯೆಯಲ್ಲಿ ತೊಂದರೆ ಉಂಟಾದರೆ, ಅದು ದೇಹದ ಮೇಲೆ ನಾನಾ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಮಾತ್ರವಲ್ಲ, ಇಳಿಸಿದ ತೂಕವನ್ನು ಕಾಯ್ದುಕೊಳ್ಳುವುದೂ ಕಷ್ಟವಾಗುತ್ತದೆ.
ತೂಕ ಇಳಿಸುವುದೆಂದರೆ ದೇಹದಲ್ಲಿರುವ ಕೊಬ್ಬಿನ ಭಾಗವನ್ನು ಕರಗಿಸುವುದು, ಮಾಂಸಖಂಡಗಳನ್ನಲ್ಲ. ಇದರ ಜೊತೆಜೊತೆಗೆ ಮಾಂಸಖಂಡಗಳನ್ನು ಸಶಕ್ತ ಮಾಡುವುದು. ಆಗ ಮಾತ್ರವೇ ಕರಗಿಸಿದ ತೂಕವನ್ನು ಹೆಚ್ಚಿನ ದಿನಗಳವರೆಗೆ ಕಾಯ್ದುಕೊಳ್ಳುವುದು ಸಾಧ್ಯವಾಗುತ್ತದೆ. ಧಿಡೀರ್ ಇಳಿದ್ದು, ಹಾಗೆಯೇ ಏರಲೂ ಬಹುದು.
ಕ್ಷಿಪ್ರ ತೂಕ ಇಳಿಕೆಗಾಗಿ ಕೆಲವು ಆಹಾರಗಳನ್ನು ಇದ್ದಕ್ಕಿದ್ದಂತೆ ನಿಲ್ಲಿಸಿದ್ದೀರಿ ಎಂದಾದರೆ, ಅವುಗಳನ್ನು ದೀರ್ಘಕಾಲದವರೆಗೆ ನಿಲ್ಲಿಸುವುದು ಸಾಧ್ಯವಾಗುವುದಿಲ್ಲ. ಅಂತಹ ಆಹಾರಗಳನ್ನು ಮರಳಿ ಆರಂಭಿಸಿದ ಕೂಡಲೇ ತೂಕವೂ ಏರತೊಡಗುತ್ತದೆ. ಉದಾ, ಸಿಹಿ ತಿಂಡಿಗಳನ್ನು ಸಂಪೂರ್ಣ ನಿಲ್ಲಿಸುವ ಬದಲು, ಪ್ರಮಾಣ ಕಡಿತ ಮಾಡುವುದು ಹೆಚ್ಚು ಸಹಕಾರಿ.
ನಮ್ಮ ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಪೋಷಕಾಂಶಗಳು ಬೇಕು. ಸೂಕ್ತ ಪ್ರಮಾಣದಲ್ಲಿ ಪಿಷ್ಟ, ಪ್ರೊಟೀನ್, ನಾರು, ಖನಿಜ ಮತ್ತು ಜೀವಸತ್ವಗಳು ದೇಹದ ಕಾರ್ಯಕ್ಷಮತೆಗೆ ಅಗತ್ಯ. ಕ್ಯಾಲರಿಗಳನ್ನು ಕಡಿತ ಮಾಡುವಾಗ ಇಂಥ ಅಮೂಲ್ಯ ಸತ್ವಗಳು ದೇಹಕ್ಕೆ ಕೊರತೆಯಾಗಬಾರದು. ಕೇವಲ ಅನಗತ್ಯ ಕ್ಯಾಲರಿಗಳಿಗಷ್ಟೇ ಕತ್ತರಿ ಹಾಕಬೇಕು. ಅಗತ್ಯವಾಗ ಪೋಷಕತತ್ವಗಳು ಯಾವುದೇ ಕಡಿಮೆಯಾದರೂ ದೇಹ ದುರ್ಬಲವಾಗುತ್ತದೆ ಮತ್ತು ರೋಗನಿರೋಧಕ ಶಕ್ತಿ ಕುಂಠಿತಗೊಳ್ಳುತ್ತದೆ. ಸುಸ್ತು, ಆಯಾಸ, ಮಲಬದ್ಧತೆ, ಕೂದಲು ಉದುರುವುದು- ಹೀಗೆ ನಾನಾ ರೀತಿಯಲ್ಲಿ ದೇಹ ತನ್ನ ಕಷ್ಟವನ್ನು ನಮ್ಮೊಂದಿಗೆ ಹೇಳಲು ತೊಡಗುತ್ತದೆ.
ಅತಿಯಾದ, ಅವೈಜ್ಞಾನಿಕ ಡಯೆಟ್‌ನಿಂದ ಅನೋರೆಕ್ಸಿಯ ಅಥವಾ ನಿರ್ಜಲೀಕರಣದಂಥ ಸಮಸ್ಯೆ ಕಾಡಬಹುದು. ಇದು ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ಹಾಗಾಗಿ ತೂಕ ಇಳಿಸುವುದೆಂದರೆ ಸರ್ಕಸ್ ಅಲ್ಲ; ಅದು ಆರೋಗ್ಯಕರ ದೇಹ ಮತ್ತು ಮನಸ್ಸುಗಳತ್ತ ನಾವು ಇಡುವ ಸುಸ್ಥಿರ ಹೆಜ್ಜೆ. ಧಿಡೀರ್ ತೂಕ ಇಳಿಸುವ ಮೋಹಕ್ಕೆ ಬೀಳದೆ, ಇಡೀ ಪ್ರಕ್ರಿಯೆಯನ್ನು ನಿಧಾನವಾಗಿ ಮತ್ತು ನಿರ್ಣಾಯಕವಾಗಿ ಕೈಗೆತ್ತಿಕೊಳ್ಳಿ
ಇದನ್ನೂ ಓದಿ: Winter Health Care | ಚಳಿಯಿಂದಾಗಿ ಆಗಾಗ ತಲೆನೋವು ಬರುತ್ತಿದೆಯೇ? ಇವುಗಳನ್ನು ಪ್ರಯತ್ನಿಸಿ