Site icon Vistara News

Curry leaves water: ಕರಿಬೇವಿನ ನೀರು ಕುಡಿದರೆ ಎಷ್ಟೊಂದು ಪ್ರಯೋಜನ!

Curry leaves water

ಕರಿಬೇವಿನ ಸೊಪ್ಪು ಒಗ್ಗರಣೆಗೆ ಮಾತ್ರ ಎಂದು ಭಾವಿಸುವುದು ಸಾಮಾನ್ಯ. ಅಲ್ಲಾದರೂ ಊಟದ ನಡುವೆ ಸಿಕ್ಕರೆ ತೆಗೆದಿರಿಸುವವರೇ ಹೆಚ್ಚು. ಹಾಗೆಂದು ಈ ಎಲೆಗಳಲ್ಲಿ ಸತ್ವಗಳು ಕಡಿಮೆಯಿಲ್ಲ. ಅಡುಗೆಮನೆಯ ಉಪಯೋಗಕ್ಕೆಂದು ಬೆಳೆಸಿಕೊಂಡ ಗಿಡಗಳ ಸಾಲಿನಲ್ಲಿ ಕರಿಬೇವಿನ ಸೊಪ್ಪಿಗೆ ಸ್ಥಾನವನ್ನು ಕೊಟ್ಟೇ ಇರುತ್ತೇವೆ. ನಮ್ಮ ಜೀರ್ಣಾಂಗಗಳಿಗೆ ಅನುಕೂಲ ಒದಗಿಸುವುದರಿಂದ ಹಿಡಿದು ರಕ್ತಹೀನತೆಯನ್ನು ಕಡಿಮೆ ಮಾಡುವವರೆಗೆ ಹಲವು ರೀತಿಯ ಸದ್ಗುಣಗಳು ಕರಿಬೇವಿನ ಎಲೆಗಳಿಗಿವೆ. ಬೆಳಗಿನ ಖಾಲಿ ಹೊತ್ತಿನಲ್ಲಿ ಸೇವಿಸುವ ಕೆಲವು ಡಿಟಾಕ್ಸ್‌ ಪೇಯಗಳು ನಮ್ಮ ದೇಹದಲ್ಲಿನ ಅನಗತ್ಯ ಅಂಶಗಳನ್ನು ಹೊರಹಾಕಲು ನೆರವಾಗುತ್ತವೆ. ಇವೆಲ್ಲ ಸರಳ, ಸುಲಭ, ನೈಸರ್ಗಿಕ ಆಯ್ಕೆಗಳು. ಕರಿಬೇವಿನ ಸೊಪ್ಪಿನ ನೀರಿನಿಂದಲೂ ಇಂಥ ಅನುಕೂಲಗಳನ್ನು ಪಡೆಯಬಹುದು. ಈ ಸೊಪ್ಪಿನ ರಸವನ್ನು ರುಬ್ಬಿ, ಸೋಸಿ ಅದನ್ನು ಕುಡಿಯಿರಿ ಎಂದರೆ ಮುಖ ಕಿವುಚುವವರೇ ಹೆಚ್ಚು. ಹಾಗಾಗಿ ಚೆನ್ನಾಗಿ ತೊಳೆದ ಕೆಲವು ಎಲೆಗಳನ್ನು ರಾತ್ರಿ ನೀರಿಗೆ ಹಾಕಿ, ಬೆಳಗ್ಗೆ ಆ ಸೊಪ್ಪುಗಳನ್ನು ಕೊಂಚ ಕಿವುಚಿ, ಖಾಲಿ ಹೊಟ್ಟೆಯಲ್ಲಿ ಆ ನೀರನ್ನು ಮಾತ್ರವೇ ಕುಡಿದರೆ ಸಾಕು. ಅದಿಲ್ಲದಿದ್ದರೆ, ಬೆಳಗ್ಗೆ ಬಿಸಿ ನೀರಿನಲ್ಲಿ ಕರಿಬೇವಿನ ಎಲೆಗಳನ್ನು ಕೆಲಕಾಲ ನೆನೆಸಿಟ್ಟು, ಆ ನೀರನ್ನು ಸೋಸಿ ಕಡಿದರೂ (curry leaves water) ಆದೀತು. ಇದರ ಲಾಭಗಳು ಬಹಳಷ್ಟಿವೆ.

ಉತ್ಕರ್ಷಣ ನಿರೋಧಕಗಳು

ಈ ನೀರಿನಲ್ಲಿ ಹಲವು ರೀತಿಯ ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಿರುತ್ತವೆ. ಇದರಿಂದ ದೇಹದ ಚಯಾಪಚಯ ಚುರುಕಾಗಿ, ಜೀರ್ಣಾಂಗಗಳ ಕ್ಷಮತೆ ಹೆಚ್ಚುತ್ತದೆ. ಮಾತ್ರವಲ್ಲ, ಮೊದಲಿಗೆ ದೇಹಕ್ಕೆ ದೊರೆಯುವ ಈ ನೀರಿನಲ್ಲಿರುವ ಸತ್ವಗಳು ತ್ವರಿತವಾಗಿ ದೇಹದೊಳಗೆ ಹೀರಲ್ಪಡುತ್ತವೆ. ಇದರಿಂದ ಉತ್ಕರ್ಷಣ ನಿರೋಧಕ ಅಂಶಗಳು ದೇಹಕ್ಕೆ ಹೇರಳವಾಗಿ ದೊರೆತು, ಉರಿಯೂತ ತಗ್ಗಿಸುವುದಕ್ಕೆ ಅನುಕೂಲವಾಗುತ್ತದೆ.

ಕೂದಲು ಬೆಳೆಯಲು

ಇದರಲ್ಲಿರುವ ಕಬ್ಬಿಣದ ಸತ್ವಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದಾಗಿ ಕೂದಲುಗಳ ಮೇಲೆ ಪೂರಕ ಪರಿಣಾಮ ಬೀರುತ್ತದೆ. ಕೂದಲಿನ ಬುಡವನ್ನು ಭದ್ರಪಡಿಸಿ, ಬೆಳವಣಿಗೆಗೆ ಸಹಾಯ ಮಾಡುತ್ತದೆ. ತಲೆಯ ಚರ್ಮವನ್ನು ಆರೋಗ್ಯವಾಗಿರಿಸಿ, ಅಕಾಲದಲ್ಲಿ ಕೂದಲು ಬೆಳ್ಳಗಾಗುವುದನ್ನು ತಡೆಯುತ್ತದೆ. ಈ ಎಲ್ಲವುಗಳಿಂದ ದಡ್ಡವಾದ, ಕಪ್ಪಾದ ಕೂದಲುಗಳನ್ನು ಪಡೆಯಬಹುದು.

ಪಚನಕಾರಿ

ಜೀರ್ಣಕಾರಿ ಕಿಣ್ವಗಳು ಕರಿಬೇವಿನ ಎಲೆಗಳಲ್ಲಿವೆ. ಮಾತ್ರವಲ್ಲ, ಇದು ಲಘುವಾದ ವಿರೇಚಕದಂತೆಯೂ ಕೆಲಸ ಮಾಡುತ್ತದೆ. ಹಾಗಾಗಿ ಆಹಾರ ಜೀರ್ಣವಾಗಿ, ಜೀರ್ಣಾಂಗಗಳು ಶುದ್ಧವಾಗುವವರೆಗಿನ ಕೆಲಸವನ್ನು ಇದು ನಿರ್ವಹಿಸುತ್ತದೆ. ಹಾಗಾಗಿ ಬೆಳಗಿನ ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ನೀರು ಕುಡಿಯುವುದು ಬಹಳಷ್ಟು ಪ್ರಯೋಜನಗಳನ್ನು ಒದಗಿಸಬಲ್ಲದು.

ಒತ್ತಡ ಶಮನ

ಮನಸ್ಸಿಗೆ ಇಷ್ಟವಾಗುವಂಥ ಪರಿಮಳಗಳು ಸಾಮಾನ್ಯವಾಗಿ ಮಾನಸಿಕ ಒತ್ತಡವನ್ನು ನಿವಾರಿಸಬಲ್ಲವು. ಕರಿಬೇವಿನ ಪರಿಮಳ ನಮ್ಮ ನಾಲಿಗೆಯಲ್ಲಿ ನೀರೂರಿಸಿ, ಜೀರ್ಣಾಂಗಗಳನ್ನು ಉದ್ದೀಪಿಸುವುದು ಮಾತ್ರವಲ್ಲ, ಮನಸ್ಸಿಗೂ ಮದ್ದಾಗಬಲ್ಲದು. ಕರಿಬೇವಿನ ನೀರು ಸ್ನಾಯುಗಳ ಮೇಲಿನ ಒತ್ತಡ ನಿವಾರಿಸಿ, ನರಗಳನ್ನು ತಂಪಾಗಿಸಿ, ದೇಹ-ಮನಸ್ಸುಗಳನ್ನು ಶಾಂತಗೊಳಿಸಬಲ್ಲದು. ಬೆಳಗಿನ ಹೊತ್ತು ಒತ್ತಡಗಳನ್ನೆಲ್ಲ ಕಳೆದುಕೊಂಡು, ಶಾಂತ ಮನಸ್ಸಿನಿಂದ ದಿನವನ್ನು ಪ್ರಾರಂಭಿಸುವುದು ಒಳ್ಳೆಯದಲ್ಲವೇ?

ಹಲವು ಸತ್ವಗಳು

ದೇಹಾರೋಗ್ಯಕ್ಕೆ ಅನುಕೂಲಗಳನ್ನು ಒದಗಿಸಬಲ್ಲ ಹಲವು ರೀತಿಯ ಸತ್ವಗಳು ಇದರಲ್ಲಿವೆ. ವಿಟಮಿನ್‌ಗಳು, ಖನಿಜಗಳು, ನಾರು ಮತ್ತಿತರ ಸೂಕ್ಷ್ಮ ಪೋಷಕಾಂಶಗಳು ಕರಿಬೇವಿನ ಸೊಪ್ಪಿನಲ್ಲಿವೆ. ಆಲ್ಕಲಾಯ್ಡ್‌ಗಳು, ಗ್ಲೈಕೋಸೈಡ್‌ಗಳು ಮತ್ತು ಫೆನಾಲಿಕ್‌ ಸಂಯುಕ್ತಗಳು ಬಹಳಷ್ಟು ರೀತಿಯಲ್ಲಿ ಪ್ರಯೋಜನಗಳನ್ನು ಒದಗಿಸಬಲ್ಲವು. ಕೊಲೆಸ್ಟ್ರಾಲ್‌ ಮತ್ತು ಟ್ರೈಗ್ಲಿಸರೈಡ್‌ ಕಡಿಮೆ ಮಾಡಲು, ಚರ್ಮದ ಕಾಂತಿಗೆ, ಶ್ವಾಸಕೋಶಗಳ ಕ್ಷೇಮಕ್ಕೆ ಸಹ ಈ ಸತ್ವಗಳು ನೆರವು ನೀಡುತ್ತವೆ.

Exit mobile version