Site icon Vistara News

Benefits Of Grapes: ಚಳಿಗಾಲದಲ್ಲಿ ದ್ರಾಕ್ಷಿ ತಿಂದರೆ ಎಷ್ಟೊಂದು ಲಾಭ!

Benefits Of Grapes

ದೇಹಕ್ಕೆ ಉಪಯುಕ್ತವಾಗುವ ಹಣ್ಣುಗಳ ವಿಷಯ ಬಂದಾಗ ಬೆರ್ರಿಗಳನ್ನು ತಪ್ಪದೇ ಪ್ರಸ್ತಾಪಿಸಲಾಗುತ್ತದೆ. ಚೆರ್ರಿ, ಸ್ಟ್ರಾಬೆರಿ, ಬ್ಲೂಬೆರಿ, ಬ್ಲಾಕ್‌ಬೆರಿ, ರಾಸ್ಪ್‌ಬೆರಿ, ಕ್ರೇನ್‌ಬೆರಿ ಇತ್ಯಾದಿಗಳಲ್ಲಿ ಹೆಚ್ಚಿನವು ಭಾರತದಲ್ಲಿ ಬೆಳೆಯುವಂಥವಲ್ಲ; ಹೊರಗಿನಿಂದಲೇ ಬರಬೇಕು. ಅದರ ಬದಲಿಗೆ ನಮ್ಮಲ್ಲೇ ಬೆಳೆಯುವಂಥ ಯಾವುದಾದರೂ ಹಣ್ಣನ್ನು ಬಳಸಬಹುದೇ? ಸತ್ವ, ಗುಣ, ರುಚಿ ಇತ್ಯಾದಿಗಳು ಬೆರ್ರಿಗಳಿಗೆ ಹತ್ತಿರದಲ್ಲಿ ಇದ್ದರೆ, ಎಲ್ಲಿಂದಲೋ ಆಮದಾಗುವ ಬೆರ್ರಿಗಳನ್ನೇ ಕಾಯಬೇಕೆಂದಿಲ್ಲವಲ್ಲ. ಹಾಗಾದರೆ ಮತ್ತಾವ ಹಣ್ಣನ್ನು ಸೇವಿಸಬಹುದು? ಈಗ ಹೇಳುವ ಹಣ್ಣು ಕೊಂಚ ಹುಳಿ ಇರಬಹುದಾದರೂ ಕೈಗೆಟುಕದ ಹಣ್ಣಂತೂ ಅಲ್ಲ! ಚಳಿಗಾಲದಲ್ಲಿ ಮಾರುಕಟ್ಟೆಯತ್ತ ಕಣ್ಣು ಹಾಯಿಸಿದರೆ ರಸಭರಿತ ದ್ರಾಕ್ಷಿಯ ಗೊಂಚಲುಗಳು ಕಾಣುತ್ತವೆ. ಚಳಿಗಾಲವೆಂಬುದು ದ್ರಾಕ್ಷಿಯ ಋತುವೂ ಹೌದು. ತಿಳಿಗೆಂಪು, ಕಡು ಕೆಂಪು, ನೇರಳೆ, ಹಸಿರು ಬಣ್ಣಗಳ ಈ ಪುಟ್ಟ ಹಣ್ಣುಗಳನ್ನು ಮರೆಯದೆ ಮೆಲ್ಲುವುದಕ್ಕೆ ಕಾರಣಗಳು ಬಹಳಷ್ಟಿವೆ.
ಉತ್ಕರ್ಷಣ ನಿರೋಧಕಗಳು: ದ್ರಾಕ್ಷಿಯಲ್ಲಿ ಹಲವು ರೀತಿಯ ಫ್ಲೆವನಾಯ್ಡ್‌ಗಳಿವೆ. ವಿಟಮಿನ್‌ ಸಿ ಸಹ ಸಮೃದ್ಧವಾಗಿದೆ. ದ್ರಾಕ್ಷಿಯ (Benefits Of Grapes) ಹೊರಮೈ ಬಣ್ಣ ಯಾವುದೇ ಇದ್ದರೂ, ಅವೆಲ್ಲವುಗಳಲ್ಲೂ ಭರಪೂರ ಉತ್ಕರ್ಷಣ ನಿರೋಧಕಗಳಿವೆ. ದೇಹದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವುದೇ ಅಲ್ಲದೆ, ಹೃದ್ರೋಗ, ಕ್ಯಾನ್ಸರ್‌, ಪಾರ್ಶ್ವವಾಯುವಿನಂಥ ಮಾರಕ ರೋಗಗಳಿಂದ ರಕ್ಷಿಸುವಲ್ಲಿ ಇವು ಸಹಕಾರಿ.

ಉರಿಯೂತ ಶಮನ

ದೇಹದಲ್ಲಿ ಎಲ್ಲಿಯೂ ಇರಬಹುದಾದ ಉರಿಯೂತವನ್ನು ಕಡಿಮೆ ಮಾಡಲು ಉತ್ಕರ್ಷಣ ನಿರೋಧಕಗಳು ನೆರವಾಗುತ್ತವೆ. ಅದರಲ್ಲೂ ಉರಿಯೂತದ ಕಾರಣಕ್ಕೇ ವಕ್ಕರಿಸಿಕೊಳ್ಳುವ ಆರ್ಥರೈಟಿಸ್‌ನಂಥ ಸಮಸ್ಯೆ ಇರುವವರಿಗೆ ದ್ರಾಕ್ಷಿ ಸೇವನೆ ಹಿತವಾಗಬಹುದು. ಕೀಲುನೋವು ಇನ್ನಿತರ ಉರಿಯೂತ ಸಂಬಂಧಿ ತೊಂದರೆಗಳು ಶಮನವಾಗಲು ಈ ಹಣ್ಣು ನೆರವಾಗುತ್ತದೆ.

ಹೃದಯಕ್ಕೆ ಪೂರಕ

ದ್ರಾಕ್ಷಿಯಲ್ಲಿ ಪೊಟಾಶಿಯಂ ಅಂಶ ವಿಫುಲವಾಗಿದೆ. ಈ ಸತ್ವವು ರಕ್ತದ ಏರೊತ್ತಡ ನಿರ್ವಹಿಸುವಲ್ಲಿ ಪರಿಣಾಮಕಾರಿ. ಇದರಿಂದ ಹೃದಯದ ಆರೋಗ್ಯ ಚೆನ್ನಾಗಿರುತ್ತದೆ. ಇದಲ್ಲದೆ, ದ್ರಾಕ್ಷಿಯಲ್ಲಿರುವ ಕೆಲವು ಉತ್ಕರ್ಷಣ ನಿರೋಧಕಗಳು ಕೊಲೆಸ್ಟ್ರಾಲ್‌ ಕಡಿಮೆ ಮಾಡುವ ಸಾಮರ್ಥ್ಯವನ್ನೂ ಹೊಂದಿವೆ. ಇದರಿಂದ ಹೃದಯದ ಆರೋಗ್ಯ ಇನ್ನಷ್ಟು ಸುಧಾರಿಸುತ್ತದೆ.

ನೀರು

ನೀರನ್ನು ಕುಡಿದು ಮಾತ್ರವೇ ಪೂರೈಸಬೇಕೆಂದಿಲ್ಲ. ದ್ರಾಕ್ಷಿಯಂಥ ನೀರು ಹೆಚ್ಚಿರುವ ಹಣ್ಣುಗಳನ್ನು ತಿನ್ನುವ ಮೂಲಕವೂ ದಾಹ ತಣಿಸಿಕೊಳ್ಳಬಹುದು. ದೇಹದ ಉಷ್ಣತೆಯನ್ನು ನಿಯಂತ್ರಿಸಲು, ರಕ್ತ ಪರಿಚಲನೆ ಸುಲಲಿತವಾಗಿರಲು, ಜೀರ್ಣಕ್ರಿಯೆಯನ್ನು ಸಮರ್ಪಕವಾಗಿ ನಡೆಸಲು- ಹೀಗೆ ದೇಹದ ಹಲವಾರು ಕೆಲಸಗಳಿಗೆ ನೀರು ಅಗತ್ಯವಾಗಿ ಬೇಕು.

Grapes For Diabetics

ಡಿಟಾಕ್ಸ್

ದೇಹದಲ್ಲಿ ಸೇರಿರುವ ಕಶ್ಮಲಗಳನ್ನು ಹೊರಹಾಕಿ, ಶರೀರವನ್ನು ನೈಸರ್ಗಿಕವಾಗಿ ಡಿಟಾಕ್ಸ್‌ ಮಾಡುವ ಸಾಮರ್ಥ್ಯವನ್ನು ದ್ರಾಕ್ಷಿ ಹೊಂದಿದೆ. ಇದರಲ್ಲಿ ತುಂಬಿರುವ ಉತ್ಕರ್ಷಣ ನಿರೋಧಕಗಳೇ ಹೆಚ್ಚಿನಾಂಶ ಡಿಟಾಕ್ಸಿಫೈ ಮಾಡುವ ಹೊಣೆಯನ್ನೂ ನಿರ್ವಹಿಸುತ್ತವೆ. ಅದರಲ್ಲೂ ಮುಖ್ಯವಾಗಿ ಕಿಡ್ನಿ ಮತ್ತು ಲಿವರ್‌ನ ಶುಚಿ ಮಾಡುವಲ್ಲಿ ಇದು ಹೆಚ್ಚಿನ ನೆರವು ನೀಡುತ್ತದೆ

ಪಚನಕಾರಿ

ದ್ರಾಕ್ಷಿಯಲ್ಲಿ ನೀರು ಮಾತ್ರವಲ್ಲ, ನಾರು ಸಹ ಹೇರಳವಾಗಿದೆ. ನಾರಿನಂಶ ಇರುವ ಆಹಾರಗಳು ನಮ್ಮ ಜೀರ್ಣಾಂಗಗಳ ಉತ್ತಮ ಬ್ಯಾಕ್ಟೀರಿಯಗಳನ್ನು ಹೆಚ್ಚಿಸುತ್ತವೆ. ಇದರಿಂದ ಜೀರ್ಣಾಂಗಗಳ ಕ್ಷಮತೆ ಹೆಚ್ಚುತ್ತದೆ. ಜೊತೆಗೆ ಬೇಡದ್ದನ್ನೆಲ್ಲಾ ದೇಹದಿಂದ ಹೊರದೂಡಲು ನೆರವಾಗಿ ಮಲಬದ್ಧತೆ ನಿವಾರಿಸುತ್ತವೆ. ಹೀಗಾಗಿ ದ್ರಾಕ್ಷಿ ತಿನ್ನುವುದಕ್ಕೆ ಕಾರಣಗಳು ಪ್ರಬಲವಾಗಿಯೇ ಇವೆ.

ಮೂಳೆಗಳ ಬಲವರ್ಧನೆ

ದ್ರಾಕ್ಷಿಯಲ್ಲಿ ಖನಿಜಗಳು ಮತ್ತು ಸೂಕ್ಷ್ಮ ಪೋಷಕಾಂಶಗಳು ಸಾಕಷ್ಟಿವೆ. ಪೊಟಾಶಿಯಂ, ಕ್ಯಾಲ್ಶಿಯಂ, ಮೆಗ್ನೀಶಿಯಂ ಖನಿಜಗಳು ಮೂಳೆಗಳ ಬಲವರ್ಧನೆಗೆ ನೆರವಾಗುವಂಥವು. ದ್ರಾಕ್ಷಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಆರ್ಥರೈಟಿಸ್‌ ಮಾತ್ರವಲ್ಲ, ಆಸ್ಟಿಯೊಪೊರೊಸಿಸ್‌ನಂಥ ಮೂಳೆ ಟೊಳ್ಳಾಗುವ ತೊಂದರೆಯನ್ನೂ ದೂರ ಮಾಡಬಹುದು.

ಇದನ್ನೂ ಓದಿ: Mental Health: ಒತ್ತಡದ ಬದುಕಿನಲ್ಲಿ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?

Exit mobile version