Site icon Vistara News

Year Ender 2023: ಈ ವರ್ಷ ಕಲಿತ ಆರೋಗ್ಯ ಪಾಠಗಳ ಮುಖ್ಯಾಂಶಗಳೇನು?

health lesson Year Ender 2023

ಕಳೆದ ದಿನಗಳಲ್ಲಿ (Year Ender 2023) ಏನೆಲ್ಲ ಒಳ್ಳೆಯದನ್ನು ಕಲಿತಿದ್ದೇವೆ ಎಂಬುದನ್ನು ನೋಡುವ ಹೊತ್ತಿದು. ಅದರಲ್ಲೂ ಆರೋಗ್ಯ ಸುಧಾರಣೆಗೆ ಏನೇನು ಒಳ್ಳೆಯ ಅಭ್ಯಾಸಗಳನ್ನು ಕಲಿತಿದ್ದೇವೆ, ಕಲಿತಿದ್ದನ್ನು ಎಷ್ಟು ಉಪಯೋಗಿಸುತ್ತಿದ್ದೇವೆ ಎಂಬುದನ್ನು ಹಿಂದಿರುಗಿ ನೋಡಿದರೆ ಅನುಕೂಲ. ಹಾಗಾಗಿ 2023ನೇ ಸಾಲಿನಲ್ಲಿ ಜನಪ್ರಿಯವಾದಂಥ ಆರೋಗ್ಯಪಾಠಗಳು ಯಾವುದು ಎಂಬ ಮಾಹಿತಿಯಿದು.

ಮಾನಸಿಕ ಆರೋಗ್ಯದತ್ತ ಚಿತ್ತ

ಕೋವಿಡ್‌ ಮಹಾಮಾರಿಯ ದಿನಗಳಲ್ಲಿ ವಿಶ್ವದೆಲ್ಲೆಡೆಯ ಜನರು ದೈಹಿಕವಾಗಿ ಸಂಕಷ್ಟಕ್ಕೆ ಸಿಲುಕಿದಷ್ಟೇ ಮಾನಸಿಕ ಒತ್ತಡಕ್ಕೂ ಗುರಿಯಾಗಿದ್ದರು. ಭೀತಿ, ಅಭದ್ರತೆ, ಅನಿಶ್ಚಿತತೆಗಳಿಂದ ಹೈರಾಣಾಗಿದ್ದರು. ಈ ದಿನಗಳಲ್ಲಿ ಬಹಳಷ್ಟು ಮಂದಿಯ ಮಾನಸಿಕ ಆರೋಗ್ಯ ತೀವ್ರ ಕಷ್ಟ-ನಷ್ಟಗಳಿಗೆ ಗುರಿಯಾಗಿತ್ತು. ಲೆಕ್ಕವಿಲ್ಲದಷ್ಟು ಮಂದಿ ಖಿನ್ನತೆಗೆ ಜಾರಿದ್ದರು. ಈ ಎಲ್ಲವುಗಳ ಹಿನ್ನೆಲೆಯಲ್ಲಿ, ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಎಷ್ಟು ಮಹತ್ವದ್ದು ಎನ್ನುವುದನ್ನು ಜಗತ್ತು ಅರ್ಥ ಮಾಡಿಕೊಂಡಿತು. ಕಷ್ಟಗಳ ನಡುವೆ ಸ್ಥಿರಚಿತ್ತ ಹೇಗೆ ಔಷಧಿಯಂತೆ ಕೆಲಸ ಮಾಡುತ್ತದೆ ಎಂಬುದೂ ಜನಕ್ಕೆ ಅರಿವಾಗಿತ್ತು. ಹಾಗಾಗಿ ಮಾನಸಿಕ ಆರೋಗ್ಯ ವೃದ್ಧಿಗೆ ಹಿಂದೆಂದೂ ಇಲ್ಲದಷ್ಟು ಮಹತ್ವ ಈ ವರ್ಷ ದೊರೆತಿದೆ. ಸರಕಾರಗಳು, ಸಂಘ-ಸಂಸ್ಥೆಗಳು, ಆಸ್ಪತ್ರೆಗಳು- ಹೀಗೆ ಸರಕಾರಿ ಮತ್ತು ಖಾಸಗಿ ವಲಯಗಳೆರಡರಲ್ಲೂ ಈ ಕುರಿತ ಸಹಾಯವಾಣಿಗಳು, ಆಪ್ತ ಸಮಾಲೋಚನೆ, ಚಿಕಿತ್ಸೆಗಳು ಲಭ್ಯವಾಗುತ್ತಿವೆ. ಇನ್ನೊಬ್ಬರ ಬಗ್ಗೆ ಕಾಳಜಿ ಮಾಡಿದಷ್ಟೇ ಸಹಜ ನಮ್ಮ ಕಾಳಜಿಯನ್ನು ನಾವು ಮಾಡಿಕೊಳ್ಳುವುದು, ಇದರಲ್ಲಿ ತಪ್ಪಿಲ್ಲ ಎಂಬ ಅರಿವು ಹೆಚ್ಚುತ್ತಿದೆ.

ವ್ಯಾಯಾಮ

ಇಲ್ಲದಿದ್ದಾಗಲೇ ಅದರ ಬೆಲೆ ತಿಳಿಯುವುದು ಎಂಬ ಮಾತಿದೆ. ಕೋವಿಡ್‌ ದಿನಗಳಲ್ಲಿ ಎಲ್ಲಾ ಆಟಗಳು, ಚಟುವಟಿಕೆಗಳು, ಜಿಮ್‌, ಈಜುಕೊಳ- ಹೀಗೆ ಸರ್ವತ್ರವೂ ಮುಚ್ಚಲ್ಪಟ್ಟಿದ್ದವು. ಆಗ ಇಂಥ ಯಾವುದೇ ದೈಹಿಕ ಚಟುವಟಿಕೆ ಇಲ್ಲದೆ ಗೃಹಬಂಧಿಯಾಗಿ ಬದುಕುವುದರ ಸಂಕಷ್ಟ ಜನರಿಗೆ ಅರಿವಾಗಿತ್ತು. ಒಮ್ಮೆ ಕೋವಿಡ್‌ ಭೀತಿ ಕಡಿಮೆಯಾಗುತ್ತಿದ್ದಂತೆ ಹೆಚ್ಚಿನ ಮಂದಿ ದೈಹಿಕ ಚಟುವಟಿಕೆಗಳತ್ತ ಒಲವು ತೋರಿದ್ದಾರೆ. ಬಹಳಷ್ಟು ಮಂದಿಗೆ ಕೋವಿಡ್‌ನ ಅಡ್ಡ ಪರಿಣಾಮಗಳಿಂದ ಹೊರಬರಲು ವ್ಯಾಯಾಮ ಅಗತ್ಯವೂ ಆಗಿತ್ತು. ಭೀತಿ, ಬಂಧನದಿಂದ ಹೊರಬಂದು ಕ್ರಿಯಾಶೀಲತೆಯತ್ತ ಹೊರಳುವುದು ಎಲ್ಲಾ ದೇಶಗಳಲ್ಲಿ ಕಂಡುಬರುತ್ತಿದೆ.

ಸಮತೋಲಿತ ಆಹಾರದ ಮಹತ್ವ

ಹೀಗೆನ್ನುತ್ತಿದ್ದಂತೆ ಬೀದಿ ಬದಿಯಲ್ಲಿ ಕಿಲೋಮೀಟರುಗಟ್ಟಲೆ ದೂರದವರೆಗೆ ನಿಂತು ಫಾಸ್ಟ್‌ ಫುಡ್‌ ತಿನ್ನುವವರ ಚಿತ್ರಗಳು ಕಣ್ಮುಂದೆ ಬರಬಹುದು. ಇವರೆಲ್ಲ ಎಂಥಾ ಆಹಾರ ತಿನ್ನುತ್ತಾರೆ ಎಂಬ ಪ್ರಶ್ನೆಯೂ ಬಂದೀತು. ಆದರೆ ಲೋಕದಲ್ಲಿ ಇರುವುದು ಇವರು ಮಾತ್ರವೇ ಅಲ್ಲ. ಮನೆ ಊಟ, ಇಡೀ ಧಾನ್ಯಗಳು, ಸಿರಿ ಧಾನ್ಯಗಳು, ಸಾವಯವ ಉತ್ಪನ್ನಗಳು- ಇಂಥ ಎಲ್ಲ ಆರೋಗ್ಯಕರ ವಿಷಯಗಳ ಬಗ್ಗೆಯೂ ಜನರಲ್ಲಿ ಹೆಚ್ಚಿನ ಆಸಕ್ತಿ, ಅರಿವು ಗೋಚರವಾಗುತ್ತದೆ. ಇದೇ ಹಿನ್ನೆಲೆಯಲ್ಲಿ, ಹಲವು ರೀತಿಯ ತೂಕ ಇಳಿಕೆಯ ಡಯೆಟ್‌ಗಳು, ವೇಗನ್‌ ಮುಂತಾದ ಹತ್ತಾರು ಅಲೆಗಳು ಮುನ್ನೆಲೆಗೆ ಬಂದಿರುವುದು ಸುಳ್ಳಲ್ಲ.

ತಡೆಯೇ ಮುಖ್ಯ

ರೋಗ ಬಂದ ಮೇಲೆ ಚಿಕಿತ್ಸೆ ಮಾಡುವುದಕ್ಕಿಂತ ಬಾರದಂತೆ ತಡೆಯುವುದು ಅಗತ್ಯ ಎಂಬುದು ವಿಶ್ವಕ್ಕೆ ಮತ್ತೊಮ್ಮೆ ಮನವರಿಕೆ ಆಗಿದೆ. ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸುವುದು, ಅಗತ್ಯ ಲಸಿಕೆಗಳನ್ನು ಹಾಕಿಸಿಕೊಳ್ಳುವುದು, ರೋಗ ಉಲ್ಭಣವಾದ ಮೇಲೆ ಆಸ್ಪತ್ರೆಗೆ ಓಡುವುದಕ್ಕಿಂತ ಮೊಳಕೆಯಲ್ಲೇ ಚಿವುಟುವುದು- ಇಂಥ ಅಭ್ಯಾಸಗಳತ್ತ ಜನ ಹೆಚ್ಚಾಗಿ ವಾಲುತ್ತಿದ್ದಾರೆ. ಇದೇ ಅಭ್ಯಾಸದ ಅಂಗವಾಗಿ ಜನರ ಜೀವನಶೈಲಿಯಲ್ಲೂ ಬದಲಾವಣೆ ಕಾಣುತ್ತಿದೆ. ಆರೋಗ್ಯಕ್ಕೆ ಹಾನಿ ಮಾಡುವ ಚಟಗಳನ್ನು ತೊರೆಯುವತ್ತ ಹೆಚ್ಚಿನ ಒಲವು ಸಮಾಜದಲ್ಲಿ ಕಂಡು ಬರುತ್ತಿದೆ. ಜೀರ್ಣಾಂಗಗಳ ಆರೋಗ್ಯದ ಮಹತ್ವ, ನಾರು ಸೇವನೆಯ ಅಗತ್ಯ- ಇಂಥ ಸಣ್ಣ ಅರಿವಿನ ಬದಲಾವಣೆಗಳೇ ಆರೋಗ್ಯವನ್ನು ದೊಡ್ಡ ಮಟ್ಟದಲ್ಲಿ ಕಾಪಾಡಬಲ್ಲವು.

ಇದನ್ನೂ ಓದಿ: Health Tips for Winter: ಚಳಿಗಾಲದಲ್ಲಿ ನ್ಯುಮೋನಿಯಾ, ಶ್ವಾಸಕೋಶದ ಸಮಸ್ಯೆಗಳಿಂದ ದೂರ ಇರಲು ಹೀಗೆ ಮಾಡಿ…

Exit mobile version