ʻಜೀವ ಬೇಕಿದ್ರೂ ಬಿಡ್ತೀನಿ. ಸಿಹಿ ತಿನ್ನೋದು ಬಿಡಲ್ಲʼ ಎಂದೆಲ್ಲ ಹೇಳುವವರನ್ನು ನೋಡಿರಬಹುದು. ಎಲ್ಲರೂ ಎಂದಲ್ಲ ಒಂದಿನ ಜೀವ ಬಿಡುವವರೆ, ಯಾರೇನೂ ಶಾಶ್ವತವಲ್ಲ ಇಲ್ಲಿ. ಆದರೂ, ಇದ್ದಷ್ಟು ದಿನ ಚೆನ್ನಾಗಿರಬೇಡವೆ? ಈ ನಿಟ್ಟಿನಲ್ಲಿ, ಕೆಲವು ದಿನ ಸಕ್ಕರೆ ಅಥವಾ ಸಿಹಿ ತಿನ್ನುವುದನ್ನು ಸಂಪೂರ್ಣ ನಿಲ್ಲಿಸಿದರೆ ಏನಾಗುತ್ತದೆ (Sugar free living) ಎಂಬ ಜಿಜ್ಞಾಸೆಯಿದು. ದೇಹದಲ್ಲಿನ ಮೇಲ್ನೋಟದ ವ್ಯತ್ಯಾಸ ಬಿಟ್ಟರೆ ಇನ್ನೇನಾದರೂ ಬದಲಾವಣೆ ಆಗುತ್ತದೆಯೇ? ಹೌದೆನ್ನುತ್ತಾರೆ ಆಹಾರ ತಜ್ಞರು. ಸಕ್ಕರೆ ದೂರ ಮಾಡಿದರೆ ಏನಾಗುತ್ತದೆ?
ತೂಕ ಇಳಿಕೆ
ನಂನಮ್ಮ ದೇಹದ ಚಯಾಪಚಯ ಎಷ್ಟೇ ಉತ್ತಮವಾಗಿದ್ದರೂ, ಸಕ್ಕರೆಯಂಶ ಹೆಚ್ಚುವರಿ ಹೊರೆಯನ್ನು ಹೇರುವುದು ದಿಟ. ಇದರ ಪರಿಣಾಮವಾಗಿ, ತಿಂದಿದ್ದರಲ್ಲಿ ಹೆಚ್ಚುವರಿ ಶಕ್ತಿ ಉಳಿದು, ಕೊಬ್ಬಾಗಿ ಪರಿವರ್ತಿತವಾಗಿ ನಮ್ಮ ದೇಹದಲ್ಲಿ ಅಡಗಿಕೂರುತ್ತದೆ. ಅದರಲ್ಲೂ ಹೊಟ್ಟೆಯ ಕೊಬ್ಬು ಕತ್ತರಿಸಲು ಇನ್ನೂ ಕಷ್ಟವಾಗುವುದು ಈ ಕಾರಣಕ್ಕೆ. ಇಂಥ ಸಂದರ್ಭಗಳಲ್ಲಿ ಸಕ್ಕರೆಯಿಂದ ದೂರ ಇರುವುದು ಉತ್ತಮ ಪರಿಣಾಮಗಳನ್ನು ನೀಡುತ್ತದೆ.
ಶಕ್ತಿ ಹೆಚ್ಚಳ
ಸಕ್ಕರೆಯಂಶ ಅಥವಾ ಗ್ಲೂಕೋಸ್ ಎಂದಾಕ್ಷಣ ಶಕ್ತಿ ಎನ್ನುವ ಕಲ್ಪನೆಯಿದೆ. ಸುಳ್ಳೇನಲ್ಲ. ಆದರೆ ಇದು ಕ್ಷಣಿಕ. ಗ್ಲೂಕೋಸ್‌ನಿಂದ ಬರುವ ಶಕ್ತಿ ಹೆಚ್ಚು ಕಾಲ ನಿಲ್ಲುವುದಿಲ್ಲ. ಬಂದಷ್ಟೇ ಬೇಗ ಹೋಗುತ್ತದೆ. ಜೊತೆಗೆ, ಇದ್ದಕ್ಕಿದ್ದಂತೆ ಶಕ್ತಿ ಇಳಿದಾಗ ನೀಡುವಂಥ ಜಡ, ಆಯಾಸದ ಭಾವನೆಯನ್ನು ಉಳಿಸಿ ಹೋಗುತ್ತದೆ. ಹಾಗಾಗಿ ಸಕ್ಕರೆಯ ಬದಲು ಪ್ರೊಟೀನ್ ಅಥವಾ ಸಂಕೀರ್ಣ ಪಿಷ್ಟದ ಶಕ್ತಿ ದೀರ್ಘಕಾಲ ನಮ್ಮನ್ನು ಕಾಪಾಡಬಲ್ಲದು.
ಉರಿಯೂತ ಕಡಿಮೆ
ಇದಂತೂ ಹದಿನಾರಾಣೆ ಸತ್ಯ! ಉರಿಯೂತ ನಿವಾರಣೆಗೆ ಉತ್ಕರ್ಷಣ ನಿರೋಧಕಗಳು ದೊರೆಯಬೇಕಾದ್ದು ಎಷ್ಟು ಮುಖ್ಯವೋ ಸಕ್ಕರೆ ದೊರೆಯದೇ ಇರಬೇಕಾದ್ದು ಅಷ್ಟೇ ಮುಖ್ಯ. ಇದರಿಂದ ನೋವು, ಊತದಂಥ ಸಮಸ್ಯೆಗಳು ಕಡಿಮೆಯಾಗಿ ದೇಹ ಸ್ವಾಸ್ಥ್ಯ ಹೆಚ್ಚುತ್ತದೆ.
ಹೊಳಪಿನ ಚರ್ಮ
ಮೊಡವೆ, ಗುಳ್ಳೆಗಳ ಕಾಟದಿಂದ ಬೇಸತ್ತಿದ್ದರೆ, ಸಕ್ಕರೆಯನ್ನು ಬಿಡುವುದಕ್ಕೆ ಇನ್ನೂ ಒಳ್ಳೆಯ ಕಾರಣ ದೊರೆತಂತಾಯಿತು. ಸಕ್ಕರೆಯ ಸೇವನೆಯಿಂದ ಹೆಚ್ಚುವ ಉರಿಯೂತದ ಕಾರಣದಿಂದ ದೇಹದಲ್ಲಿ ಕೊಲಾಜಿನ್ ಕಡಿಮೆಯಾಗುತ್ತದೆ. ಕೊಲಾಜಿನ್ ಕೊರತೆಯು ಚರ್ಮದ ಮೇಲೂ ಪರಿಣಾಮ ಬೀರುವುದು ಹೌದು. ಇದರಿಂದ ಚರ್ಮ ಸುಕ್ಕಾಗುವುದು, ಮೊಡವೆ ಹೆಚ್ಚುವಂಥದ್ದು ಸಾಮಾನ್ಯ. ಈ ಎಲ್ಲ ಕಾರಣಗಳಿಂದಾಗಿ ಸಕ್ಕರೆಯನ್ನು ದೂರ ಮಾಡುವುದು ಉಪಯೋಗವಾಗಬಹುದು.
ಹೇಗೆ ಮಾಡಬಹುದು?
ಇದು ಮುಂದಿನ ಪ್ರಶ್ನೆ. ಸಕ್ಕರೆಯನ್ನು ಆಹಾರದಿಂದ ದೂರ ಮಾಡುವುದೆಂದರೆ ಹೇಗೆ ಎಂಬುದು ಹೆಚ್ಚಿನವರಿಗೆ ಅರಿವಾಗುವುದಿಲ್ಲ. ಬಾಯಾರಿಕೆಯಾದಾಗ ಸೋಡಾ, ಎನರ್ಜಿ ಡ್ರಿಂಕ್ ಮುಂತಾದವುಗಳ ಬದಲಿಗೆ ನೀರು ಒಳ್ಳೆಯ ಆಯ್ಕೆ. ಇನ್ನೂ ದಾಹ ತಣಿಯದಿದ್ದರೆ ಎಳನೀರು, ಕಬ್ಬಿನರಸದಂಥ ನೈಸರ್ಗಿಕ ಸಕ್ಕರೆಯನ್ನು ಆಯ್ದುಕೊಳ್ಳಿ. ಕೃತಕ ಸಕ್ಕರೆಯ ಪೇಯಗಳನ್ನಲ್ಲ.
ಇಡೀ ಹಣ್ಣು
ದಾಹ ತಣಿಸುವ ನೆವಕ್ಕೆ ಸಕ್ಕರೆಭರಿತ ಹಣ್ಣಿನ ರಸಗಳತ್ತ ನೋಡಬೇಡಿ. ಇಡೀ ಹಣ್ಣನ್ನೇ ತಿನ್ನಿ. ಅದರಲ್ಲೂ ರಸಭರಿತ ಸೇಬು, ಕಿತ್ತಳೆ, ಬೆರ್ರಿಗಳೆಲ್ಲ ಚೆನ್ನಾಗಿ ಬಾಯಾರಿಕೆ ನೀಗಿಸುತ್ತವೆ. ಇಂಥವುಗಳನ್ನೇ ಅಭ್ಯಾಸ ಮಾಡಿಕೊಂಡಷ್ಟೂ ಆರೋಗ್ಯ ಸುಧಾರಿಸುತ್ತದೆ. ಆಹಾರಗಳ ಪ್ಯಾಕೆಟ್ ಖರೀದಿಸುವಾಗ ಲೇಬಲ್ ಪರಿಶೀಲಿಸಿದರೆ, ಅದರಲ್ಲಿರುವ ಸಕ್ಕರೆಯಂಶದ ಅರಿವು ಆಗುತ್ತದೆ.
ಬೀಜಗಳಿರಲಿ
ಊಟ-ತಿಂಡಿಗಳ ನಡುವೆ ಹಸಿವಾಯಿತೇ? ಏನನ್ನಾದರೂ ಮೆಲ್ಲುವ ಬದಲು ಬೀಜಗಳನ್ನು ತಿನ್ನಿ. ಕುಂಬಳಬೀಜ, ಸೂರ್ಯಕಾಂತಿ ಬೀಜ, ಬಾದಾಮಿ, ವಾಲ್‌ನಟ್ ಮುಂತಾದವು ದೇಹಕ್ಕೆ ಒಳ್ಳೆಯ ಪೋಷಣೆಯನ್ನು ನೀಡಬಲ್ಲವು. ಅದಿಲ್ಲದಿದ್ದರೆ, ಹಸಿ ತರಕಾರಿಗಳು ಸಹ ಹಸಿವೆ ನೀಗಿಸಲು ಒಳ್ಳೆಯ ಆಯ್ಕೆ.
ಸಿಹಿತಿಂಡಿಗಳೇ…?
ಕಡಿಮೆ ಮಾಡಿ! ಈ ವಿಷಯಕ್ಕೆ ದಾಕ್ಷಿಣ್ಯ ಮಾಡುವುದೇ ಬೇಡ. ನಿಮ್ಮಿಷ್ಟದ ಜಿಲೇಬಿ, ಮೈಸೂರ್ಪಾಕ್, ಜಾಮೂನು… ಯಾವುದೇ ಎದುರಿಗಿರಲಿ. ಸಂಪೂರ್ಣ ಬಿಡುವುದು ಒಮ್ಮೆಲೆ ಸಾಧ್ಯವಾಗಲೇ ಇರಬಹುದು. ಆದರೆ ಕಡಿಮೆಯನ್ನಂತೂ ಖಂಡಿತಾ ಮಾಡಿ. ಮಾಮೂಲಿಯಾಗಿ ತಿನ್ನುವ ಶೇ. 50ರ ಪ್ರಮಾಣಕ್ಕೆ ಇಳಿಸಿ. ಅದನ್ನು ಕ್ರಮೇಣ ಕಡಿಮೆ ಮಾಡಬಹುದು.
ಇದನ್ನೂ ಓದಿ: Sleep In The Winter: ಚಳಿಗಾಲದಲ್ಲಿ ನಿದ್ದೆ ಮುಗಿಯುವುದೇ ಇಲ್ಲವೇಕೆ?