Site icon Vistara News

Havana syndrome: ಏನಿದು ಹವಾನಾ ಸಿಂಡ್ರೋಮ್‌? ನಿಮಗೆ ಎಂದಾದರೂ ಈ ವಿಚಿತ್ರ ಅನುಭವ ಆಗಿದೆಯಾ?

Havana syndrome

ಅಮೆರಿಕದ ಫ್ಲೋರಿಡಾದ (Havana syndrome) ತನ್ನದೇ ಮನೆಯ ಲಾಂಡ್ರಿಯಲ್ಲಿ ಆಕೆ ಬಟ್ಟೆ ಒಗೆಯುತ್ತಿದ್ದಾರೆ. ಇದ್ದಕ್ಕಿದ್ದಂತೆ ಕಿಟಕಿಯಿಂದ ಯಾವುದೋ ಅಗೋಚರ ಶಕ್ತಿಯೊಂದು ಬಂದು ಆಕೆಯನ್ನು ತಳ್ಳಿ, ಕಿವಿಯ ಒಳ ಹೋಗುತ್ತದೆ. ತಕ್ಷಣವೇ ತಲೆಯೊಳಗೆಲ್ಲ ಪ್ರಚಂಡ ನೋವು ಆವರಿಸಿಕೊಂಡು, ಹೊಟ್ಟೆಯೊಳಗಿನ ಸರ್ವತ್ರವನ್ನೂ ಹೊರಹಾಕುವಂತಾಗುತ್ತದೆ. ಅಂದು ಹೇಗೋ ಸುಧಾರಿಸಿಕೊಂಡ ಆಕೆಗೆ ಆನಂತರದಿಂದ ಯಾರಿಗೂ ಕೇಳದ ಏನೋ ಶಬ್ದ ಕೇಳುವುದು, ತಲೆ ಸುತ್ತುವುದು, ಕಣ್ಣು ಮಂಜಾಗುವುದು, ಮೂಗಲ್ಲಿ ರಕ್ತ ಸೋರುವುದು… ಇಂಥ ಹಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದೀಗ ಯಾವುದೋ ಸೈ-ಫೈ ಸಿನೆಮಾದ ಅಥವಾ ಮೈನವಿರೇಳಿಸುವ ಇಂಗ್ಲಿಷ್‌ ಮೂವಿಯ ದೃಶ್ಯವಲ್ಲ. ಕಲ್ಪನೆಯೋ ನಿಜವೋ ಎಂದು ಇಂದಿಗೂ ಚರ್ಚೆಯಲ್ಲಿರುವ, ಆರೋಪ-ಪ್ರತ್ಯಾರೋಪಗಳ ಸುಳಿಯಲ್ಲಿ ಸಿಲುಕಿರುವ ʻಹವಾನಾ ಸಿಂಡ್ರೋಮ್‌ʼ (Havana syndrome) ಎಂಬ ಆರೋಗ್ಯ ಸಮಸ್ಯೆಯ ಲಕ್ಷಣಗಳಿವು.

ಏನಿದು ರೋಗ?

ಹಾಗೆ ನೋಡಿದರೆ ಇದನ್ನು ರೋಗ ಅಥವಾ ಡಿಸೀಸ್‌ ಎಂದು ಇಂದಿಗೂ ಒಪ್ಪಲಾಗಿಲ್ಲ. ಬದಲಿಗೆ, ಸಿಂಡ್ರೋಮ್‌ ಅಥವಾ ಅನಾರೋಗ್ಯದ ಲಕ್ಷಣಗಳು ಎಂದೇ ಕರೆಯಲಾಗುತ್ತಿದೆ. ವಿಶ್ವದ ಹಲವೆಡೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ತನ್ನ ಗುಪ್ತಚರರು ಮತ್ತು ರಾಜತಾಂತ್ರಿಕರನ್ನೇ ಗುರಿಯಾಗಿಸಿಕೊಂಡು ಈ ಸಮಸ್ಯೆಯನ್ನು ರಷ್ಯಾ ಸೃಷ್ಟಿಸುತ್ತಿದೆ ಎಂಬುದು ಅಮೆರಿಕದ ವಾದ. ಆದರೆ ರಷ್ಯಾ ಈ ಆರೋಪವನ್ನು ತಳ್ಳಿ ಹಾಕಿದೆ. ಅಮೆರಿಕದ ಹಲವಾರು ರಾಜತಾಂತ್ರಿಕರು ಮತ್ತು ಗೂಢಚರರು ತಮಗೆ ಇಂಥ ಲಕ್ಷಣಗಳು ಕಾಣಿಸಿಕೊಂಡಿವೆ ಎಂದು ಹೇಳಿಕೊಂಡಿದ್ದಾರೆ. ಅವರನ್ನು ತಪಾಸಣೆಗೆ ಒಳಪಡಿಸಿದಾಗ ಮೆದುಳನ್ನೇ ಗುರಿಯಾಗಿಸಿಕೊಂಡ ಈ ದಾಳಿಯಲ್ಲಿ, ಮೆದುಳಿಗೆ ಅಂಥ ಹಾನಿಯೇನೂ ಆಗಿದ್ದನ್ನು ಎಂಆರ್‌ಐ ವರದಿಗಳು ತೋರಿಸುತ್ತಿಲ್ಲ. ಆದರೆ ಅವರಿಗೆ ತೀವ್ರ ಮೈಗ್ರೇನ್‌, ವಾಕರಿಕೆ, ವರ್ಟಿಗೋ, ದೇಹದ ಸಮತೋಲನ ತಪ್ಪುವುದು, ನೆನಪಿಲ್ಲದಂತಾಗುವುದು, ಏನೇನೊ ಶಬ್ದ ಕೇಳುವುದು ಮುಂತಾದ ಸಮಸ್ಯೆಗಳು ಆಗಿದ್ದನ್ನು ಖಚಿತ ಪಡಿಸಿದ್ದಾರೆ.

ಹೀಗಾಗಲು ಕಾರಣ?

ಇದಕ್ಕೆ ಕಾರಣಗಳು ಅಸ್ಪಷ್ಟವಾಗಿ ಮಾತ್ರವೇ ತಿಳಿದಿದೆ. ತೀವ್ರ ಆವರ್ತನದ ಸೂಕ್ಷ್ಮ ತರಂಗಗಳಿಂದ (ಹೈ ಫ್ರೀಕ್ವೆನ್ಸಿ ಮೈಕ್ರೋವೇವ್‌) ನಡೆಸಿದ ದಾಳಿಯೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಧ್ವನಿ ತರಂಗಗಳನ್ನು ಉಪಯೋಗಿಸಿ ನಡೆಸಲಾದ ಸಾನಿಕ್‌ ಅಥವಾ ಅಕೌಸ್ಟಿಕ್‌ ದಾಳಿಗಳು ವ್ಯಕ್ತಿಗಳನ್ನು ಇಂಥ ಸ್ಥಿತಿಗೆ ದೂಡುತ್ತಿವೆ. ರೇಡಾರ್‌ನಂಥ ಕಣ್ಗಾವಲು ಉಪಕರಣಗಳ ನೆರವು ಪಡೆದು ಇದಕ್ಕಾಗಿಯೇ ಸಿದ್ಧ ಪಡಿಸಲಾದ ವಿಶೇಷ ಸಾನಿಕ್ ಆಯುಧಗಳು ಹೊರಸೂಸುವ ಸೂಕ್ಷ್ಮ ತರಂಗಗಳು, ಹೀಗೆ ಮನೋದೈಹಿಕ ರೋಗಲಕ್ಷಣಗಳನ್ನು ಸೃಷ್ಟಿಸುತ್ತಿವೆ ಎನ್ನುವುದು ರಕ್ಷಣಾ ತಜ್ಞರ ವಾದ. ಭಾರತವೂ ಸೇರಿದಂತೆ ವಿಶ್ವದ ಹಲವೆಡೆಗಳಲ್ಲಿ ಕೆಲಸ ಮಾಡುವ ಅಮೆರಿಕದ ಸುಮಾರು 130 ರಾಜತಾಂತ್ರಿಕರು ಇಂಥ ಅಸಂಗತ ಮನೋದೈಹಿಕ ಲಕ್ಷಣಗಳಿಗೆ ತುತ್ತಾಗಿದ್ದಾಗಿ ಹೇಳಿಕೊಂಡಿದ್ದಾರೆ. ಇದರ ಹಿಂದೆ ರಷ್ಯಾದ ʻ29155 ಘಟಕʼದ ಕೈವಾಡವಿದೆ ಎನ್ನಲಾಗುತ್ತಿದೆ. ರಷ್ಯಾದ ಅಂತಾರಾಷ್ಟ್ರೀಯ ಕಾರ್ಯಾಚರಣೆಗಳ ಹೊಣೆಯೆಲ್ಲ ಇರುವುದು ಅಲ್ಲಿನ ಕುಖ್ಯಾತ ʻ29155ʼ ಎಂಬ ಸೇನಾ ಗೂಢಚರ ಘಟಕದ ವ್ಯಾಪ್ತಿಯಲ್ಲಿ.

ಈ ಹೆಸರೇಕೆ ಬಂತು?

ಕ್ಯೂಬಾದ ರಾಜಧಾನಿ ಹವಾನಾದಲ್ಲಿ ಕೆಲಸ ಮಾಡುತ್ತಿದ್ದ ಅಮೆರಿಕದ ರಾಜತಾಂತ್ರಿಕರಿಗೆ 2016ರಲ್ಲಿ ಮೊದಲ ಬಾರಿಗೆ ಈ ಸಮಸ್ಯೆ ಕಾಣಿಸಿಕೊಂಡಿತ್ತು. ಆನಂತರದಿಂದ ಈ ಸಮಸ್ಯೆಗೆ ಹವಾನಾ ಸಿಂಡ್ರೊನ್‌ ಎಂಬ ಹೆಸರೇ ಬಂದಿದೆ. ಆನಂತರದಿಂದ ಚೀನಾ, ಉಜ್ಬೇಕಿಸ್ತಾನ, ಜರ್ಮನಿ, ಪೋಲೆಂಡ್, ಆಸ್ಟ್ರಿಯ ಸೇರಿದಂತೆ ಯುರೋಪ್‌ನ ಹಲವು ದೇಶಗಳು, ಅಮೆರಿಕದ ವಾಷಿಂಗ್ಟನ್‌ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಮೆರಿಕದ ರಾಜತಾಂತ್ರಿಕ ಸಿಬ್ಬಂದಿ ಇಂಥ ರೋಗಲಕ್ಷಣಗಳಿಗೆ ತುತ್ತಾಗಿದ್ದಾರೆ. ಆನಂತರ ಅಮೆರಿಕದ ನಿಲುವುಗಳ ಕ್ಯೂಬಾ ಪ್ರತಿಯಾಗಿ ಬದಲಾದ್ದರಿಂದ ಹವಾನಾ ರಾಜತಾಂತ್ರಿಕ ಕಚೇರಿಗೆ ಬೀಗ ಜಡಿಯಲಾಗಿತ್ತು. ಆದರೆ 2003ರಲ್ಲಿ ಈ ಕಚೇರಿ ಪುನರಾರಂಭಗೊಂಡಿದೆ.

ರಷ್ಯಾ ನಕಾರ

ಇಂಥ ಆರೋಪಗಳೆಲ್ಲ ʻಆಧಾರ ರಹಿತʼ ಎನ್ನುತ್ತವೆ ಮಾಸ್ಕೊ ಮೂಲಗಳು. “ಹಲವು ವರ್ಷಗಳಿಂದ ಇಂಥ ವರದಿಗಳನ್ನು ಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ. ಇದನ್ನು ರಷ್ಯಾಕ್ಕೇ ಅಂಟಿಸಲಾಗಿದೆ. ಆದರೆ ಈ ಬಗ್ಗೆ ನಂಬಲರ್ಹವಾದ ಯಾವ ಸಾಕ್ಷಿಯೂ ಯಾರಲ್ಲೂ ಇಲ್ಲ. ಇವೆಲ್ಲ ಆಧಾರರಹಿತ ಆರೋಪಗಳಷ್ಟೆ” ಎಂಬುದು ಕ್ರೆಮ್ಲಿನ್‌ ವಕ್ತಾರ ಡಿಮಿಟ್ರಿ ಪೆಸ್ಕೋವ್‌ ಅವರ ಮಾತು.

ಭಾರತದಲ್ಲೂ…?

ಹೌದು ಎನ್ನಲಾಗುತ್ತಿದೆ. 2021ರಲ್ಲಿ ಸಿಐಎ ನಿರ್ದೇಶಕ ವಿಲಿಯಂ ಬರ್ನ್ಸ್‌ ಅವರೊಂದಿಗೆ ಭಾರತಕ್ಕೆ ಭೇಟಿ ನೀಡಿದ್ದ ಸಿಐಎ ಅಧಿಕಾರಿಯೊಬ್ಬರಿಗೆ ಇಂಥದ್ದೇ ಸಮಸ್ಯೆಗಳು ಎದುರಾಗಿದ್ದವು. ಆದರೆ ಈ ವಿಚಾರವನ್ನು ಹೆಚ್ಚು ಪ್ರಚಾರಕ್ಕೆ ಎಳೆಯದೆ ಮಾಗುಂ ಆಗಿಯೇ ಇರಿಸಲಾಗಿತ್ತು. ಹಾಗಾಗಿ ಆ ಅಧಿಕಾರಿ ಯಾರು, ಎಲ್ಲಿ, ಏನು ಎಂಬಂಥ ಹೆಚ್ಚಿನ ವಿವರಗಳು ಬಹಿರಂಗಗೊಂಡಿಲ್ಲ ಎಂಬುದಾಗಿ ದಿ ಗಾರ್ಡಿಯನ್‌ ಪತ್ರಿಕೆ ವರದಿ ಮಾಡಿದೆ. ಇಂಥ ವಿಲಕ್ಷಣ ಮತ್ತು ಪ್ರತ್ಯೇಕ ಪ್ರಕರಣಗಳು ಹಲವೆಡೆಗಳಲ್ಲಿ ಅಮೆರಿಕದ ರಾಜತಾಂತ್ರಿಕ ಸಿಬ್ಬಂದಿ ಅನುಭವಿಸಿದ್ದಾರೆ ಎಂಬ ವರದಿಗಳ ಹೊರತಾಗಿ ಯಾವುದೇ ತನಿಖೆಗಳಲ್ಲೂ ಹೆಚ್ಚಿನ ಪುರಾವೆ ದೊರೆತ ಮಾಹಿತಿಯಿಲ್ಲ.

Exit mobile version