Site icon Vistara News

Sweating Sickness: ಏನಿದು, ಯುವಜನರಲ್ಲಿ ಹೃದಯಾಘಾತಕ್ಕೆ ಕಾರಣವಾಗುವ ಬೆವರುವ ಕಾಯಿಲೆ?

Sweating Sickness

ಬೆವರುವ ಕಾಯಿಲೆ (Sweating Sickness) ಎಂಬ ಹೆಸರಿನಿಂದಲೂ ಕರೆಯಲ್ಪಡುವ ಟ್ಯೂಡರ್‌ ಕಾಯಿಲೆ ಯುವ ಜನರಲ್ಲಿ ಕಾಣಿಸಿಕೊಳ್ಳುವ ಕಾಯಿಲೆ. ಈ ಕಾಯಿಲೆಯಿಂದ ಸಣ್ಣ ವಯಸ್ಸಿನಲ್ಲಿಯೇ ಹೃದಯಾಘಾತಕ್ಕೆ ಒಳಗಾಗುವ ಸಂಭವ ಹೆಚ್ಚು. ಹಾಗಾದರೆ, ಈ ಟ್ಯೂಡರ್‌ ಎಂದರೆ ಏನು ಎಂಬ ಪ್ರಶ್ನೆ ನಿಮಗೀಗ ಬಂದಿರಬಹುದು. ಟ್ಯೂಡರ್‌ ಕಾಯಿಲೆಗೆ ಪ್ರಮುಖ ಕಾರಣ ಗೌಟ್‌ ಎಂಬ ಇನ್ನೊಂದು ಸಮಸ್ಯೆ. ಗೌಟ್‌ ಒಂದು ಬಗೆಯ ಸಂಧಿವಾತದ ಸಮಸ್ಯೆಯೇ ಆದರೂ ಇದು ಬರಲು ಕಾರಣ ಬೇರೆ. ಯೂರಿಕ್‌ ಆಸಿಡ್‌ ದೇಹದಲ್ಲಿ ಹೆಚ್ಚಾದಾಗ ಹಾಗೂ ಅದು ದೇಹದ ಕೆಲವು ಭಾಗಗಳಲ್ಲಿ ಶೇಖರಣೆಯಾಗಲು ಆರಂಭವಾದಾಗ ಸಂದುಗಳಲ್ಲಿ ನೋವು, ಕೈಕಾಲು ಸೆಳೆತ, ಅತೀವ ನೋವು ಕಾಣಿಸಿಕೊಳ್ಳುತ್ತದೆ. ಗಂಟುಗಳಲ್ಲಿ ಯೂರಿಕ್‌ ಆಸಿಡ್‌ ಶೇಖರಣೆಯಾದಾಗ ಈ ನೋವು ಉಲ್ಬಣಿಸುತ್ತದೆ. ಗಂಟುಗಳು ಊದಿಕೊಳ್ಳುವುದು, ಕೆಂಪಗಾಗುವುದು ಇತ್ಯಾದಿಗಳು ಗೌಟ್‌ನ ಆರಂಭಿಕ ಲಕ್ಷಣಗಳು.

ಹೃದಯ ತೊಂದರೆಗೆ ದಾರಿ

ಈ ಸಮಸ್ಯೆ ಹೃದಯದ ತೊಂದರೆಯನ್ನು ಇನ್ನೂ ಹೆಚ್ಚು ಮಾಡುತ್ತದೆ. ಇದ್ದಕ್ಕಿದ್ದಂತೆ ಹೃದಯಾಘಾತ, ಕಾಲಿನ ಸಂಧಿಗಳಲ್ಲಿ ಅತೀವ ನೋವು, ಸೆಳೆತ, ಊದಿಕೊಂಡ ಪಾದ ಹಾಗೂ ಚರ್ಮ ಇತ್ಯಾದಿಗಳು ಕಾಣಿಸಿಕೊಳ್ಳಬಹುದು. ಇದು ಕೈಕಾಲುಗಳಿಗಿಡೀ ಹರಡಿಕೊಂಡು ತಡೆಯಲಾದ ನೋವನ್ನೂ ತರಬಹುದು. ಮೈಕೈ ಬೆವರಿ, ಅತೀವ ಸಂಕಟ ನೀಡುವ ಸಮಸ್ಯೆಯಿದು.

ರಕ್ತ ಸಂಚಾರ ಸಮಸ್ಯೆ

ವೈದ್ಯರುಗಳ ಪ್ರಕಾರ, ಈ ಸಮಸ್ಯೆಗೆ ಒಳಗಾದ ಮಂದಿಗೆ ಕೆಲವೊಮ್ಮೆ ಹೃದಯದ ಕೆಲವು ಭಾಗದ ಮಾಂಸಖಂಡಗಳಿಗೆ ರಕ್ತ ಸರಿಯಾಗಿ ಪೂರೈಕೆಯಾಗದೆ, ಇದ್ದಕ್ಕಿದ್ದ ಹಾಗೆಯೇ ಅತ್ಯಂತ ಅಪಾಯಕಾರಿಯಾದ ಹೃದಯಾಘಾತಕ್ಕೆ ಈಡಾಗುತ್ತಾರೆ. ಈ ರಕ್ತಪೂರಣ ಸಾಮರ್ಥ್ಯ ಕಡಿಮೆಯಾಗಲೂ ಕೂಡಾ ಕಾರಣವಿದೆ. ಹೃದಯದಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ಬ್ಲಾಕ್‌ ಅಥವಾ ತಡೆಗಳಿದ್ದಾಗಲೂ ಹೀಗೆ ಆಗುತ್ತದೆ.

ಪಾರ್ಶ್ವವಾಯು ಸಾಧ್ಯತೆ

ಅಧ್ಯಯನಗಳ ಪ್ರಕಾರ, ಸಾಮಾನ್ಯವಾಗಿ ಗೌಟ್‌ ತೊಂದರೆ ಉಲ್ಬಣಿಸುವ ಸಂದರ್ಭ ಹೃದಯದ ಸಮಸ್ಯೆಗೂ ಸಂಬಂಧವಿರುತ್ತದೆ. ಹೃದಯಾಘಾತ, ಪಾರ್ಶ್ವವಾಯು ಇತ್ಯಾದಿಗಳ ಅಪಾಯವನ್ನು ಗೌಟ್‌ ಹೆಚ್ಚು ಮಾಡುತ್ತದೆ. ಹಾಗಾಗಿ ಗೌಟ್‌ ಸಮಸ್ಯೆ ಇರುವ ಮಂದಿ ಹೃದಯದ ಬಗ್ಗೆಯೂ ಎಚ್ಚರದಿಂದಿರಬೇಕು. ಆಗಾಗ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯುವುದು ಒಳ್ಳೆಯದು. ಒಂದು ಅಧ್ಯಯನದ ಪ್ರಕಾರ, ಗೌಟ್‌ ಸಮಸ್ಯೆ ಹೊಂದಿರುವ ಮಂದಿಯ ಪೈಕಿ, 62,000 ಮಂದಿ ಗೌಟ್‌ ಸಮಸ್ಯೆಯನ್ನು ಹೊತ್ತು ತಂದ ಮಂದಿಯಲ್ಲಿ ಶೇ. 70ರಷ್ಟು ಮಂದಿ ಪುರುಷರು. ಅಂದರೆ ಪುರುಷರಲ್ಲಿ ಈ ಸಮಸ್ಯೆ ಹೆಚ್ಚು. ಗೌಟ್‌ ಉಲ್ಬಣವಾದ ಮೂರ್ನಾಲ್ಕು ತಿಂಗಳಲ್ಲಿ ಹೃದಯಾಘಾತ ಹಾಗೂ ಪಾರ್ಶ್ವವಾಯುವಿನಂತಹ ಸಮಸ್ಯೆ ಕಾಡಿದ ಮಂದಿ 10,000ಕ್ಕೂ ಹೆಚ್ಚು. ಹಾಗಾಗಿ ಗೌಟ್‌ ಕಾಯಿಲೆ ಇದೆ ಎಂದು ತಿಳಿದು ಬಂದ ಮೇಲೆ ಸುಮಾರು ಎರಡು ಮೂರು ತಿಂಗಳ ಆರಂಭಿಕ ಹಂತದಲ್ಲಿ ಬಹಳ ಜಾಗರೂಕರಾಗಿರುವುದು ಅತ್ಯಗತ್ಯ ಎಂದು ಈ ವರದಿ ಹೇಳಿದೆ.

ಮಧುಮೇಹ, ಹೈಪರ್‌ ಟೆನ್ಶನ್‌ ಸಮಸ್ಯೆ

ಯೂರಿಕ್‌ ಆಸಿಡ್‌ ದೇಹದಲ್ಲಿ ಹೆಚ್ಚಾದಾಗ ಸಹಜವಾಗಿಯೇ, ಮಧುಮೇಹ, ಹೈಪರ್‌ ಟೆನ್ಶನ್‌ನಂತಹ ಸಮಸ್ಯೆಗಳೂ ಬರುವ ಸಂಭವ ಹೆಚ್ಚು. ಇವೂ ಕೂಡಾ, ಒಂದಕ್ಕೊಂದು ಸಂಬಂಧವನ್ನು ಹೊಂದಿದೆ. ಮಧುಮೇಹ, ಹೈಪರ್‌ಟೆನ್ಶನ್‌ಗಳು ಹೃದಯದ ಸಮಸ್ಯೆಗೂ ದಾರಿ ಮಾಡಿಕೊಡುತ್ತದೆ. ಹಾಗಾಗಿ ಗೌಟ್‌ ಇದ್ದ ಮಾತ್ರಕ್ಕೆ ಎಲ್ಲರಿಗೂ ಹೀಗೆ ಆಗಿಯೇ ಆಗುತ್ತದೆ ಎಂದು ಅರ್ಥವಲ್ಲ, ಬದಲಾಗಿ ಆಗುವ ಅಪಾಯ ಇತರರಿಗಿಂತ ಹೆಚ್ಚು ಎಂಬುದನ್ನು ಅರ್ಥೈಸಿಕೊಳ್ಳಬೇಕು.

Exit mobile version