Site icon Vistara News

World TB Day 2023 : ಕ್ಷಯರೋಗ ತಡೆಗೆ ಯಾವೆಲ್ಲಾ ಎಚ್ಚರಿಕೆ ಅಗತ್ಯ?

What precautions are necessary to prevent tuberculosis?

#image_title

ವಿಶ್ವದೆಲ್ಲೆಡೆ ಮುಗ್ಧ ಜೀವಗಳನ್ನು ಸೆಳೆಯುತ್ತಿರುವ ಹತ್ತು ಪ್ರಮುಖ ಕಾರಣಗಳ ಪೈಕಿ ಕ್ಷಯರೋಗವೂ ಒಂದು. ʻಟಿಬಿʼ ಎಂದೇ ಕರೆಯಲಾಗುವ ಈ ಪ್ರಾಣಾತಂಕ ರೋಗದ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ನಿಟ್ಟಿನಲ್ಲಿ, ಮಾರ್ಚ್‌ ತಿಂಗಳ 24ನೇ ದಿನವನ್ನು ವಿಶ್ವ ಕ್ಷಯರೋಗ ದಿನವೆಂದು (World TB Day 2023) ಗುರುತಿಸಲಾಗಿದೆ. ಗಾಳಿಯಿಂದ ಹರಡುವ ಬ್ಯಾಕ್ಟೀರಿಯಾದಿಂದ ಬರುವ ಈ ರೋಗ ಮೊದಲಿಗೆ ಪುಪ್ಪುಸಗಳಿಗೆ ಸೋಂಕು ಹರಡಿ, ಕೆಲವೊಮ್ಮೆ ದೇಹದ ಇತರೆಡೆಗೂ ಹಬ್ಬಿಸುತ್ತದೆ.

ಇಂದಿಗೂ ವರ್ಷಂಪ್ರತಿ ಸುಮಾರು ಒಂದು ಕೋಟಿ ಟಿಬಿ ಪ್ರಕರಣಗಳು ವಿಶ್ವದೆಲ್ಲೆಡೆ ವರದಿಯಾಗುತ್ತಿವೆ. ಈ ಪ್ರಕರಣಗಳಲ್ಲಿ ಭಾರತಕ್ಕೆ ಸಿಂಹಪಾಲಿರುವುದು ದುರದೃಷ್ಟಕರ ಸಂಗತಿ. ಸುಮಾರು 26 ಲಕ್ಷ ಪ್ರಕರಣಗಳು ಭಾರತದಲ್ಲಿ ಪ್ರತಿ ವರ್ಷ ವರದಿಯಾಗುತ್ತಿದ್ದು, ಅವುಗಳಲ್ಲಿ ೪.೫ ಲಕ್ಷ ರೋಗಿಗಳು ಮೃತಪಡುತ್ತಿದ್ದಾರೆ. ವ್ಯಾಪಕವಾಗಿ ಹರಡುವ ಈ ಸೋಂಕು ಬಡತನ ಹೆಚ್ಚಿರುವ ಪ್ರದೇಶಗಳಲ್ಲಿ ಹೆಚ್ಚು ವರದಿಯಾಗುವುದು ಆತಂಕಕಾರಿ ವಿಷಯ. ʻಹೌದು! ನಾವು ಕ್ಷಯವನ್ನು ನಿರ್ಮೂಲನೆ ಮಾಡಬಹುದು!ʼ ( ‘Yes! We can end TB!’) ಎಂಬುದು ಈ ವರ್ಷದ ಘೋಷ ವಾಕ್ಯ.

ಕ್ಷಯ ರೋಗದ ಒಂದಿಷ್ಟು ವಿವರಗಳು

ಶ್ವಾಸಕೋಶಗಳಿಗೆ ಮತ್ತು ದೇಹದ ಇತರೆಡೆಯನ್ನು ಬಾಧಿಸುವ (pulmonary and extrapulmonary)- ಹೀಗೆ ಎರಡು ರೀತಿಯಲ್ಲಿ ಕ್ಷಯವನ್ನು ವಿಂಗಡಿಸಬಹುದು. ಇವುಗಳ ಲಕ್ಷಣಗಳ ಬಗ್ಗೆ ಹೇಳುವುದಾದರೆ- ಕೆಮ್ಮು , ಜ್ವರ, ಎದೆ ನೋವು, ಉಸಿರಾಟದ ತೊಂದರೆ, ರಕ್ತ ಮಿಶ್ರಿತ ಕಫ, ಹಸಿವಿಲ್ಲದಿರುವುದು, ತೂಕ ಇಳಿಕೆ ಮುಂತಾದವು. ಆದರೆ ಎದೆಯ ಎಕ್ಸ್‌ ರೇ ಮಾಡಿ, ಕಫದ ಪರೀಕ್ಷೆ ಮಾಡಿದಾಗಲೇ ಈ ರೋಗವನ್ನು ನಿಖರವಾಗಿ ಪತ್ತೆ ಮಾಡಲು ಸಾಧ್ಯ. ಇದು ನಿಶ್ಚಿತವಾಗಿ ಸೋಂಕು ರೋಗವಾಗಿದ್ದು, ಒಬ್ಬ ರೋಗಿಯಿಂದ 15 ಆರೋಗ್ಯವಂತರಿಗೆ ಸೋಂಕು ಹರಡುವುದು ಸಾಧ್ಯ.. ಹಾಗಾಗಿ ರೋಗಿಯನ್ನು ಪ್ರತ್ಯೇಕವಾಗಿ ಇರಿಸುವುದು ಅನಿವಾರ್ಯ.

ಇದನ್ನೂ ಓದಿ : ತಾಜಾ ತರಕಾರಿ-ಕಾಳುಗಳನ್ನು ಸೇವಿಸಿ, ಸಂಸ್ಕರಿಸಿದ ಆಹಾರದಿಂದ ದೂರವಿರಿ; ಮಾರ್ಗಸೂಚಿ ಬಿಡುಗಡೆ ಮಾಡಿದ ರಾಜ್ಯ ಆರೋಗ್ಯ ಇಲಾಖೆ

ಇಲ್ಲಿಗೆ ಮುಗಿಯುವುದಿಲ್ಲ! ಒಮ್ಮೆ ರೋಗ ಪತ್ತೆಯಾಗಿ ರೋಗಿಯ ಚಿಕಿತ್ಸೆ ಆರಂಭವಾದ ಮೇಲೆ, ಇನ್ನಷ್ಟು ಸಮಸ್ಯೆಗಳು ಆರಂಭವಾಗುತ್ತವೆ. ಹಲವಾರು ಶತಮಾನಗಳಿಂದ ಮನುಕುಲವನ್ನು ಕಾಡುತ್ತಿರುವ ರೋಗಗಳಲ್ಲಿ ಕ್ಷಯವೂ ಒಂದು. ಈ ಸೋಂಕು ಒಬ್ಬರಿಂದೊಬ್ಬರಿಗೆ ಹರಡುವ ಕಾರಣ, ರೋಗಿಯನ್ನು ಕೆಲಕಾಲ ವ್ಯಷ್ಟಿಯಲ್ಲಿ ಇಡುವುದು ಅನಿವಾರ್ಯವಾದ್ದರಿಂದ ಸಾಮಾಜಿಕವಾಗಿ ಬಹಿಷ್ಕಾರದಂಥ ಸಮಸ್ಯೆಗಳು ಇಂದಿಗೂ ಕೆಲವು ಕಡೆಗಳಲ್ಲಿವೆ. ಎಳೆಯ ಹೆಣ್ಣುಮಕ್ಕಳಲ್ಲಿ ಈ ರೋಗ ಪತ್ತೆಯಾದರೆ, ಅವರಿಗೆ ವಿವಾಹವಾಗದಂಥ ಸ್ಥಿತಿಯೂ ಇಲ್ಲದಿಲ್ಲ. ಇದನ್ನೊಂದು ಕಳಂಕ ಎಂದು ಕೆಲವು ಪ್ರದೇಶಗಳಲ್ಲಿ ಇಂದಿಗೂ ಪರಿಗಣಿಸುತ್ತಾರೆ. ಇವೆಲ್ಲ ಕಾರಣಗಳಿಂದ ರೋಗ ಪತ್ತೆಗೇ ಜನ ಹಿಂಜರಿದು, ಆಸ್ಪತ್ರೆಗೆ ತಲುಪುವಷ್ಟರಲ್ಲಿ ರೋಗ ಉಲ್ಭಣಿಸಿ ಕೈ ಮೀರುವ ಸ್ಥಿತಿಯಲ್ಲಿ ಇರುತ್ತಾರೆ.

ಚಿಕಿತ್ಸೆ ಏನು?

ಕೆಲವೇ ವಾರಗಳಲ್ಲಿ ಮುಗಿಯುವ ಚಿಕಿತ್ಸೆ ಇದಲ್ಲವಾಗಿದ್ದು, ದೀರ್ಘ ಕಾಲದ ಶುಶ್ರೂಷೆಯ ಅಗತ್ಯವಿರುತ್ತದೆ. ಆದರೆ ಅಲ್ಪ ಕಾಲದ ಚಿಕಿತ್ಸೆಯ ನಂತರ, ತಮ್ಮ ಆರೋಗ್ಯ ಸುಧಾರಿಸಿದೆ ಎನಿಸಿಬಿಟ್ಟರೆ, ರೋಗಿಗಳು ಚಿಕಿತ್ಸೆಯನ್ನು ಅರ್ಧಕ್ಕೇ ನಿಲ್ಲಿಸಿದ ಪ್ರಕರಣಗಳು ಬಹಳಷ್ಟಿವೆ. ಇದರಿಂದ ರೋಗ ಮರುಕಳಿಸಿ, ಔಷಧಕ್ಕೂ ಬ್ಯಾಕ್ಟೀರಿಯಾಗಳು ಬಗ್ಗುವುದಿಲ್ಲ. ಹಾಗಾಗಿ ವೈದ್ಯರು ಹೇಳುವವರೆಗೆ ಚಿಕಿತ್ಸೆಯನ್ನು ಜಾರಿಯಲ್ಲಿ ಇರಿಸಲೇಬೇಕು.

ನಿಯಂತ್ರಣ ಹೇಗೆ?

ಇವೆಲ್ಲವುಗಳ ಜೊತೆಗೆ, ರೋಗ ಹರಡದಂತೆ ತಡೆಯುವುದೂ ಬಹಳ ಮುಖ್ಯವಾದ ಸಂಗತಿ. ಇದಕ್ಕಾಗಿ ಚಿಕಿತ್ಸೆಯ ಜೊತೆಗೆ, ವೈದ್ಯರು ಹೇಳಿದ ಇತರ ಸಂಗತಿಗಳ ಬಗೆಗೂ ನಿಷ್ಠೆ ಬೇಕು. ಉದಾ, ಪೌಷ್ಟಿಕಾಂಶಯುಕ್ತ ಆಹಾರ, ಗಾಳಿ-ಬೆಳಕು ಇರುವಂಥ ವಾಸಸ್ಥಳ, ಕೆಮ್ಮುವಾಗ, ಸೀನುವಾಗ ವಹಿಸಬೇಕಾದ ಎಚ್ಚರಿಕೆ ಮುಂತಾದವುಗಳ ಬಗ್ಗೆ ರೋಗಿಗೆ ತಿಳುವಳಿಕೆ ನೀಡಬೇಕಾದುದು ಅತಿ ಅಗತ್ಯವಾದ ಸಂಗತಿ. ತನ್ನಿಂದ ರೋಗ ಇನ್ನೊಬ್ಬರಿಗೆ ಹರಡುವಂತಿಲ್ಲ ಎಂಬ ಎಚ್ಚರಿಕೆಯನ್ನು ರೋಗಿ ಎಂದಿಗೂ ಮರೆಯುವಂತಿಲ್ಲ.

Exit mobile version