ಎಳೆ ಮಕ್ಕಳಿಗೆ ಆರು ತಿಂಗಳು ತುಂಬುತ್ತಿದ್ದಂತೆ, ಅವುಗಳ ಬೆಳವಣಿಗೆಗೆ ಸೂಕ್ತವಾದ ಆಹಾರವನ್ನು ನೀಡಬೇಕಾಗುತ್ತದೆ. ಅಲ್ಲಿಯವರೆಗೆ ತಾಯಿಯ ಹಾಲು ಮಾತ್ರವೇ ಶಿಶುವಿಗೆ ಸಾಕಾದರೂ, ನಂತರ ತಾಯಿಯ ಹಾಲಿನ ಜೊತೆಗೆ ಹೆಚ್ಚುವರಿ ಆಹಾರಗಳ ಅಗತ್ಯ ಬಂದೇಬರುತ್ತದೆ. 6-12 ತಿಂಗಳವರೆಗೆ ಮತ್ತು ಒಂದು ವರ್ಷದ ನಂತರ ಆಹಾರ ಕ್ರಮವನ್ನು ಬದಲಿಸಬೇಕಾಗುತ್ತದೆ. ಈ ಕುರಿತಾಗಿ ಹಲವಾರು ವಿವರಗಳನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಇತ್ತೀಚೆಗೆ ಪ್ರಕಟಿಸಿದೆ. ತಾಯಿ ಹಾಲಿನ ಜೊತೆಗೆ, ಹೊರಗಿನಿಂದ ಆಹಾರ ಪ್ರಾರಂಭ ಮಾಡಿದ ತಕ್ಷಣ ಅತ್ಯಂತ ತೆಳುವಾದ ಹದದಲ್ಲಿರುವ ಅಕ್ಕಿ ಗಂಜಿ, ಬೇಳೆ-ತರಕಾರಿಯ ನೀರು ಮುಂತಾದವನ್ನು ಶಿಶುಗಳಿಗೆ ನೀಡಲಾಗುತ್ತದೆ. “ಪ್ರಾರಂಭದಲ್ಲಿ ಇದು ಸೂಕ್ತವಾದರೂ, ಕ್ರಮೇಣ ಶಿಶುಗಳ ಆಹಾರದ ಹದವನ್ನು ಮಂದಗೊಳಿಸಿ” ಎನ್ನುವುದು ಐಸಿಎಂಆರ್ ಸಲಹೆ (ICMR guidelines). ಅಂದರೆ ಬೇಳೆ-ತರಕಾರಿಯ ನೀರಿಗೇ ಶಿಶುಗಳ ಆಹಾರವನ್ನು ಸ್ಥಗಿತಗೊಳಿಸುವುದು ಸರಿಯಲ್ಲ. ಬದಲಿಗೆ, ತರಕಾರಿಗಳನ್ನು ಚೆನ್ನಾಗಿ ಬೇಯಿಸಿ ತೆಳುವಾದ ಪೇಸ್ಟ್‌ನಂತೆ ಮಾಡುವುದು, ಬೇಳೆಯ ಮಂದ ಕಟ್ಟು ಉಣಿಸುವುದು ಶಿಶುಗಳಿಗೆ ಹೆಚ್ಚು ಪೂರಕ. ಘನ ಆಹಾರ ನೀಡುವುದಕ್ಕೆ ಪ್ರಾರಂಭಿಸಿದಾಗ ಕೂಸುಗಳು ಉಗಿಯುವುದು, ಕಟವಾಯಲ್ಲಿ ಹರಿಸುವುದು ಸಾಮಾನ್ಯ. ಕಾರಣ ಅವುಗಳಿಗೆ ಘನ ಆಹಾರವನ್ನು ನುಂಗುವುದು ಅಭ್ಯಾಸವಾಗುವುದಕ್ಕೆ ಸಮಯ ಬೇಕು. ನಾಲಿಗೆಯಲ್ಲಿ ಅದನ್ನು ಒಳಗೆ ತಳ್ಳುವ ಪ್ರಯತ್ನದಲ್ಲಿ, ಹೆಚ್ಚಿನ ಆಹಾರವನ್ನು ಅವು ಬಾಯಿಂದ ಹೊರಗೆ ತಳ್ಳುವುದೇ ಹೆಚ್ಚು. ಇದೇ ನೆವದಿಂದ ತೀರಾ ನೀರಾದ ಆಹಾರವನ್ನು ಅವುಗಳಿಗೆ ಉಣಿಸುವ ಅಗತ್ಯವಿಲ್ಲ ಅಥವಾ ಆ ಆಹಾರಗಳನ್ನು ಕೂಸುಗಳು ಇಷ್ಟಪಡುವುದಿಲ್ಲ ಎಂದೂ ಅರ್ಥವಲ್ಲ. ಪ್ರಾರಂಭದಲ್ಲಿ ತೆಳುವಾದ ಹದದಲ್ಲಿ ಇದ್ದರೂ, ಕ್ರಮೇಣ ಇದನ್ನು ಮಂದವಾದ ಹದಕ್ಕೆ (ಇಡ್ಲಿ ಹಿಟ್ಟಿನ ಹದಕ್ಕೆ) ತರುವುದು ಅಗತ್ಯ ಎಂದು ತನ್ನ ವಿವರವಾದ ನಿರ್ದೇಶನಗಳಲ್ಲಿ ಸಂಸ್ಥೆ ಹೇಳಿದೆ.
ಪೂರಕ ಆಹಾರಗಳೆಂದರೆ…?
ಇದನ್ನು ಪಾಲಕರು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. 6 ತಿಂಗಳವರೆಗಿನ ಬೆಳವಣಿಗೆಗೆ ತಾಯಿಯ ಹಾಲು ಸಾಕಾಗುತ್ತದೆ. ಇದರಿಂದ ದಿನಕ್ಕೆ ಅಂದಾಜು 5 ಗ್ರಾಂ ಪ್ರೊಟೀನ್ ಮತ್ತು 500 ಕ್ಯಾಲರಿ ಶಕ್ತಿ ಮಗುವಿಗೆ ದೊರೆಯುತ್ತದೆ. 6 ತಿಂಗಳ ನಂತರ, ತನ್ನ ಚಟುವಟಿಕೆಯನ್ನು ಹೆಚ್ಚಿಸಿಕೊಳ್ಳುವ ಮಗುವಿಗೆ ಈ ಪ್ರಮಾಣ ಸಾಕಾಗುವುದಿಲ್ಲ. ದಿನಕ್ಕೆ 9-10 ಗ್ರಾಂ ಪ್ರೊಟೀನ್ ಮತ್ತು650ರಿಂದ720 ಕ್ಯಾಲರಿಗಳವರೆಗೆ ಶಕ್ತಿ ಬೇಕಾಗುತ್ತದೆ. ಈ ಕೊರತೆಯನ್ನು ತುಂಬುವುದಕ್ಕೆ ಪೂರಕವಾದ ಘನ ಆಹಾರಗಳನ್ನು ಮಗುವಿಗೆ ನೀಡಬೇಕಾಗುತ್ತದೆ.
ಏನು ಕೊಡಬೇಕು?
ಈ ದಿನಗಳಲ್ಲಿ ಸೂಕ್ಷ್ಮ ಪೋಷಕಾಂಶಗಳ ಅಗತ್ಯ ಶಿಶುಗಳಿಗೆ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಹಾಗಾಗಿ, ಧಾನ್ಯಗಳ ಜೊತೆಗೆ ಎಣ್ಣೆ ಬೀಜಗಳು, ಹಾಲು, ತರಕಾರಿಗಳು ಮತ್ತು ಹಣ್ಣುಗಳನ್ನು ನೀಡಬೇಕು. ಮಾತ್ರವಲ್ಲ, ತರಹೇವಾರಿ ಬೇಳೆಗಳು, ನಾನಾ ರೀತಿಯ ಕಾಳುಗಳೆಲ್ಲ ಪುಟ್ಟ ಮಕ್ಕಳ ಪ್ರೊಟೀನ್ ಅಗತ್ಯವನ್ನು ಪೂರೈಸುತ್ತವೆ. ಜೊತೆಗೆ ಬೇಯಿಸಿದ ಮೊಟ್ಟೆಯನ್ನು ಅಷ್ಟಷ್ಟಾಗಿ ಅಭ್ಯಾಸ ಮಾಡಿಸಬಹುದು.
ಬೇಯಿಸಿದ ಕ್ಯಾರೆಟ್, ಕುಂಬಳಕಾಯಿ, ಪಾಲಕ್, ಗೆಣಸು ಮುಂತಾದ ಸೊಪ್ಪು-ತರಕಾರಿಗಳ ಪೇಸ್ಟ್ ಮಕ್ಕಳಿಗೆ ಉಣಿಸಬಹುದು. ಸೇಬುಹಣ್ಣನ್ನೂ ಇದೇ ರೀತಿಯಲ್ಲಿ ನೀಡಬಹುದು. ಮೊದಲಿಗೆ ತರಕಾರಿ, ಹಣ್ಣುಗಳನ್ನು ಒಂದೊಂದಾಗಿ ನೀಡಿ, ಅದರಿಂದ ಶಿಶುಗಳ ಆರೋಗ್ಯದಲ್ಲಿ ವ್ಯತ್ಯಾಸವಾಗುವುದಿಲ್ಲ ಎಂದು ಖಾತ್ರಿಯಾದ ಮೇಲೆ, ಮಿಶ್ರ ತರಕಾರಿ ಮತ್ತು ಬೇಳೆಗಳನ್ನು ಉಣಿಸಬಹುದು. ಒಂದು ವರ್ಷದ ನಂತರ ಮೃದುವಾಗಿ ಬೇಯಿಸಿದ ಧಾನ್ಯದ ಉಪ್ಪಿಟ್ಟುಗಳು, ಬೇಳೆ ಹಾಕಿದ ಕಿಚಡಿಗಳು, ಬೇಯಿಸಿದ ಮೊಟ್ಟೆ, ಮೀನುಗಳನ್ನು ರೂಢಿಸಬಹುದು.
ಇದನ್ನೂ ಓದಿ: Mango For Diabetes: ಮಧುಮೇಹಿಗಳೂ ಮಾವಿನಹಣ್ಣಿನ ರುಚಿ ಸವಿಯಬಹುದೇ? ಇಲ್ಲಿದೆ ಉತ್ತರ!
ಯಾವುದು ಬೇಡ?
ಪುಟ್ಟ ಮಕ್ಕಳು ಉಪ್ಪಾದ ಚಿಪ್ಸ್, ಸಿಹಿ ಕ್ಯಾಂಡಿಗಳೆಲ್ಲ ಇಷ್ಟಪಟ್ಟು ನೆಕ್ಕುತ್ತವೆ. ಆದರೆ ಅವುಗಳನ್ನು ನೀಡುವುದು ಸಲ್ಲದು. ಆಹಾರಕ್ಕೆ ಸಕ್ಕರೆಯಂಥ ಕೃತಕ ಸಿಹಿಗಳು, ಫ್ರೂಟ್ ಜ್ಯೂಸ್‌ಗಳನ್ನು ಮಿಶ್ರ ಮಾಡುವುದಕ್ಕೂ ಐಸಿಎಂಆರ್‌ಗೆ ಸಹಮತವಿಲ್ಲ. ಬದಲಿಗೆ ನೈಸರ್ಗಿಕವಾದ ಹಣ್ಣುಗಳನ್ನೇ ಸೀರಿಯಲ್‌ಗೆ ಮಿಶ್ರ ಮಾಡುವುದು ಆರೋಗ್ಯಕರ. ಪೂರಕ ಆಹಾರಗಳಿಗೆ ಉಪ್ಪು-ಸಿಹಿಗಳನ್ನೆಲ್ಲಾ ಸೇರಿಸಿಯೇ ತಿನ್ನಿಸುವ ಅಭ್ಯಾಸ ಸರಿಯಲ್ಲ ಎಂದು ನಿರ್ದೇಶನದಲ್ಲಿ ಹೇಳಲಾಗಿದೆ.