Site icon Vistara News

ದಡಾರದಿಂದ ಚೇತರಿಸಿಕೊಳ್ಳುತ್ತಿರುವವರ ಆಹಾರ ಹೇಗಿರಬೇಕು?

Food

ದಡಾರ ಸಾಂಕ್ರಾಮಿಕದ ಪ್ರಸರಣ ಇನ್ನೂ ತಗ್ಗಿಲ್ಲ. ಮಕ್ಕಳು ದೊಡ್ಡವರಾದಿಯಾಗಿ ಬಹಳಷ್ಟು ಮಂದಿಯಲ್ಲಿ ದಡಾರ ಕಾಣಿಸಿಕೊಳ್ಳುತ್ತಿದೆ. ಫ್ಲೂ ಮಾದರಿಯ ಲಕ್ಷಣಗಳ ಜೊತೆಗೆ, ಮೈಮೇಲೆಲ್ಲಾ ಗುಳ್ಳೆಗಳೇಳುವುದು ಸಾಮಾನ್ಯ. ಇಂಥ ಸಂದರ್ಭದಲ್ಲಿ ರೋಗಿಯ ಆಹಾರ ಅಥವಾ ಪಥ್ಯ ಹೇಗಿರಬೇಕು ಎಂಬ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಮೈಮೇಲೆಲ್ಲಾ ಗುಳ್ಳೆಗಳು, ಜ್ವರ, ನೆಗಡಿ, ಕೆಮ್ಮು, ಗಂಟಲು ನೋವು ಮುಂತಾದ ಹಲವು ರೀತಿಯ ತೊಂದರೆಗಳು ಈ ರೋಗಿಗಳಿಗೆ ಕಾಣಿಸಿಕೊಳ್ಳಬಹುದು. ಗಂಟಲು ನೋವಿನಿಂದಾಗಿ ಊಟ ಸರಿಯಾಗಿ ಮಾಡಲು ಆಗದೆ ಇರಬಹುದು. ಆದರೆ ಜ್ವರದಿಂದಾಗಿ ಸೊರಗಿ, ಚೈತನ್ಯ ಕಳೆದುಕೊಳ್ಳುವ ದೇಹವು ಚೇತರಿಸಿಕೊಳ್ಳಲು ಪೌಷ್ಟಿಕ ಆಹಾರದ ಅಗತ್ಯವಿರುತ್ತದೆ. ಮಾತ್ರವಲ್ಲ, ಆಗಿರುವ ಹಾನಿಯನ್ನು ಸರಿಪಡಿಸಿಕೊಳ್ಳಲು ಚರ್ಮಕ್ಕೂ ಹೆಚ್ಚಿನ ಪ್ರೊಟೀನ್‌ ಬೇಕಾಗುತ್ತದೆ. ಹಾಗಾಗಿ ಈ ಸಂದರ್ಭದಲ್ಲಿ ರೋಗಿಯ ಆಹಾರಕ್ರಮ ಅತ್ಯಂತ ಮುಖ್ಯವಾದದ್ದು.

ಹೀಗಿರಲಿ ಆಹಾರ: ಗಂಟಲು ನೋವು, ಬಾಯಿಹುಣ್ಣು ಮತ್ತು ಜ್ವರ ಹೆಚ್ಚಿದ್ದರೆ ಘನ ಆಹಾರ ದಕ್ಕಿಸಿಕೊಳ್ಳುವುದು ಕಷ್ಟ. ಹಾಗಾಗಿ ಪೌಷ್ಟಿಕವಾದ ದ್ರವಾಹಾರ ಸೂಕ್ತ. ಹಣ್ಣಿನ ರಸಗಳು, ಅಕ್ಕಿ, ರಾಗಿ ಮತ್ತಿತರ ಧಾನ್ಯಗಳ ಅಂಬಲಿ ಅಥವಾ ಗಂಜಿ, ಬೇಳೆ-ತರಕಾರಿಗಳ ಕಟ್ಟು, ಸೂಪು, ಮಜ್ಜಿಗೆಯಂಥವು ಸುಲಭವಾಗಿ ಜೀರ್ಣವಾಗುತ್ತವೆ. ನೆಗಡಿ-ಕೆಮ್ಮು-ಕಫ ಹೆಚ್ಚಿಲ್ಲದಿದ್ದರೆ ಎಳನೀರೂ ಸಹಕಾರಿ. ಅರಿಶಿನ ಹಾಲು, ಬಾರ್ಲಿ ಗಂಜಿಯಂಥವೂ ಪ್ರೊಟೀನ್‌ ಅಗತ್ಯವನ್ನು ಪೂರೈಸಬಲ್ಲವು. ಈ ದಿನಗಳಲ್ಲಿ ದೇಹಕ್ಕೆ ನೀರು ಕಡಿಮೆಯಾದರೆ ಸಮಸ್ಯೆಗಳು ಬಿಗಡಾಯಿಸುತ್ತವೆ. ಹಾಗಾಗಿ ರೋಗ ಲಕ್ಷಣಗಳನ್ನು ಕಡಿಮೆ ಮಾಡುವಂಥ ದ್ರವಾಹಾರಗಳನ್ನು ಆದಷ್ಟೂ ಹೆಚ್ಚಾಗಿ ನೀಡುವುದು ಸೂಕ್ತ.

ರೋಗ ಲಕ್ಷಣಗಳು ಸ್ವಲ್ಪ ಕಡಿಮೆಯಾದಂತೆ ದ್ರವಾಹಾರದಿಂದ ಕ್ರಮೇಣ ಘನ ಆಹಾರದೆಡೆಗೆ ಬದಲಾಯಿಸಬೇಕಾಗುತ್ತದೆ. ಗಂಜಿಯ ಜೊತೆಗೆ ಖಿಚಡಿ ಅಥವಾ ಸ್ವಲ್ಪವೇ ಸಿಹಿ ಹಾಕಿದ ಅಕ್ಕಿ ಪಾಯಸದಂಥ ಆಹಾರಗಳು ಜೀರ್ಣವಾಗಬಹುದು. ಆರೋಗ್ಯ ಸುಧಾರಿಸಿದ ಹಾಗೆ, ಮೃದುವಾದ ಇಡ್ಲಿ, ಉಪ್ಪಿಟ್ಟು, ಮೊಸರನ್ನ ಮುಂತಾದವು ದೇಹಕ್ಕೆ ದಕ್ಕಬಹುದು. ಹಾಗೆಯೇ ಒಂದೆರಡು ದಿನಗಳ ನಂತರ, ಹೆಚ್ಚು ಖಾರವಿಲ್ಲದ ತೊವ್ವೆ, ಅನ್ನ, ಚಪಾತಿ, ತರಕಾರಿ ಪಲ್ಯಗಳು ಸೂಕ್ತ. ಹಸಿರು ಸೊಪ್ಪು-ತರಕಾರಿಗಳು, ಕ್ಯಾರೆಟ್‌, ಕುಂಬಳಕಾಯಿ, ಬೆಳ್ಳುಳ್ಳಿಯಂಥವನ್ನು ಪಲ್ಯಗಳಲ್ಲಿ ಬಳಸಬಹುದು. ಇವುಗಳ ಜೊತೆಗೆ ವಿಟಮಿನ್‌ ಎ ಮತ್ತು ಸಿ ಹೆಚ್ಚಿರುವ ಹಣ್ಣುಗಳು ರೋಗಿಗೆ ಅಗತ್ಯವಾಗಿ ಬೇಕಾಗುತ್ತವೆ. ಪಪ್ಪಾಯ, ಕಿತ್ತಳೆ, ಮುಸಂಬಿ, ನೆಲ್ಲಿಕಾಯಿಯಂಥವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.

ಇವು ಬೇಡ: ಸ್ವಚ್ಛವಾಗಿ ಮನೆಯಲ್ಲಿ ತಯಾರಿಸಿದ ಸಾತ್ವಿಕ ಆಹಾರ ಯಾವತ್ತಿಗೂ ಆರೋಗ್ಯ ಸುಧಾರಿಸುವಲ್ಲಿ ನೆರವಾಗುತ್ತದೆ. ಯಾವುದೇ ರೀತಿಯ ಸಂಸ್ಕರಿತ, ಕರಿದ, ಪ್ಯಾಕ್‌ ಮಾಡಿದ, ಸಕ್ಕರೆಭರಿತ ಆಹಾರಗಳು ರೋಗವನ್ನು ಉಲ್ಭಣಿಸುತ್ತವೆ. ಹಾಗಾಗಿ ಸಮೋಸಾ, ವಡೆ, ಕೇಕ್‌, ಬಿಸ್ಕೆಟ್‌, ಪಿಜ್ಜಾ, ಪಾಸ್ತಾ, ಚೈನೀಸ್‌, ನೂಡಲ್ಸ್‌, ಸೋಡಾ, ಕಾಫಿ, ಚಹಾ- ಇಂಥ ಯಾವುದೇ ಆಹಾರ ರೋಗಿಗಳಿಗೆ ಅಲ್ಲ. ರಕ್ತದಲ್ಲಿ ಅಲ್ಬುಮಿನ್‌ ಅಂಶ ಕುಸಿದರೆ, ಘನ ಆಹಾರ ಸೇವಿಸುವ ಹಂತದಲ್ಲಿರುವ ರೋಗಿಗಳಿಗೆ ಮೊಟ್ಟೆ ಕೊಡುವುದು ಒಳ್ಳೆಯದು.

ಇದನ್ನೂ ಓದಿ | Health Benefits Of Laughter | ಆರೋಗ್ಯ ಸುಧಾರಿಸಬೇಕೆ? ಹಾಗಾದರೆ ನಗುತ್ತಿರಿ!

Exit mobile version