Site icon Vistara News

Rheumatoid Arthritis: ರುಮಟಾಯ್ಡ್‌ ಆರ್ಥರೈಟಿಸ್‌ ಬಗ್ಗೆ ನಾವು ತಿಳಿಯಬೇಕಾದದ್ದೇನು?

Rheumatoid Arthritis

ಉರಿಯೂತದಿಂದ ವಕ್ಕರಿಸಿಕೊಳ್ಳುವ ಹಲವು ಕಾಯಿಲೆಗಳ ಪೈಕಿ ರುಮಟಾಯ್ಡ್‌ ಆರ್ಥರೈಟಿಸ್‌ (Rheumatoid Arthritis) ಸಹ ಒಂದು. ಆದರೆ ಇದನ್ನು ಪ್ರಧಾನವಾಗಿ ಆಟೊಇಮ್ಯೂನ್‌ ಕಾಯಿಲೆಗಳಲ್ಲಿ ಒಂದು ಎಂದೇ ಪರಿಗಣಿಸಲಾಗುತ್ತದೆ.

ಏನಿದು ರೋಗ?

ಆರ್‌ಎ ಎಂದೇ ಸಾಮಾನ್ಯವಾಗಿ ಕರೆಯಲಾಗುವ ರುಮಟಾಯ್ಡ್‌ ಆರ್ಥರೈಟಿಸ್‌ ಉಳಿದೆಲ್ಲ ಆರ್ಥರೈಟಿಸ್‌ಗಳಿಗಿಂತ ಭಿನ್ನ. ನಮ್ಮ ದೇಹ ಕಾಯುವ ಸೈನಿಕರು ಎನಿಸಿಕೊಂಡ ಬಿಳಿ ರಕ್ತಕಣಗಳು ವಿದೇಶಿ ವಸ್ತುಗಳೆಂದು ಭ್ರಮಿಸಿ, ನಮ್ಮದೇ ದೇಹದ ಕೀಲುಗಳ ರಕ್ಷಣಾ ಹೊದಿಕೆಯ ಮೇಲೆ ದಾಳಿ ಮಾಡುತ್ತವೆ. ಇದರಿಂದ ಸಣ್ಣ-ದೊಡ್ಡ ಕೀಲುಗಳಲ್ಲಿ ಊತ, ನೋವು ಪ್ರಾರಂಭವಾಗುತ್ತದೆ. ಇದು ಯಾವುದೇ ವಯೋಮಾನದವರಲ್ಲಿ, ದೇಶ, ಭಾಷೆ, ಜನಾಂಗಕ್ಕೆ ಸೇರಿದವರಲ್ಲಿ ಕಾಣಿಸಿಕೊಳ್ಳಬಹುದು.

ಏನಿದರ ಲಕ್ಷಣಗಳು?

ಮೊದಲಿಗೆ ಬೆರಳುಗಳ ಸಣ್ಣ ಕೀಲುಗಳಲ್ಲಿ ನೋವು, ಊತ ಪ್ರಾರಂಭವಾಗುವುದು ಹೆಚ್ಚು. ಆನಂತರ ಮಣಿಕಟ್ಟು, ಮಂಡಿ, ಗೆಜ್ಜೆ ಹಾಕುವಲ್ಲಿ ಪಾದದ ಕೀಲುಗಳಲ್ಲಿ ಕಾಣಿಸಿಕೊಳ್ಳುತ್ತದೆ. ಒಮ್ಮೆ ನೋವು ಹೆಚ್ಚಾದ ಮೇಲೆ ಕೆಲವು ದಿನಗಳವರೆಗೆ ತನ್ನಷ್ಟಕ್ಕೆ ಕೀಲುಗಳು ಸುಮ್ಮನಿರುತ್ತವೆ. ಇದರಿಂದ ನೋವು ಹೋಗಿಯೇಬಿಟ್ಟಿತೆಂಬ ಭ್ರಮೆ ಬರಬಹುದು. ಆದರೆ ಕೆಲವು ದಿನಗಳಲ್ಲಿ ಮತ್ತೆ ಉರಿಯೂತ ಭುಗಿಲೇಳುತ್ತದೆ. ಕೀಲು ಬಿಸಿಯಾಗುವುದು, ಕೆಂಪಾಗುವುದು, ನೋವಿನೊಂದಿಗೆ ಜ್ವರ ಬರುವುದು, ಬೆಳಗಿನ ಹೊತ್ತು ಕೀಲುಗಳಲ್ಲಿ ಬಿಗಿತ ಇರುವುದು- ಇವೆಲ್ಲವೂ ರುಮಟಾಯ್ಡ್‌ ಆರ್ಥರೈಟಿಸ್‌ನ ಲಕ್ಷಣಗಳು.
ಆರಂಭಿಕ ಹಂತದಲ್ಲಿ ಇದನ್ನು ಗುರುತಿಸಿ ಚಿಕಿತ್ಸೆ ನೀಡುವುದು ಮುಖ್ಯ. ಹಾಗಿಲ್ಲದಿದ್ದರೆ, ಉರಿಯೂತ ಅತಿಯಾಗಿ ಬೆರಳುಗಳು ಸೊಟ್ಟವಾಗಬಹುದು. ಮೂಳೆಗಳು, ಕೀಲುಗಳಲ್ಲಿಅತಿಯಾಗಿ ಸವೆತ ಕಾಣಬಹುದು. ಸೂಕ್ತ ಚಿಕಿತ್ಸೆ ಇಲ್ಲದೆ ಹಾಗೆಯೇ ಬಿಟ್ಟರೆ ಕಿಡ್ನಿ, ಕಣ್ಣು, ಹೃದಯ, ಶ್ವಾಸಕೋಶ, ರಕ್ತನಾಳಗಳಿಗೂ ಇದರಿಂದ ಹಾನಿಯಾಗುತ್ತದೆ. ದೇಹದ ಪ್ರತಿರೋಧಕ ಶಕ್ತಿಯೇ ದಾಳಿ ಮಾಡುವ ಕಾರಣ, ಇದು ಗುಣವಾಗುವುದಲ್ಲ. ಆದರೆ ಆರಂಭದಲ್ಲೇ ಇದನ್ನು ಗುರುತಿಸಿ, ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ರೋಗವನ್ನು ನಿಯಂತ್ರಣದಲ್ಲಿರಿಸುವ ವಿಚಾರದಲ್ಲಿ ಮಹತ್ವದ್ದು.

ಯಾಕೆ ಬರುತ್ತದೆ?

ಇದಕ್ಕೆ ಸ್ಪಷ್ಟ ಕಾರಣಗಳನ್ನು ಗುರುತಿಸುವುದು ವೈದ್ಯಲೋಕಕ್ಕೂ ಕಷ್ಟವಾಗಿದೆ. ಇದಕ್ಕೆ ಆನುವಂಶಿಕ ಕಾರಣಗಳು, ಹಾರ್ಮೋನುಗಳು ಮತ್ತು ಒತ್ತಡದಂಥ ಪಾರಿಸಾರಿಕ ಕಾರಣಗಳನ್ನು ತಜ್ಞರು ಪಟ್ಟಿ ಮಾಡುತ್ತಾರೆ. ಇದಲ್ಲದೆ, ಸೋಂಕುಗಳು, ಧೂಮಪಾನ, ಅತಿಯಾದ ಒತ್ತಡದ ಬದುಕು ಇಂಥವೆಲ್ಲ ಈ ರೋಗವನ್ನು ಆಹ್ವಾನಿಸುವುದಕ್ಕೆ ತಮ್ಮದೇ ಕೊಡುಗೆಯನ್ನು ನೀಡುತ್ತವೆ. ಮುಖ್ಯವಾಗಿ ದೇಹದಲ್ಲಿ ಅತಿಯಾಗುವ ಉರಿಯೂತವೂ ಇದಕ್ಕೆ ಮುಖ್ಯ ಕಾರಣವಾಗುತ್ತದೆ.

ತಡೆಯುವುದು ಸಾಧ್ಯವೇ?

ಬರುವುದಕ್ಕೆ ಒಂದು ಸ್ಪಷ್ಟ ಕಾರಣ ಎಂಬುದು ಇಲ್ಲವಾದಾಗ ಇದನ್ನು ತಡೆಯುವುದು ಸಹ ಸವಾಲಾಗಿಯೇ ಉಳಿದಿದೆ. ಆದರೂ ಕೆಲವು ಜೀವನಶೈಲಿಯ ಬದಲಾವಣೆಗಳಿಂದ ರೋಗವನ್ನು ನಿಯಂತ್ರಣದಲ್ಲಿ ಇರಿಸುವುದು ಅಸಾಧ್ಯವೇನಲ್ಲ. ಕಾಲಕಾಲಕ್ಕೆ ವೈದ್ಯರೊಂದಿಗೆ ಸಮಾಲೋಚನೆಯಲ್ಲಿ ಇರಬೇಕಾದ್ದು ಸಹ ಅಗತ್ಯ. ಜೀವನಶೈಲಿಯಲ್ಲಿ ಬದಲಾವಣೆ: ನಿಯಮಿತವಾಗಿ ವ್ಯಾಯಾಮ ಮಾಡುವುದು, ಅತ್ಯಂತ ಸಮತೋಲಿತವಾದ ಆಹಾರ ಸೇವನೆ, ಸಕ್ಕರೆಯಂಥ ಉರಿಯೂತ ಕಾರಕಗಳನ್ನು ದೂರ ಇರಿಸುವುದು- ಇಂಥವೆಲ್ಲ ದೇಹಸ್ವಾಸ್ಥ್ಯವನ್ನು ಹೆಚ್ಚಿಸುತ್ತವೆ. ಪದೇಪದೆ ಸೋಂಕುಗಳು ಕಾಡದಂತೆ ಎಚ್ಚರ ವಹಿಸುವುದು ಅಗತ್ಯ. ದೇಹದ ತೂಕ ಮಿತಿ ಮೀರಿದರೆ ಕೀಲುಗಳ ಮೇಲೆ ಇನ್ನಷ್ಟು ಒತ್ತಡ ಉಂಟಾಗುತ್ತದೆ.

ಧೂಮಪಾನ ಬೇಡ

ಸಿಗರೇಟ್‌ನಿಂದ ದೂರ ಇರುವುದು ರುಮಟಾಯ್ಡ್‌ ಆರ್ಥರೈಟಿಸ್‌ ಬಾರದಂತೆ ಮಾಡುವ ಕ್ರಮಗಳಲ್ಲಿ ಒಂದು ಎಂಬುದು ಅಧ್ಯಯನಗಳಿಂದ ಸಾಬೀತಾಗಿದೆ. ಒಂದೊಮ್ಮೆ ಈ ರೋಗ ಈಗಾಗಲೇ ಬಂದಿದ್ದರೆ, ಧೂಮಪಾನ ಮಾಡದಿರುವುದು ರುಮಟಾಯ್ಡ್‌ ಆರ್ಥರೈಟಿಸ್‌ ಹತೋಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ಒತ್ತಡ ನಿರ್ವಹಣೆ

ಮಾನಸಿಕ ಒತ್ತಡ ಹೆಚ್ಚಿದಂತೆ ಅದರ ಪರಿಣಾಮ ಕಾಣಿಸಿಕೊಳ್ಳುವುದು ದೇಹದ ಮೇಲೆ. ಅದರಲ್ಲೂ ದೇಹದೆಲ್ಲೆಡೆ ಉರಿಯೂತ ಹೆಚ್ಚುವುದನ್ನು ವಿಜ್ಞಾನ ಒತ್ತಿ ಹೇಳುತ್ತಿದೆ. ಹಾಗಾಗಿ ಒತ್ತಡ ಕಡಿಮೆ ಮಾಡುವಂಥ ಧ್ಯಾನ, ಯೋಗ, ಸಂಗೀತ ಕೇಳುವುದು, ಪುಸ್ತಕ ಓದುವುದು, ಏಕಾಂತದ ನಡಿಗೆ- ಇವೆಲ್ಲ ಉಪಯುಕ್ತ ಎನಿಸಿಕೊಳ್ಳುತ್ತವೆ.

ಇದನ್ನೂ ಓದಿ: Children Care: ನಿಮ್ಮ ಮಕ್ಕಳಿಗೆ ಈ ಎಲ್ಲ ರುಚಿಕರ ತಿನಿಸುಗಳನ್ನು ಕೊಡುತ್ತಿದ್ದೀರಾ? ಹುಷಾರು!

Exit mobile version