ಬೇಸಿಗೆಯ ಝಳಕ್ಕೆ ಭೂಮಿ ಕಾಯುತ್ತಿದ್ದಂತೆ, ಭೂಮಿಯೊಳಗೆ ಬಿಲ ಮಾಡಿಕೊಂಡಿರುವ ಪ್ರಾಣಿಗಳು ತಂಪಾದ ಸ್ಥಳಗಳನ್ನು ಹುಡುಕಿ ಬರುವುದು ಸಾಮಾನ್ಯ. ಅದರಲ್ಲೂ ಹೊಲದಲ್ಲಿ ಕೆಲಸ ಮಾಡುವಾಗ, ಕಟ್ಟಡಗಳ ಕೆಲಸಗಾರರು- ಹೀಗೆ ನೆರಳು, ಬಿಸಿಲುಗಳಲ್ಲಿ ಕೆಲಸ ಮಾಡುವವರಿಗೆ ಯಾವುದೇ ಸಂದುಗೊಂದುಗಳಿಂದ ಹಾವುಗಳು ಎದುರಾಗುತ್ತವೆ. ಸರಕ್ಕನೆ ಕಚ್ಚಲೂ ಬಹುದು. ಸಾಮಾನ್ಯವಾಗಿ ಶೇ. 70ರಷ್ಟು ಹಾವು ಕಡಿತದ ಪ್ರಕರಣಗಳಲ್ಲಿ ವಿಷ ಏರುವುದಿಲ್ಲ. ಕಚ್ಚಿದ ಹಾವಿನಲ್ಲಿ, ವಿಷವಿಲ್ಲದಿರುವುದು, ಕುಟುಕಿದಾಗ ಅಪಾಯಕಾರಿ ಆಗುವಷ್ಟು ಪ್ರಮಾಣದ ವಿಷ ದೇಹ ಸೇರದೇ ಇರುವುದು ಮುಂತಾದ ಹಲವು ಕಾರಣಗಳು (Snake Bites) ಇದಕ್ಕಿರಬಹುದು.
ಕೆಲವೊಮ್ಮೆ ಹಾವು ಕುಟುಕಿದಾಕ್ಷಣ ದೇಹದ ಆ ಭಾಗ ಕೆಂಪಾಗಿ ಊತ, ನೋವು ಕಾಣಬಹುದು; ರಕ್ತ ಹರಿಯಲೂಬಹುದು. ಆದರೆ ಕೆಲವು ಜಾತಿಯ ಹಾವುಗಳು ಕಚ್ಚಿದಾಗ ಇಂಥ ಯಾವ ಬಾಹ್ಯ ಲಕ್ಷಣಗಳೂ ಕಾಣದೆ ಹೊಟ್ಟೆ ನೋವು ಬರಬಹುದು. ಸಂತ್ರಸ್ತರಿಗೆ ಹೊಟ್ಟೆನೋವಿನ ಕಾರಣವೇ ತಿಳಿಯದಿದ್ದರೆ ಚಿಕಿತ್ಸೆ ತಡವಾಗಬಹುದು. ಇದರ ಮುಂದಿನ ಹಂತವಾಗಿ ನರಗಳ ಪಾರ್ಶ್ವವಾಯು ಉಂಟಾಗಬಹುದು. ಇದಲ್ಲದೆ, ದೃಷ್ಟಿ ಮಂಜಾಗುವುದು, ವಾಂತಿ, ಡಯರಿಯ, ಬೆವರುವುದು, ಬಾಯಲ್ಲಿ ಜೊಲ್ಲು ಹರಿಯುವುದು, ರಕ್ತದೊತ್ತಡ ಕುಸಿಯುವುದು ಮುಂತಾದ ಹಲವು ಲಕ್ಷಣಗಳು ಕಾಣಬಹುದು. ಹಾಗಾಗಿ ಹಾವು ಕಚ್ಚಿದಾಗ ಅಥವಾ ಕಚ್ಚಿರಬಹುದು ಎಂಬ ಅನುಮಾನ ಇದ್ದಾಗಲೂ ಆದಷ್ಟೂ ಶೀಘ್ರ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಬೇಕು.
ಏನು ಮಾಡಬೇಕು?
ಹಾವು ಕಡಿತವೆಂಬುದು ವಾರ್ಷಿಕವಾಗಿ ಸಾವಿರಾರು ಜನರ ಪ್ರಾಣಕ್ಕೆ ಎರವಾಗುವ ಈ ದೇಶದಲ್ಲಿ, ಇದರ ಬಗ್ಗೆ ಸರಿಯಾದ ಮಾಹಿತಿ ತಿಳಿದುಕೊಳ್ಳಬೇಕಾದ್ದು ಮುಖ್ಯ.
- ಮೊದಲಿಗೆ, ಸಂತ್ರಸ್ತರನ್ನು ಗಾಬರಿಪಡಿಸಬೇಡಿ. ಆತಂಕ, ಹೆದರಿಕೆ ಅಥವಾ ಇನ್ನಾವುದೇ ಕಾರಣದಿಂದ ರಕ್ತದೊತ್ತಡ ಏರಿಳಿದರೆ ಸಮಸ್ಯೆ ಅಲ್ಲಿಂದಲೇ ಶುರುವಾಗುತ್ತದೆ.
- ಘಟನೆ ನಡೆದ ಸ್ಥಳದಿಂದ ಅವರನ್ನು ಸುರಕ್ಷಿತ ಅಂತರಕ್ಕೆ ಕರೆದೊಯ್ಯಿರಿ. ಆದರೆ ದೈಹಿಕ ಚಟುವಟಿಕೆ ಆದಷ್ಟೂ ಕಡಿಮೆ ಇರಲಿ.
- ಕೈಗೆ ಹಾವು ಕಚ್ಚಿದೆ ಎಂದಾದರೆ ಆ ಭಾಗದ ಚಟುವಟಿಕೆಯನ್ನೂ ಕಡಿಮೆ ಮಾಡಿ. ಕೈಗೆ ಕಟ್ಟಿದ್ದ ವಾಚು, ಬಳೆ, ಉಂಗುರ ಮುಂತಾದವನ್ನೆಲ್ಲ ತಕ್ಷಣ ತೆಗೆದುಹಾಕಿ. ಕಚ್ಚಿದ್ದು ಕಾಲಿಗಾದರೆ ಶೂ, ಸಾಕ್ಸ್ಗಳನ್ನೆಲ್ಲ ತೆಗೆಯಿರಿ. ದೇಹದ ಬೇರೆ ಭಾಗಕ್ಕಾದರೆ ಬಿಗಿಯಾದ ಬಟ್ಟೆಗಳು, ಬೆಲ್ಟ್ಗಳನ್ನು ಸಾಧ್ಯವಾದಷ್ಟೂ ಸಡಿಲ ಮಾಡಿ. ಕಚ್ಚಿದ ಭಾಗದಲ್ಲಿ ಬಿಗಿತ, ಊತ ಪ್ರಾರಂಭವಾದರೆ ಬಳೆ, ಉಂಗುರ ಮುಂತಾದ ಬಿಗಿ ವಸ್ತುಗಳು ಅಪಾಯಕಾರಿಯಾಗಿ ಪರಿಣಮಿಸುತ್ತವೆ
- ಸುರಕ್ಷಿತ ದೂರದಿಂದ ಕಚ್ಚಿದ ಹಾವಿನ ಫೋಟೊ ತೆಗೆಯಲು ಸಾಧ್ಯವೇ ನೋಡಿ. ಹಾವು ಯಾವುದು ಎಂಬುದರ ಮೇಲೆ ಕೆಲವೊಮ್ಮೆ ಪ್ರತಿವಿಷದ ಚಿಕಿತ್ಸೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ನೀಡಬಹುದು. ಆದರೆ ಅದೇನು ಅಗತ್ಯವಲ್ಲ, ಅದಕ್ಕಿಂತ ಮುಖ್ಯವಾಗಿದ್ದು, ಸಂತ್ರಸ್ತರನ್ನು ಶೀಘ್ರ ಆಸ್ಪತ್ರೆಗೆ ಕರೆದೊಯ್ಯುವುದು.
ಏನು ಮಾಡಬಾರದು?
ಕಚ್ಚಿದ ಭಾಗಕ್ಕೆ ಗಾಯ ಮಾಡುವುದು, ಸುಡುವುದು, ರಕ್ತ ಹೀರುವುದನ್ನು ಮಾಡಬೇಡಿ. ಅವರನ್ನು ಶೀಘ್ರ ಆಸ್ಪತ್ರೆಗೆ ಕರೆದೊಯ್ಯಿರಿ.
- ಯಾವುದೇ ರೀತಿಯ ಮುಲಾಮು, ಜೆಲ್ಗಳನ್ನು ಗಾಯಕ್ಕೆ ಲೇಪಿಸಬೇಡಿ. ಗಾಯದ ಮೇಲೆ ಮನೆಮದ್ದು, ಸ್ಥಳೀಯ ಚಿಕಿತ್ಸೆಗಳನ್ನು ಮಾಡುವುದು ಸಲ್ಲದು.
- ಕಚ್ಚಿದ ಜಾಗದ ಸುತ್ತ ಬಿಗಿಯಾಗಿ ಏನನ್ನೂ ಕಟ್ಟಬೇಡಿ. ಹೀಗೆ ಮಾಡಿ ರಕ್ತಸಂಚಾರ ನಿಲ್ಲಿಸುವುದರಿಂದ ಕೈ-ಕಾಲುಗಳನ್ನು ಕಳೆದುಕೊಳ್ಳಬೇಕಾದೀತು.
- ಗಾಯಕ್ಕೆ ಐಸ್ ಹಾಕುವುದು, ನೀರಲ್ಲಿ ಮುಳುಗಿಸುವುದು ಮಾಡಬೇಡಿ.
- ಸಂತ್ರಸ್ತರನ್ನು ಅಂಗಾತ ಮಲಗಿಸಬೇಡಿ. ಇದರಿಂದ ಉಸಿರಾಟಕ್ಕೆ ಕಷ್ಟವಾಗಬಹುದು. ಎಡಭಾಗ ಮೇಲೆ ಬರುವಂತೆ ಮಗ್ಗುಲಲ್ಲಿ ಮಲಗಿಸಿ.
- ಕಚ್ಚಿದ ಹಾವನ್ನು ಬೆನ್ನಟ್ಟುವುದು, ಹೊಡೆಯುವುದು ಮಾಡಬೇಡಿ. ಗಾಬರಿಗೊಂಡ ಹಾವು, ತನ್ನನ್ನು ರಕ್ಷಿಸಿಕೊಳ್ಳುವ ಯತ್ನದಲ್ಲಿ ನಿಮ್ಮ ಮೇಲೂ ದಾಳಿ ಮಾಡಬಹುದು.
- ಯಾವುದೇ ಕಾರಣಕ್ಕೂ ಆಲ್ಕೋಹಾಲ್ ಸೇವಿಸಬೇಡಿ. ಯಾವುದೇ ನೋವು ನಿವಾರಕಗಳು, ಜ್ವರದ ಔಷಧಿಗಳು ಸಲ್ಲದು. ಅವರಿಗೆ ಮೊದಲು ವೈದ್ಯಕೀಯ ಚಿಕಿತ್ಸೆ ಬೇಕಾಗುತ್ತದೆ.
ಇದನ್ನೂ ಓದಿ: Cardiopulmonary Resuscitation: ಜೀವರಕ್ಷಕ ಸಿಪಿಆರ್; ಈ ವಿಧಾನ ಅನುಸರಿಸಿ, ಜೀವ ಉಳಿಸಿ