ಅತ್ಯಂತ ಆರೋಗ್ಯಕರ ಆಹಾರಗಳ ವಿಚಾರ ಬಂದಾಗ ಒಣಹಣ್ಣುಗಳು ಹಾಗೂ ಬೀಜಗಳನ್ನು ನಾವು ಖಂಡಿತ ಮರೆಯುವುದಿಲ್ಲ. ಒಣಬೀಜಗಳು ಅತ್ಯಂತ ಆರೋಗ್ಯಕರ ಹಾಗೂ ಇವನ್ನು ಸೇವಿಸುವುದರಿಂದ ನಮ್ಮ ದೇಹಕ್ಕೆ ಬೇಕಾದ ಹಲವು ಬಗೆಯ ಪೋಷಕಾಂಶಗಳಾದ, ಖನಿಜಾಂಶಗಳೂ, ಬಗೆಬಗೆಯ ಜೀವಸತ್ವಗಳೂ ಇದರಿಂದ ಲಭಿಸುವುದು ಎಂಬುದರಲ್ಲಿ ಎರಡು ಮಾತೇ ಇಲ್ಲ. ಆದರೆ, ಬಹಳಷ್ಟು ಮಂದಿ, ಈ ಒಣಬೀಜಗಳನ್ನು ಯಾವಾಗ, ಎಲ್ಲಿ, ಹೇಗೆ ಮತ್ತು ಎಷ್ಟು ತಿನ್ನಬೇಕು ಎಂಬ ವಿಚಾರದಲ್ಲಿ ಮಾತ್ರ ಗೊಂದಲ ಅನುಭವಿಸುವುದುಂಟು. ಯಾಕೆಂದರೆ, ಈ ಬೀಜಗಳ ನಿಜವಾದ ಉಪಯೋಗವನ್ನು ನಮ್ಮ ದೇಹ ಪಡೆದುಕೊಳ್ಳಬೇಕೆಂದರೆ, ಸರಿಯಾದ ಪ್ರಮಾಣದಲ್ಲಿ, ಸರಿಯಾದ ಸಮಯಕ್ಕೆ ತೆಗೆದುಕೊಂಡರೆ ಒಳ್ಳೆಯದು. ಬನ್ನಿ ಈ ಬಗ್ಗೆ (Dry fruits) ತಿಳಿದುಕೊಳ್ಳೋಣ.
ಸಸ್ಯಾಧಾರಿತ ಆಹಾರ
ಸಸ್ಯಾಧಾರಿತ ಆಹಾರಗಳ ಪೈಕಿ ಅತ್ಯಂತ ಹೆಚ್ಚು ಆಂಟಿ ಆಕ್ಸಿಡೆಂಟ್‌ಗಳು ದೊರಕುವುದು ಈ ಬೀಜಗಳಲ್ಲಿಯೇ. ನಾರಿನಂಶ, ಆರೋಗ್ಯಕರ ಕೊಬ್ಬು ಸೇರಿದಂತೆ ಎಲ್ಲ ಬಗೆಯ ಪೋಷಕಾಂಶಗಳನ್ನೂ ಹೊಂದಿದ ಬೀಜಗಳು ಯಾವುದೇ ಆಹಾರಗಳಲ್ಲಿ ಸಿಗದಷ್ಟು ಬಗೆಯ ಪೋಷಕಾಂಶಗಳನ್ನು ತಮ್ಮಲ್ಲಿ ಅಡಗಿಸಿಟ್ಟಿರುತ್ತವೆ. ಉದಾಹರಣೆಗೆ, ಕಬ್ಬಿಣಾಂಶ, ಕ್ಯಾಲ್ಶಿಯಂ, ಬಗೆಬಗೆಯ ಜೀವಸತ್ವಗಳು, ಒಮೆಗಾ 3 ಫ್ಯಾಟಿ ಆಸಿಡ್‌ಗಳು, ತಾಮ್ರ, ಮ್ಯಾಂಗನೀಸ್, ಮೆಗ್ನೀಶಿಯಂ, ಪೊಟಾಶಿಯಂ, ಝಿಂಕ್ ಹೀಗೆ ಎಲ್ಲ ಬಗೆಯ ಪೋಷಕಾಂಶಗಳನ್ನು ಹೊಂದಿರುವ ಸಂಪೂರ್ಣ ಆಹಾರ ಈ ಬೀಜಗಳು. ಇವುಗಳು ಕೊಲೆಸ್ಟೆರಾಲ್ ಅನ್ನು ಕಡಿಮೆಗೊಳಿಸುವಲ್ಲಿ, ರಕ್ತನಾಳಗಳು ಸಮರ್ಪಕವಾಗಿ ಕೆಲಸ ಮಾಡುವಲ್ಲಿ, ಹಾಗೂ ಮಾಂಸಖಂಡಗಳ ಬಲವರ್ಧನೆಗೆ ತಮ್ಮದೇ ಆದ ಕೊಡುಗೆ ನೀಡುತ್ತವೆ. ಕೆಲವು ಬೀಜಗಳು ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಕೊಬ್ಬು ಹೊಂದಿರಬಹುದಾದ್ದರಿಂದ, ಅಂತಹುಗಳನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು.
ಕೆಟ್ಟ ಕೊಲೆಸ್ಟೆರಾಲ್
ಹಾಗಾದರೆ, ಇಂತಹ ಬೀಜಗಳ ಸಂಪೂರ್ಣ ಲಾಭವನ್ನು ಪಡೆಯಬೇಕಾದರೆ ಯಾವ ಸಮಯದಲ್ಲಿ ಸೇವಿಸಿದರೆ ಉತ್ತಮ ಎಂಬ ಪ್ರಶ್ನೆ ನಿಮ್ಮಲ್ಲಿ ಉದ್ಭವವಾಗಿರಬಹುದು. ಬೆಳಗ್ಗೆ ಉಪಾಹಾರಕ್ಕೆ ಅಥವಾ ಉಪಾಹಾರದ ಜೊತೆಗೆ ಬೀಜಗಳನ್ನು ಸೇವಿಸುವುದರಿಂದ ದೇಹದಲ್ಲಿ ರಕ್ತದೊತ್ತಡವನ್ನು ಸಮತೋಲನಗೊಳಿಸಲು ಬಹಳ ಸಹಾಯವಾಗುತ್ತದೆ. ಇವು ರಕ್ತದಲ್ಲಿರುವ ಕೆಟ್ಟ ಕೊಲೆಸ್ಟೆರಾಲ್ ಅನ್ನು ದೇಹದಿಂದ ಹೊರಕ್ಕೆ ಕಳಿಸುವಲ್ಲಿ ಸಹಾಯ ಮಾಡುತ್ತವೆ, ಜೊತೆಗೆ ಹೃದಯವು ಸಮರ್ಪಕವಾಗಿ ಕೆಲಸ ಮಾಡುವಲ್ಲಿ ಸಹಾಯ ಮಾಡುತ್ತವೆ. ಹೃದಯ ಚುರುಕಾಗಿರಿಸುವಲ್ಲಿ ಬೀಜಗಳ ಪಾತ್ರ ದೊಡ್ಡದು.
ಯಾವಾಗ ತಿನ್ನಬೇಕು?
ಬಾದಾಮಿಯನ್ನು ಬೆಳಗ್ಗಿನ ಹೊತ್ತಿನಲ್ಲಿ ತಿನ್ನುವುದು ಬಹಳ ಒಳ್ಳೆಯದು. ಇದು ದೇಹದ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಇದರಲ್ಲಿ ಸಾಕಷ್ಟು ಪೋಷಕಾಂಶಗಳು ಇರುವುದರಿಂದ ಬೆಳಗ್ಗೆ ಇದನ್ನು ಸೇವಿಸುವ ಮೂಲಕ ಇಡೀ ದಿನಕ್ಕೆ ಬೇಕಾದ ಶಕ್ತಿ, ಚೈತನ್ಯವನ್ನು ಈ ಮೂಲಕ ಪಡೆಯಬಹುದು. ಮುನ್ನಾದಿನವೇ ನಾಲ್ಕೈದು ಬಾದಾಮಿಯನ್ನು ನೆನೆಸಿಟ್ಟು ಬೆಳಗ್ಗೆ ತಿನ್ನುವ ಮೂಲಕ ಇದರ ಒಳ್ಳೆಯ ಗುಣಗಳನ್ನು ಪಡೆಯಬಹುದು.
ಸಂಜೆಯ ಹೊತ್ತು ಪಿಸ್ತಾ, ಗೋಡಂಬಿಯಂತಹ ಬೀಜಗಳನ್ನು ಸೇವಿಸಬಹುದು. ಇವು ರೋಗನಿರೋಧಕತೆಯನ್ನು ಹೆಚ್ಚು ಮಾಡುವ ಸಾಮರ್ಥ್ಯವನ್ನು ಹೊಂದಿವೆ. ಶಕ್ತಿವರ್ಧನೆಗೂ ಇವು ಒಳ್ಳೆಯದು. ಸಂಜೆಯ ಹೊತ್ತಿನ ಸ್ನ್ಯಾಕ್ ಸಂದರ್ಭ ಇವುಗಳನ್ನು ಸೇವಿಸಬಹುದು.
ರಾತ್ರಿ ಮಲಗುವ ಮೊದಲು
ರಾತ್ರಿ ಮಲಗುವ ಮೊದಲು ತಿನ್ನಬಹುದಾದವುಗಳು ಖರ್ಜೂರ, ಪ್ರೂನ್ ಹಾಗೂ ವಾಲ್ನಟ್‌ಗಳು. ಇವು ನಾರಿನಂಶದಿಂದ ಸಮೃದ್ಧವಾಗಿರುವಂಥವು. ಹಾಗಾಗಿ, ಜೀರ್ಣಕ್ರಿಯೆಗೆ ಇವು ಸಹಾಯ ಮಾಡಬಲ್ಲವು. ಮಲಬದ್ಧತೆ, ಎದ್ದ ಕೂಡಲೇ ಮಲವಿಸರ್ಜನೆ ಕಷ್ಟವಾಗುವ ಮಂದಿ, ಹೊಟ್ಟೆಯುಬ್ಬರ, ಎದೆಯುರಿ ಮತ್ತಿತರ ಗ್ಯಾಸ್ ಸಮಸ್ಯೆಯನ್ನು ಹೊಂದಿರುವ ಮಂದಿ ಇವುಗಳನ್ನು ರಾತ್ರಿಯ ಹೊತ್ತು ಸೇವಿಸುವ ಮೂಲಕ ಪ್ರಯೋಜನ ಪಡೆಯಬಹುದು. ಈ ಸಮಸ್ಯೆಗಳಿಂದಲೂ ಮುಕ್ತಿ ಪಡೆಯಬಹುದು.
ರಾತ್ರಿಯ ಹೊತ್ತು, ಹೆಚ್ಚು ಕೊಬ್ಬನ್ನು ಹೊಂದಿರುವ ಗೋಡಂಬಿಯನ್ನು ಸೇವಿಸದಿರಿ. ಇವು ನಿಮ್ಮ ನಿದ್ದೆಗೆ ಭಂಗ ತರಬಹುದು. ಹೊಟ್ಟೆ ಭಾರವಾದ ಅನುಭವದಿಂದ ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗದೆ ಇರಬಹುದು. ಅಷ್ಟೇ ಅಲ್ಲ, ಚಾಕೋಲೇಟ್ ಹಾಗೂ ಎಣ್ಣೆಯಲ್ಲಿ ಕರಿದ ಮಸಾಲೆಭರಿತ ಬೀಜಗಳನ್ನು ರಾತ್ರಿಯ ಹೊತ್ತು ಸೇವಿಸಬೇಡಿ.
ಎಷ್ಟು ತಿನ್ನಬೇಕು?
ಪ್ರತಿಯೊಬ್ಬರೂ ತಮ್ಮ ಮುಷ್ಠಿಗಾತ್ರದಷ್ಟು ಬೀಜಗಳನ್ನು ಪ್ರತಿದಿನ ಸೇವಿಸಬಹುದು. ಅಂದರೆ ಸುಮಾರು 20ರಿಂದ 25 ಬೀಜಗಳನ್ನು ಪ್ರತಿ ದಿನ ಸೇವಿಸಬಹುದು. ಇವು ಎಲ್ಲ ಬಗೆಯ ಬೀಜಗಳನ್ನು ಒಂದು ಮುಷ್ಟಿಯಲ್ಲಿ ಹಿಡಿಯುವಷ್ಟು ಅಂದರೆ 20ರಿಂದ 25 ಬೀಜಗಳನ್ನು ಪ್ರತಿದಿನ ಬೇರೆ ಬೇರೆ ಹೊತ್ತಿನಲ್ಲಿ ಸೇವಿಸುವ ಮೂಲಕ ಅವುಗಳ ಗರಿಷ್ಠ ಪ್ರಯೋಜನ ಪಡೆಯಬಹುದು.