ಹಾರ್ಮೋನಿನ ಏರುಪೇರು (Hormonal Imbalance) ಎಂಬುದು ನೋಡಲು ಸಾಮಾನ್ಯ ಸಮಸ್ಯೆಯಾಗಿ ಕಂಡರೂ ಆರೋಗ್ಯವನ್ನು ಬಹಳವಾಗಿ ಬಾಧಿಸುವಂಥದ್ದು. ತೂಕದಲ್ಲಿ ಏರಿಕೆ, ಭುಜದ ಬಳಿ ಕೊಬ್ಬು ಶೇಖರವಾಗುವುದು, ಇದ್ದಕ್ಕಿದ್ದ ಹಾಗೆ ತೂಕ ಇಳಿಯುವುದು, ತಲೆ ಸುತ್ತುವಿಕೆ, ಮಾಂಸಖಂಡಗಳಲ್ಲಿ ನಿತ್ರಾಣ, ಸೆಳೆತ, ನೋವು ಇತ್ಯಾದಿ, ಗಂಟುಗಳಲ್ಲಿ ನೋವು, ಉರಿಯೂತ ಇತ್ಯಾದಿ ಇತ್ಯಾದಿ ಸಮಸ್ಯೆಗಳು ಬಾಧಿಸುತ್ತವೆ. ಈ ಎಲ್ಲ ಸಮಸ್ಯೆಗಳೂ, ಮಾರಣಾಂತಿಕವಲ್ಲದಿದ್ದರೂ, ಇವು ಸಾಕಷ್ಟು ತೊಂದರೆಯನ್ನು ತಂದೊಡ್ಡುವಂಥವು. ಈ ಎಲ್ಲ ಸಮಸ್ಯೆಗಳಿಗೂ ಹಾರ್ಮೋನಿನ ಏರುಪೇರಿಗೂ ಮೇಲ್ನೋಟಕ್ಕೆ ಸಂಬಂಧ ಕಾಣಿಸದಿದ್ದರೂ ಮೂಲ ಕಾರಣ ಹಾರ್ಮೋನಿನ ಅಸಮತೋಲನವೇ ಕಾರಣವಾಗಿರಬಹುದು. ಸಮಸ್ಯೆಯ ಮೂಲವನ್ನು ಪತ್ತೆ ಹಚ್ಚಿದರೆ, ಸಮಸ್ಯೆಯ ನಿವಾರಣೆ ಸುಲಭ. ಬನ್ನಿ, ಹಾರ್ಮೋನಿನ ಏರುಪೇರಿನ ಸಮಸ್ಯೆಗೆ ಯಾವೆಲ್ಲ ಆಹಾರವನ್ನು ಸೇವಿಸುವುದರಿಂದ ಸಮಸ್ಯೆಯಿಂದ ಮುಕ್ತಿ ಪಡೆಯುವತ್ತ ಹೆಜ್ಜೆಯಿಡಬಹುದು ಎಂಬುದನ್ನು ನೋಡೋಣ.
ಕೆಲವು ಬಗೆಯ ಮೀನುಗಳು
ಸಾಲ್ಮನ್, ಮೆಕೆರಲ್, ಸಾರ್ಡಿನ್ ಮೊದಲಾದ ಮೀನುಗಳಲ್ಲಿ ಒಮೆಗಾ 3 ಫ್ಯಾಟಿ ಆಸಿಡ್‌ಗಳು ಹೇರಳವಾಗಿದ್ದು, ಇವುಗಳು ಒಳ್ಳೆಯ ಕೊಬ್ಬನ್ನು ಹೊಂದಿವೆ. ಇದರಿಂದ ಹಾರ್ಮೋನ್ ಉತ್ಪಾದನೆ ಹಾಗೂ ಸಮತೋಲನಕ್ಕೆ ಸಹಾಯವಾಗುತ್ತದೆ. ಒಮೆಗಾ ೩ ಫ್ಯಾಟಿ ಆಸಿಡ್ ಹೇರಳವಾಗಿರುವ ಆಹಾರಗಳು ದೇಹದಲ್ಲಿ ಹಾರ್ಮೋನಿನ ಸಮತೋಲನೆ ಮಾಡುವ ಜೊತೆಗೆ ಉರಿಯೂತವನ್ನು ತಡೆಯುತ್ತದೆ.
ಬಸಳೆ, ಪಾಲಕ್ ಇತ್ಯಾದಿ
ವಿಟಮಿನ್‌ಗಳು, ಖನಿಜಾಂಶಗಳು ಹಾಗೂ ಆಂಟಿ ಆಕ್ಸಿಡೆಂಟ್‌ಗಳು ಹೇರಳವಾಗಿರುವ ಬಸಳೆ, ಪಾಲಕ್ ಮತ್ತಿತರ ಸೊಪ್ಪು ತರಕಾರಿಗಳು ಹಾರ್ಮೋನು ಸಮತೋಲನಕ್ಕೆ ಸಹಕಾರಿ. ಅಷ್ಟೇ ಅಲ್ಲ, ಇವು ದೇಹದ ಕಶ್ಮಲಗಳನ್ನು ಹೊರ ಹಾಕುವಲ್ಲಿ ಸಹಾಯ ಮಾಡಿ ಡಿಟಾಕ್ಸ್ ಮಾಡುತ್ತವೆ.
ಬೆಣ್ಣೆಹಣ್ಣು
ಅವಕಾಡೋ ಅಥವಾ ಬೆಣ್ಣೆಹಣ್ಣಿನಲ್ಲಿ ಆರೋಗ್ಯಕರ ಕೊಬ್ಬು ಎಂದೇ ಹೆಸರಾದ ಮೋನೋ ಸ್ಯಾಚುರೇಟೆಡ್ ಕೊಬ್ಬು ಹೇರಳವಾಗಿದ್ದು, ಇದು ಹಾರ್ಮೋನಿನ ಸಮತೋಲನೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ವಿಟಮಿನ್ ಬಿ, ಇ ಹಾಗೂ ಪೊಟಾಶಿಯಂ ಕೂಡಾ ಇದರಲ್ಲಿ ಶ್ರೀಮಂತವಾಗಿವೆ.
ಕೆಲವು ಬಗೆಯ ಬೀಜಗಳು
ಅಗಸೆ ಬೀಜ (ಫ್ಲ್ಯಾಕ್ ಸೀಡ್), ಚಿಯಾ ಬೀಜಗಳು ಹಾಗೂ ಕುಂಬಳಕಾಯಿ ಬೀಜಗಳಲ್ಲಿ ನಾರಿನಂಶ ಹಾಗೂ ಫ್ಯಾಟಿ ಆಸಿಡ್‌ಗಳು ಹೇರಳವಾಗಿವೆ. ಸ್ತ್ರೀಯರ ಹಾರ್ಮೋನು ಇಸ್ಟ್ರೋಜನ್‌ನ ಮಟ್ಟವನ್ನು ಸಮತೋಲಗೊಳಿಸುವಲ್ಲಿ ಇವು ಸಹಾಯ ಮಾಡುತ್ತವೆ. ಉರಿಯೂತವನ್ನೂ ಕಡಿಮೆ ಮಾಡುತ್ತವೆ.
ಮೊಸರು, ಮಜ್ಜಿಗೆ
ಮೊಸರು, ಮಜ್ಜಿಗೆ ಹಾಗೂ ಇತರ ಪ್ರೊಬಯಾಟಿಕ್ ಆಹಾರಗಳು ಕೂಡಾ ರೋಗ ನಿರೋಧಕತೆಯನ್ನು ಹೆಚ್ಚಿಸುವುದರ ಜೊತೆಗೆ ಹಾರ್ಮೋನಿನ ಸಮತೋಲನೆಯಲ್ಲೂ ಮುಖ್ಯ ಪಾತ್ರ ವಹಿಸುತ್ತದೆ.
ಮೊಳಕೆ ಕಾಳುಗಳು
ಮಹಿಳೆಯರ ಹಾರ್ಮೋನು ಇಸ್ಟ್ರೋಜನ್‌ನ ಏರುಪೇರಾಗದಂತೆ ತಡೆಗಟ್ಟಲು, ಸಮತೋಲನ ಕಾಪಾಡಲು ಬ್ರೊಕೋಲಿ, ಕ್ಯಾಬೇಜ್, ಹೂಕೋಸು ಹಾಗೂ ಮೊಳಕೆ ಕಾಳುಗಳು ಬಹಳಷ್ಟು ಸಹಾಯ ಮಾಡುತ್ತವೆ. ಹಾಗಾಗಿ ಮಹಿಳೆಯರಿಗೆ ಈ ತರಕಾರಿಗಳು ಅತ್ಯಂತ ಒಳ್ಳೆಯದು. ಅದರಲ್ಲೂ ನಲುವತ್ತು ದಾಟಿದ ಮಹಿಳೆಯರು ಹಾರ್ಮೋನಿನ ಏರುಪೇರು ಮತ್ತಿತರ ಸಮಸ್ಯೆಗಳಿಂದ ಪಾರಾಗಲು ಹಾಗೂ ಆದಷ್ಟೂ ತಮ್ಮ ಆರೋಗ್ಯವನ್ನು ಕಾಪಾಡಲು ಇಂತಹ ತರಕಾರಿಗಳ ಸೇವನೆ ಮಾಡಬೇಕು.
ಈ ಹಣ್ಣುಗಳು ಸೂಕ್ತ
ಆಂಟಿ ಆಕ್ಸಿಡೆಂಟ್ ಹಾಗೂ ವಿಟಮಿನ್‌ಗಳಿಂದ ಸಂಪದ್ಭರಿತವಾದ ಬೆರ್ರಿ ಜಾತಿಗೆ ಸೇರಿದ ಹಣ್ಣುಗಳಾದ ಸ್ಟ್ರಾಬೆರಿ, ರಸ್‌ಬೆರ್ರಿ, ಬ್ಲೂಬೆರ್ರಿ, ಬ್ಲ್ಯಾಕ್‌ಬೆರ್ರಿ ಮೊದಲಾದುವುಗಳು ಒಟ್ಟು ಆರೋಗ್ಯದ ದೃಷ್ಟಿಯಿಂದ ದೇಹಕ್ಕೆ ಒಳ್ಳೆಯದು. ಅಷ್ಟೇ ಅಲ್ಲ, ಇವುಗಳು ಹಾರ್ಮೋನುಗಳ ಸಮತೋಲನದಲ್ಲಿ ತಮ್ಮ ನ್ಯಾಯವನ್ನೂ ಒದಗಿಸುತ್ತವೆ.
ಇದನ್ನೂ ಓದಿ: Health Tips: ಅತಿಯಾಗಿ ಕೈತೊಳೆಯುತ್ತೀರಾ? ಹಾಗಾದರೆ ಎಚ್ಚರ, ಎಕ್ಸಿಮಾ ಕೂಡಾ ಬರಬಹುದು!