Site icon Vistara News

Which Sweetener Is Better: ಸಕ್ಕರೆ, ಬೆಲ್ಲ, ಕಲ್ಲುಸಕ್ಕರೆ- ಯಾವುದು ಒಳ್ಳೆಯದು?

Which Sweetener Is Better

ಅಡುಗೆ ಮಾಡುವಾಗ ಹಲವು ರೀತಿಯನ್ನು ಸಿಹಿಯನ್ನು ಬಳಸುತ್ತೇವೆ. ಕೆಲವು ಪಾಕಗಳಿಗೆ ಸಕ್ಕರೆಯನ್ನೇ ನೇರವಾಗಿ ಸೇರಿಸಿದರೆ, ಇನ್ನೂ ಕೆಲವು ಅಡುಗೆಗಳಿಗೆ ಬೆಲ್ಲ ಅಥವಾ ಇನ್ನಾವುದಾದರೂ ಸಿಹಿಯನ್ನು ಬಳಸಬಹುದು. ಕೆಲವೊಮ್ಮೆ ಸಿಹಿ ಹಣ್ಣುಗಳನ್ನು ಬಳಸುವ ಮೂಲಕ, ಅಡುಗೆಯೊಂದನ್ನು ಸಿಹಿಯಾಗಿರಬಹುದು. ಹಲವು ರೀತಿಯ ಸಿಹಿಗಳನ್ನು ಬಳಸುವ ಹಿನ್ನೆಲೆಯಲ್ಲಿ, ಸಕ್ಕರೆ, ಬೂರಾ ಸಕ್ಕರೆ, ಕಲ್ಲು ಸಕ್ಕರೆ ಮತ್ತು ಬೆಲ್ಲ- ಇವುಗಳ ಸೇವನೆಯಿಂದ ಆರೋಗ್ಯದ ಮೇಲಾಗುವ ಪರಿಣಾಮಗಳೇನು (Which Sweetener Is Better) ಎಂಬ ಮಾಹಿತಿಯಿದು. ಮೊದಲಿಗೆ ಈ ವಸ್ತುಗಳು ಏನು ಎಂಬುದನ್ನು ಅರ್ಥ ಮಾಡಿಕೊಂಡರೆ, ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದು ಸಹ ಅರ್ಥ ಮಾಡಿಕೊಳ್ಳಬಹುದು. ಮಾತ್ರವಲ್ಲ, ಎಲ್ಲಕ್ಕಿಂತ ಆರೋಗ್ಯಕರ ಯಾವುದು ಎಂಬುದನ್ನು ನಿರ್ಧರಿಸಲು ಸಾಧ್ಯವಾಗುತ್ತದೆ. ಮೇಲ್ನೋಟಕ್ಕೆ ಎಲ್ಲವೂ ಸಿಹಿ ವಸ್ತುಗಳು ಎಂಬಂತೆ ಕಂಡರೂ, ಪ್ರತಿಯೊಂದೂ ಭಿನ್ನವಾಗಿವೆ. ಕೆಲವು ಸಿಹಿಗಳು ಗ್ಲೈಸೆಮಿಕ್‌ ಸೂಚಿ, ಉಳಿದವುಗಳಿಗಿಂತ ಕಡಿಮೆ ಇರಬಹುದು. ಕೆಲವು ಸಿಹಿಗಳಲ್ಲಿ ಖನಿಜಗಳ ಪ್ರಮಾಣ ಹೆಚ್ಚಿರಬಹುದು. ಯಾವುದರಲ್ಲಿ ಏನೇನಿದೆ ಎಂಬುದನ್ನು ನೋಡೋಣ.

ಬಿಳಿ ಸಕ್ಕರೆ

ಇದು ಅತ್ಯಂತ ಹೆಚ್ಚು ಸಂಸ್ಕರಣಗೊಳ್ಳುವ ಸಕ್ಕರೆ. ಪೌಷ್ಟಿಕಾಂಶಗಳು ಯಾವುದೂ ಇಲ್ಲದೆ ಕೇವಲ ಸಕ್ಕರೆಯ ಕ್ಯಾಲರಿಯನ್ನಷ್ಟೇ ಇದು ನೀಡುತ್ತದೆ. ಹಾಗಾಗಿ ಇದರಲ್ಲಿ ಗ್ಲೈಸೆಮಿಕ್‌ ಸೂಚಿ ಹೆಚ್ಚು. ಮಧುಮೇಹಿಗಳಿಗೆ ಇದು ಸೂಕ್ತವಲ್ಲದ್ದು. ಅಂದರೆ, 70ಕ್ಕಿಂತ ಹೆಚ್ಚಿನ ಜಿಐ ಇರುವ ವಸ್ತುಗಳ ಸಾಲಿಗೆ ಇದು ಸೇರುತ್ತದೆ. ೫೫ಕ್ಕಿಂತ ಕಡಿಮೆ ಜಿಐ ಇರುವ ತಿನಿಸುಗಳನ್ನು ಕಡಿಮೆ ಎಂತಲೂ, 56-69 ಜಿಐ ಇರುವ ವಸ್ತುಗಳಿಗೆ ಮಧ್ಯಮ ಪ್ರಮಾಣದ್ದೆಂತಲೂ, 70ಕ್ಕಿಂತ ಹೆಚ್ಚಿನ ಜಿಐ ಇರುವ ತಿನಿಸುಗಳು ಹೆಚ್ಚಿನ ಜಿಐ ಹೊಂದಿದವು ಎಂತಲೂ ಹೇಳಲಾಗುತ್ತದೆ. ಜಿಐ ಪ್ರಮಾಣ ಕಡಿಮೆ ಇದ್ದಷ್ಟೂ ರಕ್ತದಲ್ಲಿ ಸಕ್ಕರೆ ಅಂಶ ಸ್ಥಿರವಾಗಿರುತ್ತದೆ ಎನ್ನಬಹುದು.

ಕಲ್ಲು ಸಕ್ಕರೆ

ಇದು ಆಕಾರದಲ್ಲಿ ಬಿಳಿಸಕ್ಕರೆಯಂತೆ ಕಾಣುವುದಿಲ್ಲ ಎನ್ನುವುದನ್ನು ಬಿಟ್ಟರೆ, ಸತ್ವದಲ್ಲಿ ಇದು ಸಹ ಖಾಲಿ. ಸಕ್ಕರೆಯ ಕ್ಯಾಲರಿಗಳನ್ನು ಬಿಟ್ಟರೆ ಬೇರೇನನ್ನೂ ನೀಡುವುದಿಲ್ಲ. ಹಾಗಾಗಿ ಇದರದ್ದೂ ಗ್ಲೈಸೆಮಿಕ್‌ ಸೂಚಿ ಅಧಿಕ. ಮಧುಮೇಹಿಗಳಿಗೆ ಕಲ್ಲುಸಕ್ಕರೆಯೂ ಸೂಕ್ತವಲ್ಲ. ಇದನ್ನು ಸೇವಿಸಿದ ಅಲ್ಪಕಾಲದಲ್ಲೇ ಹೆಚ್ಚಿನ ಗ್ಲೂಕೋಸನ್ನು ಇದು ರಕ್ತಕ್ಕೆ ಬಿಡುಗಡೆ ಮಾಡುತ್ತದೆ. ರುಚಿಯೂ ಸಹ ಬಿಳಿ ಸಕ್ಕರೆಗಿಂತ ಹೆಚ್ಚು ಭಿನ್ನವಲ್ಲ.

ಬೂರಾ ಸಕ್ಕರೆ

ಇದು ಸಹ ಸಕ್ಕರೆಯೆ. ಆದರೆ ಸಂಸ್ಕರಣಗೊಳ್ಳದ ಸಕ್ಕರೆ. ಬಿಳಿ ಸಕ್ಕರೆಗಿಂತ ಇದು ಬಳಕೆಗೆ ಸೂಕ್ತ. ಕಾರಣ, ಇದರ ಗ್ಲೈಸೆಮಿಕ್‌ ಸೂಚಿ ಉಳಿದೆಲ್ಲ ಸಕ್ಕರೆಗಳಿಗಿಂತ ಕಡಿಮೆ. ಅಷ್ಟಾದರೂ ಹೇಳುವಂಥ ಖನಿಜಾಂಶಗಳನ್ನೇನೂ ಇದು ಹೊಂದಿರುವುದಿಲ್ಲ. ಆದರೂ ಬಿಳಿ ಸಕ್ಕರೆ ಮತ್ತು ಕಲ್ಲು ಸಕ್ಕರೆಗಿಂತ ಮಧುಮೇಹಿಗಳು ಇದನ್ನು ಬಳಸಬಹುದು. ಹಾಗೆಂದು ಇದರ ಬಳಕೆಗಾದರೂ ಮಿತಿ ಬೇಕಾಗುತ್ತದೆ.

ಬೆಲ್ಲ

ಇದರ ಗ್ಲೈಸೆಮಿಕ್‌ ಸೂಚಿ ಮಧ್ಯಮ ಪ್ರಮಾಣದಲ್ಲಿದೆ. ಅಂದರೆ ಸಂಸ್ಕರಿತ ಸಕ್ಕರೆಗಳಿಗಿಂತ ಇದು ಬಳಕೆಗೆ ಸೂಕ್ತ. ಇದರಲ್ಲಿ ಮೊಲಾಸಿಸ್‌ ಅಂಶ ಉಳಿದಿರುವುದರಿಂದ ಕಬ್ಬಿಣ, ಪೊಟಾಶಿಯಂ, ಮೆಗ್ನೀಶಿಯಂ ಮತ್ತು ಹಲವು ರೀತಿಯ ಬಿ ವಿಟಮಿನ್‌ಗಳು ಬೆಲ್ಲದಲ್ಲಿ ಸೇರಿಸುತ್ತವೆ. ಜೊತೆಗೆ, ಉತ್ಕರ್ಷಣ ನಿರೋಧಕಗಳಿಂದಲೂ ಕೂಡಿದೆ. ಅಲ್ಪ ಪ್ರಮಾಣದಲ್ಲಿ ಮಧುಮೇಹಿಗಳು ಇದನ್ನು ಬಳಸಬಹುದು. ಹೆಚ್ಚಿನ ಜಿಐ ಇರುವಂಥ ವಸ್ತುಗಳಿಗಾಗಿ ಹೆಚ್ಚಿನ ಪ್ರಮಾಣದಲ್ಲಿ ಇನ್‌ಸುಲಿನ್‌ ಉತ್ಪತ್ತಿಯಾಗುತ್ತದೆ. ಇದ್ದಕ್ಕಿದ್ದಂತೆ ಸಿಕ್ಕಾಪಟ್ಟೆ ಗ್ಲೂಕೋಸ್‌ ದೇಹಕ್ಕೆ ದೊರೆತರೆ, ಅದನ್ನು ನಿರ್ವಹಿಸಲು ಶರೀರ ಯತ್ನಿಸುತ್ತದೆ. ಆಗ ರಕ್ತದಲ್ಲಿ ಸಕ್ಕರೆಯಂಶದ ಏರಿಳಿತ ಕಾಣುವುದು ಸಾಮಾನ್ಯ. ಇದರ ಬದಲಿಗೆ ಕಡಿಮೆ ಜಿಐ ಇರುವಂಥ ಆಹಾರ ಸೇವಿಸುವುದರಿಂದ, ರಕ್ತಕ್ಕೆ ಗ್ಲೂಕೋಸ್‌ ಬಿಡುಗಡೆ ಆಗುವ ಪ್ರಮಾಣವೂ ನಿಧಾನವೇ ಆಗುತ್ತದೆ. ಹಾಗಾಗಿ, ನಾರುಭರಿತ ಆಹಾರಗಳು, ಇಡೀ ಧಾನ್ಯಗಳು, ಹಣ್ಣು-ತರಕಾರಿಗಳು ಆಹಾರದಲ್ಲಿ ಸೇರಿಸಕೊಂಡಿರಬೇಕು.

ಇದನ್ನೂ ಓದಿ: Cooking Oils: ಭಾರತೀಯ ಅಡುಗೆ ಶೈಲಿಗೆ ಯೋಗ್ಯವಾದ 7 ಅಡುಗೆ ಎಣ್ಣೆಗಳಿವು

Exit mobile version