Site icon Vistara News

Whooping Cough Outbreak: ಹರಡುತ್ತಿದೆ ನಾಯಿಕೆಮ್ಮು; ಈ ಸೋಂಕಿನಿಂದ ತಪ್ಪಿಸಿಕೊಳ್ಳುವುದು ಹೇಗೆ?

Whooping Cough

ನಾಯಿಕೆಮ್ಮು ಅಥವಾ ವೂಪಿಂಗ್‌ ಕಾಫ್‌ ಕೆಮ್ಮಿನಿಂದಲೇ ಹರಡುವ ಅಂಟುರೋಗ. ಚೀನಾ, ಫಿಲಿಪ್ಪೀನ್ಸ್‌, ನೆದರ್ಲೆಂಡ್‌, ಚೆಕ್‌ ರಿಪಬ್ಲಿಕ್‌, ಬ್ರಿಟನ್‌, ಅಮೆರಿಕ ಸೇರಿದಂತೆ ಹಲವಾರು ದೇಶಗಳಲ್ಲಿ ಜೋರಾಗಿ ಹರಡುತ್ತಿದೆ ಈ ಕಾಯಿಲೆ. ಚೀನಾವೊಂದರಲ್ಲೇ 2024ರ ಸಾಲಿನ ಮೊದಲೆರಡು ತಿಂಗಳಲ್ಲಿ 32,000 ಪ್ರಕರಣಗಳು ವರದಿಯಾಗಿವೆ. ಕಳೆದ ಸಾಲಿಗೆ ಹೋಲಿಸಿದರೆ, ಈ ಸಾಲಿನ ಪ್ರಕರಣಗಳ ಸಂಖ್ಯೆ ಸುಮಾರು 20 ಪಟ್ಟು ಹೆಚ್ಚು. ಏನು ರೋಗವಿದು? ಯಾಕೆ ಬರುತ್ತದೆ? ಇದೇನು ಹೊಸ ರೋಗವನ್ನು, ದೀರ್ಘ ಕಾಲದಿಂದ ಬಂದು-ಹೋಗಿ ಮಾಡಿಕೊಂಡಿದ್ದಂಥದ್ದೇ. ಶ್ವಾಸಕೋಶಗಳನ್ನೇ ಗುರಿಯಾಗಿಸಿಕೊಳ್ಳುವ ಈ ರೋಗವು ಬ್ಯಾಕ್ಟೀರಿಯಾ ಸೋಂಕಿನಿಂದ ಬರುವಂಥದ್ದು. ಭಯಾನಕವಾಗಿ ಮೇಲುಸಿರುವ ಬಂದು ಕೆಮ್ಮಿದ ನಂತರ ಹೊರಡುವ ಕೂಗುಸಿರಿನಿಂದಾಗಿ ಈ ರೋಗಕ್ಕೆ ವೂಪಿಂಗ್‌ ಕಾಫ್‌ ಅಥವಾ ನಾಯಿಕೆಮ್ಮು ಎಂದು ಕರೆಯಲಾಗುತ್ತದೆ. ಐದು ವರ್ಷದೊಳಗಿನ ಮಕ್ಕಳಲ್ಲಿ ಇದರ ಲಕ್ಷಣಗಳು ತೀವ್ರವಾಗಿ ಕಾಣಿಸಿಕೊಳ್ಳುತ್ತವೆ. ಅದರಲ್ಲೂ ಎಳೆಯ ಮಕ್ಕಳಿಗೆ ಈ ಸೋಂಕು ಅಂಟಿದರೆ, ಕೆಮ್ಮು ತಂತಾನೆ ನ್ಯುಮೋನಿಯಕ್ಕೆ ತಿರುಗಿ ಪ್ರಾಣಾಪಾಯವಾಗುವ (Whooping Cough Outbreak) ಸಾಧ್ಯತೆಯೂ ಇದೆ.

ಹರಡುವುದು ಹೇಗೆ?

ಸೋಂಕು ಹೊಂದಿದವರು ಕೆಮ್ಮಿದಾಗ ಅಥವಾ ಸೀನಿದಾಗ ಇದು ಗಾಳಿಯ ಮುಖೇನ ಇನ್ನೊಬ್ಬರಿಗೆ ಹರಡುತ್ತದೆ. ಒಮ್ಮೆ ದೇಹವನ್ನು ಪ್ರವೇಶಿಸಿದ ಬ್ಯಾಕ್ಟೀರಿಯವು ಗಂಟಲಲ್ಲಿ ಸ್ಥಿತವಾಗುತ್ತದೆ. ಗಂಟಲು ಪ್ರವೇಶಿಸುವ ಬೇಡದ ಕಣಗಳು ಅಥವಾ ಕಫವನ್ನು ತಡೆಯುವ ಕೂದಲಿನಂಥ ಸೂಕ್ಷ್ಮ ವಸ್ತುಗಳನ್ನು ಈ ಬ್ಯಾಕ್ಟೀರಿಯ ನಾಶ ಮಾಡುತ್ತದೆ. ಇದರಿಂದ ಶ್ವಾಸನಾಳದಲ್ಲಿ ತೀವ್ರ ಉರಿಯೂತ ಕಾಣಿಸಿಕೊಂಡು ವಿಪರೀತ ಕೆಮ್ಮು ಆರಂಭವಾಗುತ್ತದೆ. ಒಮ್ಮೊಮ್ಮೆ ಕೆಮ್ಮಿದರೆ ವಾಂತಿಯಾಗುವಷ್ಟು ಕೆಮ್ಮುತ್ತಾರೆ ಮಕ್ಕಳು. ಇದರಿಂದ ಉಸಿರಾಟದ ತೊಂದರೆಯೂ ಪ್ರಾರಂಭವಾಗುತ್ತದೆ.

ಲಕ್ಷಣಗಳೇನು?

ಮೊದಲಿಗೆ ನೆಗಡಿಯಂತೆ ಪ್ರಾರಂಭವಾಗುತ್ತದೆ ಈ ರೋಗ. ಸಣ್ಣ ಜ್ವರವೂ ಬರಬಹುದು. ಮೊದಲಿಗೆ ಕೆಮ್ಮುವಾಗ ʻವೂಫ್‌ʼ ಶಬ್ದ ಬಾರದಿದ್ದರೂ ಕ್ರಮೇಣ ಕೂಗುಸಿರು ಕೇಳಿಸಲಾರಂಭಿಸುತ್ತದೆ. ಒಮ್ಮೆ ಕೆಮ್ಮು ಪ್ರಾರಂಭವಾದರೆ ನಿಲ್ಲಿಸುವುದೇ ಕಷ್ಟ ಎಂಬಂತಾಗಿ, ವಾಂತಿಯಾಗುತ್ತದೆ. ಅತಿಯಾದ ಸುಸ್ತು, ಆಯಾಸ ಕಾಡುತ್ತದೆ. ಆರು ತಿಂಗಳಿಗಿಂತ ಎಳೆಯ ಶಿಶುಗಳಲ್ಲಿ ಈ ಕೂಗುಸಿರು ಕೇಳದಿರಬಹುದು. ಬದಲಿಗೆ ಗೊರಕೆಯಂಥ ಶಬ್ದ ಕೇಳಿ, ಉಸಿರು ನಿಂತಂತೆಯೂ ಆಗಬಹುದು. ಈ ಲಕ್ಷಣಗಳು ಕಂಡುಬಂದಲ್ಲಿ ತ್ವರಿತವಾಗಿ ವೈದ್ಯಕೀಯ ಚಿಕಿತ್ಸೆ ಕೊಡಿಸಬೇಕು. ಸರಿಯಾದ ಆಂಟಿಬಯಾಟಿಕ್‌ ಔಷಧಗಳು ಇದನ್ನು ವಾಸಿ ಮಾಡಬಲ್ಲವು.

ರಕ್ಷಣೆ ಇದೆಯೇ?

ಹೌದು. ಪುಟಾಣಿಗಳಿಗೆ ಹುಟ್ಟಿದ ಮೂರು ತಿಂಗಳಲ್ಲಿ ನೀಡಲಾಗುವ ಡಿಟಾಪ್‌ ಮತ್ತು ಟಿಡಾಪ್‌ ( DTaP and Tdap) ಲಸಿಕೆಗಳು ನಾಯಿಕೆಮ್ಮಿನ ವಿರುದ್ಧ ರಕ್ಷಣೆ ನೀಡಬಲ್ಲವು. ಹಾಗಾಗಿ ಮಕ್ಕಳಿಗೆ ನೀಡಬೇಕಾದ ಯಾವುದೇ ಲಸಿಕೆಯನ್ನು ತಪ್ಪಿಸಕೂಡದು. ನಂತರವೂ ಬೂಸ್ಟರ್‌ ಡೋಸ್‌ಗಳು ಲಭ್ಯ ಇವೆ. ಸೋಂಕಿತರು ತಮ್ಮ ಸ್ವಚ್ಛತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕೆಮ್ಮುವಾಗ ಸೀನುವಾಗ ಮೂಗು-ಬಾಯಿಗೆ ಮಾಸ್ಕ್‌ ಅಥವಾ ಬಟ್ಟೆ ಅಡ್ಡ ಹಿಡಿದರೆ ಸೂಕ್ತ. ತಮ್ಮ ಕೈಗಳನ್ನು ಆಗಾಗ ಶುಚಿ ಮಾಡಿಕೊಳ್ಳಬೇಕು. ಇದಿಷ್ಟನ್ನೂ ಮಕ್ಕಳ ಬಳಿ ಮಾಡಿಸುವುದು ಕಷ್ಟವಾದರೂ, ದೊಡ್ಡವರಿಂದ ಮಕ್ಕಳಿಗೆ ಹರಡುವುದನ್ನು ತಪ್ಪಿಸಲು ಇದನ್ನು ಬಳಸಬಹುದು. ಶಾಲೆಗೆ ಹೋಗುವ ಮಕ್ಕಳಲ್ಲಿ ಈ ಲಕ್ಷಣಗಳು ಕಂಡರೆ, ಅವರನ್ನು ಮನೆಯಲ್ಲೇ ಇರಿಸಿಕೊಳ್ಳಿ. ಸೋಂಕಿತರು ಆದಷ್ಟೂ ಉಳಿದವರಿಗೆ ಹರಡದಂತೆ ಸ್ವಯಂ ಎಚ್ಚರಿಕೆ ತೆಗೆದುಕೊಳ್ಳಿ.

ಆಹಾರ, ವಿಶ್ರಾಂತಿ

ಸೋಂಕಿತರಿಗೆ ಸಾಕಷ್ಟು ನೀರು ಅಗತ್ಯವಿರುತ್ತದೆ. ಶ್ವಾಸನಾಳಗಳಲ್ಲಿ ತುಂಬಿದ ಕಫ ಹೊರಹಾಕಲು ಹೆಚ್ಚಿನ ಪ್ರಮಾಣದ ನೀರು ಸಹಾಯ ಮಾಡುತ್ತದೆ. ಹಾಗೆಯೇ ಪೌಷ್ಟಿಕವಾದ ಆಹಾರ, ವಿಟಮಿನ್‌ ಸಿ ಸತ್ವಗಳು ನೆರವಾಗುತ್ತವೆ. ಸಾಕಷ್ಟು ನಿದ್ದೆ ಮತ್ತು ವಿಶ್ರಾಂತಿ ಅತ್ಯಗತ್ಯ. ವೈದ್ಯರು ಹೇಳಿದ ಪ್ರತಿಜೈವಿಕ ಔಷಧಿಗಳು ಮತ್ತು ಪಥ್ಯಗಳ ಪಾಲನೆ ಕಡ್ಡಾಯ. ಇದರಿಂದ ಈ ಘೋರ ಕೆಮ್ಮಿನ ರೋಗವನ್ನು ಗುಣಪಡಿಸಿಕೊಳ್ಳಬಹುದು.

ಇದನ್ನೂ ಓದಿ: Fasting Tips: ನೀವು ಆಗಾಗ ಉಪವಾಸ ಮಾಡುತ್ತೀರಾ? ಹಾಗಾದರೆ ಇದನ್ನು ಓದಿ!

Exit mobile version