ಬಹಳಷ್ಟು ಮಂದಿ ಮಹಿಳೆಯರು ದಿಢೀರನೆ ಗಾತ್ರ ಹೆಚ್ಚಿಸಿಕೊಂಡ ಸ್ತನಗಳ ಬಗ್ಗೆ ಚಿಂತಿತರಾಗುತ್ತಾರೆ. ಅರೆ, ನಿನ್ನೆ ಮೊನೆಯವರೆಗೆ ಸರಿಯಾಗೇ ಇದ್ದೆನಲ್ಲ, ಇದು ಹೇಗಾಯಿತು ಅಂದುಕೊಳ್ಳುತ್ತೇವೆ. ಬಹಳಷ್ಟು ಸಾರಿ ಗೊತ್ತೇ ಆಗಿರುವುದಿಲ್ಲ ಕೂಡಾ. ಹೊಸ ಒಳ ಉಡುಪನ್ನು ಖರೀದಿಸ ಹೊರಟಾಗಲಷ್ಟೇ, ಇನ್ನೂ ತನ್ನದು ಹಳೆಯ ಸೈಜಿನಲ್ಲಿ ಇಲ್ಲ ಎಂಬ ಜ್ಞಾನೋದಯವಾಗುತ್ತದೆ. ಹಾಗಾದರೆ, ಇದು ಹೇಗಾಯ್ತು ಎಂದು ಇದಕ್ಕೆ ಕಾರಣಗಳನ್ನು ಹುಡುಕಹೋದರೆ ಉತ್ತರ ಅನೇಕ. ನಮ್ಮ ದಿನನಿತ್ಯದ ಚಟುವಟಿಕೆಗೂ, ಬದಲಾವಣೆಗಳಿಗೂ ಈ ಸ್ತನಗಳ ಗಾತ್ರವೃದ್ಧಿಗೂ ಸಂಬಂಧವಿದೆ. ಕೆಲವು ನಮ್ಮ ಬದುಕಿನ ಭಾಗವೇ ಆಗಿದ್ದು, ಸಹಜವೇ ಆಗಿದ್ದರೆ, ಇನ್ನೂ ಕೆಲವೊಮ್ಮೆ ಹೀಗಾಗಲು ಬೇರೆ ಕಾರಣವೂ ಆಗಿರಬಹುದು. ಹಾಗಾಗಿ, ಸ್ತನ ಇದ್ದಕ್ಕಿದ್ದಂತೆ ಗಾತ್ರ ಬದಲಾಯಿಸಿಕೊಳ್ಳಲು ಇವೆಲ್ಲ ಕಾರಣಗಳಿರಬಹುದು ಎಂದು ಸಾಧ್ಯಾಸಾಧ್ಯತೆಗಳ ಪಟ್ಟಿ ಇಲ್ಲಿ ಕೊಡಲಾಗಿದೆ. ಯಾಕೆಂದರೆ, ಇವುಗಳಲ್ಲಿ ಯಾವೊಂದು ಕಾರಣವೂ ಆಗಿರುವ ಸಂಭವವಿದೆ.
೧. ಋತುಚಕ್ರ: ಬಹಳಷ್ಟು ಮಂದಿ ಮಹಿಳೆಯರು ಇದನ್ನು ಗಮನಿಸಿದ್ದೀರಾ? ಋತುಚಕ್ರದ ಸಂದರ್ಭ ನಮ್ಮ ದೇಹದಲ್ಲಿ ಸಾಕಷ್ಟು ಬದಲಾವಣೆಗಗಳಾಗುತ್ತವೆ. ಮುಖ್ಯವಾಗಿ ಪ್ರೊಜೆಸ್ಟೆರಾನ್ ಹಾಗೂ ಇಸ್ಟ್ರೋಜನ್ ಹಾರ್ಮೋನಿನ ಮಟ್ಟ ಹಿಗ್ಗುತ್ತದೆ. ಈ ಸಂದರ್ಭ ಸ್ತನದ ಗಾತ್ರವೇನೂ ದೊಡ್ಡದಾಗುವುದಿಲ್ಲ. ಬದಲಾಗಿ ಈ ಸಂದರ್ಭ ಬಹಳ ಸೆನ್ಸಿಟಿವ್ ಆಗಿರುತ್ತದೆ. ಇನ್ನೇನು ಋತುಚಕ್ರ ಸಂಭವಿಸುವ ಒಂದೆರಡು ದಿನಗಳು ಮೊದಲು ಸ್ತನ ಗಾತ್ರದಲ್ಲಿ ಹಿರಿದಾದಂತೆ ಅನಿಸುತ್ತದೆ.
೨. ತಾಯ್ತನ: ಗರ್ಭಿಣಿಯಾದಾಗ ಮಹಿಳೆಯ ದೇಹದ ಹಾರ್ಮೋನಿನಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತದೆ. ಮುಖ್ಯವಾಗಿ ಸ್ತನಗಳು ದೊಡ್ಡದಾಗುತ್ತವೆ. ಇದು ಪ್ರಕೃತಿ ಸಹಜ. ಸ್ತನದ ಒಳಗೆ ಹರಿಯುವ ರಕ್ತನಾಳಗಳ ಗಾತ್ರವೂ ಹಿಗ್ಗಿಕೊಂಡು ಸ್ತನ ದೊಡ್ಡದಾದಂತೆ ಅನಿಸುತ್ತದೆ. ಎಲ್ಲ ಮಹಿಳೆಯರೂ ತಾಯ್ತನಕ್ಕೆ ಪ್ರವೇಶ ಮಾಡುವಾಗ ಇಂತಹ ಬದಲಾವಣೆ ಸಹಜ.
೩. ತೂಕ ಹೆಚ್ಚಾಗುವುದು: ಸ್ತನದ ಗಾತ್ರ ಹಿಗ್ಗಲು ಮತ್ತೊಂದು ಪ್ರಮುಖ ಕಾರಣ ಎಂದರೆ ತೂಕ ಹೆಚ್ಚುವುದು. ಬಹಳಷ್ಟು ಹೆಣ್ಣುಮಕ್ಕಳ ತೂಕ ೩೦ ವರ್ಷ ವಯಸ್ಸಿನ ನಂತರ ಹೆಚ್ಚಾಗುತ್ತದೆ. ಪರಿಣಾಮವಾಗಿ ಸ್ತನದ ಗಾತ್ರವೂ ಹೆಚ್ಚಾಗುತ್ತದೆ.
೪. ಲೈಂಗಿಕತೆ: ಲೈಂಗಿಕ ಸಂಪರ್ಕದ ಸಂದರ್ಭದಲ್ಲಿ ಸ್ತನ ಗಾತ್ರದಲ್ಲಿ ಹಿಗ್ಗುತ್ತದೆ. ಸೆಕ್ಸ್ ಸಂದರ್ಭ ಏರಿಯೋಲಾಗಳು ಹಿಗ್ಗುವ ಕಾರಣ ಏರಿಯೋಲಾದ ಸುತ್ತಮುತ್ತಲ ಅಂಗಗಳು ಸಹಜವಾಗಿಯೇ ಹಿಗ್ಗುತ್ತವೆ.
ಇದನ್ನೂ ಓದಿ: Breast cancer | ಡಿಯೋಡರೆಂಟ್ ಬಳಕೆಯಿಂದ ಸ್ತನದ ಕ್ಯಾನ್ಸರ್ ಬರುತ್ತಾ?
೫. ಮಾತ್ರೆಗಳು: ಕೆಲವು ಮಾತ್ರೆಗಳು ಮುಖ್ಯವಾಗಿ ಕಾಂಟ್ರಾಸೆಪ್ಟಿವ್ ಮಾತ್ರೆಗಳಿಂದ ಸ್ತನವು ದೊಡ್ಡದಾಗುತ್ತವೆ.
೬. ಸ್ತನಗಡ್ಡೆಗಳು: ಸ್ತನದಲ್ಲಿ ಗಡ್ಡೆಗಳಾದಾಗ ಸ್ತನ ದೊಡ್ಡದಾಗುತ್ತದೆ. ಈ ಬಗ್ಗೆ ಆಗಾಗ ಗಮನ ಹರಿಸುವುದು ಒಳ್ಳೆಯದು. ಹಾಗಾಗಿ ಇಂತಹವುಗಳು ಗಮನಕ್ಕೆ ಬಂದರೆ ಹಾಗೂ ಅಸಹಜ ಬೆಳವಣಿಗೆಗಳು ಕಂಡುಬಂದಲ್ಲಿ ವೈದ್ಯರ ಪರೀಕ್ಷೆ, ಹಾಗೂ ಸಲಹೆ ಪಡೆಯುವುದು ಅತ್ಯಂತ ಅಗತ್ಯ.
೭. ವ್ಯಾಯಾಮದ ಕೊರತೆ: ಸರಿಯಾಗಿ ವ್ಯಾಯಾಮ ಮಾಡದೇ ಇದ್ದಾಗ ದೇಹದ ಅಂಗಗಳಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಮುಖ್ಯವಾಗಿ ನಾವು ತಿನ್ನುವ ಆಹಾರ ಕೊಬ್ಬಿನಿಂದ ಕೂಡಿದ್ದು, ಬಹಳ ಸಾರಿ ದೇಹದ ಕೆಲವು ಅಂಗಗಳ ಮೇಲೆ ಮಾತ್ರ ಹೆಚ್ಚು ಪರಿಣಾಮ ಬೀರುತ್ತದೆ. ಒಬ್ಬೊಬ್ಬರ ದೇಹ ಪ್ರಕೃತಿಯನ್ನು ಇದು ಅವಲಂಬಿಸಿರುತ್ತದೆ. ಅವುಗಳ ಪ್ರಕಾರ ಸ್ತನಗಳೂ ಮುಖ್ಯವಾದವು. ನಮ್ಮ ದೇಹದಲ್ಲಿ ಅತ್ಯಂತ ಸುಲಭವಾಗಿ ತೂಕ ಹೆಚ್ಚಿಸಿಕೊಳ್ಳುವ ಕೆಲವು ಸೂಕ್ಷ್ಮ ಭಾಗಗಳಿವೆ. ಅವುಗಳ ಬಗ್ಗೆ ನಾವು ಜಾಗರೂಕರಾಗಿರಬೇಕು. ಯಾಕೆಂದರೆ, ವ್ಯಾಯಾಮ ಕೊಂಚ ಏರಿಳಿತವಾದರೂ ಸಾಕು ಅವು ತೂಕ ಹೆಚ್ಚಿಸಿಕೊಳ್ಳುತ್ತವೆ. ಅದಕ್ಕಾಗಿ ದೇಹವನ್ನು ಸರಿಯಾದ ಆಕಾರದಲ್ಲಿ ಇಟ್ಟುಕೊಳ್ಳಲು ನಿಯಮಿತ ವ್ಯಾಯಾಮ ಅಗತ್ಯ ಎಂಬುದನ್ನು ಮನಗಾಣಬೇಕು.
ಇದನ್ನೂ ಓದಿ: Breastfeeding | ಚಳಿಗಾಲದಲ್ಲಿ ಹಾಲುಣಿಸುವುದೇ ತಾಯಂದಿರಿಗೆ ಸವಾಲು! ಪರಿಹಾರ ಏನು?