ಕೀಲುಗಳು, ಕೂದಲು ಮತ್ತು ಚರ್ಮ ತೊಂದರೆ ಕೊಡದಂತೆ ಇರಬೇಕೆ? ಹಾಗಾದರೆ ಹೆಚ್ಚು ಕೊಲಾಜಿನ್ ಇರುವ ಆಹಾರಗಳ ಬಗ್ಗೆ ಗಮನ ಕೊಡಿ. ಇತ್ತೀಚಿನ ದಿನಗಳಲ್ಲಿ ಸೌಂದರ್ಯ ಹಾಗೂ ಫಿಟ್‌ನೆಸ್ ಮಾರುಕಟ್ಟೆಗಳಲ್ಲಿ ದೊಡ್ಡ ಸದ್ದು ಮಾಡುತ್ತಿರುವ ಕೊಲಾಜಿನ್ನನ್ನು ಪೂರಕಗಳ ರೂಪದಲ್ಲೇ ತೆಗೆದುಕೊಳ್ಳಬೇಕೆಂದಿಲ್ಲ. ಅವು ನೈಸರ್ಗಿಕವಾಗಿ ಆಹಾರದ ಮೂಲಕವೂ ದೇಹ ಸೇರುತ್ತದೆ. ಆದರೆ ಯಾವೆಲ್ಲಾ ಆಹಾರಗಳಲ್ಲಿ (Collagen foods) ಲಭ್ಯವಿದೆ ಎಂಬುದನ್ನು ತಿಳಿಯಬೇಕು.
ಯಾಕೆ ಬೇಕು?
ಇದಕ್ಕೂ ಮೊದಲು ಕೊಲಾಜಿನ್ ಎಂದರೇನು ಎಂಬುದನ್ನು ತಿಳಿಯೋಣ. ನಮ್ಮ ದೇಹದ ಕೋಶಗಳನ್ನು ಕಟ್ಟುವುದಕ್ಕೆ ಅಗತ್ಯವಾಗಿ ಬೇಕಾದಂಥ ಪ್ರೊಟೀನ್‌ಗಳಲ್ಲಿ ಕೊಲಾಜಿನ್ ಸಹ ಒಂದು. ನಮ್ಮ ಚರ್ಮದ ಹಿಗ್ಗುವಿಕೆಗೆ ಕೊಲಾಜಿನ್ ಮುಖ್ಯ ಕಾರಣ. ಸಾಕಷ್ಟು ಪ್ರಮಾಣದಲ್ಲಿ ಚರ್ಮದಲ್ಲಿ ಕೊಲಾಜಿನ್ ಇದ್ದರೆ, ತ್ವಚೆಯ ಮೇಲೆ ನೆರಿಗೆ ಮೂಡುವುದು, ಬಿಗಿ ಕಳೆದುಕೊಳ್ಳುವುದು- ಇಂಥದ್ದೆಲ್ಲಾ ಆಗದೆ ಚರ್ಮ ತಾರುಣ್ಯಭರಿತವಾಗಿ ಇರುತ್ತದೆ. ಉಗುರು ಮತ್ತು ಕೂದಲುಗಳನ್ನು ಕಾಂತಿಯುಕ್ತವಾಗಿ ಇರಿಸುವ ಸಾಧ್ಯತೆ ಈ ಪ್ರೊಟೀನ್‌ಗಿದೆ. ದೇಹದ ಕೀಲುಗಳ ಕ್ಷೇಮಕ್ಕೆ ಕೊಲಾಜಿನ್ ಅತ್ಯಗತ್ಯ. ಕೀಲುಗಳ ಸುತ್ತಲಿನ ಅಂಗಾಂಶಗಳು (ಕಾರ್ಟಿಲೇಜ್) ಸರಿಯಾಗಿರಬೇಕೆಂದರೆ ದೇಹದಲ್ಲಿ ಸೂಕ್ತ ಪ್ರಮಾಣದಲ್ಲಿ ಕೊಲಾಜಿನ್ ಇರಲೇಬೇಕು. ಅದಿಲ್ಲದಿದ್ದರೆ ಉರಿಯೂತಕ್ಕೆ ಕಾರಣವಾಗುತ್ತದೆ.
ಮೂಳೆಗಳ ಸಾಂದ್ರತೆ ಕುಸಿಯದಂತೆ ಮಾಡಿ, ಅಸ್ಥಿಹಂದರ ಸದೃಢವಾಗಿ ಇರಬೇಕಾದರೂ ಕೊಲಾಜಿನ್ ಬೇಕಾಗುತ್ತದೆ. ಅದಲ್ಲದೆ, ಜೀರ್ಣಾಂಗಗಳನ್ನು ಸುಸ್ಥಿತಿಯಲ್ಲಿ ಇರಿಸುವುದಕ್ಕೆ ಇದು ಅಗತ್ಯ. ಒಟ್ಟಾರೆ, ದೇಹದ ಸ್ಥಿತಿಸ್ಥಾಪಕತ್ವ ಮತ್ತು ಬಲ- ಈ ಎರಡಕ್ಕೂ ಇದು ಬೇಕಿರುವುದರಿಂದ, ಸೌಂದರ್ಯ ಮತ್ತು ಫಿಟ್‌ನೆಸ್ ಉತ್ಸಾಹಿಗಳ ದೃಷ್ಟಿ ಇದರತ್ತ ಹೊರಳಿದೆ. ನಾವು ನಿತ್ಯ ಸೇವಿಸುವ ಆಹಾರದಲ್ಲೂ ಹಲವಾರು ಮೂಲಗಳಿಂದ ನಮಗೆ ಕೊಲಾಜಿನ್ ದೊರೆಯುತ್ತದೆ. ಆದರೆ ಯಾವುದರಲ್ಲಿ ಸಾಂದ್ರವಾಗಿದೆ ಎಂಬುದನ್ನು ತಿಳಿದರೆ ದೇಹಾರೋಗ್ಯವನ್ನು ನೈಸರ್ಗಿಕ ಮೂಲದಿಂದಲೇ ಕಾಪಾಡಿಕೊಳ್ಳಲು ಸಾಧ್ಯವಿದೆ
ಪ್ರಾಣಿಜನ್ಯ ಆಹಾರಗಳು
ಯಾವುದೇ ಪ್ರಾಣಿಯ ಮೂಳೆಗಳ ಸೂಪ್‌ನಲ್ಲಿ ಹೆಚ್ಚಿನ ಕೊಲಾಜಿನ್ ಇರುತ್ತದೆ. ಸೂಪ್ ಮಾತ್ರವಲ್ಲ, ಚಿಕನ್ ಸೇವಿಸುವವರಿಗೂ ಕೊಲಾಜಿನ್ ಕೊರತೆ ಆಗುವುದು ಕಡಿಮೆ. ಕೆಲವು ಜಾತಿಯ ಮೀನುಗಳಲ್ಲಿ ಕೊಲಾಜಿನ್ ಸಾಕಷ್ಟು ದೊರೆಯುತ್ತದೆ. ಹಾಗಾಗಿ ಮಾಂಸಾಹಾರಿಗಳಿಗೆ, ಅದರಲ್ಲೂ ಮುಖ್ಯವಾಗಿ ಮೀನು ಸೇವಿಸುವವರಿಗೆ ಆಹಾರದಲ್ಲೇ ಕೊಲಾಜಿನ್ ಹೇರಳವಾಗಿ ದೊರೆಯುತ್ತದೆ. ಇಂಥವರಿಗೆ ಪೂರಕ ಮಾತ್ರೆಗಳ ಅಗತ್ಯವಿಲ್ಲ.
ಮೊಟ್ಟೆ
ಕೆಲವೊಮ್ಮೆ ದೇಹಕ್ಕೆ ನೇರವಾಗಿ ಕೊಲಾಜಿನ್ ದೊರೆಯುವ ಪ್ರಮಾಣವೆಷ್ಟೋ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕೊಲಾಜಿನ್ ಉತ್ಪತ್ತಿಗೆ ಕೆಲವು ಆಹಾರಗಳು ಸಹಾಯ ಮಾಡುತ್ತವೆ. ಮೊಟ್ಟೆಯ ಬಿಳಿ ಭಾಗವು ಹಲವು ರೀತಿಯ ಪ್ರೊಟೀನ್‌ಗಳಿಂದ ಸಮೃದ್ಧವಾಗಿದೆ. ಅವುಗಳಲ್ಲಿರುವ ಪ್ರೊಲಿನ್ ಎಂಬ ಪ್ರೊಟೀನ್ ಕೊಲಾಜಿನ್ ಉತ್ಪಾದನೆ ಮಾಡಲು ದೇಹಕ್ಕೆ ನೆರವಾಗುತ್ತದೆ.
ವಿಟಮಿನ್ ಸಿ ಆಹಾರಗಳು
ಬ್ಲೂಬೆರಿ, ಸ್ಟ್ರಾಬೆರಿ ಮುಂತಾದ ಯಾವುದೇ ರೀತಿಯ ಬೆರ್ರಿಗಳಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇವುಗಳಿಂದಲೂ ಕೊಲಾಜಿನ್ ಉತ್ಪಾದನೆಗೆ ದೇಹಕ್ಕೆ ಸಹಾಯ ದೊರೆಯುತ್ತದೆ. ಕಿತ್ತಳೆ, ನಿಂಬೆಯಂಥ ಸಿಟ್ರಸ್ ಹಣ್ಣುಗಳಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಸಿ ಜೀವಸತ್ವವೂ ಉತ್ಕರ್ಷಣ ನಿರೋಧಕವೇ ಆಗಿದ್ದು, ಕೊಲಾಜಿನ್ ಹೆಚ್ಚಿಸುತ್ತದೆ.
ಕೀಲುಗಳ ಆರೋಗ್ಯ ಸುರಕ್ಷಿತವಾಗಿ ಇರಬೇಕಾದರೆ, ಮಂಡಿನೋವು, ಕುತ್ತಿಗೆನೋವಿನಂಥವು ತೊಂದರೆ ಕೊಡಬಾರದೆಂದರೆ, ಉಗುರು, ಕೂದಲು, ಚರ್ಮದ ಸೌಂದರ್ಯ ಮಾಸಬಾರದೆಂದರೆ ದೇಹಕ್ಕೆ ಸಾಕಷ್ಟು ಕೊಲಾಜಿನ್ ದೊರೆಯಬೇಕು. ಹಾಗೆಂದು ಅತಿಯಾಗಿ ಪೂರಕ ಮಾತ್ರೆಗಳನ್ನು ಸೇವಿಸಿದರೂ ಅಡ್ಡ ಪರಿಣಾಮಗಳು ಆಗಬಹುದು. ಉದಾ, ಹೊಟ್ಟೆಯಲ್ಲಿ ಉಬ್ಬರ, ಕಿರಿಕಿರಿ ಇಂಥವು ಕಾಣಿಸಿಕೊಳ್ಳಬಹುದು. ಹಾಗಾಗಿ ಆಹಾರದಲ್ಲೇ ಕೊಲಾಜಿನ್ ದೊರೆಯುವ ಸಾಧ್ಯತೆಯಿದ್ದರೆ ಉತ್ತಮ. ಪೂರಕ ಮಾತ್ರೆಗಳ ಅಗತ್ಯವಿದ್ದರೆ ವೈದ್ಯರ ಸಲಹೆ ಅನುಸರಿಸುವುದು ಸೂಕ್ತ.
ಇದನ್ನೂ ಓದಿ: Weight Gain: ನೀವು ಪ್ರೀತಿಯಲ್ಲಿದ್ದೀರಾ? ಹಾಗಾದರೆ ನಿಮ್ಮ ತೂಕ ಏರಿಕೆಯಾದೀತು, ಎಚ್ಚರ!