Site icon Vistara News

Vitamin B12: ವಿಟಮಿನ್‌ ಬಿ12 ನಮಗೇಕೆ ಬೇಕು?

Vitamin B12

ನಮ್ಮ ಶರೀರ ಚೆನ್ನಾಗಿರಬೇಕಾದರೆ ವಿವಿಧ ರೀತಿಯ ಪೋಷಕಾಂಶಗಳು ಒದಗಬೇಕು. ಆಗ ಮಾತ್ರ ಅತ್ಯಂತ ಕ್ಲಿಷ್ಟವಾದ ಹತ್ತು-ಹಲವಾರು ಕ್ರಿಯೆಗಳನ್ನು ನಡೆಸುವ ಮಾನವ ದೇಹ ಆರೋಗ್ಯಪೂರ್ಣವಾಗಿರಲು ಸಾಧ್ಯ. ದೇಹಕ್ಕೆ ಅಗತ್ಯವಾದ ಪೋಷಕಾಂಶಗಳ ಬಗ್ಗೆ ನಮಗೆ ಒಂದಿಷ್ಟು ಅರಿವಿದ್ದರೂ ಕೆಲವು ಅಗತ್ಯ ಪೋಷಕಾಂಶಗಳು ನಮ್ಮ ಗಮನದಲ್ಲಿ ಇರುವುದೇ ಇಲ್ಲ. ತಜ್ಞರ ಪ್ರಕಾರ, ವಿಟಮಿನ್‌ ಬಿ12 (Vitamin B12) ಅಂಥದ್ದೊಂದು ಅಗತ್ಯವಾದ, ಆದರೆ ನಮ್ಮ ನೆನಪಿಗೆ ಬಾರದ ಪೋಷಕಸತ್ವ.
ನಿಯಾಸಿನ್‌, ಥಿಯಾಮಿನ್‌, ರೈಬೊಫ್ಲೆವಿನ್‌, ಫೋಲಿಕ್‌ ಆಮ್ಲ, ವಿಟಮಿನ್‌ ಬಿ6 ಮತ್ತು ವಿಟಮಿನ್‌ ಬಿ12, ಬಯೋಟಿನ್‌ ಇವೆಲ್ಲವೂ ಬೇರೆ ಬೇರೆ ಬಿ ವಿಟಮಿನ್‌ಗಳು. ಇವೆಲ್ಲ ನಮ್ಮ ದೇಹದಲ್ಲಿ ನಿರ್ವಹಿಸಬೇಕಾದ ಕೆಲಸಗಳು ಬಹಳಷ್ಟಿವೆ. ಇದರಲ್ಲಿ, ವಿಟಮಿನ್‌ ಬಿ12 ನಮಗೇಕೆ ಬೇಕು ಮತ್ತು ಅದನ್ನು ಯಾವ ಆಹಾರಗಳ ಮೂಲಕ ಪಡೆಯಬಹುದು ಎಂಬ ಮಾಹಿತಿಯಿದು

ಖಿನ್ನತೆ ದೂರವಿಡಲು

ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್‌ ಬಿ12 ನಮ್ಮ ಆಹಾರದ ಭಾಗವಾಗಿರಬೇಕು. ನಮ್ಮನ್ನು ಸಂತೋಷದಿಂದಿಡಲು ಅಗತ್ಯವಾದ ಸೆರೋಟೋನಿನ್‌ ಚೋದಕಗಳು ಬಿಡುಗಡೆ ಆಗುವಲ್ಲಿ ವಿಟಮಿನ್‌ ಬಿ12 ಪಾತ್ರ ಗಣನೀಯ. ಈ ಪೋಷಕತತ್ವ ಕಡಿಮೆ ಆದವರು ಖಿನ್ನತೆಗೆ ಜಾರುವ ಸಾಧ್ಯತೆ, ಉಳಿದವರಿಗೆ ಹೋಲಿಸಿದಲ್ಲಿ, ದುಪ್ಪಟ್ಟು ಎಂದು ಹೇಳಲಾಗುತ್ತದೆ.

ಮೆದುಳಿನ ಆರೋಗ್ಯಕ್ಕೆ

ನಮ್ಮ ನರಗಳ ಆರೋಗ್ಯಕ್ಕೂ ವಿಟಮಿನ್‌ ಬಿ12 ಅತಿ ಮುಖ್ಯ. ಮೆದುಳಿನ ನ್ಯೂರಾನ್‌ಗಳು ಸಾಯುತ್ತಾ ಬರುವ ಅಟ್ರೋಫಿಯಂಥ ಅವಸ್ಥೆಗೆ ತುತ್ತಾಗಬಾರದೆಂದರೆ ವಿಟಮಿನ್‌ ಬಿ12 ಸೇವನೆ ಸಾಕಷ್ಟಿರಬೇಕು. ಇರುವುದೆಲ್ಲಾ ಮರೆವಂಥ ಡಿಮೆನ್ಶಿಯದಂಥ ಖಾಯಿಲೆ ದೂರವಿಡುವಲ್ಲಿ ಈ ಪೋಷಕಾಂಶದ ಪಾತ್ರ ಪ್ರಮುಖ. ಮೆದುಳಿಗೆ ಅಗತ್ಯ ಶಕ್ತಿಯನ್ನೂ ಇದು ಪೂರೈಸುವುದರಿಂದ, ನಮ್ಮ ಬುದ್ಧಿಯನ್ನೂ ಚುರುಕಾಗಿಸುವಲ್ಲಿ ಸಹಾಯ ಮಾಡುತ್ತದೆ.

ಕಣ್ಣಿನ ಆರೋಗ್ಯಕ್ಕೆ

ಇದಕ್ಕೂ ಅಗತ್ಯವಾಗಿ ಬೇಕು ಬಿ12 ಜೀವಸತ್ವ. ಕಣ್ಣಿನ ಮೆಕ್ಯುಲ ಹಾಳಾಗದೆ, ದೃಷ್ಟಿ ಪರಿಪೂರ್ಣವಾಗಿ ಇರಬೇಕೆಂದರೆ ವಿಟಮಿನ್‌ ಬಿ12 ನಮ್ಮ ಆಹಾರದಲ್ಲಿ ಇರಲೇಬೇಕು. ಸಾಮಾನ್ಯವಾಗಿ ವೃದ್ಧಾಪ್ಯದಲ್ಲಿ ತಲೆದೋರುವ ಈ ಬಗೆಯ ದೃಷ್ಟಿದೋಷ, ಇದೊಂದು ವಿಟಮಿನ್‌ನ ಕೊರತೆಯಿಂದ ಕಡಿಮೆ ವಯಸ್ಸಿನವರನ್ನೂ ಬಾಧಿಸುತ್ತದೆ.

ಎಷ್ಟು ಬೇಕು?

ಅಧ್ಯಯನಗಳ ಪ್ರಕಾರ, ದಿನವೊಂದಕ್ಕೆ 1.5 ಮೈಕ್ರೊ ಗ್ರಾಂ ನಷ್ಟು ಬಿ12 ಜೀವಸತ್ವ ನಮಗೆ ಬೇಕು. ಹಲವು ರೀತಿಯ ಪ್ರಾಣಿ ಜನ್ಯ ಆಹಾರಗಳಿಂದ ಈ ಪೋಷಕಾಂಶವನ್ನು ಪಡೆಯಲು ಸಾಧ್ಯ. ಸಸ್ಯಜನ್ಯ ಆಹಾರಗಳಲ್ಲಿ, ಅಂದರೆ ಹಣ್ಣು-ತರಕಾರಿಗಳಲ್ಲಿ ಇದರ ಲಭ್ಯತೆ ಕಡಿಮೆ.

ಯಾವೆಲ್ಲಾ ಆಹಾರಗಳಲ್ಲಿ ಇದು ಲಭ್ಯ?:

ಅಂಗಾಂಗಗಳಲ್ಲಿ: ಅಂದರೆ ಯಕೃತ್ತು, ಕಿಡ್ನಿಯಂಥ ಅಂಗಾಂಗಗಳ ಮಾಂಸದಲ್ಲಿ ವಿಟಮಿನ್‌ ಬಿ೧೨ ಹೇರಳವಾಗಿದೆ.ಇದೊಂದೇ ಅಲ್ಲ, ಹಲವು ರೀತಿಯ ಪೋಷಕಾಂಶಗಳ ಆಗರ ಈ ಮಾಂಸ ಎನ್ನುತ್ತಾರೆ ತಜ್ಞರು.

ಡೈರಿ ಉತ್ಪನ್ನಗಳಲ್ಲಿ

ಹಾಲು, ಮೊಸರು, ಬೆಣ್ಣೆಯಂಥ ಯಾವುದೇ ಡೈರಿಯ ಉತ್ಪನ್ನಗಳಲ್ಲಿ ಈ ಅಂಶ ಲಭ್ಯವಿದೆ. ಹಾಗಾಗಿ ಸಸ್ಯಾಹಾರಿಗಳುವಿಟಮಿನ್‌ ಬಿ12 ಕೊರತೆಯನ್ನು ಅನುಭವಿಸುವ ಅಗತ್ಯವೇ ಇಲ್ಲ.

ಮೊಟ್ಟೆ

ವಿಟಮಿನ್‌ ಬಿ12 ಮಾತ್ರವೇ ಅಲ್ಲ, ಹಲವು ರೀತಿಯ ಪೋಷಕಾಂಶಗಳನ್ನು ಪೂರೈಸುವ, ಪ್ರಚಲಿತವಿರುವ ಮತ್ತುಕೈಗೆಟುಕುವ ಆಹಾರವಿದು.

ಮೀನು

ಮತ್ಸಾಹಾರಿಗಳಂತೂ ವಿಟಮಿನ್‌ ಬಿ12 ಕೊರತೆಯನ್ನು ಸುಲಭದಲ್ಲಿ ನೀಗಿಸಿಕೊಳ್ಳಬಹುದು. ಟ್ಯೂನಾ, ಸಾಲ್ಮನ್‌ ರೀತಿಯ ಮೀನುಗಳಲ್ಲಿ ಪ್ರೊಟೀನ್.‌ ಫಾಸ್ಫರಸ್‌, ವಿಟಮಿನ್‌ ಎ, ವಿಟಮಿನ್‌ ಬಿ3 ಯಂಥ ಬಗೆಬಗೆಯ ಪೋಷಕಾಂಶಗಳು ಲಭ್ಯವಿವೆ.

ಫಾರ್ಟಿಫೈಡ್‌ ಸೀರಿಯಲ್‌

ಅಂದರೆ, ಪ್ರಾಕೃತಿಕವಾಗಿ ಇಲ್ಲದ ಫೋಷಕಗಳನ್ನು ಕೃತಕವಾಗಿ ಸೇರಿಸಿ ತಯಾರಿಸಿದ ಸೀರಿಯಲ್‌. ಕೆಲವು ರೀತಿಯ ಆಹಾರಕ್ಕೆ ಅಲರ್ಜಿ ಇರುವವರಿಗೂ ಇಂಥ ಆಯ್ಕೆಗಳು ಲಭ್ಯವಿದೆ. ಉಳಿದಂತೆ, ಪೋಷಕಾಂಶಗಳು ನೈಸರ್ಗಿಕವಾಗಿಯೇ ದೇಹಕ್ಕೆ ದೊರಕಿದರೆ ಉತ್ತಮ.

ಇದನ್ನೂ ಓದಿ: Winter Health Tips: ಚಳಿಗಾಲದಲ್ಲಿ ದೇಹದಂತೆಯೇ ಮೆದುಳೂ ಬೆಚ್ಚಗಿರಲಿ

Exit mobile version