Site icon Vistara News

Makar Sankranti: ಸಂಕ್ರಾಂತಿಯಲ್ಲಿ ಎಳ್ಳು-ಬೆಲ್ಲ ತಿನ್ನುವುದೇಕೆ?

Makar Sankranti sesame-jaggery

ಅಲಕಾ ಕೆ, ಮೈಸೂರು
ಚಳಿಗಾಲ ಕಳೆದು ಸುಗ್ಗಿಯನ್ನು ಸಂಕೇತಿಸುವ ಮಕರ ಸಂಕ್ರಾಂತಿ ಹಬ್ಬ (Makar Sankranti) ಬಂದಿದೆ. ಈ ದಿನ ಸಿಹಿ ಮತ್ತು ಖಾರ ಪೊಂಗಲ್‌, ಹುಗ್ಗಿ- ಹುಣಸೆಹಣ್ಣಿನ ಅಥವಾ ಬೆಲ್ಲದ ಗೊಜ್ಜು ಮಾಡುವುದು ಕ್ರಮ. ಜೊತೆಗೆ ನಾವು ಕಡ್ಡಾಯವಾಗಿ ತಿನ್ನುವ ಇನ್ನೊಂದು ರುಚಿಕರ ಖಾದ್ಯವೆಂದರೆ ಎಳ್ಳು-ಬೆಲ್ಲ. ಈ ದಿನಗಳಲ್ಲಿ ಬೆಲ್ಲ ಮತ್ತು ಎಳ್ಳನ್ನು ಏಕೆ ತಿನ್ನಬೇಕು? ಬೆಲ್ಲ ಎನ್ನುತ್ತಿದ್ದಂತೆ ಹಲವರ ಬಾಯಲ್ಲಿ ನೀರೂರಿದರೆ, ಕೆಲವರಿಗಾದರೂ ಕಣ್ಣು ಕೆಂಪಾಗುತ್ತದೆ. ಸಿಹಿ ತಿನ್ನಲು ಆರೋಗ್ಯ ಸಮಸ್ಯೆ ಇರುವ, ತೂಕ ಇಳಿಸುವ ಯತ್ನದ, ಸಿಹಿಯೇ ಇಷ್ಟವಿಲ್ಲದ ಹಲವರು ಸಂಕ್ರಾಂತಿ ಕಾಳಿನಲ್ಲಿ ಎಳ್ಳು, ಶೇಂಗಾ, ಕೊಬ್ಬರಿ, ಹುರಿಗಡಲೆ ಸರಿ, ಆದರೆ ಬೆಲ್ಲವೇಕೆ ಎಂದು ಕೇಳಿಯಾರು. ಬೆಲ್ಲವೂ ಬೇಕು ಆರೋಗ್ಯಕ್ಕೆ. ಆಯುರ್ವೇದ ಮತ್ತು ಪರಂಪರಾಗತ ಔಷಧಪ್ರಕಾರಗಳಲ್ಲಿ ಬೆಲ್ಲ ಹಲವು ಮದ್ದುಗಳಲ್ಲಿ ಬಳಕೆಯಾಗುತ್ತದೆ.

ಉರಿಯೂತ ಶಮನ

ಸಿಹಿಯನ್ನು ತಿಂದರೆ ಉರಿಯೂತ ಹೆಚ್ಚುವ ಎನ್ನುವುದು ಸತ್ಯ. ಆದರೆ ಶ್ವಾಸನಾಳಗಳಲ್ಲಿ ಕಾಣಿಸಿಕೊಳ್ಳುವ ಉರಿಯೂತವನ್ನು, ಇದರಿಂದ ಉಂಟಾಗುವ ಅಸ್ತಮಾದಂಥ ಸಮಸ್ಯೆ ಹೆಚ್ಚದಂತೆ ಮಾಡಲು ಇದು ಪ್ರಯೋಜನವಾದೀತು. ಇದರಲ್ಲಿರುವ ಸೆಲೆನಿಯಂ ಮತ್ತು ಕಬ್ಬಿಣದ ಅಂಶಗಳು ರಕ್ತದಲ್ಲಿನ ಹಿಮೊಗ್ಲೋಬಿನ್‌ ಮಟ್ಟವನ್ನು ಸುಧಾರಿಸಿ, ಈ ಮೂಲಕ ಆಮ್ಲಜನಕದ ಪ್ರಮಾಣವನ್ನು ವೃದ್ಧಿಸುತ್ತವೆ

ರಕ್ತಹೀನತೆಗೆ

ಬೆಲ್ಲದಲ್ಲಿ ಕಬ್ಬಿಣದ ಸತ್ವ ಹೇರಳವಾಗಿ ಇರುವುದರಿಂದ ದೇಹದಲ್ಲಿನ ರಕ್ತಹೀನತೆ ಗುಣಕಾಣಲು ನೆರವಾಗುತ್ತದೆ. ದೇಹದಲ್ಲಿನ ಹಿಮೋಗ್ಲೋಬಿನ್‌ ಮಟ್ಟವನ್ನಿದು ಸುಧಾರಿಸುತ್ತದೆ. ಇದರ ಪಿತ್ತ ಸಮತೋಲನದ ಗುಣಗಳಿಂದಾಗಿ ಆಯುರ್ವೇದದಲ್ಲಿ ಔಷಧವಾಗಿಯೂ ಇದು ಬಳಕೆಯಲ್ಲಿದೆ.

ಸೂಕ್ಷ್ಮ ಸತ್ವಗಳು

ಇದರಲ್ಲಿರುವ ಪೊಟಾಶಿಯಂ ರಕ್ತದೊತ್ತಡ ಶಮನಕ್ಕೆ ನೆರವಾದರೆ, ಮೆಗ್ನೀಶಿಯಂ ಸ್ನಾಯುಗಳಿಗೆ ಬಲ ತುಂಬಬಲ್ಲದು. ಕ್ಯಾಲ್ಸಿಯಂ ಮೂಳೆಗಳನ್ನು ಸದೃಢ ಮಾಡಿದರೆ, ಜಿಂಕ್‌ ಅಂಶವು ಪ್ರತಿರೋಧಕತೆಯನ್ನು ಹೆಚ್ಚಿಸಬಲ್ಲದು. ದೇಹದಿಂದ ಕಶ್ಮಲಗಳನ್ನು ತೆಗೆಯುವ ಮತ್ತು ಮಲಬದ್ಧತೆ ನಿವಾರಿಸುವ ಗುಣವೂ ಬೆಲ್ಲಕ್ಕಿದೆ.
ಹಾಗೆಂದು, ಬಾಯಿಗೆ ರುಚಿ ಎಂಬ ಕಾರಣಕ್ಕಾಗಿ ಸಿಕ್ಕಾಪಟ್ಟೆ ತಿನ್ನುವುದೂ ಸಲ್ಲದು. ಸಂಕ್ರಾಂತಿ ಕಾಳಿನಲ್ಲಿ ಬೆಲ್ಲದೊಂದಿಗೆ ಎಳ್ಳನ್ನು ತಿನ್ನುವುದರಿಂದ ದೇಹದಲ್ಲಿ ಅಗತ್ಯ ಉಷ್ಣತೆಯನ್ನು ಕಾಪಾಡಿಕೊಳ್ಳುವುದು ಅನುಕೂಲ. ಹಾಗಾಗಿಯೇ ಚಳಿಗಾಲದಲ್ಲಿ ಕೊನೆಯಲ್ಲಿ ಬರುವ ಸಂಕ್ರಾಂತಿಯಲ್ಲಿ ಎಳ್ಳು-ಬೆಲ್ಲದ ಮಿಶ್ರಣವನ್ನು ಅಗತ್ಯವಾಗಿ ತಿನ್ನಬೇಕು.

ಎಳ್ಳೇಕೆ ಬೇಕು?

ಹಲವಾರು ಉತ್ತಮ ಗುಣಗಳ ಖನಿ ಈ ಎಳ್ಳು. ಪ್ರೊಟೀನ್‌, ಕಬ್ಬಿಣ, ಮೆಗ್ನೀಶಿಯಂ, ಸತು, ಕ್ಯಾಲ್ಶಿಯಂ, ಸೆಲೆನಿಯಂ ಮುಂತಾದ ಬಹಳಷ್ಟು ಉತ್ಕೃಷ್ಟ ಸತ್ವಗಳನ್ನು ಹೊಂದಿರುವ ಎಳ್ಳು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದಲ್ಲದೆ, ಶರೀರದ ಚಯಾಪಚಯವನ್ನು ಸಮತೋಲನದಲ್ಲಿ ಇಟ್ಟು, ಪಚನ ಶಕ್ತಿಯನ್ನು ಹೆಚ್ಚಿಸುವ ಶಕ್ತಿ ಎಳ್ಳಿಗಿದೆ. ಜೊತೆಗೆ, ಇದರಲ್ಲಿರುವ ಉತ್ತಮ ಕೊಬ್ಬಿನಂಶದಿಂದ ಕೊಲೆಸ್ಟ್ರಾಲ್‌ ಕಡಿಮೆ ಮಾಡಿ, ಹೃದ್ರೋಗ ತಡೆಗಟ್ಟಿ, ರಕ್ತದಲ್ಲಿನ ಸಕ್ಕರೆ ಅಂಶವನ್ನೂ ನಿಯಂತ್ರಿಸಲು ಅನುಕೂಲವಾಗುತ್ತದೆ.

ಹೃದಯದ ಮಿತ್ರ

ಹೃದಯದ ಮಾಂಸಖಂಡಗಳನ್ನು ಬಲಗೊಳಿಸುವ ಸಾಮರ್ಥ್ಯ ಎಳ್ಳಿಗಿದೆ. ಅಷ್ಟೇ ಅಲ್ಲ, ಇದರಲ್ಲಿರುವ ಬಿ೧ ಜೀವಸತ್ವದಿಂದ ರಕ್ತ ಪರಿಚಲನೆ ಸರಾಗವಾಗುತ್ತದೆ. ಮೆಗ್ನೀಶಿಯಂ ಸತ್ವದಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳಿಗೆ ದೇಹದಲ್ಲಿ ಉರಿಯೂತ ಶಮನ ಮಾಡುವ ಗುಣವಿರುವುದರಿಂದ ಹೃದಯದ ಆರೋಗ್ಯಕ್ಕೆ ಬಹಳಷ್ಟು ಅನುಕೂಲ ಕಲ್ಪಿಸುತ್ತದೆ.

ಮಧುಮೇಹಿಗಳಿಗೂ ಉತ್ತಮ

ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿರ್ವಹಿಸಲು ಮತ್ತು ಇನ್ಸುಲಿನ್‌ ಪ್ರಮಾಣ ಸ್ಥಿರವಾಗಿಡಲು ಎಳ್ಳು ಉತ್ತಮ ಆಯ್ಕೆ. ಇದರಲ್ಲಿ ನಾರಿನಂಶ ವಿಫುಲವಾಗಿದ್ದು, ದೇಹದ ತೂಕವನ್ನು ಕಾಯ್ದುಕೊಳ್ಳಲೂ ನೆರವಾಗುತ್ತದೆ. ಮಾತ್ರವಲ್ಲ, ದೀರ್ಘ ಸಮಯದವರೆಗೆ ಹೊಟ್ಟೆ ತುಂಬಿದ ಅನುಭವ ನೀಡುವ ಇದು ಹಸಿವು ನಿಯಂತ್ರಿಸಲು ಒಳ್ಳೆಯ ಉಪಾಯ.

ಮೂಳೆಗಳ ಬಲವರ್ಧನೆ

ಪ್ರೊಟೀನ್‌, ಮೆಗ್ನೀಶಿಯಂ ಮತ್ತು ಕ್ಯಾಲ್ಶಿಯಂಗಳ ಭಂಡಾರವಿದು. ಇವು ಮೂಳೆಗಳನ್ನು ಆರೋಗ್ಯಕರ ಮತ್ತು ಸಶಕ್ತವಾಗಿ ಇರಿಸುತ್ತವೆ. ಎಲುಬುಗಳ ಶಕ್ತಿ ವರ್ಧನೆಗೆ ಮಾತ್ರವೇ ಅಲ್ಲ, ಹಲವಾರು ಹಾರ್ಮೋನುಗಳ ಸರಿಯಾಗಿ ಸ್ರವಿಸುವಂತೆ ಮಾಡುವುದಕ್ಕೂ ದೇಹಕ್ಕೆ ಕ್ಯಾಲ್ಶಿಯಂ ಅಗತ್ಯವಿದೆ.

ಜೀರ್ಣಕಾರಿ

ನಾರಿನಂಶ ಹೆಚ್ಚಿರುವ ಈ ಆಹಾರ ಜೀರ್ಣಾಂಗಗಳ ಕ್ಷಮತೆಯನ್ನು ಹೆಚ್ಚಿಸುತ್ತದೆ. ಇದರಿಂದ ಮಲಬದ್ಧತೆಯನ್ನೂ ದೂರ ಮಾಡಬಹುದು. ಕರುಳನ್ನು ರಕ್ಷಿಸುವ ತಿಲದಿಂದ ಜಠರ ರೋಗಗಳೂ ಪರಿಹಾರವಾಗುತ್ತವೆ. ಹೊಟ್ಟೆಯಲ್ಲಿ ಉತ್ತಮ ಬ್ಯಾಕ್ಟೀರಿಯಾಗಳು ವೃದ್ಧಿಸುವಂತಾಗುತ್ತದೆ.

ಇದನ್ನೂ ಓದಿ: Mental Health: ಒತ್ತಡದ ಬದುಕಿನಲ್ಲಿ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?

Exit mobile version