Site icon Vistara News

ಸಿಹಿ ತಿಂಡಿ ತಿನ್ನುವ ಚಟವೂ ಮಾದಕ ವ್ಯಸನದಂತೆಯೇ! ಯಾಕೆ ಗೊತ್ತೇ?

eating sweet

ನಿಮಗೆ ಸಿಹಿ ತಿನಿಸುಗಳನ್ನು ತಿನ್ನಬೇಕೆಂದು ಆಗಾಗ ಬಯಕೆಯಾಗುತ್ತಲೇ ಇರುತ್ತದೆಯೋ? ಸಿಹಿ ತಿನ್ನುವುದನ್ನು ಕಡಿಮೆ ಮಾಡುವುದಕ್ಕಾಗಿ ಸಾಕಷ್ಟು ಪ್ರಯತ್ನಪಡುತ್ತಿದ್ದೀರಾ? ಹಾಗೂ ಸಿಹಿ ಕಡಿಮೆ ಮಾಡುವುದು ಬಹಳ ಕಷ್ಟ ಅಂತ ನಿಮಗನಿಸುತ್ತಿದೆಯಾ? ಅಥವಾ ಕೆಲವೊಮ್ಮೆ ಇದನ್ನೊಂದು ಬಿಡುವುದು ಮಾತ್ರ ಸಾಧ್ಯವೇ ಇಲ್ಲ ಅಂತನಿಸುತ್ತಿದೆಯಾ?

ಸಿಹಿ ಅನ್ನುವುದು ಒಂದು ಒಂಥರಾ ಚಟವೇ ಇದ್ದ ಹಾಗೆ. ಯಾವಾಗಲೂ ಸಿಹಿ ತಿನ್ನುವುದು ಒಳ್ಳೆಯದಲ್ಲ ಎಂಬುದು ತಿಳಿದಿದ್ದರೂ ಇದು ಪ್ರತಿನಿತ್ಯದ ಆಹಾರದ ಒಂದು ಭಾಗವೇ ಆಗಿಬಿಟ್ಟಿರುತ್ತದೆ. ಇಂಥ ಸಕ್ಕರೆಗೆ/ಸಿಹಿಗೆ ಒಮ್ಮೆ ಅಡಿಕ್ಟ್‌ ಆದರೆ ಮುಗೀತು. ಹೊರಬರುವುದು ಕಷ್ಟ. ಸಿಹಿ ಇಷ್ಟ ಪಡುವ ಜೀವವೊಂದು ಇದ್ದಕ್ಕಿದ್ದಂತೆ ಸಿಹಿ ತಿನ್ನುವುದನ್ನು ಪ್ರತಿನಿತ್ಯ ಅಭ್ಯಾಸ ಮಾಡಿಕೊಂಡರೆ ಮುಗೀತು, ಮತ್ತೆ ಮತ್ತೆ ಅವನ್ನೇ ಬಯಸುತ್ತದೆ. ಇಂಥ ಬಯಕೆಯ ಅನುಭವ ನಿಮಗಾಗುತ್ತಿದ್ದರೆ ನಿಮ್ಮ ಮಿದುಳು ಎಲ್ಲರಂತೆ ಸಾಮಾನ್ಯವಾಗಿ ಕೆಲಸ ಮಾಡುತ್ತಿಲ್ಲ ಎಂದರ್ಥ. ಇದಕ್ಕೆ ಹಲವು ಕಾರಣಗಳೂ ಇವೆ. ಅವುಗಳೇನೆಂದು ನೋಡೋಣ.

೧. ಸಕ್ಕರೆಯೆಂಬ ಚಟ: ಮಿದುಳಿನ ರಿವಾರ್ಡ್‌ ಸೆಂಟರನ್ನು ನೀವು ಸಿಹಿ ತಿನ್ನುವ ಮೂಲಕ ಖುಷಿ ಪಡಿಸುತ್ತಲೇ ಇದ್ದರೆ ಅದು ಮತ್ತೆ ಮತ್ತೆ ಅದನ್ನೇ ಬಯಸುತ್ತದೆ!

೨. ತೂಕದ ರಿವಾರ್ಡ್‌: ಸಕ್ಕರೆಯು ನಿಮ್ಮನ್ನು ದಪ್ಪವಾಗುವಂತೆ ಮಾಡುತ್ತದೆ. ಕಾರಣ ಇದರಲ್ಲಿರುವ ಫ್ರಕ್ಟೋಸ್‌ ಎಂಬ ಅಂಶ. ಸಕ್ಕರೆ ಅಥವಾ ಸಿಹಿ ತಿಂದರೆ ಹೆಚ್ಚು ತಿನ್ನುವಂತೆ ಮಾಡುವುದಕ್ಕೆ ನಾನಾ ಕಾರಣವಿದೆ. ಇದು ನಮ್ಮ ಮಿದುಳಿನ ರಿವಾರ್ಡ್‌ ಸೆಂಟರೆಗೆ ಹಿತವಾದ ಅನುಭವ ಕೊಡುತ್ತದೆ. ಇದರಿಂದ ಮನಸ್ಸು ಉಲ್ಲಸಿತವಾಗಿ ಮತ್ತೆ ಮತ್ತೆ ತಿನ್ನುವಂತೆ ಪ್ರೇರೇಪಿಸುತ್ತದೆ. ಪರಿಣಾಮವಾಗಿ ತೂಕವೂ ಹೆಚ್ಚಾಗುತ್ತದೆ. ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

೩. ಡೋಪಮೈನ್: ಸಿಹಿತಿಂಡಿಗಳನ್ನು ತಿಂದಾಗ ನಮ್ಮ ಮಿದುಳಿನ ಒಂದು ಭಾಗದಲ್ಲಿರುವ ನ್ಯೂಕ್ಲಿಯಸ್‌ ಅಕ್ಯುಬೆನ್ಸ್‌ಗೆ ಹೆಚ್ಚು ಡೋಪಮೈನ್‌ ಬಿಡುಗಡೆಯಾಗುವಂತೆ ಮಾಡುತ್ತದೆ. ಇದೇ ಥರದ ತಿಂಡಿಗಳನ್ನು ತಿನ್ನುತ್ತಲೇ ಇದ್ದರೆ, ಡೋಪಮೈನ್‌ ಗ್ರಾಹಕಗಳು ತಮ್ಮ ಕೆಲಸವನ್ನು ನಿಧಾನ ಮಾಡುತ್ತವೆ. ಇದರ ಫಲವಾಗಿ ಡೋಪಮೈನ್‌ಗಳಿಗೆ, ಗ್ರಾಹಕಗಳು ಕಡಿಮೆಯಾಗುತ್ತದೆ. ರಕ್ತದಲ್ಲಿ ಹೆಚ್ಚಾಗಿರುವ ಸಕ್ಕರೆಯ ಪ್ರಮಾಣವನ್ನು ತಗ್ಗಿಸಲು ಇನ್ಸುಲಿನ್‌ ಬಿಡುಗಡೆಯಾಗುತ್ತದೆ. ಈ ಇನ್ಸುಲಿನ್‌ ಮಟ್ಟ ಹೆಚ್ಚಿದಂತೆಲ್ಲಾ ಬೊಜ್ಜು ಸಂಗ್ರಹವಾಗುವುದು ಹೆಚ್ಚಾಗುತ್ತದೆ.

ಇದನ್ನೂ ಓದಿ | Mouth Ulcer | ಬಾಳು ಹಣ್ಣಾಗುವ ಮೊದಲು ಬಾಯಿ ಹುಣ್ಣಿಗೆ ಇಲ್ಲಿದೆ ಮದ್ದು

೪. ‌ಡ್ರಗ್ಸ್‌ ಚಟ: ಸಿಹಿ ತಿನಿಸು ಸಿಕ್ಕಾಗ ಮಿದುಳು ನೀಡುವ ಖುಷಿಯ ಪ್ರತಿಕ್ರಿಯೆ ಪದೇ ಪದೇ ಇನ್ನಷು ಮತ್ತಷ್ಟು ಸಿಹಿ ತಿನ್ನುವಂತೆ ಪ್ರೇರೇಪಿಸುತ್ತದೆ. ಒಂಥರಾ ಡ್ರಗ್ಸ್‌ ಚಟಕ್ಕೆ ಸಿಲುಕಿದಂತೆಯೇ ಇದೂ ಒಂದು ಚಟವಾಗಿಬಿಡುತ್ತದೆ.

೫. ಅಭ್ಯಾಸ ಬಲ: ಸಿಹಿ ತಿನ್ನುವುದು ಒಂದು ಪ್ರವೃತ್ತಿಯಾಗಿಬಿಡುತ್ತದೆ. ಆಗ ಅದೊಂದು ಅಭ್ಯಾಸವಾಗಿ ಪದೇ ಪದೇ ಒಂದು ನಿಶ್ಚಿತ ಸಮಯಕ್ಕೆ ಅದನ್ನು ತಿನ್ನಬೇಕೆನಿಸುತ್ತದೆ.

ಈ ಮಾದರಿಯಲ್ಲಿ ಸಕ್ಕರೆ ಅಥವಾ ಸಿಹಿಯಾದ ತಿನಿಸು ನಿಮ್ಮ ಮಿದುಳಿನ ಕಾರ್ಯವೈಖರಿಯ ಮೇಲೆ ಪರಿಣಾಮ ಬೀರಿ ನಿಮ್ಮನ್ನು ಮತ್ತೆ ಮತ್ತೆ ಇನ್ನಷ್ಟು ಸಿಹಿ ತಿನಿಸು ಬೇಕೆಂಬ ಚಪಲ ಹೆಚ್ಚುವಂತೆ ಮಾಡುತ್ತದೆ. ಇದರ ಪರಿಣಾಮ ನಮ್ಮ ನಡತೆಯ ಮೇಲೂ ಆಗುತ್ತದೆ.

ಈ ಸಕ್ಕರೆಯ ಅತಿಯಾದ ಸೇವನೆ ಕೆಲವರ ಮಿದುಳಿನ ರಚನೆಯ ಮೇಲೂ ಬಾಹ್ಯವಾಗಿ ಪ್ರಭಾವ ಬೀರುತ್ತದೆ. ಇಂತಹ ತೊಂದರೆ ಅನುಭವಿಸುವ ಮಂದಿ ಶಾಶ್ವತವಾಗಿ ಸಿಹಿತಿಂಡಿಯ ಚಪಲದ ಚಟಕ್ಕೆ ಬಲಿಯಾಗುತ್ತಾರೆ. ಮಾದಕ ವಸ್ತುಗಳ ವ್ಯಸನಿಗಳಂತೆ ಇವರೂ ಸಹ ಸಿಹಿ ತಿಂಡಿಗಳ ವ್ಯಸನಕ್ಕೆ ಬಲಿ ಬೀಳುತ್ತಾರೆ. ಇವರಿಬ್ಬರ ನಡುವೆ ಹೆಚ್ಚಿನ ವ್ಯತ್ಯಾಸವಿರುವುದಿಲ್ಲ. ಯಾವುದರ ಚಟ ಎಂಬುದರಲ್ಲಿರುವ ವ್ಯತ್ಯಾಸ ಬಿಟ್ಟರೆ ಹೆಚ್ಚು ಕಡಿಮೆ, ಒಂದೇ ಮಾದರಿಯ ನಡತೆಯನ್ನೂ ಇವರು ಪ್ರದರ್ಶಿಸುತ್ತಾರೆ. 

ಇದನ್ನೂ ಓದಿ | Male fertility | ಕೋವಿಶೀಲ್ಡ್ ವ್ಯಾಕ್ಸಿನ್‌ನಿಂದ ಪುರುಷರ ಫಲವತ್ತತೆಗೆ ಯಾವುದೇ ಹಾನಿಯಿಲ್ಲ; ಹೇಳುತ್ತಿದೆ ಅಧ್ಯಯನ!

Exit mobile version