ಜಿಮ್‌ಗಳು ಮತ್ತೆ ಮತ್ತೆ ಸುದ್ದಿ ಮಾಡುತ್ತಿವೆ. ಇನ್ನೂ ಸರಿಯಾಗಿ ಹೇಳಬೇಕೆಂದರೆ, ಜಿಮ್‌ಗಳಲ್ಲಿ ತೀವ್ರ ವ್ಯಾಯಾಮದ ನಂತರ ಹೃದಯಾಘಾತಕ್ಕೆ ಒಳಗಾಗುತ್ತಿರುವ ಯುವಕರ ಸುದ್ದಿಗಳು ಮತ್ತೆ ಮತ್ತೆ ಕೇಳಿ ಬರುತ್ತಿವೆ. ಟಿವಿ ನಟ ಸಿದ್ದಾಂತ್ ಸೂರ್ಯವಂಶಿ ಕಳೆದ ವಾರವಷ್ಟೆ ಜಿಮ್‌ನಲ್ಲಿ ವರ್ಕೌಟ್ ನಂತರ ಮೃತಪಟ್ಟಿದ್ದಾರೆ. ನಟ ಸಿದ್ಧಾರ್ಥ್ ಶುಕ್ಲ ಮತ್ತು ಕಮೆಡಿಯನ್ ರಾಜು ಶ್ರೀವಾಸ್ತವ ಅವರ ಪ್ರಕರಣಗಳು ಮಾಸುವ ಮೊದಲೇ ಮತ್ತೊಂದು ಇಂಥ ಪ್ರಕರಣ ಕೇಳಿಬಂದಿದೆ.
ಪ್ರತಿಬಾರಿಯಂತೆ ಈ ಬಾರಿಯೂ ಒಂದಿಷ್ಟು ಅನುಮಾನ, ಆತಂಕ, ಶಂಕೆಗಳು ಎಲ್ಲೆಡೆಯಿಂದ ಕೇಳಿಬರುತ್ತಿವೆ. ವ್ಯಾಯಾಮ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು ಎಂದಾದರೂ, ಸಾಯುವ ವಯಸ್ಸಿನಲ್ಲಿ ಇಲ್ಲದವರು ಹೀಗೇಕೆ ವ್ಯಾಯಾಮದಿಂದ ಜೀವ ಬಿಡುತ್ತಿದ್ದಾರೆ? ಜಿಮ್ ಮಾಡುವುದು ಹಾನಿಕರವೇ? ಆರೋಗ್ಯ ವರ್ಧನೆಗೆಂದು ಪ್ರೊಟೀನ್ ಪುಡಿಗಳನ್ನು ತೆಗೆದುಕೊಳ್ಳುವುದು ಸಾಧುವೇ? ದೇಹ ಬೆಳೆಸುವುದಕ್ಕೆ ಸ್ಟೆರಾಯ್ಡ್ ಸೇವನೆ ಅಗತ್ಯವೇ? ಇಂಥ ಹತ್ತು ಹಲವು ಪ್ರಶ್ನೆಗಳು ಬಾಧಿಸುವುದು ಸಹಜವೇ ಆಗಿರುವಾಗ, ಆರೋಗ್ಯ ಪರಿಣತರು ಕೆಲವು ನಿಶ್ಚಿತ ಸೂಚನೆಗಳನ್ನು ನೀಡಿದ್ದಾರೆ. ಜಿಮ್, ವ್ಯಾಯಾಮ ಇತ್ಯಾದಿಗಳ ಸಾಧಕ-ಬಾಧಕದ ಬಗ್ಗೆ ಒಂದು ಕ್ಷಕಿರಣ ಇಲ್ಲಿದೆ.
ಅತಿಯಾದರೆ ಅಮೃತವೂ ವಿಷ- ಇದಕ್ಕೆ ವ್ಯಾಯಾಮವೂ ಹೊರತಲ್ಲ! ಹಾಗಾದರೆ ಮೊದಲಿನ ಕಾಲದಲ್ಲಿ ದೇಹ ಬೆಳೆಸುವವರು, ಮಲ್ಲರು, ಸಾಮು ಮಾಡುವವರೆಲ್ಲ ಇರಲಿಲ್ಲವೇ? ಇದ್ದರು. ಆದರೆ ಅಂದಿನ ವ್ಯಾಯಾಮದ ರೀತಿ-ನೀತಿಗಳಿಗೂ ಇಂದಿಗೂ ಸಾಕಷ್ಟು ವ್ಯತ್ಯಾಸವಿದೆ. ದೇಹದ ಮಾಂಸ ಖಂಡವನ್ನು ಬೆಳೆಸುವುದು ಎಂದರೆ ಅದೊಂದು ಸುಸ್ಥಿರ ಪ್ರಕ್ರಿಯೆ. ಸೂಕ್ತ ವ್ಯಾಯಾಮ, ಪೂರಕ ಆಹಾರ, ತಕ್ಕದಾದ ಜೀವನಶೈಲಿ ಮತ್ತು ನಿದ್ದೆ- ಇಂಥ ಕ್ರಮಗಳು ಆರೋಗ್ಯಕರವಾದ ರೀತಿಯಲ್ಲಿ ದೇಹವನ್ನು ಕಟ್ಟುಮಸ್ತಾಗಿ ಬೆಳೆಸುತ್ತದೆ. ಇದರಲ್ಲೆಲ್ಲಾ ಶಾರ್ಟ್‌ಕಟ್ ಕೆಲಸಕ್ಕೆ ಕೈಹಾಕುವಂತಿಲ್ಲ. ಈಗಿನ ದೊಡ್ಡ ಸಮಸ್ಯೆ ಎಂದರೆ ಎಲ್ಲವನ್ನೂ ತ್ವರಿತವಾಗಿ ಮಾಡಲು ಯತ್ನಿಸುವುದು.
ಜಿಮ್ ಅತಿಯಾದರೆ?: ಅತಿಯಾಗಿ ಜಿಮ್ ಮಾಡುವುದು ಸಮಸ್ಯೆಗಳನ್ನು ತರಬಹುದು. ಅದರಲ್ಲೂ ಆರ್ಟರಿಗಳಲ್ಲಿ ಅಲ್ಪಸ್ಪಲ್ಪ ಕೊಬ್ಬಿನ ತಡೆ ಇದ್ದರೂ ಸಾಕು, ಹೃದಯಕ್ಕೆ ಅಪಾಯವಾಗುವ ಸಾಧ್ಯತೆಯಿದೆ. ಹೃದಯದಲ್ಲಿ ಬೇರೇನಾದರೂ ತೊಂದರೆಗಳಿದ್ದು, ಆವರೆಗೆ ಪತ್ತೆಯಾಗದಿದ್ದರೂ ಅಪಾಯ ಕಟ್ಟಿಟ್ಟಿದ್ದು. ವೈಜ್ಞಾನಿಕವಾಗಿ ಹೇಳುವುದಾದರೆ, ವ್ಯಾಯಾಮ ಮಾಡುವ ಸಂದರ್ಭದಲ್ಲಿ ಹೆಚ್ಚಿನ ಶುದ್ಧ ರಕ್ತ ಮತ್ತು ಆಮ್ಲಜನಕದ ಪೂರೈಕೆಗಾಗಿ ಹೃದಯ ಹೆಚ್ಚೆಚ್ಚು ಕೆಲಸ ಮಾಡಬೇಕಾಗುತ್ತದೆ. ಆರೋಗ್ಯಕರ ಹೃದಯಕ್ಕೆ ಇದೇನು ಸಮಸ್ಯೆಯಲ್ಲ. ಆದರೆ ಅಲ್ಪ ತೊಂದರೆ ಇದ್ದರೂ ಅದು ಬೆಟ್ಟದಷ್ಟಾಗುವ ಸಾಧ್ಯತೆಯೇ ಹೆಚ್ಚು. ರಕ್ತನಾಳಗಳ ಮೇಲಿನ ಅತೀವ ಒತ್ತಡ ಅವುಗಳನ್ನು ಒಡೆಯುವಂತೆ ಮಾಡುವ ಸಾಧ್ಯತೆಯನ್ನೂ ತಜ್ಞರು ತಳ್ಳಿಹಾಕುತ್ತಿಲ್ಲ. ಹಾಗಾಗಿ ಅತಿ ಕಡಿಮೆ ಸಮಯದಲ್ಲಿ ಹೆಚ್ಚು ವ್ಯಾಯಾಮ ಮಾಡುವ, ಹೆಚ್ಚು ತೂಕ ಇಳಿಸುವ ಅಥವಾ ದೇಹ ಬೆಳೆಸುವ ಸಾಹಸ ಪ್ರಮಾದಕ್ಕೆ ಎಡೆ ಮಾಡಬಹುದು.
ಸ್ಟೆರಾಯ್ಡ್ ಎಂಬ ಮಾಯೆ!: ಅನಬೋಲಿಕ್ ಸ್ಟೆರಾಯ್ಡ್‌ಗಳು ದೇಹದ ಕ್ಷಮತೆಯನ್ನು ಹೆಚ್ಚಿಸುವ ಅನುಭವ ನೀಡುತ್ತವೆ. ಕ್ರೀಡಾಪಟುಗಳು, ದೇಹ ಹುರಿಗಟ್ಟಿಸುವಂಥವರು ಇಂಥ ಔಷಧಗಳನ್ನು ಬಳಸಿದ್ದನ್ನು ಕೇಳಿದ್ದೇವೆ. ಆದರೆ ತಜ್ಞರ ಪ್ರಕಾರ, ವೈದ್ಯರ ಚೀಟಿಯಿಲ್ಲದೆ ಇವುಗಳನ್ನು ತೆಗೆದುಕೊಳ್ಳುವಂತಿಲ್ಲ. ಆದಾಗ್ಯೂ ವೈದ್ಯರ ಅನುಮತಿಯಿಲ್ಲದೆ ಇವುಗಳನ್ನು ಬಳಸುವ ಪರಿಪಾಠ ಹೆಚ್ಚುತ್ತಿದೆ. ಮಾಂಸಖಂಡಗಳನ್ನು ಹೆಚ್ಚಿಸುವ ಈ ಔಷಧಗಳಿಂದ ಕೆಲವೊಮ್ಮೆ ಹೃದಯದ ಗೋಡೆಗಳು ಸ್ಥೂಲವಾಗಿ, ರಕ್ತವನ್ನು ಪಂಪ್ ಮಾಡುವ ಹೃದಯದ ಸಾಮರ್ಥ್ಯಕ್ಕೇ ಧಕ್ಕೆ ಒದಗುತ್ತದೆ. ಆಗ ಅಪಾಯವಾಗದೆ ಇದ್ದೀತೆ? ಹೃದಯಕ್ಕೆ ಮಾತ್ರವಲ್ಲ, ಯಕೃತ್ತು, ನರಗಳು, ಚರ್ಮ ಮತ್ತು ಪ್ರಜನನಾಂಗಗಳಿಗೆ ಹಾನಿಯಾಗಬಲ್ಲದು. ನಿದ್ದೆ ವ್ಯತ್ಯಾಸವಾಗಿ ಮಾನಸಿಕ ಸ್ಥಿತಿಯಲ್ಲೂ ಏರುಪೇರು ಕಂಡುಬಂದೀತು. ಮಕ್ಕಳಲ್ಲಿ ಇಂಥ ಸ್ಟೆರಾಯ್ಡ್‌ಗಳಿಂದಾಗಿ ಮೂಳೆಗಳು ಅವಧಿಗೆ ಮುನ್ನವೇ ಬೆಳೆದು, ದೇಹದ ಬೆಳವಣಿಗೆಯೇ ಕುಂಠಿತಗೊಳ್ಳುವ ಸಾಧ್ಯತೆಯಿದೆ. ಕೆಲವರಲ್ಲಿ ಸ್ಟೆರಾಯ್ಡ್ ವ್ಯಸನವಾಗುವ ಸಾಧ್ಯತೆಯೂ ಇಲ್ಲದಿಲ್ಲ. ಸ್ಟೆರಾಯ್ಡ್ ಸೇವನೆಯ ಬಗ್ಗೆ ಅತೀವ ಎಚ್ಚರ ಅಗತ್ಯ.
ಪ್ರೊಟೀನ್ ಪುಡಿ ಬೇಕೆ?: ಬೇಕಿಲ್ಲ! ಇವೆಲ್ಲ ನಮ್ಮ ಆಹಾರದ ಮೂಲಕವಾಗಿಯೇ ದೇಹವನ್ನು ಸೇರಬೇಕಾದ ಅಂಶಗಳು. ಆಗಷ್ಟೇ ದೇಹ ಅದನ್ನು ಸರಿಯಾದ ರೀತಿಯಲ್ಲಿ ಸ್ವೀಕರಿಸುತ್ತದೆ. ಅನಾರೋಗ್ಯ ಅಥವಾ ಇನ್ನಾವುದೋ ದೈಹಿಕ ಸ್ಥಿತಿಯ ಹಿನ್ನೆಲೆಯಲ್ಲಿ ಪ್ರೊಟೀನ್ ಮತ್ತಿತರ ಪೋಷಕಾಂಶಗಳನ್ನು ಪೂರಕವಾಗಿ ಅಲ್ಪಕಾಲ ವೈದ್ಯರು ನೀಡುವುದು ಸಾಮಾನ್ಯ. ನಮ್ಮ ಆರೋಗ್ಯದ ಬಗ್ಗೆ ಅರಿವಿದ್ದೇ ವೈದ್ಯರು ತೆಗೆದುಕೊಳ್ಳುವ ಕ್ರಮವಿದು. ಆದರೆ ತಜ್ಞರ ಸಲಹೆಯಿಲ್ಲದೆ ನಮ್ಮಿಷ್ಟದಂತೆ ಪ್ರೊಟೀನ್ ಪುಡಿ ಸೇವಿಸುವುದು ಖಂಡಿತಾ ಸೂಕ್ತವಲ್ಲ. ನಮ್ಮ ದೇಹಾಯಾಸವನ್ನು ಕಡಿಮೆ ಮಾಡಿ, ಹೆಚ್ಚು ಶಕ್ತರಾದ ಅನುಭವವನ್ನು ಇಂಥ ಕೃತಕ ಪುಡಿ, ಔಷಧಗಳು ನೀಡುತ್ತವೆ. ಇದರಿಂದ ಅಗತ್ಯಕ್ಕಿಂತ ಹೆಚ್ಚು ಜಿಮ್ ಮಾಡುತ್ತಾ, ದೇಹವನ್ನು ಇನ್ನಷ್ಟು ಅಪಾಯಕ್ಕೆ ದೂಡುವ ಪ್ರವೃತ್ತಿ ಹೆಚ್ಚುತ್ತಿದೆ.
ಈಗೀಗ ಇಂಥ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಕಾರಣವೆಂದರೆ, ಜನರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಿ, ಹೆಚ್ಚಿನ ಸಂಖ್ಯೆಯ ಜನ ಜಿಮ್‌ನತ್ತ ಮುಖ ಮಾಡಿರುವುದು. ಜಿಮ್‌ಗೆ ಹೋಗುವುದು, ವ್ಯಾಯಾಮ ಮಾಡುವುದು ಖಂಡಿತಾ ಹಾನಿಕರವಲ್ಲ. ಆದರೆ ಎಲ್ಲದಕ್ಕೂ ಮಿತಿಯಿದೆ. ತನ್ನಿಂದ ಇನ್ನೂ ಆಗುವುದಿಲ್ಲ ಎಂದು ದೇಹವೇ ನಮಗೆ ಸೂಚನೆ ನೀಡುತ್ತದೆ. ಅದನ್ನು ನಾವು ಅರ್ಥಮಾಡಿಕೊಳ್ಳಬೇಕಷ್ಟೆ. ಕೃತಕ ಸಾಮರ್ಥ್ಯವರ್ಧಕಗಳ ಅಗತ್ಯವಂತೂ ಇಲ್ಲವೇ ಇಲ್ಲ.