Site icon Vistara News

Star Fruit Benefits: ಕರಿಮಾದಲ ಹಣ್ಣು ಸೇವನೆಯಿಂದ ಎಷ್ಟೊಂದು ಲಾಭ!

Star Fruit Benefits

ಕರಿಮಾದಲ ಅಥವಾ ಧಾರೆ ಹುಳಿ ಎಂಬ ಸ್ಥಳೀಯ ಹೆಸರುಗಳುಳ್ಳ ಈ ಹಣ್ಣು ಸ್ಟಾರ್‌ ಫ್ರೂಟ್‌ ಎಂದೂ ಜನಪ್ರಿಯ. ಉಷ್ಣವಲಯದ ಮೂಲದಿಂದ ಬಂದ ಈ ಹಣ್ಣು ಈಗ ಜಗತ್ತಿನ ಹಲವು ದೇಶಗಳಲ್ಲಿ ಜನಪ್ರಿಯವಾಗಿದೆ. ಕಾಯಿದ್ದಾಗ ಗಾಢ ಹಸಿರು ಬಣ್ಣದಲ್ಲಿದ್ದು ಅಷ್ಟೇ ಗಾಢ ಹುಳಿಯನ್ನೂ ಹೊಂದಿರುವ ಇದು, ಹಣ್ಣಾಗುತ್ತಿದ್ದಂತೆ ಹಳದಿ ಬಣ್ಣಕ್ಕೆ ತಿರುಗುತ್ತದೆ. ಕತ್ತರಿಸಿದಾಗ ನಕ್ಷತ್ರದಂತೆ ಕಾಣುವುದರಿಂದ ಸ್ಟಾರ್‌ ಫ್ರುಟ್‌ ಎಂಬ ಹೆಸರು ಬಂದಿದೆ. ಹುಳಿ-ಸಿಹಿಯ ಮಿಶ್ರ ರುಚಿಯನ್ನು ನೀಡುತ್ತದೆ. ಇದನ್ನು ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭವೇನು (star fruit benefits) ಎಂಬುದನ್ನು ನೋಡೋಣ. ಇದರ ತೀವ್ರವಾದ ಹುಳಿಯ ರುಚಿಯಿಂದಾಗಿ, ಕರಿಮಾದಲ ಕಾಯಿಗಳನ್ನು ಬಳಸಿ ಉಪ್ಪಿನ ಕಾಯಿ, ತೊಕ್ಕು, ಗೊಜ್ಜು ಮುಂತಾದ ಹುಳಿಪ್ರಧಾನ ವ್ಯಂಜನಗಳನ್ನು, ತಂಬುಳಿ, ಚಿತ್ರಾನ್ನ ಮುಂತಾದ ಅಡುಗೆಗಳನ್ನೂ ಮಾಡಲಾಗುತ್ತದೆ. ಇಷ್ಟವಾದವರು ಉಪ್ಪು-ಖಾರ ಹಾಕಿ ಸವಿಯಲೂ ತೊಂದರೆಯಿಲ್ಲ. ಒಂದು ದೊಡ್ಡ ಕರಿಮಾದಲ ಹಣ್ಣಿನಲ್ಲಿ 26 ಕ್ಯಾಲರಿ ಶಕ್ತಿಯಿದೆ. ಅದರಲ್ಲಿ 6.2ಗ್ರಾಂ ಪಿಷ್ಟ, 2.5 ಗ್ರಾಂ ನಾರು, 3.6 ಗ್ರಾಂ ಸಕ್ಕರೆ, ಅಲ್ಪ ಪ್ರಮಾಣದ ಪ್ರೊಟೀನ್‌ ಮತ್ತು ಹೇರಳವಾದ ವಿಟಮಿನ್‌ ಸಿ, ಎ, ಬಿ ಸತ್ವಗಳಿವೆ. ಜೊತೆಗೆ, ಸತು, ರಂಜಕ, ಮೆಗ್ನೀಶಿಯಂ, ಸೋಡಿಯಂ, ಕಬ್ಬಿಣ, ಪೊಟಾಶಿಯಂ ಮುಂತಾದ ಖನಿಜಗಳಿವೆ. ಪಾಲಿಫೆನಾಲ್‌, ಕ್ವೆಸೆರ್ಟಿನ್‌ನಂಥ ಉತ್ತಮ ಉತ್ಕರ್ಷಣ ನಿರೋಧಕಗಳಿವೆ.

ಪಚನಕಾರಿ

ಹಸಿವೆಯನ್ನು ಹೆಚ್ಚು ಮಾಡುವಂಥ ಕಿಣ್ವಗಳು ಧಾರೆ ಹುಳಿಯಲ್ಲಿವೆ. ಇದರ ಪಾಚಕ ಸತ್ವವು ಇತರ ಎಲ್ಲ ಹುಳಿ ಹಣ್ಣುಗಳಂತಲ್ಲ. ಕೊಬ್ಬು ಮತ್ತು ಪ್ರೊಟೀನ್‌ ವಿಘಟನೆ ಮಾಡಿ, ಹೀರಿಕೊಳ್ಳುವುದಕ್ಕೆ ಅನುಕೂಲವಾಗುವಂತೆ ದೇಹಕ್ಕೆ ನೆರವು ನೀಡುತ್ತದೆ. ನಾರಿನಂಶವೂ ಧಾರಾಳವಾಗಿಯೇ ಇರುವುದರಿಂದ ಕರುಳಿನ ಉತ್ತಮ ಬ್ಯಾಕ್ಟೀರಿಯಾಗಳನ್ನು ಹೆಚ್ಚಿಸಿ, ಸಮತೋಲನ ಸಾಧಿಸಲು ಉಪಯುಕ್ತ. ಜೊತೆಗೆ, ಹೊಟ್ಟೆಯನ್ನು ಖಾಲಿ ಮಾಡಿಸಿ, ಮಲಬದ್ಧತೆಯಂಥ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ.

ಉತ್ಕರ್ಷಣ ನಿರೋಧಕಗಳು

ವಿಟಮಿನ್‌ ಸಿ ಮತ್ತು ಫ್ಲೆವನಾಯ್ಡ್‌ಗಳ ಒಳ್ಳೆಯ ಸತ್ವ ಇದರಲ್ಲಿದೆ. ದೇಹದಲ್ಲಿನ ಮುಕ್ತ ಕಣಗಳನ್ನು ನಿರ್ಬಂಧಿಸಿ, ಅವುಗಳಿಂದ ಆಗಬಹುದಾದ ಸಮಸ್ಯೆಗಳನ್ನು ನಿಯಂತ್ರಿಸಲು ಮತ್ತು ಕ್ಯಾನ್ಸರ್‌ನಂಥ ಮಾರಕ ರೋಗಗಳನ್ನು ತಡೆಗಟ್ಟಲು ಉತ್ಕರ್ಷಣ ನಿರೋಧಕಗಳಿಂದ ಸಾಧ್ಯವಿದೆ. ಮಾತ್ರವಲ್ಲ, ಉರಿಯೂತದಿಂದ ವಕ್ಕರಿಸಿಕೊಳ್ಳುವ ಕೀಲುನೋವೇ ಮೊದಲಾದ ರೋಗಗಳನ್ನು ಶಮನ ಮಾಡುವಲ್ಲಿ ಇದು ಸಹಕಾರಿ.

ಪ್ರತಿರೋಧಕ ಶಕ್ತಿ ಹೆಚ್ಚಳ

ಇದಲ್ಲಿರುವ ವಿಟಮಿನ್‌ ಸಿ ಮತ್ತು ಎ ಹಾಗೂ ಸತುವಿನ ಅಂಶಗಳು ರೋಗಾಣುಗಳೊಂದಿಗೆ ಹೋರಾಡುವ ದೇಹದ ಶಕ್ತಿಯನ್ನು ಪ್ರಬಲಗೊಳಿಸುತ್ತವೆ. ಋತುಮಾನ ಬದಲಾವಣೆಯ ದಿನಗಳಲ್ಲಿ ಸಾಮಾನ್ಯವಾಗಿ ಕಾಡುವ ಥಂಡಿ, ಕೆಮ್ಮು, ಜ್ವರದಂಥವು ಬಾರದಿರುವಂತೆ ಕಾಪಾಡಿಕೊಳ್ಳಲು ಕರಿಮಾದಲ ಕಾಯಿ ನೆರವಾಗುತ್ತದೆ.

ಹೃದಯದ ಮಿತ್ರ

ರಕ್ತನಾಳಗಳನ್ನು ವಿಕಸನಗೊಳಿಸಿ, ರಕ್ತದೊತ್ತಡವನ್ನು ಕಡಿಮೆ ಮಾಡಲು ಪೊಟಾಶಿಯಂ ಅಗತ್ಯ. ಜೊತೆಗೆ, ಅತಿಯಾದ ಸೋಡಿಯಂನಿಂದ ದೇಹಕ್ಕಾಗುವ ಹಾನಿಯನ್ನು ಸರಿಪಡಿಸುವುದಕ್ಕೂ ಈ ಖನಿಜ ಆವಶ್ಯಕ. ಆಹಾರದಲ್ಲಿ ಪೊಟಾಶಿಯಂ ಸತ್ವಗಳನ್ನು ಸೇರಿಸಿಕೊಳ್ಳುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸಲು ಸುಲಭವಾಗುತ್ತದೆ. ಕರಿಮಾದಲದಲ್ಲಿ ಪೊಟಾಶಿಯಂ ಅಂಶ ಹೇರಳವಾಗಿದೆ.

ತೂಕ ಇಳಿಕೆ

ಕಡಿಮೆ ಕ್ಯಾಲರಿಯಲ್ಲಿ ಹೆಚ್ಚಿನ ಸತ್ವಗಳನ್ನು ನೀಡುವ ಈ ಹಣ್ಣು, ತೂಕ ಇಳಿಸುವ ಉದ್ದೇಶ ಹೊಂದಿದವರಿಗೆ ಬೇಕಾದಂಥದ್ದು. ತಿಂದಿದ್ದು ಜೀರ್ಣವಾಗುವಂತೆ ಮಾಡಿ, ದೇಹದ ಚಯಾಪಚಯವನ್ನು ಹೆಚ್ಚಿಸುವ ಸಾ‍ಧ್ಯತೆ ಇದಕ್ಕಿದೆ. ಜೊತೆಗೆ ನಾರು ಅಧಿಕ ಪ್ರಮಾಣದಲ್ಲಿ ಇರುವುದರಿಂದ ತಿಂದ ಸಂತೃಪ್ತಿಯನ್ನೂ ಈ ಹುಳಿ-ಸಿಹಿ ಹಣ್ಣು ಬಾಯಲ್ಲಿ ಉಳಿಸುತ್ತದೆ. ಈ ಎಲ್ಲ ಕಾರಣಗಳಿಂದ ಬೇಕಾದ್ದಕ್ಕಿಂತ ಹೆಚ್ಚು ತಿನ್ನುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: Not Having Children: ಮಕ್ಕಳಾಗುತ್ತಿಲ್ಲವೇ?; ಹಾಗಾದರೆ, ಇವಿಷ್ಟು ಸಾಮಾನ್ಯ ಅಂಶಗಳು ಗೊತ್ತಿರಲಿ!

Exit mobile version