ಚಳಿಗಾಲ ಎಂದರೆ ಕವಿಗಳಿಗೆ ರಮ್ಯ ಭಾವನೆಗಳ, ಚಂದದ ದಿನಗಳೇನೋ ನಿಜ. ಆದರೆ, ರೋಗಿಗಳಿಗೆ, ಆರೋಗ್ಯ ಸರಿ ಇಲ್ಲದ ಮಂದಿಗೆ, ಹಿರಿಯ ಜೀವಗಳಿಗೆ, ಉಸಿರಾಟದ ತೊಂದರೆಯಿರುವ ಮಂದಿಗೆ ಚಳಿಗಾಲವೆಂದರೆ ಅಗ್ನಿಪರೀಕ್ಷೆಯೇ. ಎಲ್ಲವೂ ಸರಿಯಾಗಿದೆ ಎಂದು ಅಂದುಕೊಳ್ಳುವಾಗ ಬರುವ ಚಳಿಗಾಲ ದೇಹವನ್ನು ಹಿಂಡಿ ಹಿಪ್ಪೆ ಮಾಡಿಬಿಡುತ್ತದೆ. ಮಂಡಿನೋವು, ಸೊಂಟನೋವು, ಏನೇ ನೋವುಗಳಿರಲಿ, ಅದು ಯಾತನಾಮಯವಾಗುವುದು ಚಳಿಗಾಲದಲ್ಲೇ.
ಚಳಿಗಾಲದಲ್ಲೇ ಇಲ್ಲದ ರೋಗಗಳೆಲ್ಲ ವಕ್ಕರಿಸಿಬಿಡುತ್ತದೆ. ಅರೆ, ಮೊನ್ನೆಮೊನ್ನೆಯವರೆಗೆ ಎಲ್ಲ ಸರಿಯಾಗಿತ್ತಲ್ಲ ಎಲ್ಲ ಎಂದು ಅನಿಸಿ ಇದ್ದಕ್ಕಿದ್ದಂತೆ ಹಳೆಯ ನೋವುಗಳೆಲ್ಲ ಜೀವ ಪಡೆದಂತಾಗುವುದು ಚಳಿಗಾಲದಲ್ಲಿ ಎಂಬುದು ನಿಜವೇ. ಇದು ಯಾಕೆ ಹೀಗೆ ಎಂದು ಯೋಚಿಸಿದ್ದೀರಾ?
ಆರ್ಥೈಟಿಸ್ ಅಥವಾ ಸಂಧಿವಾತ ಇರುವ ಮಂದಿಗೆ ಚಳಿಗಾಲ ಎಂದರೆ ಯಮಯಾತನೆ. ಆದರೆ, ನಮ್ಮ ನಿತ್ಯ ಜೀವನದಲ್ಲಿ ಚಳಿಗಾಲ ಬಂದ ತಕ್ಷಣ ಕೊಂಚ ಬದಲಾವಣೆಗಳನ್ನು ಮಾಡುವ ಮೂಲಕವೂ ಕೆಲವೊಮ್ಮೆ ಈ ನೋವನ್ನು ಕೊಂಚ ಮಟ್ಟಿಗೆ ಆರಾಮದಾಯಕವಾಗಿ ಮಾಡಿಕೊಳ್ಳಬಹುದು. ಹಾಗಾದರೆ, ಚಳಿಗಾಲದಲ್ಲಿ ಈ ತೊಂದರೆಗಳು ಕಾಡುವಾಗ ಸುಲಭವಾಗಿ ಸರಳವಾಗಿ ಯಾವ ಪರಿಹಾರ ಕ್ರಮಗಳನ್ನು ಕೈಗೊಳ್ಳಬಹುದು ನೋಡೋಣ.
೧. ಬೆಚ್ಚಗಿರಿ: ಚಳಿ ಹೆಚ್ಚಿದೆ ಎಂದರೆ, ದಪ್ಪನೆಯ ಉಣ್ಣೆಬಟ್ಟೆಗಳಿಂದ ನಿಮ್ಮನ್ನು ನೀವು ಬೆಚ್ಚಗಿಟ್ಟಿರಿ. ಕೈಕಾಲುಗಳನ್ನು ಸದಾ ಕೈಗವಸು, ಕಾಲುಚೀಲಗಳಿಂದ ಕವರ್ ಮಾಡಿ. ಚಳಿ ಹೆಚ್ಚಾದಾಗ, ಕೈಕಾಲುಗಳು ಜೋಮು ಹಿಡಿದಂತಾದಾಗ ಬೆಚ್ಚಗಿನ ಹೀಟ್‌ಪ್ಯಾಡ್‌ಗಳು, ಎಲೆಕ್ಟ್ಟರಿಕ್ ಬ್ಲ್ಯಾಂಕೆಟ್‌ಗಳು ಅಥವಾ ರೂಂ ಹೀಟರ್‌ಗಳಿಂದಲೂ ಬೆಚ್ಚಗೆ ಮಾಡಿಕೊಳ್ಳಬಹುದು.
೨. ವಿಟಮಿನ್ ಡಿ ಸಾಕಷ್ಟಿರಲಿ: ಚಳಿಗಾಲದಲ್ಲಿ ಹಿರಿರಯ ಜೀವಗಳು ಹೋರಗೆ ಹೋಗುವ ಬದಲು ಮನೆಯಲ್ಲೇ ಉಳಿದುಕೊಳ್ಳುವುದುದ ಹೆಚ್ಚು. ಇದರಿಂದ ಸೂರ್ಯನ ಬಿಸಿಲಿಗೆ ಮೈ ಒಡ್ಡಿಕೊಳ್ಳುವ ಸಮಯವೂ ಕಡಿಮೆಯಾಗುತ್ತದೆ. ಸೂರ್ಯನ ಬಿಸಿಲಿನಲ್ಲಿರುವ ವಿಟಮಿನ್ ಡಿಯ ಪ್ರಮಾಣ ದೇಹಕ್ಕೆ ಸರಿಯಾಗಿ ಸಿಗಲಿಲ್ಲ ಎಂದಾದರೆ, ನುಗಳು ಹೆಚ್ಚಾಗುತ್ತದೆ. ಹೀಗಾಗಿ ವೈದ್ಯರನ್ನೊಮ್ಮೆ ಸಂಪರ್ಕಿಸಿ, ವಿಟಮಿನ್ ಡಿ ಸಪ್ಲಿಮೆಂಟ್‌ಗಳು ತೆಗೆದುಕೊಳ್ಳಬೇಕಾದಲ್ಲಿ ತೆಗೆದುಕೊಳ್ಳಬಹುದು.
೩. ಗ್ರೀನ್ ಟೀ ಕುಡಿಯಿರಿ: ಸಂಧಿವಾತದ ನೋವುಗಳಂತಹ ತೊಂದರೆಗಳಿಗೆ ಹರ್ಬಲ್ ಚಹಾ, ಗ್ರೀನ್ ಟೀಗಳು ಯಾವಾಗಲೂ ಉತ್ತಮ ಫಲ ನೀಡುತ್ತವೆ. ಎಲುಬುಗಳನ್ನು ಗಟ್ಟಿಗೊಳಿಸುವ ಸಾಮರ್ಥ್ಯ ಇವಕ್ಕಿವೆ.
ಇದನ್ನೂ ಓದಿ| Health Tips | ಹೊಸ ವರ್ಷದ ಕನಸು ಗುರಿಗಳ ಪೈಕಿ ಇವಿಷ್ಟು ವರ್ಷಪೂರ್ತಿ ಮುಖ್ಯವಾಗಿರಲಿ!
೪. ವಿಟಮಿನ್ ಸಿ ಆಹಾರಗಳನ್ನು ಸೇವಿಸಿ: ವಿಟಮಿನ್ ಸಿಯುಕ್ತ ಆಹಾರಗಳು ಚಳಿಗಾಲಕ್ಕೆ ಬಹಳ ಅಗತ್ಯವಾದ ಆಹಾರಗಳು. ಚಳಿಗಾಲದಲ್ಲಿ ದೊರೆಯುವ ವಿಟಮಿನ್ ಸಿ ಯುಕ್ತ ಹಣ್ಣು ಹಂಪಲುಗಳಾದ ಕಿತ್ತಳೆ, ಕಿವಿ, ಚೆರ್ರಿ, ಸ್ಟ್ರಾಬೆರಿಗಳನ್ನು ತಿನ್ನುವುದುದ ಒಳ್ಳೆಯದು. ಚಳಿಗಾಲದ ತರಕಾರಿಗಳಾದ, ಹೂಕೋಸು, ದೊಣ್ಣೆ ಮೆಣಸು, ಸೊಪ್ಪು ತರಕಾರಿಗಳನ್ನು ಸರಿಯಾಗಿ ತಿನ್ನಿ.
೫. ದಿನವೂ ವ್ಯಾಯಾಮ ಮಾಡಿ: ಅತಿಯಾಗಿ ಅಲ್ಲದಿದ್ದರೂ ಸಣ್ಣ ವ್ಯಾಯಾಮ ಚಳಿಗಾಲವಿದ್ದರೂ ಮಾಡುವುದು ಒಳ್ಳೆಯದು. ಚಳಿಗಾಲವೆಂದು ಒಂದೇ ಜಾಗದಲ್ಲಿ ಕೂತಿದ್ದು ಆಲಸಿಗಳಾದರೆ, ಗಂಟುಗಳಲ್ಲಿನ ನೋವುಗಳು ಇನ್ನಷ್ಟು ತೀವ್ರವಾಗುತ್ತದೆ. ಗಂಟುಗಳು ಸಡಿವಾಗಿ ಸಹಜವಾಗಿ ಇರಲು ಕೆಲವು ಸರಳವಾದ ವ್ಯಾಯಾಮಗಳನ್ನು ದಿನವೂ ಮಾಡಬೇಕು. ಒಂದು ಸಣ್ಣ ವಾಕ್, ಒಂದರ್ಧ ಗಂಟೆಯ ವ್ಯಾಯಾಮ ಮಾಡುವುದು ಒಳ್ಳೆಯದು.
೬. ಫಿಸಿಯೋಥೆರಪಿ: ನೋವುಗಳು ತೀವ್ರವಾಗಿದ್ದರೆ ಫಿಸಿಯೋಥೆರಪಿ ಕೂಡಾ ಟ್ರೈ ಮಾಡಬಹುದು. ನಿಯಮಿತ ವ್ಯಾಯಾಮಗಳಿದ್ದರೂ ಚಳಿಗಾಲದಲ್ಲಿ ನೋವು ತೀವ್ರವೆನಿಸಿದರೆ, ಫಿಸಿಯೋಥೆರಪಿಯ ಕೆಲವು ವ್ಯಾಯಾಮಗಳು, ಥೆರಪಿಗಳು ನಿಮ್ಮ ನೋವನ್ನು ಕೊಂಚ ತಿಳಿಯಾಗಿಸಬಹುದು.
೭. ಕಂಪ್ರೆಶನ್ ಕೈಗವಸು: ಕಂಪ್ರೆಶನ್ ಕೈಗವಸನ್ನು ಧರಿಸಬಹುದು: ಇಂತಹ ಕೈಗವಸುಗಳು ಹಾಗೂ ಕಾಲುಚೀಲಗಳು ದೇಹದಲ್ಲಿ ರಕ್ತಪರಿಚಲನೆಯನ್ನು ಚುರುಕುಗೊಳಿಸುತ್ತದೆ. ಇದು ಕೈಕಾಲುಗಳನ್ನು ಬೆಚ್ಚಗಿಟ್ಟು ನೋವಿಗೆ ಹಿತವಾದ ಅನುಭವ ನೀಡುತ್ತದೆ.
ಇದನ್ನೂ ಓದಿ| Health Tips | ಈ ಕಾಂಬಿನೇಷನ್ ಆಹಾರಗಳು ತೊಂದರೆ ತರಬಹುದು, ಜಾಗ್ರತೆ!