ಚಳಿಗಾಲವೆಂದರೆ ದೇಹ ಮನಸ್ಸು ಎರಡೂ ರಿಲ್ಯಾಕ್ಸ್ ಆಗಿರಬಯಸುವ ದಿನಗಳು. ತಡವಾಗಿ ಎದ್ದು, ನಿಧಾನವಾಗಿ ದಿನಚರಿ ಆರಂಭವಾಗಿ, ವ್ಯಾಯಾಮ ಇತ್ಯಾದಿಗಳಿಗೆ ಚಕ್ಕರ್ ಹೊಡೆದು ಆರಾಮವಾಗಿರಲು ಪ್ರತಿ ಮನಸ್ಸೂ ಬಯಸುತ್ತದೆ. ಆದರೆ, ಬಹುತೇಕರಿಗೆ ಚಳಿಗಾಲದಲ್ಲಿ ಕಾಡುವ ಸಮಸ್ಯೆ ಎಂದರೆ ಅದು ಚರ್ಮದ್ದು. ಚರ್ಮವೇಕೆ ಈ ಕಾಲದಲ್ಲಿ ನಿಸ್ತೇಜವಾಗಿ, ಬಿರುಕಾಗಿ, ಸುಕ್ಕಾಗಿ ಬದಲಾಗುತ್ತದೆ ಎಂಬುದು ಎಲ್ಲರಿಗೂ ಚಳಿಗಾಲದ ಬಗ್ಗೆ ಇರುವ ಏಕೈಕ ದೂರು. ಅದರಲ್ಲೂ ಮಹಿಳೆಯರಿಗೆ ಇದು ನುಂಗಲಾರದ ತುತ್ತು. ಇದಕ್ಕಾಗಿಯೇ ಸಾಕಷ್ಟು ಸರ್ಕಸ್ಸುಗಳನ್ನು ಮಾಡಿದರೂ, ನಾವು ನಿತ್ಯ ಮಾಡುವ ತಪ್ಪುಗಳು ನಮ್ಮ ಅರಿವಿಗೇ ಬರುವುದಿಲ್ಲ. ಹಾಗಾದರೆ ಚಳಿಗಾಲದಲ್ಲಿ ನಮ್ಮ ಚರ್ಮದ ವಿಚಾರವಾಗಿ ನಾವು ಮಾಡುವ ಐದು ಪ್ರಮುಖ ತಪ್ಪುಗಳೇನು ಎಂಬುದನ್ನು ನೋಡೋಣ.
೧. ಬಿಸಿನೀರಿನ ಸ್ನಾನ: ಚಳಿಗಾಲವೆಂದು ಬಿಸಿನೀರಿನಲ್ಲಿ ಸ್ನಾನ ಮಾಡುವುದು ಸಹಜವೇ. ಚಳಿಗಾಲದಲ್ಲಿ ಬಿಸಿಬಿಸಿ ನೀರನ್ನು ಮೈಗೆ ಹೊಯ್ದುಕೊಳ್ಳುತ್ತಿದ್ದರೆ ಆಹಾ ಎಂಬ ಸುಖ. ಆದರೆ ಹಾಗೆ ನೋಡಿದರೆ, ಚಳಿಗಾಲದಲ್ಲೂ ಉಗುರು ಬೆಚ್ಚಗೆ ನೀರಲ್ಲೇ ಸ್ನಾನ ಮಾಡುವುದು ಒಳ್ಳೆಯದು. ಯಾಕೆಂದರೆ, ಬಿಸಿನೀರಿನಿಂದ ಸ್ನಾನ ಮಾಡುತ್ತಿದ್ದರೆ, ಮೈಯಲ್ಲಿರುವ ಎಣ್ಣೆಯಂಶವೆಲ್ಲ ತೊಳೆದುಹೋಗಿ ನಮ್ಮ ಚರ್ಮ ಹೆಚ್ಚು ಶುಷ್ಕತೆಯೆಡೆಗೆ ಜಾರುತ್ತದೆ. ಸೋಪನ್ನೂ ಉಜ್ಜಿ ಉಜ್ಜಿ ಸ್ನಾನ ಮಾಡುವ ಮೂಲಕ ನಿಜವಾಗಿ ಚರ್ಮಕ್ಕೆ ಬೇಕಾಗಿರುವ ಸಾಮಾನ್ಯ ಎಣ್ಣೆಯಂಶವೂ ತೊಳೆದು ಹೋಗಿ, ಚರ್ಮ ಬಿರುಕು ಬಿಡಲಾರಂಭಿಸುತ್ತದೆ. ತುರಿಕೆ ಆರಂಭವಾಗುತ್ತದೆ. ಕೆಂಪಾಗಿ ಬಿಡುತ್ತದೆ. ಚಳಿಗಾಲದಲ್ಲಿ ಎಲ್ಲರೂ ಮಾಡುವ ದೊಡ್ಡ ತಪ್ಪು ಇದೇ.
೨. ತಪ್ಪು ಮಾಯ್‌ಶ್ಚರೈಸರ್ ಬಳಕೆ: ಚರ್ಮದಲ್ಲಿರುವ ನೀರಿನಂಶ ಬೇಸಿಗೆಯಲ್ಲಿ ಹೆಚ್ಚು ನಷ್ಟವಾಗುವುದಿಲ್ಲ. ಆದರೆ, ಚಳಿಗಾಲದಲ್ಲಿ ಹಾಗಲ್ಲ. ಚರ್ಮದ ನೀರಪಸೆಯೆಲ್ಲ ಆರಿಹೋಗುತ್ತದೆ. ಚರ್ಮದಲ್ಲಿರುವ ಪ್ರೊಟೀನ್ ಹಾಗೂ ಲಿಪಿಡ್‌ಗೆ ಹಾನಿಯಾದಲ್ಲಿ ಚರ್ಮ ಇನ್ನಷ್ಟು ಸೆನ್ಸಿಟಿವ್ ಆಗುತ್ತದೆ. ಆದ್ದರಿಂದ ಚರ್ಮದಲ್ಲಿ ನಷ್ಟವಾದ ಎಣ್ಣೆಯಂಶ ಹಾಗೂ ನೀರಿನಂಶವನ್ನು ಸರಿದೂಗಿಸುವಂಥ ಮಾಯ್‌ಶ್ಚರೈಸರ್ ಅನ್ನು ಹಚ್ಚಿಕೊಳ್ಳುವುದುದ ಅತೀ ಅಗತ್ಯ. ಜೊಜೋಬಾ, ಸೂರ್ಯಕಾಂತಿ, ಅವಕಾಡೋ ಮತ್ತಿತರ ಎಣ್ಣೆಗಳು ಅಥವಾ ತೆಂಗಿನೆಣ್ಣೆಯನ್ನೂ ಬಳಸಬಹುದು. ಶಿಯಾ ಹಾಗೂ ಕೋಕೋ ಬಟರ್‌ಯುಕ್ತ ಮಾಯ್‌ಶ್ಚರೈಸರ್ ಚಳಿಗಾಲಕ್ಕೆ ಒಳ್ಳೆಯದು.
೩. ಪದೇಪದೇ ಮುಖ ತೊಳೆಯುವುದು: ಚಳಿಗಾಲದಲ್ಲಿ ಮುಖ ತೊಳೆಯುವಾಗ ತಪ್ಪಾಗದಂತೆ ಎಚ್ಚರಿಕೆ ವಹಿಸಬೇಕು. ಹೆಚ್ಚು ಕೆಮಿಕಲ್‌ಯುಕ್ತ ಪೇಸ್‌ವಾಶ್‌ಗಳನ್ನು ಬಳಸಿ ಆಗಾಗ ಮುಖ ತೊಳೆಯುವುದರಿಂದ ಮುಖದಲ್ಲಿರುವ ಎಣ್ಣೆಯಂಶ ಹಾಗೂ ನೀರಿನಂಶ ಪೂರ್ತಿ ಕಳೆದುಕೊಂಡು ಮುಖ ಬಿರುಕು ಬಿರುಕಾಗುತ್ತದೆ. ಅದಕ್ಕಾಗಿ ಆಗಾಗ ಮುಖ ತೊಳೆಯುವ ಅಭ್ಯಾಸವಿದ್ದರೆ ಚಳಿಗಾಲದಲ್ಲಿ ಕಡಿಮೆ ಮಾಡಿ. ಜೊತೆಗೆ ತುಂಬ ಸೋಪನ್ನು ಮುಖಕ್ಕೆ ಬಳಸುವುದಕ್ಕೆ ಬ್ರೇಕ್ ಹಾಕಿ.
ಇದನ್ನೂ ಓದಿ | Winter care | ಚಳಿಗಾಲದಲ್ಲಿ ನೈಸರ್ಗಿಕವಾಗಿ ದೇಹವನ್ನು ಬೆಚ್ಚಗಿಡುವ ಆಹಾರಗಳಿವು!
೪. ಕಡಿಮೆ ನೀರು ಕುಡಿಯುವುದು: ಚಳಿಗಾಲದಲ್ಲಿ ಮಾಡುವ ಇನ್ನೊಂದು ದೊಡ್ಡ ತಪ್ಪು ಎಂದರೆ ನೀರು ಕುಡಿಯದಿರುವುದು. ಚಳಿಗಾಲದಲ್ಲಿ ಸಹಜವಾಗಿಯೇ ಬಾಯಾರಿಕೆಯಾಗುವುದಿಲ್ಲ. ಆದರೆ, ದೇಹಕ್ಕೆ ನೀರು ಪೂರೈಕೆ ಮಾಡುವುದುದ ಅತೀ ಅಗತ್ಯ. ನೀರು ಕುಡಿಯದಿರುವುದರಿಂದಲೇ, ನಿಮ್ಮ ಚರ್ಮ ಪದರು ಪದರಾಗಿ ಒಣಗಲು ಶುರುವಾಗುತ್ತದೆ, ಸುಕ್ಕಾಗುತ್ತದೆ ಹಾಗೂ ಎದ್ದು ಬರುತ್ತದೆ. ಹಾವಿನ ಪೊರೆಯಂತೆ ಮೇಲೆದ್ದು ಬರುವ ಚರ್ಮದ ಈ ಸಮಸ್ಯೆ ನೀರು ಕುಡಿಯುವುದರಿಂದ ಬಹುತೇಕ ಸರಿಪಡಿಸಬಹುದು. ದೇಹವನ್ನು ಸದಾ ನೀರಿನಂಶ ಇರುವಂತೆ ನೋಡಿಕೊಳ್ಳುವುದುದ ಚಳಿಗಾಲದ ಬಹುಮುಖ್ಯ ಅಗತ್ಯಗಳಲ್ಲೊಂದು. ಕೇವಲ ಚರ್ಮವಷ್ಟೇ ಅಲ್ಲ, ದೇಹದ ಆರೋಗ್ಯಕ್ಕೂ ಚಳಿಗಾಲದಲ್ಲಿ ನೀರು ಅತ್ಯವಶ್ಯಕ.
೫. ಸನ್‌ಸ್ಕ್ರೀನ್ ಹಚ್ಚದಿರುವುದು: ಹಲವರು ಚಳಿಗಾಲದಲ್ಲಿ ಮಾಡುವ ಮತ್ತೊಂದು ದೊಡ್ಡ ತಪ್ಪು ಎಂದರೆ, ಸನ್‌ಸ್ಕ್ರೀನ್ ಹಚ್ಚದೇ ಇರುವುದು. ಚಳಿ ಎಷ್ಟೇ ಇರಲಿ, ಬಿಸಿಲು ಇಲ್ಲದೇ ಇರಲಿ, ಹಗಲು ಹೊತ್ತಿನಲ್ಲಿ ನಿಮ್ಮ ಚರ್ಮಕ್ಕೆ ಸನ್‌ಸ್ಕ್ರೀನ್ ಅತ್ಯಂತ ಅಗತ್ಯ. ಯಾಕೆಂದರೆ, ಸೂರ್ಯನ ಹಾನಿಕಾರಕ ಯುವಿ ಕಿರಣಗಳು ಚಳಿಗಾಲದಲ್ಲೂ ನಿಮ್ಮ ಚರ್ಮಕ್ಕೆ ಹಾನಿಯುಂಟು ಮಾಡಬಹುದುದ. ಹೀಗಾಗಿಯೇ ಚರ್ಮ ವಯಸ್ಸಾಗುವ ಮೊದಲೇ ಸುಕ್ಕಾದಂತೆ, ತನ್ನ ಕಳೆಯನ್ನು ಕಳೆದುಕೊಂಡಂತೆ ಕಾಣುವುದು. ಕಪ್ಪು ಚುಕ್ಕೆಗಳು, ಟ್ಯಾನ್ ಆಗುವುದು ಇತ್ಯಾದಿ ಸಮಸ್ಯೆಗಳೂ ಕೂಡಾ ಇಂತಹ ಕಾಳಜಿ ವಹಿಸದೇ ಇದ್ದಾಗಲೇ ಆಗುತ್ತದೆ ಎಂಬುದನ್ನು ನೆನಪಿಡಿ.
ಇದನ್ನೂ ಓದಿ | Winter Care | ಚಳಿಗಾಲದಲ್ಲಿ ಕಾಲು ತಣ್ಣಗಾಗುತ್ತದೆಯೇ? ಸಾಕ್ಸ್ ಹಾಕಿ ಮಲಗಬಹುದೇ?