ಚಳಿಗಾಲ ಬಂತೆಂದರೆ ಬಹಳಷ್ಟು ಪ್ರಾಣಿಗಳು ತಮ್ಮ ಜೀವನಶೈಲಿಯಲ್ಲಿ ಮಾರ್ಪಾಡು ಮಾಡಿಕೊಳ್ಳುತ್ತವೆ. ಕೆಲವು ವಲಸೆ ಹೋಗುತ್ತವೆ; ಕೆಲವು ಮೈಯೆಲ್ಲಾ ಕೂದಲು ಬೆಳೆಸಿಕೊಂಡು ಚಳಿ ತಡೆಯುವ ನೈಸರ್ಗಿಕ ಕಂಬಳಿ ಸೃಷ್ಟಿಸಿಕೊಳ್ಳುತ್ತವೆ; ಇನ್ನು ಕೆಲವು ಚನ್ನಾಗಿ ತಿಂದು, ತೂಕ ಹೆಚ್ಚಿಕೊಂಡು ಚಳಿಗಾಲ ಮುಗಿಯುವವರೆಗೂ ನಿದ್ದೆ ಮಾಡುತ್ತವೆ! ಈ ಪ್ರಾಣಿಗಳ ಪಟ್ಟಿಯಲ್ಲಿ ಮನುಷ್ಯ ಪ್ರಾಣಿಯೂ ಸೇರಿರುವನೇ? ಬೆಚ್ಚಗಿನ ಜಾಕೆಟ್ ಧರಿಸಿ, ಅನುಕೂಲ ಇರುವಲ್ಲಿ ಚಳಿ ಕಾಯಿಸಿಕೊಂಡು, ಬಿಸಿ ಕಾಫಿಯೊ ಇನ್ನೊಂದೋ ಹೀರುತ್ತಾ ಬಜ್ಜಿ-ಬೋಂಡ ತಿಂದು ತೂಕ ಹೆಚ್ಚಿಸಿಕೊಂಡು, ಚಳಿಗಾಲ ಮುಗಿಯುವವರೆಗೂ ಬೆಳಗ್ಗೆ ಬೇಗ ಏಳಲಾರದೆ ಬೆಚ್ಚಗೆ ಮಲಗಿರುವವರಿಗೆ ಕೊರತೆಯೇನಿಲ್ಲವಲ್ಲ.
ಒಂದೆರಡು ದಿನ ಇವನ್ನೆಲ್ಲಾ ಮಾಡಿದರೆ ಸಮಸ್ಯೆಯಿಲ್ಲ. ಆದರೆ ತಿಂಗಳುಗಟ್ಟಲೆ ಇದೇ ಜೀವನಶೈಲಿಯಲ್ಲಿದ್ದು ಚಳಿಯೂ ಹೆಚ್ಚುತ್ತಿದ್ದರೆ ನಮ್ಮ ಶರೀರ ಮತ್ತು ಆರೋಗ್ಯ ದುರ್ಬಲವಾಗುವುದು ಖಂಡಿತ. ಮಾತ್ರವಲ್ಲ, ಎಲ್ಲಾ ರೀತಿಯ ಶೀತ, ಕೆಮ್ಮು, ಜ್ವರ, ಗಂಟಲುಬಾಧೆ, ಮೈಕೈ ನೋವುಗಳಿಗೆಲ್ಲಾ ಇದೇ ಪರ್ವ ಕಾಲ. ಇದಕ್ಕೆ ಪೂರಕವಾಗಿ ಸಿಹಿ ಮತ್ತಿತರ ಹೆಚ್ಚು ಕ್ಯಾಲರಿ ಆಹಾರವನ್ನು ಸೇವಿಸಿ ತೂಕವನ್ನೂ ಪೇರಿಸಿಕೊಂಡರೆ, ಚಳಿಗಾಲದ ಸಹವಾಸವೇ ಸಾಕು ಎನಿಸುತ್ತದೆ. ಇದರ ಮೇಲೆ ದುರ್ಭಿಕ್ಷದಲ್ಲಿ ಅಧಿಕಮಾಸ ಎಂಬಂತೆ, ಸೂರ್ಯನ ಬೆಳಕೂ ಕಡಿಮೆ. ಬೆಳಗಾಗುವುದು ತಡ, ಕತ್ತಲಾಗುವುದು ಬೇಗ. ಮನಸ್ಸಿಗೇನೋ ಬೇಸರ, ಲವಲವಿಕೆಯೇ ಇಲ್ಲ. ಹಾಗಾದರೆ ಏನು ಮಾಡಬಹುದು?
ವ್ಯಾಯಾಮ: ಈ ಚಳಿಯಲ್ಲಿ ಬೆಳಗ್ಗೆ ಏಳುವವರಾರು ಎಂದು ಗೊಣಗಿದರೆ ಪ್ರಯೋಜನವಿಲ್ಲ. ಬೇಗ ಏಳಲೇಬೇಕು, ವ್ಯಾಯಾಮ ಮಾಡಲೇಬೇಕು. ಯಾವುದೇ ವ್ಯಾಯಾಮವಾದರೂ ಸರಿ, ಹೊರಗಿನ ಚಳಿಯಲ್ಲಿ ವಾಕಿಂಗ್ ಸಾಧ್ಯವಿಲ್ಲವೇ? ಮಾಡಬೇಡಿ. ಮನೆಯೊಳಗೆ ನಿಮಗೆ ಸಾಧ್ಯವಿರುವ ವ್ಯಾಯಾಮ ಮಾಡಿ. ಯೋಗ, ಪಿಲಾಟೆ, ಏರೋಬಿಕ್ಸ್, ಝುಂಬಾ- ಯಾವುದಾದರೂ ಸರಿ. ಅಂತೂ ಚಳಿ ಕೊಡವಿ ಮೈ ಬಿಸಿಯಾಗಲೇಬೇಕು. ಬೆವರು ಹರಿಸಿದರೆ ಇನ್ನೂ ಉತ್ತಮ. ಚಳಿಗಾಲದಲ್ಲಿ ಹೆಚ್ಚುವ ತೂಕವನ್ನು ನಿಯಂತ್ರಣದಲ್ಲಿ ಇರಿಸಲು ಮಾತ್ರ ಇದು ಬೇಕಾಗುವುದಲ್ಲ, ಚಟುವಟಿಕೆಯಲ್ಲಿರುವ ದೇಹಕ್ಕೆ ರೋಗ ನಿರೋಧಕ ಶಕ್ತಿಯೂ ಹೆಚ್ಚು.
ಇದನ್ನೂ ಓದಿ | Winter Fashion 2022 | ಚಳಿಗಾಲಕ್ಕೆ ಬಂತು ಬೆಚ್ಚನೆಯ ಲೇಯರ್ ಲುಕ್ ನೀಡುವ ಫ್ಯಾಷನ್
ಗ್ರೀನ್ ಟೀ: ಕೆಲವು ಗ್ರೀನ್ ಟೀ ಅಥವಾ ನಮ್ಮದೇ ಕಷಾಯಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ತುಳಸಿ, ಪುದೀನಾ, ಶುಂಠಿ, ಅಶ್ವಗಂಧ, ಕಾಳುಮೆಣಸು ಮುಂತಾದವುಗಳ ಕಷಾಯ ದಿನಕ್ಕೊಮ್ಮೆ ಇದ್ದರೆ ಅನುಕೂಲ. ಇಂಥದ್ದೇ ಎಲೆಗಳ ಗ್ರೀನ್ ಟೀ ಸಹ ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಅವೂ ಆರೋಗ್ಯಕ್ಕೆ ಲಾಭದಾಯಕವೇ. ದೇಹದಲ್ಲಿ ಸೋಂಕಿನೊಡನೆ ಹೋರಾಡುವ ಮತ್ತು ಉರಿಯೂತ ಶಮನ ಮಾಡುವ ಆಂಟಿ ಆಕ್ಸಿಡೆಂಟ್‌ಗಳು ಈ ಪೇಯಗಳಲ್ಲಿ ಇರುತ್ತವೆ. ಗ್ರೀನ್ ಟೀಗಳ ಒಗರು ರುಚಿ ಇಷ್ಟವಾಗದಿದ್ದರೆ, ನಿಂಬೆಹಣ್ಣಿನ ನಾಲ್ಕಾರು ಹನಿಗಳು ಸ್ವಾದ ಮತ್ತು ಘಮವನ್ನು ಹೆಚ್ಚಿಸಬಲ್ಲವು.
ಶ್ವಾಸಕೋಶಗಳ ಆರೋಗ್ಯ: ಚಳಿ ಮತ್ತು ಒಣ ಹವೆ ಹೆಚ್ಚಾಗುತ್ತಿದ್ದಂತೆ, ವಾತಾವರಣದಲ್ಲಿ ಅಲರ್ಜಿಕಾರಕ ಕಣಗಳೂ ಹೆಚ್ಚುತ್ತವೆ. ಇತ್ತೀಚೆಗಂತೂ ಹಲವಾರು ನಗರಗಳಲ್ಲಿ ವಾಯು ಮಾಲಿನ್ಯದ ಪ್ರಮಾಣ ಚಳಿಗಾಲದಲ್ಲಿ ಗರಿಷ್ಟ ಮಟ್ಟದಲ್ಲಿರುತ್ತದೆ. ಇವುಗಳ ಜೊತೆ, ಚಳಿಗಾಲದ ಮಂಜು ಸೇರಿ ಹೊಂಜಿನಂಥ ಸಮಸ್ಯೆ ಸೃಷ್ಟಿಯಾಗುತ್ತದೆ. ಹೊರಗಿನ ವಾತಾವರಣದಲ್ಲಿ ಮಾಲಿನ್ಯ ಹೆಚ್ಚಿದ್ದರೆ ಮನೆಯಲ್ಲೇ ಇರುವುದು ಕ್ಷೇಮ. ಹೊರಗೆ ಹೋಗುವುದು ಅನಿವಾರ್ಯವಾದರೆ ಎನ್‌೯೫ ಗುಣಮಟ್ಟದ ಮಾಸ್ಕ್ ಉಪಯೋಗಿಸುವುದು ಒಳ್ಳೆಯದು. ಮನೆಯಲ್ಲಿ ಅಗತ್ಯವಾದರೆ ಗಾಳಿ ಶುದ್ಧೀಕರಣಕ್ಕೆ ಏರ್ ಪ್ಯೂರಿಫೈಯರ್ ಉಪಯೋಗಿಸಬಹುದು. ಹ್ಯುಮಿಡಿಫಯರ್ ಬಳಕೆ ದೊಡ್ಡ ಮಟ್ಟದಲ್ಲಿ ಉಪಕಾರ ಮಾಡುತ್ತದೆ. ಅವೆಲ್ಲ ಇಲ್ಲದಿದ್ದರೆ, ದಿನಾ ಬಿಸಿ ಆವಿ ತೆಗೆದುಕೊಳ್ಳುವುದು ಸಹ ಉಪಯುಕ್ತ.
ಇದನ್ನೂ ಓದಿ | Hair care | ತಲೆ ಕೆಡಿಸಿಕೊಳ್ಳಬೇಡಿ, ಚಳಿಗಾಲದಲ್ಲಿ ತಲೆಕೂದಲ ಆರೈಕೆ ಹೀಗೆ ಮಾಡಿ
ಆಹಾರ: ಸಮತೋಲಿತವಾಗಿಯೇ ಇರಲಿ. ಅತಿಯಾದ ಎಣ್ಣೆ, ಜಿಡ್ಡಿನ ಪದಾರ್ಥಗಳು, ಸಿಹಿ, ಮಸಾಲೆಯುಕ್ತ ಆಹಾರ ಹೊಟ್ಟೆಯ ಆರೋಗ್ಯವನ್ನು ಏರುಪೇರು ಮಾಡುತ್ತವೆ. ಆಸಿಡಿಟಿ, ಹುಳಿತೇಗಿನಂಥ ಸಮಸ್ಯೆಗಳು ಶುರುವಾದರೆ ಶ್ವಾಸಕೋಶದ ಆರೋಗ್ಯವೂ ಕೆಟ್ಟೀತು. ಪ್ರತಿ ದಿನ ಮೊಸರು-ಮಜ್ಜಿಗೆ ಮತ್ತು ಋತುಮಾನದ ಹಣ್ಣಿ-ತರಕಾರಿಗಳು ಆಹಾರದ ಭಾಗವಾಗಿರಲಿ. ನೆನಪಿಡಿ, ಚಳಿಗಾಲ ತಪ್ಪಿಸುವುದಕ್ಕೆ ಸಾಧ್ಯವಿಲ್ಲ. ಆದರೆ ಚಳಿಗಾಲದಲ್ಲಿ ಅನಾರೋಗ್ಯ ತಪ್ಪಿಸುವುದಕ್ಕೆ ಸಾಧ್ಯವಿದೆ.