Site icon Vistara News

Dandruff remedies | ಚಳಿಗಾಲದ ತಲೆಹೊಟ್ಟಿನ ಸಮಸ್ಯೆಗೆ ನಮ್ಮಲ್ಲೇ ಇವೆ ಮನೆಮದ್ದುಗಳು!

dandruff remedies

ಚಳಿಗಾಲದಲ್ಲಿ ಬಹುತೇಕ ಎಲ್ಲರ ಸಾರ್ವತ್ರಿಕ ಸಮಸ್ಯೆ ಎಂದರೆ ಅದು ತಲೆಹೊಟ್ಟು. ಎಲ್ಲವೂ ಸರಿಯಿದೆ ಎನ್ನುವಾಗ ಚಳಿಗಾಲ ಬಂದ ಕೂಡಲೇ, ತಲೆಯಿಂದ ಪಕಳೆಗಳಂತೆ ಎದ್ದು, ಮೈಮೇಲೆ, ಹಾಕಿರುವ ಬಟ್ಟೆಯ ಹೆಗಲಲ್ಲಿ ಹುಡಿಹುಡಿಯಾಗಿ ಚೆಲ್ಲಿಕೊಂಡು ಎಲ್ಲರೆದುರು ಮುಜುಗರಕ್ಕೀಡಾಗುವಂತೆ ಮಾಡುವ ಸಮಸ್ಯೆಯಿದು. ಹೇಳಿಕೊಳ್ಳುವ ದೊಡ್ಡ ಸಮಸ್ಯೆ ಇದಲ್ಲದಿದ್ದರೂ, ಹೇಳಿಕೊಳ್ಳಲಾಗದ ಸಮಸ್ಯೆಯೂ ಹೌದು. ಎಷ್ಟೇ ಎಣ್ಣೆ ಹಚ್ಚಿದರೂ, ಎಣ್ಣೆ ಹಚ್ಚಿ ಸ್ನಾನ ಮಾಡಿದರೂ ಎರಡು ದಿನ ಕಳೆದು ಮೂರನೇ ದಿನದಲ್ಲಿ ಮತ್ತೆ ವಕ್ಕರಿಸುವ, ಹೋದೆಯಾ ಪಿಶಾಚಿ ಅಂದರೆ ಬಂದೆ ಗವಾಕ್ಷಿಲಿ ಎಂಬ ಸಮಸ್ಯೆಯಿದು. ಚಳಿಗಾಲವೇ ಹಾಗೆ. ಬಿಸಿಬಿಸಿ ನೀರು ಹೊಯ್ದುಕೊಳ್ಳುವಂತಹ ನಮ್ಮ ಸಾಮಾನ್ಯ ನಿತ್ಯದ ದಿನಚರಿಯಿಂದಾಗಿ ಚರ್ಮ ಇನ್ನಷ್ಟು ತನ್ನ ಅವಶ್ಯಕ ಎಣ್ಣೆಯಂಶವನ್ನೂ ನೀರಿನಂಶವನ್ನೂ ಕಳೆದುಕೊಂಡು ಶುಷ್ಕವಾಗಿ ಇಂಥ ಸಮಸ್ಯೆಗಳನ್ನು ಹೆಚ್ಚು ಮಾಡುತ್ತದೆ. ಕೆಲವು ಸರಳ ಸುಲಭ ಮನೆಮದ್ದುಗಳ ಮೂಲಕ ಈ ತಲೆಹೊಟ್ಟಿಗೆ ಪರಿಹಾರ ಕಂಡುಕೊಳ್ಳಬಹುದು. ಅವುಗಳ ವಿವರ ಇಲ್ಲಿದೆ.

೧. ಕಹಿಬೇವಿನ ಪುಡಿ: ಕಹಿಬೇವು ತಲೆಹೊಟ್ಟಿಗೆ ಒಳ್ಳೆಯ ಮದ್ದು. ಇದು ತಲೆಯ ಬುಡವನ್ನು ಸ್ವಚ್ಛ ಮಾಡಿ, ಕೂದಲು ಬೆಳೆಯಲು ಉದ್ದೀಪಿಸುತ್ತದೆ. ಕಹಿಬೇವಿನ ಪುಡಿಯನ್ನು ಮೊಸರಿನಲ್ಲಿ ಕಲಸಿ ತಲೆಗೆ ಹಚ್ಚುವ ಮೂಲಕ ಅಥವಾ ಕಹಿಬೇವಿನೆಣ್ಣೆಯನ್ನು, ಬಾದಾಮಿ ಅಥವಾ ತೆಂಗಿನೆಣ್ಣೆಯ ಜೊತೆಗೆ ಮಿಕ್ಸ್‌ ಮಾಡಿ ತಲೆಗೆ ಹಚ್ಚಿ ಮಸಾಜ್‌ ಮಾಡಿ, ಆಯುರ್ವೇದಯುಕ್ತ ಶಾಂಪೂನಿಂದ ತಲೆಯನ್ನು ತೊಳೆಯುವುದರಿಂದ ತಲೆಹೊಟ್ಟಿನಿಂದ ಮುಕ್ತಿ ಕಾಣಬಹುದು. ವಾರದಲ್ಲೆರಡು ಬಾರಿ ಹೀಗೆ ಮಾಡಬಹುದು.

೨. ನೆಲ್ಲಿಕಾಯಿ ಪುಡಿ: ನೆಲ್ಲಿಕಾಯಿ ತಲೆಕೂದಲ ಸಮಸ್ಯೆಗಳಿಗೆ ಅನಾದಿಕಾಲದಿಂದಲೂ ನಮ್ಮ ಪೂರ್ವಜರು ಕಂಡುಕೊಂಡ ಅತ್ಯುತ್ತಮ ಮನೆಮದ್ದು. ವಿಟಮಿನ್‌ ಸಿಯಿಂದ ಸಮೃದ್ಧವಾಗಿರುವ ಇದು ತಲೆಹೊಟ್ಟಿಗೆ ರಾಮಬಾಣ. ತಲೆಹೊಟ್ಟಿನ ಸಮಸ್ಯೆಗೆಂದೇ ನೆಲ್ಲಿಕಾಯಿ ಪುಡಿಗಳೂ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಪುಡಿಯನ್ನು ಮೊಸರಿನೊಂದಿಗೆ ಕಲಸಿಕೊಂಡು ತಲೆಯ ಬುಡಕ್ಕೆ ಹಚ್ಚಿ ಒಂದರ್ಧ ಗಂಟೆ ಬಿಟ್ಟು ತಲೆಗೆ ಸ್ನಾನ ಮಾಡುವ ಮೂಲಕ ಪರಿಹಾರ ಕಾಣಬಹುದು. ನೆಲ್ಲಿಕಾಯಿಯನ್ನು ಬಳಸಿ ಮಾಡಲಾದ ಎಣ್ಣೆಯಿಂದ ತಲೆಗೆ ಮಸಾಜ್‌ ಕೂಡಾ ಮಾಡಬಹುದು.

ಇದನ್ನೂ ಓದಿ | Skin Care | ಕಾಂತಿಯುಕ್ತ ತ್ವಚೆ ಬೇಕೆ?: ಈ ಆಹಾರಗಳು ನಿಮ್ಮ ಹೊಟ್ಟೆ ಸೇರಲಿ

೪. ಟೀಟ್ರೀ ಎಣ್ಣೆ: ಪುರಾತನ ಕಾಲದಿಂದಲೂ ನಮ್ಮ ಹಿರಿಯರು ಮೊಡವೆ ಹಾಗೂ ಸೋರಿಯಾಸಿಸ್‌ನಂತಹ ಚರ್ಮದ ಸಮಸ್ಯೆಗಳಿಗೆ ಟೀಟ್ರೀ ಎಣ್ಣೆ ಅತ್ಯುತ್ತಮ ಪರಿಹಾರವಾಗಿ ಬಳಸುತ್ತಿದ್ದರು. ಇದರಲ್ಲಿ ಆಂಟಿ ಬ್ಯಾಕ್ಟೀರಿಯಲ್‌ ಗುಣಗಳಿದ್ದು ಇದು ತಲೆಹೊಟ್ಟಿನ ಸಮಸ್ಯೆಗೂ ಅತ್ಯುತ್ತಮ ಪರಿಹಾರ.

೪. ತೆಂಗಿನೆಣ್ಣೆ: ನಾವು ಮನೆಗಳಲ್ಲಿ ಹೆಚ್ಚಾಗಿ ತಲೆಕೂದಲಿಗೆ ಬಳಸುವ ತೆಂಗಿನೆಣ್ಣೆಯನ್ನು ಚಳಿಗಾಲದಲ್ಲೂ ನಿತ್ಯ ಬಳಕೆ ಮಾಡುತ್ತಿದ್ದರೆ, ತಲೆಹೊಟ್ಟಿನಂತಹ ಸಮಸ್ಯೆಗಳು ಎಂದೂ ಬರದು. ತಲೆಗೆ ಸ್ನಾನ ಮಾಡುವ ಒಂದರಡು ಗಂಟೆ ಮೊದಲು ತೆಂಗಿನೆಣ್ಣೆಯಿಂದ ಮಸಾಜ್‌ ಮಾಡಿಕೊಂಡು ಸ್ನಾನ ಮಾಡಿದರೆ ಕೂದಲಿಗೆ ಸಿಗಬೇಕಾದ ಎಣ್ಣೆಯಂಶ ಸರಿಯಾದ ಪ್ರಮಾಣದಲ್ಲಿ ಸಿಕ್ಕಿ ತಲೆಹೊಟ್ಟು ಕಡಿಮೆಯಾಗುತ್ತದೆ. ತೆಂಗಿನೆಣ್ಣೆ ಅತ್ಯುತ್ತಮ ಮಾಯ್‌ಶ್ಚರೈಸರ್‌ ಕೂಡಾ ಹೌದು. ಎಕ್ಸೀಮಾದಂತಹ ಚರ್ಮದ ಸಮಸ್ಯೆಗಳಿಗೂ ತೆಂಗಿನೆಣ್ಣೆ ರಾಮಬಾಣ. ಹಾಗಾಗಿ ತಲೆಹೊಟ್ಟಿಗೆ ಹಿರಿಯರು ಮೊದಲಿನಿಂದಲೂ ತೆಂಗಿನೆಣ್ಣೆಯನ್ನು ಬಳಸುತ್ತಿದ್ದರು. ಆದರೆ, ಇವೆಲ್ಲವುಗಳನ್ನು ತಲೆಗೆ ಹಚ್ಚಿ ಮಸಾಜ್‌ ಮಾಡಿದಾಗ, ಅತಿಯಾದ ಬಿಸಿ ನೀರಿನಿಂದ ತಲೆಯನ್ನು ಸ್ವಚ್ಛಗೊಳಿಸಬೇಡಿ. ಇದು ಚರ್ಮವನ್ನು ಇನ್ನಷ್ಟು ಶುಷ್ಕಗೊಳಿಸಿ ತಲೆಹೊಟ್ಟು ಹೆಚ್ಚಾಗುತ್ತದೆ. ಅದಕ್ಕಾಗಿ, ಉಗುರು ಬೆಚ್ಚಗೆ ನೀರಿನಿಂದ ತೊಳೆಯುವುದು ಒಳ್ಳೆಯದು.

೫. ಒತ್ತಡರಹಿತವಾಗಿರಿ: ಒತ್ತಡ ಎಂಬುದು ಮಹಾಮಾರಿ. ಅತಿಯಾದ ಒತ್ತಡ ಹಲವಾರು ಸಮಸ್ಯೆಗಳನ್ನು ತಂದೊಡ್ಡುತ್ತದೆ. ಇದು ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಮೊಟಕುಗೊಳಿಸುತ್ತದೆ. ಆಗ ನಮ್ಮ ದೇಹದ ಸಮಸ್ಯೆಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ತಲೆಹೊಟ್ಟಿನ ಸಮಸ್ಯೆಯೂ ಕೂಡಾ ಒತ್ತಡದ ಸಂದರ್ಭದಲ್ಲೇ ಕಂಡುಬರುವ ಸಾಮಾನ್ಯ ಸಮಸ್ಯೆ. ಹಾಗಾಗಿ. ಒತ್ತಡರಹಿತ ಜೀವನ ಎಲ್ಲ ಸಮಸ್ಯೆಗಳಿಂದಲೂ ಮುಕ್ತಿ ನೀಡಬಹುದು.

ಇದನ್ನೂ ಓದಿ | Skin care Foods | ತ್ವಚೆಯ ಕಾಂತಿ ವೃದ್ಧಿಗಾಗಿ ಈ ಆಹಾರ ತಪ್ಪದೇ ಸೇವಿಸಿ

Exit mobile version