Site icon Vistara News

Winter Food: ಚಳಿಗಾಲದಲ್ಲಿ ಈ ಆಹಾರಗಳ ಸೇವನೆಯನ್ನು ಮಾತ್ರ ಎಂದಿಗೂ ಮರೆಯಬಾರದು!

winter food

ಚಳಿಗಾಲ ಬರುತ್ತಿದ್ದಂತೆ ಪರ್ವತ ಪ್ರದೇಶಗಳ, ಎತ್ತರದ ಜಾಗಗಳಲ್ಲಿ ವಾಸಿಸುವ, ಅಥವಾ ಹಿಮಸುರಿಯುವ ಚಳಿಯೂರುಗಳ ಮಂದಿಯ ಆಹಾರ ಪದ್ಧತಿಯನ್ನು (winter food) ಗಮನಿಸಬೇಕು. ಅವರೆಲ್ಲ, ಚಳಿಗಾಲ ಬರುತ್ತಿದ್ದಂತೆ ಚಳಿಗಾಲಕ್ಕೆ ಬೇಕಾದ ಬಟ್ಟೆಬರೆ, ಆಹಾರಗಳನ್ನು ಜೋಡಿಸಲು ಆರಂಭಿಸುತ್ತಾರೆ. ಆವರೆಗೆ ತಿನ್ನುತ್ತಿದ್ದ ಆಹಾರವನ್ನೆಲ್ಲ ನಿಧಾನವಾಗಿ ಕಡಿಮೆಗೊಳಿಸಿ, ಬಹುತೇಕ ಬೇರೆಯದೇ ಅನ್ನುವಂಥ ಆಹಾರ ತಿನ್ನಲು ಆರಂಭಿಸುತ್ತಾರೆ. ದೇಹವನ್ನು ತಂಪಾಗಿಸುವ ಆಹಾರಗಳಿಗೆ ಗುಡ್‌ಬೈ ಹೇಳಿ, ದೇಹ ಬೆಚ್ಚಗಾಗಿರಿಸುವ ಶಕ್ತಿಭರಿತ ಆಹಾರಗಳನ್ನು ನಿತ್ಯಾಹಾರದಲ್ಲಿ ಸೇರಿಸುತ್ತಾರೆ. ಆಯಾ ಸಮಯಕ್ಕೆ ದೊರೆಯುವ ತರಕಾರಿಗಳು, ಹಣ್ಣುಗಳು ಇದ್ದೇ ಇವೆಯಾದರೂ, ಒಂದಿಷ್ಟು ಬಗೆಯ ಬೀಜಗಳು, ಕಾಳುಗಳು, ಧಾನ್ಯಗಳು ಹೀಗೆ ನಾನಾ ಬಗೆಯ ಆಹಾರಗಳು ಚಳಿಗಾಲದಲ್ಲಿ ಮುಖ್ಯವಾಗಿ ಎಲ್ಲರೂ ತಿನ್ನುತ್ತಾರೆ. ಹಾಗಾದರೆ ಬನ್ನಿ, ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳುವ ದೃಷ್ಟಿಯಿಂದ (Health tips, Health guide) ನಾವು ತಿನ್ನಲೇಬೇಕಾದ ಕೆಲವು ಆಹಾರಗಳನ್ನು ನೋಡೋಣ.

1. ಹುರಿಗಡಲೆ: ಚಳಿಗಾಲದ ಆಹಾರಗಳಲ್ಲಿ ಹುರಿಡಲೆಯ ಜೊತೆಗೆ ಬೆಲ್ಲವನ್ನು ಸೇರಿಸಿ ತಿನ್ನುವ ಸಂಪ್ರದಾಯ ಉತ್ತರ ಭಾರತ ಸೇರಿದಂತೆ ಹಲವು ಚಳಿಯೂರುಗಳಲ್ಲಿದೆ. ಇವು ಪ್ರೊಟೀನ್‌ ಹಾಗೂ ಕಾರ್ಬೋಹೈಡ್ರೇಟ್‌ನಿಂದ ಸಮೃದ್ಧವಾಗಿರುವ ಕಾಂಬಿನೇಶನ್.‌ ಇದರಲ್ಲಿರುವ ಝಿಂಕ್‌ ಚರ್ಮದ ಕಾಂತಿಯನ್ನು ಹೆಚ್ಚಿಸಿದರೆ, ಪೊಟಾಶಿಯಂ ಹಾಗೂ ಇತರ ಖನಿಜಾಂಶಗಳು ಮಾಂಸಖಂಡಗಳ ಬಲವರ್ಧನೆಗೆ ಸಹಾಯ ಮಾಡುತ್ತವೆ. ಜೀರ್ಣಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಮಲಬದ್ಧತೆಯಂತ ಸಮಸ್ಯೆಗಳಿದ್ದರೆ ಅದಕ್ಕೆ ಮುಕ್ತಿ ನೀಡುವ ಸಾಮರ್ಥ್ಯವೂ ಇದರಲಲ್ಲಿದೆ. ವಿಶೇಷವೆಂದರೆ, ಇದನ್ನು ತಿನ್ನುವುದರಿಂದ ತೂಕ ಏರುವ ಭಯವಿಲ್ಲ. ಇದು ಒಳ್ಳೆಯ ವರ್ಕೌಟ್‌ ಸ್ನ್ಯಾಕ್‌ ಕೂಡಾ ಹೌದು. ಮುಖ್ಯವಾಗಿ ಮಹಿಳೆಯರಿಗೆ ಋತುಚಕ್ರದ ದಿನಗಳಲ್ಲಿ ಇದರಿಂದ ಸುಸ್ತು ಕಡಿಮೆಯಾಗಿ ಶಕ್ತಿ ದೊರೆಯುತ್ತದೆ. ರೋಗ ನಿರೋಧಕತೆಯನ್ನು ಹೆಚ್ಚಿಸುತ್ತದೆ.

2. ನೆಲಗಡಲೆ: ಚಳಿಗಾಲದ ಸಮಯಕ್ಕೆ ಕರೆಕ್ಟಾಗಿ ಮಾರುಕಟ್ಟೆಗೆ ಹಾಜರಾಗುವ ನೆಲಗಡಲೆ ಚಳಿಗಾಲದ ಬೆಸ್ಟ್‌ ಆಹಾರ ಕೂಡಾ. ಪ್ರೊಟೀನಿನಿಂದ ಸಮೃದ್ಧವಾಗಿರುವ ಇದರ ಸೇವನೆಯಿಂದ ಚಳಿಗಾಲದಲ್ಲಿ ಶಕ್ತಿ ಸಾಮರ್ಥ್ಯ ಹೆಚ್ಚುವುದಷ್ಟೇ ಅಲ್ಲ, ರೋಗ ನಿರೋಧಕತೆ ಹೆಚ್ಚಿ, ದೇಹವೂ ಬೆಚ್ಚಗಿರುತ್ತದೆ.

3. ತುಪ್ಪ: ಹೌದು.ಆಶ್ಚರ್ಯವೆನಿಸಿದರೂ ಸತ್ಯ. ತುಪ್ಪದ ಬಳಕೆ ಹಿತಮಿತವಾಗಿದ್ದರೆ ಒಳ್ಳೆಯದು. ಚಳಿಗಾಲದಲ್ಲಿ ತುಪ್ಪ ತಿನ್ನುವುದು ಅತ್ಯಂತ ಅಗತ್ಯ. ತುಪ್ಪ ತಿಂದರೆ ದಪ್ಪಗಾಗುತ್ತೇವೆ ಎಂಬ ಭ್ರಮೆಯಲ್ಲಿ ತುಪ್ಪವನ್ನು ಸೇವಿಸದೇ ಇರುವವರು ಅನೇಕರು. ಆದರೆ ತುಪ್ಪ, ಚೆನ್ನಾಗಿ ಜೀರ್ಣಕ್ರಿಯೆ ಆಗುವಂತೆ ನೋಡಿಕೊಂಡು, ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ. ನಿತ್ಯ ಉಣ್ಣುವ ದಾಲ್‌, ರಸಂ, ಪರಾಠಾ, ಚಪಾತಿಯ ಮೇಲೆ ತುಪ್ಪ ಹಾಕಿಕೊಂಡು ಚಳಿಗಾಲದಲ್ಲಿ ತಿಂದರೆ ಒಳ್ಳೆಯದು. ದೇಹಕ್ಕೆ ಚಳಿಗಾಲದಲ್ಲಿ ಕೊಬ್ಬು ಬೇಕೇ ಬೇಕು. ಇನ್ನು ತುಪ್ಪದಲ್ಲಿರುವ ಒಳ್ಳೆಯ ಕೊಬ್ಬು ಬೇಡವೆಂದರೆ ಹೇಗೆ? ಆದರೆ, ಹಿತಮಿತ ಪ್ರಮಾಣದ ಬಗ್ಗೆ ಅರಿವಿರಲಿ.

4. ಬೆಲ್ಲ: ಬೆಲ್ಲವನ್ನು ಎಲ್ಲ ಕಾಲದಲ್ಲಿ ಬಳಸುತ್ತೇವಾದರೂ, ಬೆಲ್ಲದ ನಿಜವಾದ ಲಾಭ ತಿಳಿಯುವುದು ಚಳಿಗಾಲದಲ್ಲಿಯೇ. ಕಬ್ಬಿಣಾಂಶ ಹೇರಳವಾಗಿರುವ ಬೆಲ್ಲದಲ್ಲಿ ಸಾಕಷ್ಟು ಇತರ ಖನಿಜಾಂಶಗಳೂ ಇವೆ. ಚಳಿಗಾಲದಲ್ಲಿ ದೇಹವನ್ನು ಇವು ಬೆಚ್ಚಗಿಡುವುದಲ್ಲದೆ ಆರೋಗ್ಯವಾಗಿಡುವಲ್ಲಿ ಸಹಾಯ ಮಾಡುತ್ತದೆ. ನೆಲಗಡಲೆ, ಹುರಿಗಡಲೆಯ ಜೊತೆಗೆ ಬೆಲ್ಲ ಸೇರಿಸಿಯೂ ತಿನ್ನಬಹುದು.

ಇದನ್ನೂ ಓದಿ: Heart Health In Winter: ಚಳಿಗಾಲದಲ್ಲಿ ಹೃದಯಾಘಾತದಿಂದ ಪಾರಾಗುವುದು ಹೇಗೆ?

5. ಸಾಸಿವೆ ಎಣ್ಣೆ: ಉತ್ತರ ಭಾರತದಲ್ಲಿ ಅಡುಗೆ ಎಣ್ಣೆಯಾಗಿ ಬಳಸುವ ಸಾಸಿವೆ ಎಣ್ಣೆಯ ಬಳಕೆ ದಕ್ಷಿಣ ಭಾರತದಲ್ಲಿ ಕಡಿಮೆ. ಆದರೆ, ಇದು ದೇಹವನ್ನು ಬೆಚ್ಚಗಿಡುವ ಇನ್ನೊಂದು ಆಹಾರ. ಇದಕ್ಕೆ ದೇಹದಲ್ಲಿ ಬಿಸಿಯನ್ನು ಉತ್ಪತ್ತಿ ಮಾಡುವ ಗುಣವಿದೆ.  ಅತಿಯಾಗಿ ಚಳಿಯಿದ್ದಾಗ ಪಾದದ ಅಡಿಭಾಗಕ್ಕೆ ಸಾಸಿವೆ ಎಣ್ಣೆಯಿಂದ ಮಸಾಜ್‌ ಮಾಡಿ ಮಲಗುವುದರಿಂದ ದೇಹ ಬೆಚ್ಚಗಿರುತ್ತದೆ. ಜೊತೆಗೆ, ಶೀತ, ನೆಗಡಿಯಂಥ ತೊಂದರೆಗಳೂ ಬರುವುದಿಲ್ಲ.

6. ಎಳ್ಳು: ಎಳ್ಳಿನಲ್ಲಿ ಅತ್ಯಧಿಕ ಪೋಷಕಾಂಶಗಳಿದ್ದು, ಚಳಿಗಾಲಕ್ಕೆ ಅಗತ್ಯವಾಗಿ ತಿನ್ನಬೇಕಾದ ಆಹಾರಗಳಲ್ಲಿ ಇದೂ ಒಂದು. ಇದು ದೇಹವನ್ನು ಬೆಚ್ಚಗಾಗಿಸುವುದಲ್ಲದೆ, ಜೀರ್ಣಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಎಳ್ಳಿನ ಚಿಕ್ಕಿ, ಉಂಡೆಗಳ ರೂಪದಲ್ಲಿ ಇದನ್ನು ಚಳಿಗಾಲದಲ್ಲಿ ತಿನ್ನುವುದು ಬಹಳ ಒಳ್ಳೆಯದು.

7. ಶುಂಠಿ: ಶೀತ, ನೆಗಡಿ, ಕೆಮ್ಮು ಮತ್ತಿತರ ತೊಂದರೆಗಳ ವಿರುದ್ಧ ಹೋರಾಡುವ ಸಾಮರ್ಥ್ಯವಿರುವ ಆಹಾರ ಶುಂಠಿ ಚಳಿಗಾಲಕ್ಕೆ ಅದ್ಭುತ ಸಾಥ್‌ ನೀಡುತ್ತದೆ. ಇದರಲ್ಲಿ ಉಷ್ಣತೆಯನ್ನು ಹೆಚ್ಚು ಮಾಡುವ ಗುಣವಿದ್ದು, ದೇಹವನ್ನು ಬೆಚ್ಚಗಿಡುವಲ್ಲಿ ತನ್ನ ಕಾಣಿಕೆ ನೀಡುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚು ಮಾಡುತ್ತದೆ.

ಇದನ್ನೂ ಓದಿ: Winter foods | ಚಳಿಗಾಲದಲ್ಲಿ ಮೆದುಳನ್ನು ಆರೋಗ್ಯವಾಗಿಡಿ, ಇವನ್ನು ಸೇವಿಸೋಕೆ ಮರೆಯದಿರಿ!

Exit mobile version