ಚಳಿಗಾಲ ಬಂದಾಗ ನಾವು ಬಿಸಿಬಿಸಿಯಾಗಿ ತಿನ್ನುವ ಬಗ್ಗೆಯಷ್ಟೇ ಹೆಚ್ಚು ಯೋಚಿಸುತ್ತೇವೆ. ಬಿಸಿಬಿಸಿ ಹಬೆಯಾಡುವ ಚಹಾ, ಕಾಫಿ, ಎಣ್ಣೆಯಲ್ಲಿ ಕರಿದ ಬಜ್ಜಿ-ಬೋಂಡಾ, ಬಿಸಿಬಿಸಿ ಜಿಲೇಬಿಗಳು…ಹೀಗೆ ಎಲ್ಲವೂ ಬಿಸಿಬಿಸಿಯಾಗಿ ಹೊಟ್ಟೆಗಿಳಿಯಬೇಕು. ಈ ಸಂದರ್ಭ, ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಚಳಿಗಾಲದಲ್ಲೇ ಪ್ರಕೃತಿ ನಮಗಾಗಿ ಕೊಡುವ ತಂಪು ತಂಪು ಹಣ್ಣುಗಳನ್ನು ಮರೆತೇ ಬಿಟ್ಟಿರುತ್ತೇವೆ. ಚಳಿಚಳಿಯಾದ ಹಣ್ಣುಗಳನ್ನು ಚಳಿಗಾಲದಲ್ಲಿ ತಿನ್ನುವುದು ಬಹುತೇಕರಿಗೆ ಇಷ್ಟವಾಗುವುದಿಲ್ಲ. ಹೀಗಾಗಿ ಅಗತ್ಯವಾಗಿ ಬೇಕಾಗಿರುವ ಹಣ್ಣುಗಳೇ ನಮ್ಮ ನಿತ್ಯದ ಆಹಾರಕ್ರಮದಲ್ಲಿ ಕಾಣೆಯಾಗಿಬಿಡುತ್ತದೆ.
ಆಯಾ ಋತುಮಾನಕ್ಕನುಸಾರವಾಗಿ ಪ್ರಕೃತಿ ಸಹಜವಾಗಿ ಹೂವು ಹಣ್ಣುಗಳನ್ನು ಬಿಡುತ್ತದೆ. ಆಯಾ ಕಾಲದಲ್ಲಿ ಲಭ್ಯವರುವ ಹಣ್ಣುಗಳು ಯಾವಾಗಲೂ ಆರೋಗ್ಯಕ್ಕೆ ಒಳ್ಳೆಯದನ್ನೇ ಮಾಡುತ್ತವೆ. ಇವು ಆಯಾ ಕಾಲಕ್ಕೆ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾದ ಪೋಷಕಾಂಶಗಳನ್ನೇ ಹೊತ್ತು ತರುತ್ತವೆ. ಒಮ್ಮೆ ಯೋಚಿಸಿ ನೋಡಿ, ಚಳಿಗಾಲದಲ್ಲಿ ಬಹುತೇಕ ಎಲ್ಲ ಹಣ್ಣುಗಳೂ ವಿಟಮಿನ್ ಸಿಯಿಂದ ಸಂಪದ್ಭರಿತವಾದಂತವು. ಚಳಿಗಾಲದಲ್ಲಿ ನಮ್ಮನ್ನು ಕಾಡುವ ಶೀತ ನೆಗಡಿಯಂಥ ಸಮಸ್ಯೆಗಳಿಗೆ ಪ್ರಕೃತಿಯೇ ನೀಡುವ ನೈಸರ್ಗಿಕ ಸಹಾಯವಿದು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.
ಹಾಗಾದರೆ, ಚಳಿಗಾಲದಲ್ಲಿ ನಾವು ನಮ್ಮ ನಿತ್ಯದ ಆಹಾರ ಕ್ರಮದಲ್ಲಿ ಸೇರಿಸಲೇಬೇಕಾದ ಹಣ್ಣುಗಳು ಯಾವುವು ಎಂಬುದನ್ನು ನೋಡೋಣ.
೧. ಸೇಬು: ಅಕ್ಟೋಬರ್ ತಿಂಗಳಾಂತ್ಯದಲ್ಲಿ ಮಾರುಕಟ್ಟೆ ಪೂರ್ತಿ ಹೊಸ ಸೇಬಿನಿಂದ ತುಂಬಿಹೋಗುತ್ತದೆ. ಸೇಬು ವರ್ಷಪೂರ್ತಿ ಮಾರುಕಟ್ಟೆಯಲ್ಲಿ ಲಭ್ಯವಿರುವುದಾದರೂ, ಭಾರತದಲ್ಲಿ ಹೊಸ ಕೊಯ್ಲು ಮಾರುಕಟ್ಟೆಗೆ ಕಾಲಿಡುವುದು ಅಕ್ಟೋಬರ್ ತಿಂಗಳಲ್ಲಿ. ಸೇಬುಹಣ್ಣಿನಲ್ಲಿ ಸಾಕಷ್ಟು ಪೋಷಕಾಂಶಗಳೂ, ವಿಟಮಿನ್‌ಗಳೂ ಇರುವುದರಿಂದ ಸರ್ವಕಾಲಕ್ಕೂ ಇದು ಒಳ್ಳೆಯದೇ. ಗಾದೆಯ ಮಾತಿನಂತೆ ದಿನಕ್ಕೊಂದು ಸೇಬು ಎಷ್ಟೋ ರೋಗಗಳಿಂದ ನಮ್ಮನ್ನು ದೂರವಿರಿಸುತ್ತದೆ.
೨. ಕಿತ್ತಳೆ: ಕಿತ್ತಳೆ ಹಣ್ಣು ಚಳಿಗಾಲಕ್ಕೆ ಕರೆಕ್ಟಾಗಿ ಹಣ್ಣಿನ ಮಾರುಕಟ್ಟೆಯನ್ನು ತುಂಬಿಸಿಬಿಡುತ್ತದೆ. ಇದರಲ್ಲಿ ವಿಟಮಿನ್ ಸಿ, ಪೊಟಾಶಿಯಂ, ಥೈಮೀನ್ ಹಾಗೂ ಫೊಲೇಟ್‌ಗಳು ಹೇರಳವಾಗಿದೆ. ವಿಟಮಿನ್ ಸಿ ಚಳಿಗಾಲದಲ್ಲಿ ಬೇಕಾದ ಅಗತ್ಯ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಕ್ಯಾನ್ಸರ್ ಹಾಗೂ ಕಿಡ್ನಿ ಸಂಬಂಧಿಸಿದ ರೋಗಗಳಿಂದ ನಮ್ಮನ್ನು ದೂರವಿರಿಸುತ್ತದೆ. ಫೊಲೇಟ್ ರಕ್ತಹೀನತೆಗೆ ಒಳ್ಳೆಯದು.
೩. ಕಿವಿ: ಚಳಿಗಾಲದಲ್ಲಿ ಮಾರುಕಟ್ಟೆಯನ್ನು ವ್ಯಾಪಕವಾಗಿ ಪ್ರವೇಶಿಸುವ ಕಿವಿ ಹಣ್ಣು ತನ್ನೊಳಗೆ ಸಾಕಷ್ಟು ವಿಟಮಿನ್ ಸಿ ಇಟ್ಟುಕೊಂಡಿರುವ ಹಣ್ಣು. ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು, ನಾರಿನಂಶ, ಕಬ್ಬಿಣಾಂಶ, ಕ್ಯಾಲ್ಶಿಯಂ, ಝಿಂಕ್, ಪೊಟಾಶಿಂ, ಪಾಸ್ಪರಸ್ ಇತ್ಯಾದಿ ಇತ್ಯಾದಿ ನಮ್ಮನ್ನು ಚಳಿಗಾಲದಲ್ಲಿ ಆರೋಗ್ಯವಾಗಿರಿಸುವಲ್ಲಿ ಸಹಾಯ ಮಾಡುತ್ತದೆ. ಚಳಿಗಾಲದಲ್ಲಿ ಚರ್ಮವನ್ನು ಸುಕ್ಕಾಗದಂತೆ ನಯವಾಗಿರಿಸುವಲ್ಲಿ ಇದು ಸಹಾಯ ಮಾಡುತ್ತದೆ.
೪. ಪೇರಳೆ: ಹಿತ್ತಲಲ್ಲಿ ಒಂದು ಪೇರಳೆ ಮರವಿದ್ದರೆ ಸಾಕು, ಹಿಂದೆಲ್ಲ, ಚಳಿಗಾಲದಲ್ಲಿ, ಮನೆಯ ಮುಂದೆಯೇ ನಮಗೆ ಅಗತ್ಯವಾಗಿ ತಿನ್ನಬೇಕಾದ ಣ್ಣು, ತರಕಾರಿಗಳ್ನು ಪ್ರಕೃತಿಯೇ ಡಿಸೈಡ್ ಮಾಡಿ ನಮ್ಮ ಮುಂದಿರಿಸುತ್ತಿತ್ತು. ಅಂಥ ಪೇರಳೆಯನ್ನು ನಾವಿಂದು ಮಾರುಕಟ್ಟೆಯಿಂದ ತಂದಾದರೂ ತಿನ್ನಬೇಕು. ಯಾಕೆಂದರೆ ಇದರಲ್ಲಿ ಭರೂರ ವಿಟಮಿನ್ ಎ ಇದ್ದು, ಜೊತೆಗೆ ಫೊಲೇಟ್, ಪೊಟಾಶಿಯಂ ಹಾಗೂ ನಾರಿನಂಶವೂ ಇದೆ. ಇದು ಪಚನಕ್ರಿಯೆಗೂ ಸಹಾಯ ಮಾಡುತ್ತದೆ.
ಇದನ್ನೂ ಓದಿ | Health tips | ದಿನವಿಡೀ ಕಂಪ್ಯೂಟರ್ ಸ್ಕ್ರೀನ್ ನೋಡಿ ಕಣ್-ಕೆಟ್ಟಂತಾಗಿದ್ದೀರೇ? ಆಗಾಗ ಈ ಕಣ್ಣಿನ ವ್ಯಾಯಾಮ ಮಾಡಿ
೫. ಸ್ಟ್ರಾಬೆರಿ: ಕೆಂಪನೆಯ ನೋಡಲು ಅತಿ ಸುಂದರ ಪುಟ್ಟ ಪುಟ್ಟ ಹುಳಿ ಸಿಹಿಯ ಈ ಹಣ್ಣು ಚಳಿಗಾಲದಲ್ಲಿ ನಮ್ಮ ಆರೋಗ್ಯದಲ್ಲಿ ಮ್ಯಾಜಿಕ್ ಮಾಡುತ್ತದೆ. ಇದರಲ್ಲೂ ಹೇರಳವಾಗಿ ವಿಟಮಿನ್ ಸಿ ಇದ್ದು, ಇವು ನಮ್ಮನ್ನು ಶೀತ ನೆಗಡಿಗಳಿಂದ ದೂರವಿರಿಸುತ್ತದೆ. ಮಧುಮೇಹಿಗಳಿಗೆ ಈ ಹಣ್ಣು ಉತ್ತಮ. ಅತ್ಯಂತ ಕಡಿಮೆ ಕ್ಯಾಲರಿಯಿರುವ ಹಣ್ಣುಗಳಲ್ಲಿ ಒಂದಾಗಿರುವ ಇದು, ತೂಕ ಕಡಿಮೆಗೊಳಿಸಲು ಬಯಸುವವರಿಗೂ ಇದು ಒಳ್ಳೆಯದು.
೬. ಅನನಾಸು: ವಿಟಮಿನ್ ಸಿಯಿಂದ ಭರಪೂರ ತುಂಬಿರುವ ಅನನಾಸು ಚಳಿಗಾಲದಲ್ಲಿ ತಿನ್ನಬಹುದಾದ ಇನ್ನೊಂದು ಹಣ್ಣು. ಎಲುಬನ್ನು ಗಟ್ಟಿಗೊಳಿಸುವಲ್ಲಿ, ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಸಮತೋಲನಗೊಳಿಸುವಲ್ಲಿ ಈ ಹಣ್ಣು ಉತ್ತಮ ಸಹಾಯ ಮಾಡುತ್ತದೆ. ಹಾಗಾಗಿ ಇದು ಮಧುಮೇಹಿಗಳಿಗೆ ಉತ್ತಮ. ಇದರಲ್ಲಿ ವಿಟಮಿನ್ ಎ, ಬಿ೬, ಇ ಹಾಗೂ ಕೆ, ಕ್ಯಾಲ್ಶಿಯಂ, ಪೊಟಾಶಿಯಂ, ಕಬ್ಬಿಣಾಂಶವನ್ನೂ ತನ್ನಲ್ಲಿ ಹೇರಳವಾಗಿ ಹೊಂದಿದೆ.
೭. ದಾಳಿಂಬೆ: ನಮ್ಮ ದೇಹಕ್ಕೆ ಬೇಕಾದ ವಿಟಮಿನ್ ಸಿ ಸೇರಿದಂತೆ ಎಲ್ಲ ಪೋಷಕಾಂಶಗಳನ್ನೂ ಖನಿಜಾಂಶಗಳನ್ನೂ ತನ್ನಲ್ಲಿ ಹುದುಗಿಸಿಕೊಂಡಿರುವ ಅಪರೂಪದ ಹಣ್ಣಿದು. ನಮ್ಮ ನಿತ್ಯದ ಸಿ ವಿಟಮಿನ್ ಸೇವನೆಯ ಶೇ.೪೦ ಭಾಗವನ್ನು ಪೂರ್ಣಗೊಳಿಸುವ ತಾಕತ್ತು ದಾಳಿಂಬೆಗಿದೆ. ಇದೊಂದು ಪವರ್ ಪ್ಯಾಕ್ ಹಣ್ಣು. ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ಹಾಗೂ ಫ್ಲೇವನಾಯ್ಡ್‌ಗಳು ಜೀವಕೋಶಗಳಿಗೆ ಹಾನಿಯಾಗದಂತೆ ರಕ್ಷಿಸುವ ಗುಣವನ್ನೂ ಹೊಂದಿದೆ. ಶ್ವಾಸಕೋಶ, ಸ್ತನ, ಹಾಗೂ ವೃಷಣಗಳ ಕ್ಯಾನ್ಸರ್ ಬರದಂತೆ ಇದು ರಕ್ಷಣೆಯನ್ನು ನೀಡುತ್ತದೆ.
ಇದನ್ನೂ ಓದಿ | Mouth Ulcer | ಬಾಳು ಹಣ್ಣಾಗುವ ಮೊದಲು ಬಾಯಿ ಹುಣ್ಣಿಗೆ ಇಲ್ಲಿದೆ ಮದ್ದು
೮. ದ್ರಾಕ್ಷಿ: ಕರೆಕ್ಟಾಗಿ ಚಳಿಗಾಲಕ್ಕೆ ಗೊಂಚಲುಗೊಂಚಲಾಗಿ ಬಾಯಲ್ಲಿ ನೀರೂರಿಸುವ ದ್ರಾಕ್ಷಿ ಕಾಲಿಡದಿದ್ದರೆ, ಚಳಿಗಾಲ ಹೇಗೆ ಸಂಪನ್ನವಾದೀತು! ಕೆಂಪು, ನೇರಳೆ, ಹಸಿರು ಹೀಗೆ ಮೂರ್ನಾಲ್ಕು ಬಣ್ಣಗಳಲ್ಲಿ ಲಭ್ಯವಿರುವ ದ್ರಾಕ್ಷಿ ಹಣ್ಣುಗಳು ತಮ್ಮಲ್ಲಿ ಅತ್ಯಧಿಕ ಪೋಷಕಾಂಶವನ್ನು ಹೊಂದಿದೆ. ಹಲವು ರೋಗಗಳನ್ನು ಬರದಂತೆ ತಡೆಯುವ ಇದು ಅತ್ಯಧಿಕ ನಾರಿನಂಶವನ್ನೂ ಹೊಂದಿದೆ.
ಹಾಗಾಗಿ, ಚಳಿಗಾಲವೆಂದು ಹಣ್ಣಗಳನ್ನು ಮರೆಯದೆ, ನಿತ್ಯ ಇವುಗಳನ್ನೂ ಹೊಟ್ಟೆಗಿಳಿಸಿ ಆರೋಗ್ಯವಾಗಿರಿ!