ಚಳಿಗಾಲಕ್ಕೂ ಬಿಸಿಬಿಸಿ ಸೂಪಿಗೂ ಎಲ್ಲಿಲ್ಲದ ನಂಟು. ಚಳಿಗಾಲ ಬಂತೆಂದರೆ, ರಸ್ತೆಬದಿಯಲ್ಲಿ ಕುದಿಯುತ್ತಿರುವ ಚಹಾ ಕಂಡರೆ ಹೇಗೆ ಮನಸೋಲುತ್ತೇವೋ ಹಾಗೆಯೇ, ಮನೆಯಲ್ಲಿ ಬೆಚ್ಚಗೆ ಕುಳಿತಿರುವ ಸಂಜೆಯಲ್ಲೊಂದು ಬೊಗಸೆಯಲ್ಲಿ ಹಿಡಿಯಲು ಬೌಲು ತುಂಬಾ ಬಿಸಿ ಬಿಸಿ ಸೂಪೊಂದು ಇದ್ದರೆ ಅದನ್ನು ನಿಧಾನವಾಗಿ ಹೀರುತ್ತಿದ್ದರೆ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಎನಿಸದೆ ಇರದು.
ಹಾಗೆ ನೋಡಿದರೆ, ಚಳಿಗಾಲದಲ್ಲಿ ಆರೋಗ್ಯಕರವಾದದ್ದು ಬಿಸಿ ಬಿಸಿಯಾಗಿ ತಿನ್ನಬಹುದಾದ ಆಯ್ಕೆಗಳಲ್ಲಿ ಸೂಪಿಗೆ ಮೊದಲ ಸ್ಥಾನ ಕೊಡಬಹುದು. ತರಕಾರಿಗಳನ್ನು ಹಾಗೆಯೇ ಬೇರೆಬೇರೆ ವಿಧಗಳಲ್ಲಿ ತಿನ್ನುವುದಕ್ಕಿಂತ, ಬಗೆಬಗೆಯ ತರಕಾರಿಗಳಿಂದ ಮಾಡಬಹುದಾದ ಸೂಪು ಇನ್ನೂ ಹೆಚ್ಚು ಪೋಷಕಾಂಶಗಳಿಂದ ಸಂಪದ್ಭರಿತವಾಗಿರುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಸುಲಭವಾಗಿ ಅಡುಗೆ ಮಾಡಬಹುದಾದ, ಹೊಟ್ಟೆ ತುಂಬಿಸಬಹುದಾದ, ಹಾಗೂ ಎಲ್ಲ ರೀತಿಯ ಪೋಷಕಾಂಶಗಳಿರುವ ದಿಢೀರ್ ಮೂಡನ್ನು, ಎನರ್ಜಿಯನ್ನು ಮೇಲಕ್ಕೆ ಕೊಂಡೊಯ್ಯಬಲ್ಲ ತಾಕತ್ತಿರುವ ಈ ಸೂಪು ಎಂಬುದು ಚಳಿಗಾಲದ ಸಂಗಾತಿಯೇ ನಿಜ.
ಹಾಗಾದರೆ ಚಳಿಗಾಲದಲ್ಲಿ ಫಟಾಫಟ್ ಮಾಡಬಹುದಾದ, ನಮ್ಮನ್ನು ಆರೋಗ್ಯಕರ ರೀತಿಯಲ್ಲಿ ಬೆಚ್ಚಗಿಡಬಹುದಾದ ಸೂಪುಗಳು ಯಾವುವು ಎಂಬುದನ್ನು ನೋಡೋಣ.
೧. ಬೀಟ್‌ರೂಟ್ ಸೂಪ್: ಬಣ್ಣದಲ್ಲೂ, ಇದರಲ್ಲಿರುವ ಪೋಷಕಾಂಶಗಳಿಂದಲೂ ಟಾಪ್ ಒನ್ ಪಟ್ಟಿಯಲ್ಲಿರುವ ಸೂಪ್ ಇದು. ಮನೆಯಲ್ಲೇ ಸುಲಭವಾಗಿ ಬೇಯಿಸಿ, ಅರೆದು ಮಾಡಿಕೊಳ್ಳಬಹುದಾದ ಈ ಸೂಪ್ ನೋಡಲೂ ಕಣ್ಣಿಗೆ ಸುಂದರ. ವಿಟಮಿನ್ ಬಿ೯ನಿಂದ ಸಮೃದ್ಧವಾಗಿರುವ ಇದು ರಕ್ತ ಪರಿಚಲನೆಯನ್ನು ಸುಗಮವಾಗಿಸುವುದಲ್ಲದೆ, ಹೃದ್ರೋಗ ಹಾಗೂ ಪಾರ್ಶ್ವವಾಯುವಿಗೀಡಾಗುವ ಸಂಭವವನ್ನು ಕಡಿಮೆ ಮಾಡುತ್ತದೆ. ರಕ್ತನಾಳಗಳನ್ನು ಆರೋಗ್ಯವಾಗಿರಿಸುವಲ್ಲಿ ಮುಖ್ಯಪಾತ್ರ ವಹಿಸುತ್ತದೆ. ತೆಂಗಿನಕಾಯಿಯನ್ನು ಸೇರಿಸಿಯೂ ಬೀಟ್‌ರೂಟ್ ಸೂಪ್ ಮಾಡಬಹುದು. ತೆಂಗಿನಕಾಯಿಯನ್ನು ಸೇರಿಸುವುದರಿಂದ ಇದರಲ್ಲಿರುವ ಮ್ಯಾಂಗನೀಸ್ ಅಂಶ ಎಲುಬಿನ ಬಲವರ್ಧನೆಗೆ ಸಹಕಾರಿಯಾಗುತ್ತದೆ.
೨. ಕಿಡ್ನಿ ಬೀನ್ಸ್ ಹಾಗೂ ಪಾಸ್ತಾ ಸೂಪು: ಮಕ್ಕಳಿಗೆ ಪಾಸ್ತಾ ಎಂದರೆ ಅಚ್ಚುಮೆಚ್ಚು. ಆದರೆ ಬರಿಯ ಪಾಸ್ತಾದಲ್ಲಿ ಪೋಷಕಾಂಶಗಳನ್ನು ತರುವುದೆಲ್ಲಿಂದ ಎಂದು ಯೋಚಿಸಿದರೆ ಅದಕ್ಕೆ ಕಿಡ್ನಿ ಬೀನ್ಸ್‌ನು ಸೇರಿಸಬಹುದು. ಪ್ರೊಟೀನಿನಿಂದ ಸಂಪದ್ಭರಿತವಾದ ಕಿಡ್ನಿ ಬೀನ್‌ಗಳನ್ನು ನೆನೆ ಹಾಕಿ ಬೇಯಿಸಿ ಪಾಸ್ತಾದೊಂದಿಗೆ ಸೇರಿಸುವುದರಿಂದ ಮಕ್ಕ. ಅತ್ಯಧಿಕ ನಾರಿನಂಶವೂ ಇರುವ, ಕಾರ್ಬೋಹೈಡ್ರೇಟನ್ನೂ ಒಳಗೊಂಡಿರುವ ಇದು ಚಳಿಗಾಲದಲ್ಲಿ ಬೆಚ್ಚಗಿಡುತ್ತದೆ.
ಇದನ್ನೂ ಓದಿ | Health tips | ದಿನವಿಡೀ ಕಂಪ್ಯೂಟರ್ ಸ್ಕ್ರೀನ್ ನೋಡಿ ಕಣ್-ಕೆಟ್ಟಂತಾಗಿದ್ದೀರೇ? ಆಗಾಗ ಈ ಕಣ್ಣಿನ ವ್ಯಾಯಾಮ ಮಾಡಿ
೩. ಸಿಹಿಗುಂಬಳದ ಸೂಪ್: ಸಿಹಿಗುಂಬಳ ಚಂದದ ಹಳದಿ ಬಣ್ಣದಲ್ಲಿ ಆಕರ್ಷಿಸುವುದಷ್ಟೇ ಅಲ್ಲ, ವಿಟಮಿನ್ ಹಾಗೂ ಪೋಷಕಾಂಶಗಳಿಂದ ಸಮೃದ್ಧವಾಗಿರುವ ತರಕಾರಿ ಕೂಡಾ. ಇದರಲ್ಲಿರುವ ವಿಟಮಿನ್ ಎ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ಕಡಿಮೆ ಕ್ಯಾಲೊರಿಯ ತರಕಾರಿ ಇದಾಗಿದ್ದು, ಚಳಿಗಾಲದಲ್ಲಿ ತೂಕವ್ನೂ ಸಮತೋಲನದಲ್ಲಿರಿಸುತ್ತದೆ. ಬಹಳ ಹೊತ್ತಿನವರೆಗೆ ಹಸಿವಾಗದಂತೆ ಹಾಗೂ ಹೊಟ್ಟೆ ತುಂಬಿರುವ ಕಂಪ್ಲೀಟ್ ಭಾವವನ್ನು ಇದು ನೀಡಬಲ್ಲದು.
೪. ಬಾದಾಮಿ ಹಾಗೂ ಅಣಬೆ ಸೂಪು: ಚಂದಕ್ಕೆ ಸಣ್ಣಕ್ಕೆ ಹೆಚ್ಚಿದ ಅಣಬೆ (ಮಶ್ರೂಂ) ಸೂಪಿಗೆ ಒಂದಿಷ್ಟು ಬಾದಾಮಿ, ಕರಿಮೆಣಸು, ಬೆಣ್ಣೆ, ಕ್ರೀಂ ಹಾಗೂ ಹಾಲು ಸೇರಿದರೆ ಆಹಾ ಎಂಬ ಸ್ವರ್ಗ ಸುಖ. ಕ್ರೀಂ ಆಫ್ ಮಶ್ರೂಂ ಸೂಪಿಗೆ ಬಾದಾಮಿಯೂ ಸೇರಿದರೆ ಚಳಿಗಾಲಕ್ಕೆ ಬೇಕಾದ ಬೆಚ್ಚಗಿನ ಪೋಷಕಾಂಶಗಳೂ ಸಿಗುತ್ತದೆ.
೫. ಕರಿಮೆಣಸಿನ ರಸಂ: ಚಳಿಗಾಲದಲ್ಲಿ ಬೇಡಬೇಡವೆಂದರೂ ಎಲ್ಲರನ್ನೂ ಕಾಡುವುದು ನೆಗಡಿ, ಕೆಮಮು ಹಾಗೂ ಶೀತ. ಜ್ವರ ಬಂದರಂತೂ ಮುಗೀತು. ಚಳಿಯಲ್ಲಿ ಇನ್ನಷ್ಟು ಚಳಿಯಾಗಿ ಮುದುರಿ ಮಲಗಿದಷ್ಟೂ ನುಸುಳುವ ಚಳಿಗಾಳಿಗೆ ಬಿಸಿಬಿಸಿ ಹೀರಲು, ಶೀತ ನೆಗಡಿಯನ್ನು ಕೊಂಚ ಮಟ್ಟಿಗೆ ಸುಧಾರಿಸಿಕೊಳ್ಳಲು, ಒಮ್ಮೆ ನೆಮ್ಮದಿಯ ಉಸಿರು ತೆಗೆದುಕೊಳ್ಳಲು ಒಂದು ಸೂಪ್ ಬೇಕೆನಿಸುತ್ತದೆ. ಅಂಥದ್ದರಲ್ಲಿ, ಮೊದಲು ನೆನಪಾಗುವುದು ರಸಂ. ಒಂದಿಷ್ಟು ಟೊಮೇಟೋ, ಹುಣಸೆ ಹಣ್ಣು, ಕರಿಮೆಣಸು, ಜೀರಿಗೆ, ಒಂದೆರಡು ಎಸಳು ಬೆಳ್ಳುಳ್ಳಿ, ಅರಿಶಿನ ಪಡಿ, ಒಗ್ಗರಣೆಗೆ ಕರಿಬೇವು ಸಾಸಿವೆ ಇದ್ದರೆ ಗರಮಾಗರಂ ಸಾರು ಮಾಡಿ ಹೀರಬಹುದು. ನಿಧಾನವಾಗಿ ಹಬೆಯಾಡುವ ರಸಂನನ್ನು ಒಳಗೆಳೆದುಕೊಳ್ಳುತ್ತಾ ಇದ್ದಂತೆ ಮೂಗಿನೊಳಗೆ ಎಳೆದುಕೊಳ್ಳಲಾಗದಂತಾಗಿಬಿಟ್ಟಿದ್ದ ಉಸಿರೂ ಸರಾಗವಾಗಿ ಒಳಗೆಳೆದುಕೊಳ್ಳುವಂತೆ ಆಗುತ್ತದೆ ಎಂಬುದು ಈ ರಸಂನ ವಿಶೇಷ. ಹಾಗಾಗಿ, ಇದು ರಸಂ ಆದರೂ ಸೂಪೇ.
ಇದನ್ನೂ ಓದಿ | Sleep tips | ಚಳಿಗಾಲದಲ್ಲಿ ನಿದ್ದೆ ಬೇಕೆಂದರೆ ಈ ಏಳು ಸೂತ್ರಗಳನ್ನು ಮರೆಯದಿರಿ!